December 22, 2024

Newsnap Kannada

The World at your finger tips!

WhatsApp Image 2022 10 25 at 9.04.50 PM

ಬಲಿಪಾಡ್ಯಮಿ – ದಾನವ ಅರಸ ಬಲೀಂದ್ರನ ಪೂಜೆ

Spread the love

ದೀಪಾವಳಿಯನ್ನು ( Deepavali ) ಸಾಮಾನ್ಯವಾಗಿ ಮೂರು ದಿನ ಆಚರಿಸುತ್ತಾರೆ, ನರಕಚತುರ್ದಶಿ, ಅಮಾವಾಸ್ಯೆ ಹಾಗೂ ಬಲಿಪಾಡ್ಯಮಿ, ಬಲಿಪಾಡ್ಯಮಿಯಿಂದ ಆರಂಭಗೊಳ್ಳುವ ಕಾರ್ತಿಕ ಮಾಸ, ಲಕ್ಷದೀಪೋತ್ಸವ ಬೆಳಗುವಂತಹ ಮಾಸವಾಗಿದೆ.

ಮೂರನೇಯ ದಿನ ಆಚರಿಸುವ ಹಬ್ಬವಾದ ಬಲಿ ಪಾಡ್ಯಮಿಯಂದು ದಾನವ ಅರಸನಾದ ಬಲೀಂದ್ರನ ಪೂಜೆಯನ್ನು ಮಾಡುತ್ತಾರೆ, ಹಾಗಾಗಿ ಈ ದಿನವನ್ನು ಬಲಿಪಾಡ್ಯಮಿ ಎಂದೇ ಕರೆಯುತ್ತಾರೆ.ಪಾತಾಳ ಲೋಕಕ್ಕೆ ಹೋದ ಬಲೀಂದ್ರನನ್ನು ವರ್ಷಕ್ಕೆ ಒಂದು ದಿನ ನೆನೆದು ಭೂಮಿಗೆ ಕರೆಯುವ ದಿನವೇ ಬಲಿಪಾಡ್ಯಮಿ.

ಪುರಾಣ ಕಥೆ

ನರಸಿಂಹನ ಅವತಾರದಲ್ಲಿ ಶ್ರೀವಿಷ್ಣುವಿನಿಂದ ಹತನಾದ ಹಿರಣ್ಯಕಶಿಪುವಿನ ಪುತ್ರ ಪ್ರಹ್ಲಾದನ ಮೊಮ್ಮಗ ಮಹಾಬಲಿ, ಅಸುರ ಕುಲದಲ್ಲಿ ಹುಟ್ಟಿದ ವಿಷ್ಣುಭಕ್ತ ಪ್ರಹ್ಲಾದನಂತೆಯೇ ಮಹಾಬಲಿಯೂ ಕೂಡಾ ವಿಷ್ಣುಭಕ್ತನೇ.

WhatsApp Image 2022 10 25 at 9.07.53 PM 1

ಬಲೀಂದ್ರ ಮೂಲತಃ ಒಳ್ಳೆಯ ರಾಜನಾಗಿರುತ್ತಾನೆ, ಆದರೆ ಅವನ ಸುತ್ತಮುತ್ತಲಿರುವವರೆಲ್ಲ ಕೆಟ್ಟವರಾಗಿರುತ್ತಾರೆ. ತಾನು ಕೆಟ್ಟವನಲ್ಲದಿದ್ದರೂ ತನ್ನ ಸುತ್ತಲಿನ ರಾಕ್ಷಸರು ಮಾಡುತ್ತಿರುವ ಕೆಲಸಗಳನ್ನು ಪರೋಕ್ಷವಾಗಿ ಪ್ರೋತ್ಸಾಹಿಸುತ್ತಿರುತ್ತಾನೆ.

ದೇವಾನುದೇವತೆಗಳನ್ನು ಸೋಲಿಸಿ ಮೂರೂ ಲೋಕಗಳನ್ನು ಆಳತೊಡಗುತ್ತಾನೆ. ಆ ಸಂದರ್ಭದಲ್ಲಿ ದೇವತೆಗಳು ಮಹಾವಿಷ್ಣುವಿನ ಮೊರೆಹೋಗುತ್ತಾರೆ.

ಮೂರೂ ಲೋಕಗಳನ್ನು ಜಯಿಸಿದ ಮಹಾಬಲಿಯು ಮಹಾಯಾಗವೊಂದನ್ನು ಮಾಡುತ್ತಾನೆ, ಯಾಗದಲ್ಲಿ ಕೇಳಿದ ವಸ್ತುಗಳೆಲ್ಲವನ್ನೂ ಬಂದವರಿಗೆ ದಾನ ಮಾಡುತ್ತಾನೆ. ಆ ಸಂದರ್ಭದಲ್ಲಿ ಮಹಾವಿಷ್ಣುವು ಮಹಾಬಲಿಯ ಭಕ್ತಿಯನ್ನು ಪರೀಕ್ಷಿಸಲು ಪುಟ್ಟ ಬಾಲಕ ವಾಮನನ ಅವತಾರದಲ್ಲಿ ಬಲಿ ಚಕ್ರವರ್ತಿಯ ಯಾಗಕ್ಕೆ ಬರುತ್ತಾನೆ.

ಬಲೀಂದ್ರ ರಾಜ ಕೊಡುಗೈ ದಾನಿ. ವಾಮನನಿಗೆ ನಿನಗೆ ಏನು ಬೇಕೆಂದು ಕೇಳು ಎಂದು ಕೇಳುತ್ತಾನೆ. ಆಗ ವಾಮನ ನನಗೆ ಮೂರು ಹೆಜ್ಜೆಗಳನ್ನಿಡುವಷ್ಟು ಜಾಗ ಕೊಡು ಎಂದು ಕೇಳುತ್ತಾನೆ.

ಬಲಿ ಚಕ್ರವರ್ತಿಯು ಬಾಲಕನ ಆಸೆಯಂತೆ ಮೂರು ಹೆಜ್ಜೆಗಳನ್ನಿಡಲು ಒಪ್ಪುತ್ತಾನೆ.ಆಗ ಬಂದಿರುವುದು ಮಹಾವಿಷ್ಣುವೆಂದು ತಿಳಿದ ಶುಕ್ರಾಚಾರ್ಯರು ದಾನವನ್ನು ಜಲಸಾಕ್ಷಿಯಾಗಿ ನೀಡುವುದರಿಂದ ಬಲೀಂದ್ರನ ಕಮಂಡಲದೊಳಗೆ ಕಪ್ಪೆಯ ರೂಪದಲ್ಲಿ ಸೇರಿ, ನೀರು ಹೊರಬರದಂತೆ ಅಡ್ಡವಾದರು. ಆಗ ಬಾಲಕ ವಾಮನನು ದರ್ಭೆಯಿಂದ ಕಮಂಡಲದಿಂದ ನೀರು ಬರುವ ಕಡೆ ತಿವಿದಾಗ, ಶುಕ್ರಾಚಾರ್ಯರ ಕಣ್ಣಿಗೆ ಚುಚ್ಚಿ, ಅವರು ಒಂದು ಕಣ್ಣನ್ನು ಕಳೆದುಕೊಂಡರು.ವಾಮನನ ರೂಪದಲ್ಲಿರುವ ಮಹಾವಿಷ್ಣುವು ಸ್ವರ್ಗಲೋಕಗಳನ್ನು ಮೀರಿ ಎತ್ತರಕ್ಕೆ ಬೆಳೆಯುತ್ತಾನೆ.

ಮೊದಲ ಹೆಜ್ಜೆಯಿಂದ ಭೂಮಿಯನ್ನು ಅಳೆದು ತೆಗೆದುಕೊಳ್ಳುತ್ತಾನೆ. ಎರಡನೇ ಹೆಜ್ಜೆಯಿಂದ ಸ್ವರ್ಗವನ್ನು ಅಳೆದು ಪಡೆಯುತ್ತಾನೆ, ಮೂರನೇ ಹೆಜ್ಜೆ ಇಡಲು ಮಹಾಬಲಿಯು ಜಾಗವನ್ನು ಕೊಡಬೇಕಾದಾಗ ಚಕ್ರವರ್ತಿಯು, ಉಳಿದೊಂದು ಹೆಜ್ಜೆಯನ್ನು ತನ್ನ ಶಿರದ ಮೇಲಿಡುವಂತೆ ವಾಮನನನ್ನು ಬೇಡಿಕೊಳ್ಳುತ್ತಾನೆ. ಮೂರನೇ ಹೆಜ್ಜೆಯನ್ನು ಬಲಿಚಕ್ರವರ್ತಿಯ ಶಿರದ ಮೇಲಿಡುತ್ತಿದ್ದಂತೆ, ಬಲಿ ಚಕ್ರವರ್ತಿಯು ಪಾತಾಳಕ್ಕೆ ತಳ್ಳಲ್ಪಡುತ್ತಾನೆ.

ಬಲಿಚಕ್ರವರ್ತಿಯ ಭಕ್ತಿ ಮತ್ತು ನಿಷ್ಠೆಗೆ ಮೆಚ್ಚಿದ ಮಹಾವಿಷ್ಣುವು ಪಾತಾಳವನ್ನು ಆಳುವಂತೆ ಆಶೀರ್ವದಿಸುತ್ತಾನೆ. ವಿಷ್ಣುಭಕ್ತನಾದ ಬಲೀಂದ್ರನಿಗೆ ಆಶ್ವಯುಜ ಮಾಸದಲ್ಲಿ ಭೂಮಿಗೆ ಬಂದು ಪೂಜೆ ಸ್ವೀಕರಿಸುವ ವರವನ್ನು ನೀಡಿದ. ಹಾಗಾಗಿ ಮೂರು ದಿನಗಳ ದೀಪಾವಳಿ ಆಚರಣೆಯಲ್ಲಿ ಮೂರನೇ ದಿನ ಬಲೀಂದ್ರನಿಗೆ ಪೂಜೆಯನ್ನು ನಡೆಸಲಾಗುತ್ತದೆ.

ಬಲಿ ಪಾಡ್ಯಮಿ ಪೂಜೆ

ಬಲಿ ಪಾಡ್ಯಮಿಯಂದು ಗೋಮಯದಿಂದ ಬಲಿಚಕ್ರವರ್ತಿಯ ಬಲಿಯಕೋಟೆಯನ್ನು ಕಟ್ಟಲಾಗುತ್ತದೆ. ತುಳಸಿಕಟ್ಟೆಯ ಸಮೀಪ ಗೋಮಯದಿಂದ ಏಳುಸುತ್ತಿನ ಕೋಟೆಯನ್ನು ಕಟ್ಟಿ, ಕೋಟೆಗೆ ಗಣಪತಿಯನ್ನು ಕಾವಲಿಗೆ ನಿಲ್ಲಿಸಲಾಗುತ್ತದೆ. ಮನೆ ಬಾಗಿಲಿನ ಹೊಸ್ತಿಲಿಗೆ ಯಾವುದೇ ದುಷ್ಟಶಕ್ತಿಗಳು ಒಳಪ್ರವೇಶಿಸದಂತೆ ಸಗಣಿಯಿಂದ ಮಾಡಿದ ಸಣ್ಣ ಗೊಂಬೆಗಳನ್ನು ಇಡಲಾಗುತ್ತದೆ. ಸಂಜೆ ಗೋಧೂಳಿ ಲಗ್ನದ ಸಮಯದಲ್ಲಿ ಮನೆಯ ಸದಸ್ಯರೆಲ್ಲಾ ಬಲೀಂದ್ರನಿಗೆ ಪೂಜೆ ಮಾಡುತ್ತಾರೆ.

ಮಲೆನಾಡಿನಲ್ಲಿ ಬಲಿಪಾಡ್ಯಮಿಯಂದು ಬೆಳಗ್ಗೆಯೇ ಹಟ್ಟಿಯನ್ನು ತೊಳೆದು, ಸೆಗಣಿಯಿಂದ ಗಣಪತಿಯನ್ನು ಮಾಡಿ, ಹೂವಿನಿಂದ ಸಿಂಗರಿಸುತ್ತಾರೆ. ಕಂಚಿಕಡ್ಡಿ, ಬ್ರಹ್ಮದಂಡೆ ಗಿಡಗಳನ್ನು ತಂದು ಜಡೆಯಂತೆ ಹಣೆದು ಕೊಟ್ಟಿಗೆಯಲ್ಲಿ ಸೆಗಣಿ ಬೆನಕನ ಪಕ್ಕದಲ್ಲಿ ಇಡುತ್ತಾರೆ. ಎಲ್ಲಾ ಹಸುಗಳ ಮೈತೊಳೆದು ಹೂಹಾರ ಹಾಕಿ ಪೂಜಿಸುತ್ತಾರೆ.

ಅಜ್ಞಾನವೆಂಬ ಕತ್ತಲನ್ನು ದೂರ ಸರಿಸಿ ಜ್ಞಾನವೆಂಬ ಬೆಳಕನ್ನು ಎಲ್ಲೆಡೆ ಚೆಲ್ಲುವ ಹಬ್ಬ, ಮನದ ಅಂಧಕಾರವನ್ನು ಕಳೆಯುವ ಹಬ್ಬವಾಗಿ ದೀಪಾವಳಿಯು ಎಲ್ಲರಿಗೂ ಸುಖ, ಶಾಂತಿ ಸಮೃದ್ಧಿಯನ್ನು ತರಲಿ.

Copyright © All rights reserved Newsnap | Newsever by AF themes.
error: Content is protected !!