December 21, 2024

Newsnap Kannada

The World at your finger tips!

kumarswamy1

ಕೃಷಿ ಸಚಿವರಿಗೆ ಲಂಚ ನೀಡಿಕೆ ಆರೋಪ : ಇಬ್ಬರು ಅಧಿಕಾರಿಗಳನ್ನು ವಶಕ್ಕೆ ಪಡೆದ ಸಿಐಡಿ – ಎಚ್ ಡಿ ಕೆ

Spread the love

ಬೆಂಗಳೂರು:

ಕೃಷಿ ಸಚಿವ ಚಲುವರಾಯಸ್ವಾಮಿ ಅವರ ವಿರುದ್ಧ ರಾಜ್ಯಪಾಲರಿಗೆ ದೂರಿನ ಪತ್ರ ಬರೆದ ಕೃಷಿ ಇಲಾಖೆಯ ಇಬ್ಬರು ಅಧಿಕಾರಿಗಳನ್ನು ಸಿಐಡಿ ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ.

ಈ ನಡುವೆ ಸರ್ಕಾರದಲ್ಲಿ ವರ್ಗಾವಣೆ ದಂಧೆ ಹಾಗೂ ಮಂತ್ರಿಗಳಿಂದ ಅಧಿಕಾರಿಗಳ ಸುಲಿಗೆ ನಡೆಯುತ್ತಿದೆ ಎಂಬುದು ಸಾಬೀತಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ ಅವರು, ಆ ಪತ್ರವು ನಕಲಿಯೋ ಅಸಲಿಯೋ ಆ ಮಾತು ಹಾಗಿರಲಿ. ಆದರೆ, ಕೃಷಿ ಇಲಾಖೆಯಲ್ಲಿ ಸುಲಿಗೆ, ವರ್ಗಾವಣೆ ದಂಧೆ ನಡೆಯುತ್ತಿರುವುದು ಅಸಲಿ ಎನ್ನುವುದು ಗೊತ್ತಾಯಿತಲ್ಲ ಎಂದರು.

ಆ ಅಧಿಕಾರಿಗಳು ದೂರಿನ ಪತ್ರ ಯಾಕೆ ಬರೆದರು? ಅವರು ಮೈಸೂರಿನವರಾದರೂ ಆಗಲಿ ಅಥವಾ ಮಂಡ್ಯದವರಾದರೂ ಆಗಲಿ. ಸತ್ಯ ಏನೆಂಬುದು ಬಯಲಿಗೆ ಬಂತಲ್ಲ ಎಂದರು.

ಇಬ್ಬರು ಅಧಿಕಾರಿಗಳನ್ನು ಏಕೆ ವಶಕ್ಕೆ ಪಡೆದಿದ್ದಾರೆ? :

ಈಗ ಅಧಿಕಾರಿಗಳ ಬಂಧನವಾಗಿದೆ ಅಂದರೆ ಭ್ರಷ್ಟಾಚಾರ, ವರ್ಗಾವಣೆ ದಂಧೆ ಆಗಿದೆ ಅಂತಲೇ ಅಲ್ಲವೇ? ಆರೋಪಿ ಸ್ಥಾನದಲ್ಲಿರುವ ಸಚಿವರೇ ಪ್ರತಿಯೊಂದಕ್ಕೂ ಉತ್ತರ, ಹೇಳಿಕೆ ಕೊಡುತ್ತಿದ್ದಾರೆ. ಸಿಐಡಿ ಪೊಲೀಸರು ತನಿಖೆಯ ವರದಿಯನ್ನು ಗೃಹ ಸಚಿವರಿಗೆ ಕೊಡುತ್ತಾರೋ ಅಥವಾ ಮುಖ್ಯಮಂತ್ರಿಗಳಿಗೆ ಕೊಡುತ್ತಾರೋ? ಇಲ್ಲವೇ ಆರೋಪಿ ಸ್ಥಾನದಲ್ಲಿರುವ ಸಚಿವರಿಗೆ ಎಲ್ಲಾ ಮಾಹಿತಿಯನ್ನು ಸೋರಿಕೆ ಮಾಡಿತ್ತಾರೋ? ಇದೇನು ತನಿಖೆಯಾ? ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರದ ಭ್ರಷ್ಟಾಚಾರ ಬಯಲಿಗೆ ತಂದ ಆ ಮೈಸೂರು ಅಧಿಕಾರಿಗಳನ್ನು ನಾನು ಅಭಿನಂಧಿಸುತ್ತೇನೆ. ಅವರಿಗೆ ನಾನು ಹೇಳುವುದು ಇಷ್ಟೇ. ಹೇಗೂ ರಾಜ್ಯಪಾಲರಿಗೆ ದೂರಿನ ಪತ್ರ ನೀವೇ ಬರೆದಿದ್ದೀರಿ ಎನ್ನುವುದು ಗೊತ್ತಾಗಿ ಹೋಗಿದೆ. ಈಗಲಾದರೂ ನಡೆದಿರುವುದನ್ನು ಧೈರ್ಯವಾಗಿ ಹೊರಗೆ ಹೇಳಿ. ಕಷ್ಟಪಟ್ಟು, ಬಡತನದಲ್ಲಿ ಓದಿ ಸರಕಾರಿ ಕೆಲಸಕ್ಕೆ ಬಂದಿದ್ದೀರಿ. ಆರೂವರೆ ಕೋಟಿ ಜನರ ತೆರಿಗೆ ಹಣದಿಂದ ನಿಮಗೆ ಸಂಬಳ ಕೊಡಲಾಗುತ್ತಿದೆ ಎಂಬುದನ್ನು ಮನಗೊಂಡು ಜನರ ಪರವಾಗಿ ಮಾತನಾಡಿ. ಸರಕಾರದಲ್ಲಿ ನಡೆಯುತ್ತಿರುವ ಕುಕೃತ್ಯಗಳ ಬಗ್ಗೆ ಸತ್ಯ ಹೇಳಿ. ಎಲ್ಲಾದರೂ ಇದಕ್ಕೆ ಅಂತಿಮ ತೆರೆ ಎಳೆಯಬೇಕು ಎಂದು ಮಾಜಿ ಮುಖ್ಯಮಂತ್ರಿಗಳು ಒತ್ತಾಯ ಮಾಡಿದರು.

Copyright © All rights reserved Newsnap | Newsever by AF themes.
error: Content is protected !!