December 23, 2024

Newsnap Kannada

The World at your finger tips!

shubhsri p

ಲಲಿತ ಪ್ರಬಂಧ ಹೊಸ ಬರಹಗಾರರನ್ನು ಆಕರ್ಷಿಸಬೇಕು : ಲೇಖಕಿ ಭುವನೇಶ್ವರಿ ಹೆಗಡೆ

Spread the love

ಲಲಿತಪ್ರಬಂಧ ಹೊಸ ಬರಹಗಾರರನ್ನು ಆಕರ್ಷಿಸುವ ಪ್ರಕಾರವಾಗಬೇಕು- ಭುವನೇಶ್ವರಿ ಹೆಗಡೆ

shubsri p1

ಲಲಿತ ಪ್ರಬಂಧ ಎನ್ನುವುದು ನಮ್ಮಲ್ಲಿನ ಚಿಂತನೆಯನ್ನು ಲಲಿತವಾಗಿ ವ್ಯಕ್ತಪಡಿಸುವ ಸಾಹಿತ್ಯದ ಪ್ರಕಾರವಾಗಿದ್ದು ಹೊಸ ಹೊಸ ಯುವ ಬರಹಗಾರರು ಆಕರ್ಷಿಸುವ ರೀತಿ ಲಲಿತ ಪ್ರಬಂಧ ಬೆಳೆದು ಬರಬೇಕು ಎಂದು ಪ್ರಖ್ಯಾತ ಹಾಸ್ಯ ಲೇಖಕಿ ಹಾಗೂ ಮಂಗಳೂರಿನ ನಿವೃತ್ತ ಪ್ರಾಧ್ಯಾಪಕಿ ಭುವನೇಶ್ವರಿ ಹೆಗಡೆ ಅಭಿಪ್ರಾಯಪಟ್ಟರು.

ಐಡಿಯಲ್ ಪಬ್ಲಿಕೇಶನ್ಸ್ ವತಿಯಿಂದ ನಗರದ ಕರ್ನಾಟಕ ಸಂಘದಲ್ಲಿ ನಡೆದ ಡಾ.ಶುಭಶ್ರೀಪ್ರಸಾದ್ ಅವರ ಮೂರು ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಪುಸ್ತಕ ಬಿಡುಗಡೆ ಮಾಡಿ ಮಾತನಾಡುತ್ತಿದ್ದರು.

shub p

ಜೀವನದ ಭಾರವಾದ, ಕಷ್ಟದ, ಜಂಜಾಟದ ಬದುಕನ್ನು ಸಹ ಸರಸವಾದ ಕಣ್ಣಿನಿಂದ ನೋಡಿ ಬರೆಯಲು ಸಾಧ್ಯ ಎಂಬುದನ್ನು ಲಲಿತ ಪ್ರಬಂಧಕಾರರು ತೋರಿಸಿಕೊಟ್ಟಿದ್ದಾರೆ. ಅಂತಹವರಲ್ಲಿ ರಾ.ಶಿ ನಾ.ಕಸ್ತೂರಿ, ಕೈಲಾಸಂ,ಅಪರಂಜಿ ಇವರ ಬರಹಗಳು ಓದುಗರನ್ನು ಮೋಡಿ ಮಾಡಿದೆ. ಇವರ ಬರಹಗಳು ಓದುಗರನ್ನು ನೌಕಾವಿಹಾರ ಕರೆದುಕೊಂಡು ಹೋಗಿ ಬೇರೆ ಬೇರೆ ದೃಶ್ಯವೈಭವವನ್ನು ತೋರಿಸಿ ಮತ್ತೆ ದಂಡೆಗೆ ಕರೆತರುವ ರೀತಿಯ ಅನುಭವವನ್ನು ನೀಡುತ್ತವೆ ಎಂದರು.

ವ್ಯಕ್ತಿಗಳಲ್ಲಿ ಕಂಡುಬರುವ ಸ್ವಭಾವ ಹಾಸ್ಯಕ್ಕೆ ಪ್ರೇರಣೆಯಾಗಿ ಇನ್ನೊಬ್ಬರಿಗೆ ನೋವಾಗದಂತೆ ಬಳಸಿಕೊಳ್ಳಬೇಕು. ಬದುಕಿನಲ್ಲಿ ಇರಬಹುದಾದ ಘಟನೆಗಳನ್ನು ಹಾಸ್ಯದ ಕಣ್ಣಿನಿಂದ ನೋಡಿದಾಗ ನಗುವನ್ನು ಸೃಷ್ಟಿಸಬಹುದು.ಇಂದು ಜೋಕ್ಸ್ ಗಳನ್ನೇ ಹಾಸ್ಯ ಎಂಬುದಾಗಿ ಬಿಂಬಿಸಲಾಗುತ್ತಿದೆ. ಜೋಕ್ಸ್ ಗಳು ಆ ಕ್ಷಣಕ್ಕೆ ಮಾತ್ರ ಸೀಮಿತವಾಗಿರುತ್ತದೆ.ಜೋಕ್ಸ್ ಹಾಸ್ಯದ ಒಂದು ಪ್ರಕಾರ ಅಷ್ಟೇ. ಲಲಿತ ಪ್ರಬಂಧ ಜೀವನವನ್ನು ಸರಸವಾದ ಬದುಕಿನ ರೀತಿಯಾಗಿ ಕಾಣಬಹುದು ಎಂಬುದನ್ನು ತೋರಿಸಿಕೊಟ್ಟಿದೆ ಎಂದರು.

ಪ್ರತಿಯೊಬ್ಬ ಲೇಖಕರಿಗೆ ಕವಿತೆಯ ಬಗ್ಗೆ ಒಲವಿಲ್ಲದಿದ್ದರೆ ಏನನ್ನೂ ಬರೆಯಲು ಸಾಧ್ಯವಿಲ್ಲ. ಬರೆದರೂ ಅದು ಶುಷ್ಕವಾಗುತ್ತದೆ.ಲೇಖಕನ ಒಳಗೊಬ್ಬ ಕವಿ ಇದ್ದಾಗ ಎಲ್ಲ ಪ್ರಕಾರಗಳಲ್ಲೂ ಬರೆಯಲು ಸಾಧ್ಯವಿದೆ ಇಂತಹ ಕವಿತ್ವ ಶುಭಶ್ರೀಪ್ರಸಾದ್ ಅವರ ಲಲಿತ ಪ್ರಬಂಧಗಳಲ್ಲಿ ಕಂಡುಬರುತ್ತದೆ ಎಂದರು.

ಈ ಬಾರಿ ಹಾಸನಾಂಬ ದೇವಿ ದರ್ಶನ 15 ದಿನ ಮಾತ್ರ : ಅ13 ರಿಂದ 27ರ ತನಕ ದರ್ಶನ ಭಾಗ್ಯ

ಭುವನೇಶ್ವರಿ ಹೆಗಡೆಯವರು ಜೀವನದ ಹಲವು ಸನ್ನಿವೇಶಗಳ ಹಾಸ್ಯದ ತುಣುಕುಗಳನ್ನು ಸಾದರಪಡಿಸಿ ಪ್ರೇಕ್ಷಕರನ್ನು ನಗೆಗಡಲಲ್ಲಿ ಮುಳುಗಿಸಿದರು.

ಪುಸ್ತಕಗಳ ಕುರಿತು ಮಾತನಾಡಿದ ಲೇಖಕಿ ಹಾಗೂ ಬೆಂಗಳೂರಿನ ಮನೋವಿಜ್ಞಾನಿ ಕಪಿಲಾ ಶ್ರೀಧರ್ ಮಾತನಾಡಿ ನಮ್ಮಲ್ಲಿನ ಎಲ್ಲ ಅನುಭವಗಳನ್ನು ಅನುಭಾವವಾಗಿಸುವುದು ಸಾಹಿತ್ಯ.ಇಂತಹ ಸಾಹಿತ್ಯದ ನಿಜವಾದ ಓದು ಅನುಭವಗಳನ್ನು ನಮ್ಮ ಬದುಕಿನ ಆಧಾರದ ಮೇಲೆ ಅನುಭಾವವಾಗಿಸುತ್ತದೆ.

ಶುಭಶ್ರೀ ರಚಿಸಿರುವ ಮಂಜಿನ ಮಧುಪಾತ್ರೆ ಪ್ರವಾಸ ಕಥನದ ಬರಹದುದ್ದಕ್ಕೂ ಭಾಷೆಯಲ್ಲಿ ಜೀವಂತಿಕೆ ಹರಿದಾಡುತ್ತಿದೆ. ಇವರು ನಡೆದಾಡಿದ ಪ್ರವಾಸದ ಭೂಮಿಗೆ ಗೌರವ ತಂದು ಕೊಟ್ಟಿದ್ದಾರೆ. ಹೂ ದಂಡೆಯ ಬೇಲಿ ಕವನ ಸಂಕಲನ ಬರೆದಿರುವ ಕವಿಯಲ್ಲಿ ಸಹಾನುಭೂತಿ ಅಡಗಿದೆ. ಎಲ್ಲರ ಜೀವನದಲ್ಲಿ ನಡೆಯುವ ಕವಿಯ ಕಣ್ಣಲ್ಲಿ ವಿಶೇಷತೆ ಪಡೆದುಕೊಳ್ಳುತ್ತದೆ.ಇವರ ಕವಿತ್ವ ಬೆಚ್ಚಗಿನ ಚಳಿಯಲ್ಲಿ ತೋಯಿಸಿದಂತಿದೆ. ರೂಪಕ ಪ್ರತಿಮೆಗಳನ್ನು ಬಳಸಿಕೊಂಡಾಗ ಕಾವ್ಯದ ಶಕ್ತಿ ಹೆಚ್ಚುತ್ತದೆ.

ಇವರ ಲಲಿತ ಪ್ರಬಂಧಗಳು ಸಂಕಲನ ಕಲ್ಲು ಹಾಸಿನ ಮೇಲೆ ತಕಧಿಮಿ ಕೃತಿ ವಸಂತದಲ್ಲಿ ಹೂ ಹಣ್ಣುಗಳನ್ನು ಬಿಟ್ಟ ಗಿಡದ ಹಾಗಿದೆ. ಲೇಖಕಿಯ ಭಾಷೆ ಬೋರ್ ಹೊಡೆಸುವುದಿಲ್ಲ. ಆದರೆ ಬೋರ್ ಒಳಗಿರುವ ಅಂತರ್ಜಲವನ್ನು ಪಾತಾಳಗರಡಿ ಹಾಕಿ ಅಂತಃಕರಣ ಜಿನುಗಿಸುವ ರೀತಿ ಹೊರತಂದಿದ್ದಾರೆ ಎಂದು ಬಣ್ಣಿಸಿದರು.

ಹಿರಿಯ ಸಾಹಿತಿ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ತೈಲೂರು ವೆಂಕಟಕೃಷ್ಣ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಸಮಾರಂಭದಲ್ಲಿ ಲೇಖಕಿ ಶುಭಶ್ರೀ ಪ್ರಸಾದ್ ಅವರ ಹೂ ದಂಡೆಯ ಬೇಲಿ ಕವನ ಸಂಕಲನ, ಮಂಜಿನ ಮಧುಪಾತ್ರೆ ಪ್ರವಾಸ ಕಥನ ಹಾಗೂ ಲಲಿತ ಪ್ರಬಂಧ ಸಂಕಲನವಾದ ಕಲ್ಲು ಹಾಸಿನ ಮೇಲೆ ತಕಧಿಮಿ ಎಂಬ ಮೂರು ಕೃತಿಗಳನ್ನು ಲೋಕಾರ್ಪಣೆ ಗೊಳಿಸಲಾಯಿತು.

ಸಮಾರಂಭದಲ್ಲಿ ಐಡಿಯಲ್ ಪಬ್ಲಿಕೇಷನ್ಸ್ ಎಂ.ಎಸ್.ಶಿವಪ್ರಕಾಶ್, ಕೃತಿ ಕರ್ತೃ ಶುಭಶ್ರೀ ಪ್ರಸಾದ್, ಭವಾನಿ ಲೋಕೇಶ್, ಪ್ರಸಾದ್ ಉಪಸ್ಥಿತರಿದ್ದರು.

Copyright © All rights reserved Newsnap | Newsever by AF themes.
error: Content is protected !!