ಮನೋವೃತ್ತಿಯ ಭಿನ್ನತೆ

Team Newsnap
3 Min Read

(ಬ್ಯಾಂಕರ್ಸ್ ಡೈರಿ)

ಬ್ಯಾಂಕು ಎಂದ ಮೇಲೆ ಬರುವವರು ಹೋಗುವವರು ಇದ್ದೇ ಇರುತ್ತಾರೆ. ಅದರಲ್ಲಿ ಒಳ್ಳೆಯವರೂ, ಕೆಡುಕು ಬುದ್ಧಿಯವರೂ, ಪ್ರಾಮಾಣಿಕರೂ, ಅಪ್ರಾಮಾಣಿಕರು, ಸಿಡುಕರು, ಶಾಂತಮೂರ್ತಿಗಳು. . . ಹೀಗೆ ಎಲ್ಲ ಥರದವರೂ ಇರುತ್ತಾರೆ. ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ತೂಗಲಾದೀತೇ?

ಅಂದು ದೊಡ್ಡ ಹೊಟೆಲ್ ಮಾಲೀಕರೊಬ್ಬರು ಒಮ್ಮೆ ನಮ್ಮ ಶಾಖೆಗೆ ಬಂದರು. ಭಾರೀ ಕುಳ ಅಂತ ಎಲ್ಲರೂ ಅವರು ಬಂದ ತಕ್ಷಣವೇ ಕರೆದು ಕೂಡಿಸಿ – ಒಮ್ಮೊಮ್ಮೆ ಕಾಫಿಯನ್ನೂ ತರಿಸಿ- ಏನು ಬೇಕು ಎಂದು ಕೇಳಿ, ಕೂಡಲೇ ಕೆಲಸ ಮಾಡಿ ಕಳುಹಿಸುತ್ತಾರೆ.

ಸಾಮಾನ್ಯವಾಗಿ ಅದು ಎಲ್ಲ ಬ್ಯಾಂಕುಗಳಲ್ಲಿನ ಪರಿ. ಅವರನ್ನು ವಿ.ಐ.ಪಿ ಕಸ್ಟಮರ್ ಎಂದು ಅಂತಹ ಉಪಚಾರ. ಹಾಗೊಮ್ಮೆ ಅವರು ಬಂದಾಗ ಮ್ಯಾನೇಜರ್ ಕ್ಯಾಬಿನ್ನಿನಲ್ಲಿ ಒಂದೇ ಗಲಾಟೆ. ‘ನನ್ನ ಸಾಲದ ಅಕೌಂಟಿನಲ್ಲಿ ಇನ್ಸ್ಪೆಕ್ಷನ್ ಚಾರ್ಚ್ ಹಾಕಿದ್ದೀರಲ್ಲಾ ಯಾಕೆ? ನಮ್ಮ ದುಡ್ಡು ತಿಂದು ನೀವು ದೊಡ್ಡವರಾದದ್ದು. ನಾವು ಅಷ್ಟು ಬಡ್ಡಿ ಕಟ್ಟೋದಿಲ್ವ? ಮತ್ತೇಕೆ ಇಂಥವು? ನಾನು ಇನ್ನೂ ಒಂದೆರೆಡು ಕೋಟಿ ಸಾಲ ಕೇಳೋಣವೆಂತಿದ್ದೆ.’ ಎಂದು ಜೋರು ಮಾಡುತ್ತಿದ್ದರು.

ಆದರೆ ಅದು ಬ್ಯಾಂಕುಗಳ ಪದ್ಧತಿ. ಬ್ಯಾಂಕಿನ ರಿವಾಜುಗಳನ್ನು ಪರಿಪಾಲಿಸುವುದು ಬ್ಯಾಂಕರುಗಳ ಜವಾಬ್ದಾರಿ. ಆಮೇಲೆ ಹೇಗೋ ಅವರನ್ನು ಸಂಭಾಳಿಸುವ ಹೊತ್ತಿಗೆ ಮ್ಯಾನೇಜರ್ ಕ್ಯಾಬಿನ್ನಿನ ಎ.ಸಿ ಯನ್ನು ಮತ್ತಷ್ಟು ಜೋರು ಮಾಡಬೇಕಾಯಿತು.

ರಮೇಶ (ಹೆಸರು ಬದಲಿಸಲಾಗಿದೆ) ಬೀದಿ ಬದಿ ಬಟ್ಟೆ ವ್ಯಾಪಾರ ಮಾಡುವವ. ನಮ್ಮ ಶಾಖೆಯ ಗ್ರಾಹಕ. ಅವರು ತೆಗೆದುಕೊಂಡಿದ್ದ ಚಿನ್ನದ ಸಾಲದ ರೆನ್ಯೂವಲ್ ಗೆ ಅಂತ ಬಂದಿದ್ದರು.

ಅವರ ಚಿನ್ನವೇ ಸಾಕಷ್ಟಿದ್ದುದರಿಂದ ನಾನು ‘ನಿಮ್ಮ ಚಿನ್ನಕ್ಕೆ ಇನ್ನೂ ಹೆಚ್ಚಿನ ಸಾಲ ಸಿಗುತ್ತೆ ಕೊಡೋಣ್ವಾ’ ಎಂದು ಕೇಳಿದೆ. ಸಾಮಾನ್ಯವಾಗಿ ನಾವುಗಳು ಬಡವರು ಸಾಲ ಎಂದ ಕೂಡಲೇ ಹೂ ಎಂದುಬಿಡುತ್ತಾರೆ, ಶ್ರೀಮಂತರು ಯೋಚಿಸುತ್ತಾರೆ ಎಂದು ಭ್ರಮಿಸಿಬಿಟ್ಟಿರುತ್ತೇವೆ. ಆದರೆ ರಮೇಶ ‘ ಬೇಡ ಮೇಡಂ. . . ಬದುಕಿನಲ್ಲಿ ತಲೆಯ ಮೇಲಿನ ಹೊರೆ ಕಮ್ಮಿ ಮಾಡಿಕೊಳ್ಳಬೇಕು. ಅದಕ್ಕೇ ಕಷ್ಟಪಟ್ಟು ನಾನೂ ನನ್ನ ಹೆಂಡತಿಯೂ ದುಡಿಯುತ್ತಿದ್ದೇವೆ. ಸರೀಕರೆದುದು ಸರಿಯಾಗಿ ನಿಲ್ಲಬೇಕು. ಅದಕ್ಕೇ ಬಟ್ಟೆ ವ್ಯಾಪಾರದಿಂದಲೇ ಎರಡು ಮಹಡಿ ಮನೆ ಕಟ್ಟಿದ್ದೀನಿ. ಹೆಂಡತಿಯೂ ಮನೆಯಲ್ಲೇ ಬಟ್ಟೆ ವ್ಯಾಪಾರ ಮಾಡುತ್ತಾಳೆ. ನನ್ನಲ್ಲಿ ಕೊರೆಯುತ್ತಿದ್ದ ಪ್ರಶ್ನೆಯನ್ನು ಅವರ ಮುಂದಿಟ್ಟೆ ‘ರಮೇಶ್ ಅವರೇ ಬೀದಿ ಬದಿಯ ಬಟ್ಟೆಯನ್ನು ಇನ್ನೂ ಕೊಳ್ಳುವವರಿದ್ದಾರಾ? ಈಗೆಲ್ಲ ಆನ್ ಲೈನ್ ತಾನೇ ಹೆಚ್ಚು?’
ಅದಕ್ಕವರು ‘ಬೀದಿಬದಿ ವ್ಯಾಪಾರ – ತೀರಾ ಅಗ್ಗದ ವಸ್ತು ಅಂದ್ಕೋಬೇಡಿ ಮೇಡಂ. ನೀವುಗಳೂ ಹಾಕೋವಂಥಾ ಕ್ವಾಲಿಟೀನೂ ತರಿಸ್ತೀನಿ ಗೊತ್ತಾ? ನಾನು ನಾಲ್ಕು ಕ್ವಾಲಿಟಿ ಬಟ್ಟೆಗಳನ್ನು ಕೊಂಡೊಯ್ಯುತ್ತೇನೆ. ಇಡೀ ಗಾಡಿ ಕಾಣದಾಂತೆ ಬಟ್ಟೆಗಳನ್ನು ನೇತುಹಾಕಿಕೊಂಡಿರ್ತೀನಿ.

ಚೀಪ್ ಆಗಿರೋದು ಹ್ಯಾಂಡಲ್ ಮೇಲೆ, ಒಳ್ಳೆಯ ಕ್ವಾಲಿಟಿ ಇರೋದು ಬ್ಯಾಗಿನಲ್ಲಿ. ಅವರವರ ಹಣದಳತೆಗೆ ತಕ್ಕಂತೆ ನಮ್ಮ ಬಟ್ಟೆಗಳು. ಈಚೆಗೆ ವಾಟ್ಸಪ್ ವ್ಯಾಪಾರವೂ ಇದೆ. ಹೆಂಗಸರು ವಾಟ್ಸಪ್ ನಲ್ಲೇ ನೋಡಿ ನಮ್ಮಲ್ಲಿಯ ಬಟ್ಟೆಗಳನ್ನು ಸೆಲೆಕ್ಟ್ ಮಾಡಿಕೊಂಡಿರ್ತಾರೆ. ಅರ್ಧ ಕೆಲಸ ಮೊಬೈಲಿನಲ್ಲೇ ಆಗಿರುತ್ತದೆ. ಎದುರಿಗೆ ಬಂದಾಗ ತೃಪ್ತಿಯಾದರೆ ಕೊಳ್ಳುತ್ತಾರೆ. ಹಳ್ಳಿಗಳಲ್ಲಿ ನಮಗೆ ಖಾಯಂ ಗಿರಾಕಿ ಇದಾರೆ’ ಎನ್ನುವಾಗ ಅವರ ಮುಖದಲ್ಲಿನ ಹೆಮ್ಮೆ, ದುಡಿಮೆ ತಂದ ಆತ್ಮವಿಶ್ವಾಸ ಎದ್ದು ಕಾಣುತ್ತಿತ್ತು. ‘ಸರಿ ರಮೇಶ್ ಅವರೇ ಹೇಗೂ ಕಡಿಮೆಯೋ ಜಾಸ್ತಿಯೋ ಸಾಲಕ್ಕೆ ಪ್ರೋಸೆಸಿಂಗ್ ಚಾರ್ಜ್ ಇದ್ದೇ ಇರುತ್ತಲ್ಲಾ. ಬೇಕಾದ್ರೆ ಜಾಸ್ತೀನೇ ತೊಗೋಬೋದಿತ್ತು’ ಎಂದೆ. ‘ಮೇಡಂ ಚಾರ್ಜ್ ತೊಗೊಳೋದು ಬ್ಯಾಂಕಿನ ಧರ್ಮ. ಅದಿಲ್ಲದೆ ನಿಮಗೆಲ್ಲ ಸಂಬಳ ವಗೈರಿ ಕೊಡೋದು ಹೇಗಲ್ವಾ? ಅದಕ್ಕೇನೂ ಬೇಸರವಿಲ್ಲ. ನನಗಿಷ್ಟೇ ಸಾಕು’ ಎಂದರು.


ಪ್ರಾಮಾಣಿಕತೆಗೆ, ಅನುಭೂತಿಗೆ, ಕರುಣೆಗಳಂತಹ ಗುಣಗಳಿಗೆ ಸಿರಿತನ ಬಡತನದ ಹಂಗಿಲ್ಲ. ಅದು ಅವರವರ ವೈಯಕ್ತಿಕ ಗುಣ.

IMG 20180306 WA0008 1 edited
-ಡಾ.ಶುಭಶ್ರೀಪ್ರಸಾದ್
Share This Article
Leave a comment