ಅಮೆರಿಕಾ ರಾಜಕಾರಣದಲ್ಲೂ ಮಂಡ್ಯದವರೇ ಮಿಂಚಿಂಗ್: ಬೈಡೆನ್ ಅಧ್ಯಕ್ಷರಾದರೆ ಡಾ.ವಿವೇಕ್ ಗೆ ಸ್ಥಾನ?

Team Newsnap
3 Min Read

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ 43 ವರ್ಷದ ಡಾ. ವಿವೇಕ್ ಹೆಚ್ ಮೂರ್ತಿ ಡೆಮಾಕ್ರಾಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬೈಡೆನ್ ಪ್ರಚಾರ ತಂಡದ ಪ್ರಮುಖರಲ್ಲಿ ಒಬ್ಬರಾಗಿದ್ದಾರೆ.

ಒಂದು ವೇಳೆ ಡೊನಾಲ್ಡ್ ಟ್ರಂಪ್ ಸೋತು ಬೈಡೆನ್ ಅಮೆರಿಕ ಅಧ್ಯಕ್ಷರಾದರೆ ಕನ್ನಡಿಗ ಡಾ.ವಿವೇಕ್ ಮೂರ್ತಿ ಬಹುದೊಡ್ಡ ಸ್ಥಾನ ಅಲಂಕರಿಸುವ ಸಂಭವನೀಯತೆ ಹೆಚ್ಚು.

ಡಾ. ವಿವೇಕ್ ಮೂರ್ತಿ ಮಂಡ್ಯ. ತಾಲೂಕಿನ ಹಲ್ಲೆಗೆರೆ ಗ್ರಾಮದವರು
ಇವರ ತಾತ ಹೆಚ್.ಟಿ. ನಾರಾಯಣಶೆಟ್ಟಿ ಹಿಂದುಳಿದ ವರ್ಗಗಳ ನಾಯಕರಾಗಿದ್ದವರು. ಕರ್ನಾಟಕದಲ್ಲಿ ಸಾಮಾಜಿಕ ಕ್ರಾಂತಿಯ ಹರಿಕಾರ ಮಾಜಿ ಸಿಎಂ ಡಿ ದೇವರಾಜ ಅರಸು ಆಪ್ತ ರಾಗಿದ್ದವರು. ಡಾ. ವಿವೇಕ್ ಮೂರ್ತಿ ಕುಟುಂಬದಲ್ಲಿ ಹಲವರು ವೈದ್ಯರಿದ್ಧಾರೆ. ತಂದೆ ಡಾ. ಹೆಚ್ ಎನ್ ಲಕ್ಷ್ಮೀನರಸಿಂಹ ಮೂರ್ತಿ ಮೈಸೂರು ಮೆಡಿಕಲ್ ಕಾಲೇಜಿನ ಪದವೀಧರ. ಬ್ರಿಟನ್​ನಲ್ಲಿ ಹಲವು ಸ್ತರಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಇವರ ಸಹೋದರಿ ಡಾ. ರಷ್ಮಿ ಅಮೆರಿಕದ ಫ್ಲೋರಿಡಾದಲ್ಲಿ ವೈದ್ಯರಾಗಿದ್ದಾರೆ.

ವೈದ್ಯಕೀಯ ಸೇವೆಯನ್ನು ಸಾಮಾಜಿಕ ಸೇವೆಯಾಗಿ ಪರಿಗಣಿಸುವ ವಿವೇಕ್ ಹೆಚ್ ಮೂರ್ತಿ ತಮ್ಮ ಮೂಲ ಊರನ್ನು ಯಾವತ್ತೂ ಮರೆತವರಲ್ಲ. ಹುಟ್ಟಿ ಬೆಳೆದದ್ದೆಲ್ಲಾ ವಿದೇಶದಲ್ಲಾದರೂ ಕನ್ನಡ ಮಾತು ನಿಲ್ಲಿಸಿದವರಲ್ಲ. ಇವರು ಪ್ರತೀ ವರ್ಷ ಹಲ್ಲೆ ಗೆರೆ ತಪ್ಪದೇ ಭೇಟಿ ನೀಡುತ್ತಾರೆ. ಶಿಕ್ಷಣ ಕ್ಷೇತ್ರಕ್ಕೆ ಲಕ್ಷಾಂತರ ಡಾಲರ್ ಹಣವನ್ನು ಇವರು ದೇಣಿಗೆಯಾಗಿ ನೀಡಿದ್ದಾರೆ. ಸರ್ಕಾರಿ ಶಾಲೆಗಳಿಗೆ ನೂರು ಕಂಪ್ಯೂಟರ್​ಗಳನ್ನು ಒದಗಿಸಿದ್ದಾರೆ.

ಮಂಡ್ಯ ಜಿಲ್ಲೆಯ ಎಲ್ಲಾ ಶಾಲೆಗಳಿಗೂ ಕಂಪ್ಯೂಟರ್ ಒದಗಿಸುವ ಯೋಜನೆಯನ್ನೂ ಹೊಂದಿದ್ದಾರೆ. ಆದರೆ ಇಲ್ಲಿ ವಿದ್ಯುತ್ ಸಮಸ್ಯೆ ಹಾಗೂ ನಿರ್ವಹಣೆ ಸಮಸ್ಯೆ ಇರುವುದರಿಂದ ಕಂಪ್ಯೂಟರ್​ನ ವಾಸ್ತವಿಕ ಬಳಕೆ ಅಸಮರ್ಪಕವಾಗುವ ಹಿನ್ನೆಲೆಯಲ್ಲಿ ಸದ್ಯಕ್ಕೆ ಈ ಯೋಜನೆಯನ್ನು ಸ್ಥಗಿತಗೊಳಿಸಿದ್ದಾರೆ. ಈಗ ಕಂಪ್ಯೂಟರ್​ಗಳಿಗೆ ಪವರ್ ಬ್ಯಾಕಪ್ ಆಗಿ ಸೋಲಾರ್ ಕಿಟ್​ಗಳನ್ನು ನೀಡಲು ಸ್ಕೋಪ್ ಫೌಂಡೇಶನ್ ನಿರ್ಧರಿಸಿದೆ.

ಇವರು ಪ್ರತಿ ವರ್ಷ ಹುಟ್ಟೂರಿಗೆ ಬಂದಾಗೆಲ್ಲಾ ತಮ್ಮ ಕುಟುಂಬದ ಸಂಸ್ಥಾಪಿತ ಸ್ಕೋಪ್ ಫೌಂಡೇಶನ್ ಅಡಿಯಲ್ಲಿ ಉಚಿತ ವೈದ್ಯಕೀಯ ಶಿಬಿರಗಳನ್ನು ನಡೆಸುತ್ತಾರೆ. ವೈದ್ಯರ ತಂಡಗಳನ್ನು ಕಟ್ಟಿ ಹಲವು ಬಾರಿ ಉಚಿತ ನೇತ್ರ ಶಿಬಿರಗಳನ್ನೂ ನಡೆಸಿದ್ದಾರೆ. ಉಚಿತ ಹೆಲ್ತ್ ಕವರ್ ಒದಗಿಸುವ ಪ್ರಕ್ರಿಯೆ ಬಗ್ಗೆ ಹಾಗು ವೈದ್ಯಕೀಯ ಸೇವೆಯನ್ನು ಇನ್ನಷ್ಟು ಉತ್ತಮ ಗೊಳಿಸುವ ವಿಧಾನಗಳ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸಲಹೆ ನೀಡುವ ಇಚ್ಛೆ ಇವರಿಗೆ.

ಡಾ. ವಿವೇಕ್ ಹೆಚ್ ಮೂರ್ತಿ ಹುಟ್ಟಿದ್ದು ಲಂಡನ್​ನಗರಿಯಲ್ಲಿ. ಬೆಳೆದದ್ದು ಅಮೆರಿಕದಲ್ಲಿ. ಅಮೆರಿಕದ ಹಾರ್ವರ್ಡ್ ಯೂನಿವರ್ಸಿಟಿಯಲ್ಲಿ ಬಿಎ ಹಾಗೂ ಯಾಲೆ ಶಿಕ್ಷಣ ಸಂಸ್ಥೆಯಿಂದ ಎಂಬಿಎ ಹಾಗೂ ಯಾಲೆ ಸ್ಕೂಲ್ ಆಫ್ ಮೆಡಿಸಿನ್​ನಿಂದ ಎಂಡಿ ಪದವಿಗಳನ್ನು ಪೂರೈಸಿದ್ಧಾರೆ. .ವೈದ್ಯಕೀಯ ಕ್ಷೇತ್ರದಲ್ಲಿ ಇವರು ಮುಂಚೂಣಿ ಸ್ಥಾನ ಅಲಂಕರಿಸುವ ಮಟ್ಟಕ್ಕೆ ಬೆಳೆದಿದ್ದಾರೆ. ಡಾಕ್ಟರ್ಸ್ ಫಾರ್ ಅಮೆರಿಕ ಎಂಬ ಸಂಘಟನೆಯ ಸಹಸಂಸ್ಥಾಪಕರು ಹಾಗು ಅಧ್ಯಕ್ಷರೂ ಇವರೇ. ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ವೈದ್ಯಕೀಯ ಸೇವೆ ನೀಡಬೇಕೆಂಬುದು ಈ ವೈದ್ಯರ ಗ್ರೂಪ್​ನ ಉದ್ದೇಶ. ವಾಷಿಂಗ್ಟನ್ ಮೂಲದ ಈ ಗ್ರೂಪ್​ನಲ್ಲಿ 16 ಸಾವಿರ ವೈದ್ಯರಿದ್ಧಾರೆ. 2008 ಮತ್ತು 2012ರ ಅಮೆರಿಕ ಅಧ್ಯಕ್ಷೀಯ ಚುನಾವಣೆಗಳಲ್ಲಿ ಬರಾಕ್ ಒಬಾಮ ಪರವಾಗಿ ಈ ಡಾಕ್ಟರ್ಸ್​ನ ಗುಂಪು ಸಕ್ರಿಯವಾಗಿ ಪ್ರಚಾರ ಮಾಡಿತ್ತು. ಈ ಹಿನ್ನೆಲೆಯಲ್ಲಿ ಈ ಗುಂಪು ಡಾಕ್ಟರ್ಸ್ ಆಫ್ ಒಬಾಮ ಎಂದೇ ಖ್ಯಾತವಾಗಿದೆ.

ಈಗ ಡಾ. ವಿವೇಕ್ ಹೆಚ್ ಮೂರ್ತಿ ಅವರು ಜೋ ಬೈಡೆನ್ ಪ್ರಚಾರ ಕಾರ್ಯದ ಪ್ರಮುಖ ಸ್ಟ್ರಾಟಿಜಿಸ್ಟ್ ಪೈಕಿ ಒಬ್ಬರಾಗಿದ್ದಾರೆ. ಬೈಡೆನ್ ಅಮೆರಿಕ ಅಧ್ಯಕ್ಷರಾದರೆ ಡಾ. ವಿವೇಕ್ ಅವರಿಗೆ ಬಹುದೊಡ್ಡ ಹುದ್ದೆ ಸಿಗುವುದು ಬಹುತೇಕ ನಿಶ್ಚಿತ ಎನ್ನಲಾಗುತ್ತಿದೆ. ಇತ್ತ ಹಲ್ಲೆಗೆರೆ ಯಲ್ಲಿ ಜನರೂ ಇದನ್ನೇ ನಿರೀಕ್ಷಿಸಿ ಶುಭಹಾರೈಸುತ್ತಿದ್ದಾರೆ.

Share This Article
Leave a comment