May 26, 2022

Newsnap Kannada

The World at your finger tips!

festival

ಅಕ್ಷಯ ತೃತೀಯ (ಅಕ್ಷಯ ತದಿಗೆ)

Spread the love

ವೈಶಾಖ ಮಾಸದ ಶುದ್ದ ತೃತೀಯ ಜೊತೆಗೆ ರೋಹಿಣಿ ನಕ್ಷತ್ರದಂದು ಶಾಸ್ತ್ರದ ಪ್ರಕಾರ ಆಚರಿಸುವ ಹಬ್ಬವೇ ಅಕ್ಷಯ ತೃತೀಯ. ಕ್ಷಯ ಎಂದರೆ ನಶಿಸಿ ಹೋಗುವುದು, ಅಕ್ಷಯವೆಂದರೆ ಎಂದು ನಶಿಸಲಾಗದ್ದು ಮತ್ತು ಸಮೃದ್ದಿಯಾಗುವಂತದ್ದು.

ಹಿಂದೂಗಳ ಪವಿತ್ರ ದಿನಗಳಲ್ಲಿ ಅತ್ಯಂತ ಪವಿತ್ರವಾದ ಮೂರುವರೆ ಶುಭ ಮುಹೂರ್ತಗಳಲ್ಲಿ ಯುಗಾದಿ, ಅಕ್ಷಯ ತೃತೀಯ, ವಿಜಯ ದಶಮಿ ಮತ್ತು ಬಲಿಪಾಡ್ಯಮಿ ಅರ್ಧ ದಿವಸ ಶುಭಕಾರ್ಯಗಳಿಗೆ ಪ್ರಶಸ್ತವಾದ ದಿನಗಳು. ಈ ದಿನಗಳು ಪಂಚಾಂಗ ನೋಡುವ ಅವಶ್ಯಕತೆ ಇರುವುದಿಲ್ಲ ಎಂದೇ ನಂಬಲಾಗಿದೆ.

ಈ ದಿವಸ ಸಾಮಾನ್ಯವಾಗಿ ಶುಭ ಕೆಲಸಗಳನ್ನು ಮಾಡಿದರೆ ಅಕ್ಷಯವಾಗಿ ಪರಿಣಮಿಸುವುದು. ಈ ದಿವಸ ಜೀವನದ ಹೊಸ ಹೊಸ ಉದ್ಯೋಗಗಳನ್ನು ಪ್ರಾರಂಭಿಸುವುದು ಶುಭಕರ. ಈ ತೃತೀಯ ತಿಥಿ ಜತೆ ರೋಹಿಣಿ ನಕ್ಷತ್ರವಿದ್ದರೆ, ಮಹಾಪುಣ್ಯಕರವೆಂದು ಪುರಾಣದಲ್ಲಿ ಹೇಳಲಾಗಿದೆ.

ಸಮೃದ್ಧಿಯ ಸಂಕೇತವಾಗಿರುವ ಅಕ್ಷಯ ತೃತೀಯ ದಿನಕ್ಕೆ ಪೌರಾಣಿಕ ಮತ್ತು ಧಾರ್ಮಿಕ ಹಿನ್ನೆಲೆ ಇದೆ. ಈ ದಿನ ಕೈಗೊಳ್ಳುವ ಶುಭಕಾರ್ಯಗಳು ಯಶಸ್ಸು ತಂದುಕೊಡುತ್ತವೆ ಎಂಬ ನಂಬಿಕೆ.

ಪುರಾಣಗಳಲ್ಲಿ ಉಲ್ಲೇಖವಾಗಿರುವ ಅಕ್ಷಯ ತೃತೀಯದ ಮಹತ್ವ

 • ವೇದವ್ಯಾಸರು ಗಣಪತಿಗೆ ಶ್ರೀ ಮಹಾಭಾರತ ಬರೆಸಲು ಪ್ರಾರಂಭಿಸಿದ್ದು
 • ಭುರಿಶ್ರವಸ್ಸು ರಾಜನಿಗೆ ಶ್ರೀ ಮಹಾವಿಷ್ಣು ದರ್ಶನ ಕೊಟ್ಟ ದಿವಸ
 • ಕುಚೇಲ ತಂದ ಅವಲಕ್ಕಿಯನ್ನು ಶ್ರೀ ಕೃಷ್ಣ ಸಂತೋಷದಿಂದ ಸ್ವೀಕರಿಸಿ ಅನುಗ್ರಹಿಸಿದ ದಿನ
 • ಸಮುದ್ರದಲ್ಲಿ ಅಡಗಿಸಲು ಹೊರಟ ವೇದಗಳನ್ನು ಮತ್ತೆ ಬ್ರಹ್ಮನಿಗೆ ಕೊಟ್ಟ ದಿವಸ
 • ಕೃತಯುಗ ಪ್ರಾರಂಭವಾದ ದಿವಸ
 • ಮಹಾತ್ಮರಾದ ಪರುಶುರಾಮ, ಬುದ್ಧ, ಹಯಗ್ರೀವ ಜನಿಸಿದ ದಿನ.
 • 12ನೇ ಶತಮಾನದಲ್ಲಿ ಮಹಾ ಪುರುಷ ಬಸವೇಶ್ವರವರು ಜನಿಸಿದ್ದು ಈ ದಿವಸದಂದು
 • ಅಷ್ಟದಿಕ್ಪಾಲಕರಲ್ಲಿ ಒಬ್ಬನಾಗಿರುವ ಕುಬೇರ, ಅಕ್ಷಯ ತೃತಿಯ ಶುಭ ದಿನದಂದೇ ಸಿರಿದೇವಿಯಾದ ಮಹಾಲಕ್ಷ್ಮೀಯನ್ನು ಸಂಭ್ರಮ, ಭಕ್ತಿ-ಭಾವಗಳಿಂದ ಪೂಜಿಸಿ, ಧನ್ಯತೆಯನ್ನು ಪಡೆಯುತ್ತಾನೆಂದು ಪುರಾಣಗಳಲ್ಲಿ ಉಲ್ಲೇಖವಿದೆ.
 • ಆಚಾರ್ಯರೆನಿಸಿದ ಶಂಕರ ಭಗವತ್ಪಾದರು, ಭಿಕ್ಷೆಯಲ್ಲಿ ನೆಲ್ಲಿಕಾಯಿ ನೀಡಿದ ಬಡಮಹಿಳೆಗೆ, ‘ಕನಕಧಾರಾ’ ಸ್ತೋತ್ರ ಪಠಿಸಿ ಚಿನ್ನದ ನೆಲ್ಲಿಕಾಯಿ ಮಳೆಯನ್ನು ತರಿಸಿ, ಆಕೆಯ ಬಡತನ ನಿವಾರಣೆ ಮಾಡಿದ ದಿನ

ಅಕ್ಷಯ ತೃತೀಯ ಬಗ್ಗೆ ಶಾಸ್ತ್ರಗಳಲ್ಲಿ ಉಲ್ಲೇಖವಾದ ವಿಶೇಷತೆಗಳು

 • ಇಂದು ಮಾಡಿದ ಹೋಮ ಜಪತಪಗಳು ದಿನನಿತ್ಯಕಿಂತ 3 ಪಟ್ಟು ಹೆಚ್ಚಾಗಿ ಫಲವನ್ನು ಕೊಡುತ್ತದೆ.
 • ಗುರುಮುಖದಿಂದ ಮಂತ್ರೋಪದೇಶಕ್ಕೆ ಬಹಳ ಪ್ರಾಶಸ್ತ್ಯವಾದ ದಿನ
 • ದಾನ ಮಾಡಲು ಬಹಳ ಸೂಕ್ತವಾದ ದಿವಸ
 • ವೇದ ಉಪನಿಷತ್‌ಗಳ ಪಾರಯಣಕ್ಕೆ ಬಹಳ ವಿಶೇಷ
 • ವಿಶೇಷವಾದ ಜಪ ತಪ ಅನುಷ್ಠಾನಗಳಿಂದ ವಿಶೇಷ ಲಾಭ.

ಧನ-ಕನಕ-ಆಸ್ತಿ-ಅಂತಸ್ತುಗಳನ್ನು ಮೀರಿದ ಸ್ನೇಹ ಕೃಷ್ಣ-ಸುದಾಮರದ್ದು

ದ್ವಾಪರ ಯುಗದಲ್ಲಿ ಸುಧಾಮ ಕೃಷ್ಣನಿಂದ ಸಹಾಯ ಪಡೆಯಲು ದ್ವಾರಕೆಗೆ ಬಂದ ದಿನವೂ ಅಕ್ಷಯ ತೃತೀಯವಾಗಿತ್ತು. ಅಂದು ಶ್ರೀಕೃಷ್ಣನ ಅರಮನೆಯ ವೈಭೋಗ ಕಂಡು ಬಡವನಾದ ತಾನು ತಂದಿದ್ದ ಅವಲಕ್ಕಿಯನ್ನು ಕೃಷ್ಣನಿಗೆ ಕೊಡಲು ಹಿಂಜರಿದು ಆತನಿಂದ ಸಹಾಯವನ್ನು ಯಾಚಿಸದೆ ಸುಧಾಮ ಮನೆಗೆ ಹಿಂದಿರುಗುತ್ತಾನೆ.ಆದರೆ, ಆತನಿಗೆ ಅಚ್ಚರಿ ಕಾದಿರುತ್ತದೆ. ಅವನ ಪುಟ್ಟ ಗುಡಿಸಲು ಅರಮನೆಯಾಗಿ ಬದಲಾಗಿರುತ್ತದೆ. ಸುಧಾಮನ ಸತ್ಯ, ಸರಳತೆಗೆ ಕೃಷ್ಣ ಕೊಡುಗೆಯನ್ನೇ ನೀಡಿರುತ್ತಾನೆ. ಮಂಗಳಕರವಾದ ಅಕ್ಷಯ ತೃತೀಯದಲ್ಲಿ ನಾವು ಗಳಿಸುವ ಸ್ನೇಹ, ಸಂತಸ, ಸಂಪತ್ತು ಯಾವುದೇ ಆಗಿರಲಿ. ಅದು ಅಕ್ಷಯವಾಗುತ್ತದೆ.

ಅಕ್ಷಯ ಪಾತ್ರೆ

ಪಾಂಡವರು ವನವಾಸದಲ್ಲಿದ್ದಾಗ ಕೃಷ್ಣನ ಆದೇಶದಂತೆ ಸೂರ್ಯನನ್ನು ಪ್ರಾರ್ಥಿಸಿ, ದ್ರೌಪದಿ ಅಕ್ಷಯ ಪಾತ್ರೆ ಪಡೆದಿದ್ದು ಅಕ್ಷಯ ತೃತೀಯ ದಿವಸವೇ ಆಗಿದೆ. ಪಾಂಡವರು ತಮ್ಮ ವನವಾಸ, ಅಜ್ಞಾತವಾಸದ ನಂತರ ಶಸ್ತ್ರಾಸ್ತ್ರಗಳನ್ನು ಪುನಃ ಪಡೆದಿದ್ದು ಅಕ್ಷಯ ತೃತೀಯದಂದು. ಚಾಮುಂಡೇಶ್ವರಿ ರಾಕ್ಷಸರನ್ನು ಸಂಹರಿಸಿದ್ದು ಕೂಡ ಅಕ್ಷಯ ತೃತೀಯ ದಿನದಂದೇ.

ಬದರಿಯಲ್ಲಿ ಈ ಶುಭದಿನದಂದು ಮಂದಿರದ ದ್ವಾರ ತೆಗೆದು ನಾರಾಯಣನ ಅನುಗ್ರಹಕ್ಕೆ ಪಾತ್ರರಾಗಲು ಅವಕಾಶ ನೀಡುವುದರಿಂದ ಮುಕ್ತಿದ್ವಾರವನ್ನು ತೆಗೆಯುವ ಶುಭತಿಥಿಯೂ ಹೌದು.

ಈ ಅಕ್ಷಯ ತೃತೀಯ ದಿವಸ ರವಿ ಮತ್ತು ಚಂದ್ರ ಏಕಕಾಲದಲ್ಲಿ ಅತ್ಯುಚ್ಛ ಪ್ರಮಾಣ ತಲುಪಿ ಉಚ್ಛರಾಶಿಯಲ್ಲಿ ಉಜ್ವಲತೆ ಉಂಟಾಗುವುದರಿಂದ ಎಲ್ಲಾ ಶುಭ ಕಾರ್ಯಗಳಿಗೆ ಅತ್ಯಂತ ಪ್ರಶಸ್ತವಾಗಿರುತ್ತದೆ. ರವಿ ಆತ್ಮ ಮತ್ತು ದೇಹಕಾರಕ, ಚಂದ್ರ ಮನಸ್ಸುಕಾರಕ, ದೇಹ ಮತ್ತು ಮನಸ್ಸು ಪರಿಪೂರ್ಣತೆ ಹೊಂದುವ ದಿವಸವಾಗಿದೆ.

error: Content is protected !!