ಜ. 15 ರ ತನಕ‌ ಸಿಇಟಿ ಕೌನ್ಸೆಲಿಂಗ್ ಗೆ ಎಐಸಿಟಿಇ ಕಾಲಾವಕಾಶ – ಡಿಸಿಎಂ ಅಶ್ವತ್ಥ ನಾರಾಯಣ

Team Newsnap
1 Min Read
Sri Ram Deva Betta Project can't be stopped: Minister Ashwath Narayan ಶ್ರೀರಾಮ ದೇವರ ಬೆಟ್ಟ ಯೋಜನೆ ತಡೆಯಲು ಸಾಧ್ಯವಿಲ್ಲ: ಸಚಿವ ಅಶ್ವತ್ಥ್‌ ನಾರಾಯಣ್

ರಾಜ್ಯದಲ್ಲಿ ಎಂಜಿನಿಯರಿಂಗ್ ಕೋರ್ಸ್ ಗಳ ಖಾಲಿ ಇರುವ ಸೀಟುಗಳಿಗೆ ವಿದ್ಯಾರ್ಥಿಗಳ ಪ್ರವೇಶಕ್ಕೆ ಜನವರಿ ಜ.15ರವರೆಗೆ ಕಾಲಾವಕಾಶ ವಿಸ್ತರಿಸಿ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಲಿ (ಎಐಸಿಟಿಇ) ಅನುಮತಿ ನೀಡಿದೆ ಎಂದು ಉನ್ನತ ಶಿಕ್ಷಣ ಸಚಿವ, ಡಿಸಿಎಂ ಡಾ.ಸಿ.ಎನ್.ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.


ಈ ಕುರಿತಂತೆ ಹೇಳಿಕೆ ಬಿಡುಗಡೆ ಮಾಡಿರುವ ಡಾ. ಅಶ್ವತ್ಥ್ ನಾರಾಯಣ, ಮತ್ತೊಂದು ಸುತ್ತಿನ ಕೌನ್ಸೆಲಿಂಗ್ ದಿನಾಂಕವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಶೀಘ್ರವೇ ಪ್ರಕಟಿಸಲಿದೆ ಎಂದಿದ್ದಾರೆ.

ಈಗಾಗಲೇ ಎಂಜಿನಿಯರಿಂಗ್ ಸೀಟು ಪಡೆದಿರುವವರಿಗೆ ಕೋರ್ಸ್ ಇಷ್ಟವಿಲ್ಲದಿದ್ದರೆ ಸೀಟುಗಳನ್ನು ವಾಪಸ್ಸು ಮಾಡಲು ಕೊನೆಯ ಬಾರಿಗೆ ಅವಕಾಶ ನೀಡಲಾಗುತ್ತದೆ. ಆದರೆ ಮುಂದೆ ನಡೆಯಲಿರುವ ಮಾಪ್-ಅಪ್ ಸುತ್ತಿನಲ್ಲಿ ಸೀಟು ಪಡೆದವರಿಗೆ ಅದನ್ನು ಹಿಂದಿರುಗಿಸಲು ಖಂಡಿತಾ ಅವಕಾಶ ಇರುವುದಿಲ್ಲ. ಅವರು ನಿಗದಿತ ಶುಲ್ಕ ಪಾವತಿಸಿ ಪ್ರವೇಶ ಪಡೆಯಲೇಬೇಕಾಗುತ್ತದೆ. ಇಲ್ಲದಿದ್ದರೆ ನಿಗದಿತ ಶುಲ್ಕದ ಐದು ಪಟ್ಟು ಮೊತ್ತವನ್ನು ದಂಡವಾಗಿ ಪಾವತಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

ವೃತ್ತಿಪರ ಕೋರ್ಸ್ ಗಳ ಖಾಲಿ ಇರುವ ಸೀಟುಗಳಿಗೆ ಮತ್ತೊಂದು ಸುತ್ತಿನ ಕೌನ್ಸೆಲಿಂಗ್ ಮಾಡುವ ಅಗತ್ಯ ಇದೆ. ಜನವರಿ 15ರವರೆಗೆ ಅವಕಾಶ ನೀಡಬೇಕು ಎಂದು ಕೋರಿ ಉನ್ನತ ಶಿಕ್ಷಣ ಇಲಾಖೆಯು ಎಐಸಿಟಿಇ ಅಧ್ಯಕ್ಷರಿಗೆ ಪತ್ರ ಬರೆದಿತ್ತು. ಅದಕ್ಕೆ ಸ್ಪಂದಿಸಿರುವ ಎಐಸಿಟಿಇ ರಾಜ್ಯದ ವಿದ್ಯಾರ್ಥಿಗಳಿಗೆ ಮಾತ್ರ ಕಾಲಾವಕಾಶ ವಿಸ್ತರಿಸಿ ಅನುಮತಿ ನೀಡಿದೆ.

ಉಳಿದಿರುವ ವೃತ್ತಿಪರ ಕೋರ್ಸ್ ಗಳ ಸೀಟ್ ಗಳನ್ನು ಆಯ್ಕೆ ಮಾಡಿಕೊಳ್ಳಲು ಮತ್ತೊಂದು ಸಲ, ಕೊನೆಯದಾಗಿ ಅವಕಾಶ ನೀಡಬೇಕೆಂದು ವಿದ್ಯಾರ್ಥಿಗಳು ಮನವಿ ಮಾಡಿದ್ದರು. ಇದರ ಜೊತೆಗೆ, ಕರ್ನಾಟಕ ಅನುದಾನರಹಿತ ಖಾಸಗಿ ಶೈಕ್ಷಣಿಕ ಕಾಲೇಜುಗಳ ಸಂಸ್ಥೆ (ಕೆಯುಪಿಇಸಿಎ) ಕೂಡ ಎಂಜಿನಿಯರಿಂಗ್ ಮತ್ತು ಆರ್ಕಿಟೆಕ್ಚರ್ ಕೋರ್ಸ್ ಗಳಿಗೆ ವಿದ್ಯಾರ್ಥಿಗಳ ಪ್ರವೇಶಕ್ಕೆ ಜನವರಿ 15ರವರೆಗೆ ಕಾಲಾವಕಾಶ ವಿಸ್ತರಿಸಲು ಕೋರಿದ್ದನ್ನು ಸ್ಮರಿಸಬಹುದು.

ಈ ಮುಂಚೆ ನೀಡಿದ್ದ ಅನುಮತಿಯಂತೆ ರಾಜ್ಯದಲ್ಲಿ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ 2020ರ ಡಿ 31 ಕೊನೆಯ ದಿನವಾಗಿತ್ತು.

Share This Article
Leave a comment