ರಾಷ್ಟ್ರೀಯ ಪಕ್ಷಗಳ ವ್ಯಾಮೋಹದಿಂದ ಹೊರಬನ್ನಿ; ಎಚ್.ಡಿ.ಕೆ

Team Newsnap
2 Min Read

ಒಬ್ಬ ಪ್ರಾಮಾಣಿಕ ರಾಜಕಾರಣಿ ಸೃಷ್ಟಿ ಆಗಬೇಕು ಎಂದರೆ ಅದು ಜನರ ಕೈಯಲ್ಲಿದೆ. ರಾಷ್ಟ್ರೀಯ ಪಕ್ಷಗಳ ವ್ಯಾಮೋಹದಿಂದ ಹೊರಬನ್ನಿ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.

ಆರ್ ಆರ್ ನಗರ ಕ್ಷೇತ್ರದ ವಿವಿಧ ಕಡೆ ಜೆಡಿಎಸ್‌ ಅಭ್ಯರ್ಥಿ ವಿ.ಕೃಷ್ಣಮೂರ್ತಿ ಪರ ರೋಡ್‌ ಶೋ ನಡೆಸಿ ಮತಯಾಚಿಸಿದ ಅವರು, ಲೂಟಿ ಹೊಡೆಯುವವರಿಗೆ ಮತ ಹಾಕಬೇಡಿ ಎಂದು ಬಿಹಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳುತ್ತಾರೆ. ಅವರ ಮಾತಿಗೆ ಗೌರವ ಕೊಡುತ್ತೀರಾ..? ಬಿಜೆಪಿ ಅಭ್ಯರ್ಥಿಗೆ ಮತ ಹಾಕುತ್ತೀರಾ..? ಯೋಚಿಸಿ ಮತಚಲಾಯಿಸಿ, ಯುವಕರಿಗೆ, ಪ್ರಾಮಾಣಿಕರಿಗೆ ಅವಕಾಶ ನೀಡಿ ಎಂದು ಮತದಾರರಲ್ಲಿ ಮನವಿ ಮಾಡಿದ್ದಾರೆ.

ತಮ್ಮ ಅಧಿಕಾರಾವಧಿಯಲ್ಲಿ ಕ್ಷೇತ್ರದಲ್ಲಿ ಸರಿಯಾಗಿ ಕೆಲಸ ಮಾಡಿದ್ದರೆ ಈಗ ಯಾಕೆ ಸೀರೆ, ಹಣ ಹಂಚುವ ಪ್ರಮೇಯ ಬರುತ್ತಿತ್ತು. ಗೊತ್ತಿದ್ದು, ಗೊತ್ತಿದ್ದು ಕಾಂಗ್ರೆಸ್‌ನವರು ತಪ್ಪು ಮಾಡಿದ್ದಾರೆ. ಒಬ್ಬ ಪ್ರಾಮಾಣಿಕ ರಾಜಕಾರಣಿ ಸೃಷ್ಟಿ ಆಗಬೇಕು ಎಂದರೆ ಅದು ಜನರ ಕೈಯಲ್ಲಿದೆ. ರಾಷ್ಟ್ರೀಯ ಪಕ್ಷಗಳ ವ್ಯಾಮೋಹದಿಂದ ಹೊರಬನ್ನಿ ಎಂದರು.

ಉತ್ತರ ಕರ್ನಾಟಕದಲ್ಲಿ ಪ್ರವಾಹ ಬಂದು ಸಾವಿರಾರು ಮನೆಗಳು ಕುಸಿದಿವೆ, ಸಂಪೂರ್ಣ ಬೆಳೆ ನಾಶ ಆಗಿದೆ. ಸಂಕಷ್ಟದಲ್ಲಿರುವ ಜನರಿಗೆ ಪರಿಹಾರ ನೀಡುವ ಕಾರ್ಯವಲ್ಲ, ಸಾಂತ್ವನ ಹೇಳುವ ಕಾರ್ಯವನ್ನು ಕೂಡ ಈ ಸರಕಾರ ಮಾಡಿಲ್ಲ. ಎಲ್ಲ ಸಚಿವರು ಉಪಚುನಾವಣೆ ಎಂದು ಬ್ಯುಸಿ ಆಗಿದ್ದಾರೆ. ಸರಕಾರಕ್ಕೆ ಜನರ ಸಂಕಷ್ಟಕ್ಕಿಂತ ಚುನಾವಣೆಯೇ ಮುಖ್ಯವಾಗಿದೆ ಎಂದಿದ್ದಾರೆ.

ನಮ್ಮ ಕ್ಷೇತ್ರಗಳಿಗೆ ಕುಮಾರಸ್ವಾಮಿ ಅನುದಾನ ನೀಡಿಲ್ಲ ಎಂದು ಕಾಂಗ್ರೆಸ್‌ ಶಾಸಕರು ಆರೋಪಿಸುತ್ತಾರೆ. ಆದರೆ, ಅವರ ಕ್ಷೇತ್ರಗಳಿಗೆ ಒಟ್ಟು 16 ಸಾವಿರ ಕೋಟಿ ರೂ. ಅನುದಾನ ನೀಡಿದ್ದೆ. ನಾನು ನೀಡಿದ ಅನುದಾನವನ್ನು ಬಿ.ಎಸ್‌.ಯಡಿಯೂರಪ್ಪ ವಾಪಸ್‌ ಪಡೆದಿದ್ದಾರೆ ಎಂದು ಬಿಜೆಪಿ ಶಾಸಕರೇ ಬಸನಗೌಡ ಪಾಟೀಲ್‌ ಅವರೇ ಬಹಿರಂಗವಾಗಿ ಹೇಳುತ್ತಾರೆ. ಇಂತಹ ರಾಷ್ಟ್ರೀಯ ಪಕ್ಷಗಳನ್ನು ನೀವು ನಂಬುತ್ತೀರಾ ಎಂದು ಜನರನ್ನು ಪ್ರಶ್ನಿಸಿದ್ದಾರೆ.

ಮಾಜಿ ಪ್ರಧಾನಿ ದೇವೇಗೌಡರ ಪ್ರಯತ್ನದಿಂದ ಬೆಂಗಳೂರಿಗೆ ಕಾವೇರಿ ನೀರು ಬಂದಿದೆ. ವಿಕ್ಟೋರಿಯಾ, ಬೌರಿಂಗ್‌ ಆಸ್ಪತ್ರೆಗಳ ಮೇಲ್ದರ್ಜೆಗೆ 60 ಕೋಟಿ ರೂ. ಅನುದಾನ ನೀಡಿದ್ದೆ, ಜಯದೇವದಲ್ಲಿ ಬಡವರಿಗೆ ಉಚಿತ ಡಯಾಲಿಸಿಸ್‌ ವ್ಯವಸ್ಥೆ ಮಾಡಿದೆ. ಸಾರಾಯಿ, ಲಾಟರಿ ಟಿಕೆಟ್‌ ಸಂಪೂರ್ಣ ನಿಷೇಧ, ಸಾಲ ಮನ್ನಾ, ವೃದ್ಧಾಪ್ಯ ವೇತನ, ವಿಧವಾ ಮಾಸಾಶನಗಳ ಸಹಾಯಧನ ಹೆಚ್ಚಿಸುವ ಅಭಿವೃದ್ಧಿ ಕಾರ್ಯಗಳನ್ನು ಸಿಕ್ಕ ಅಲ್ಪಾವಧಿಯಲ್ಲಿಯೇ ಮಾಡಿದ್ದೇನೆ ಎಂದು ಹೇಳಿದ್ದಾರೆ.

Share This Article
Leave a comment