ಅವರಿಬ್ಬರೂ ಮದುವೆಯಾಗಿ ಈಗಾಗಲೇ ಒಂದೂವರೆ ದಶಕವೇ ಕಳೆದುಹೋಗಿದೆ. ಮುಂಚೆಲ್ಲಾ ಇದ್ದಂತಹ ಅನ್ಯೋನ್ಯತೆಯೂ ಕಡಿಮೆಯಾಗುತ್ತಾ ಬಂದಿದೆ. ಇಬ್ಬರೇ ಮಕ್ಕಳು ಕಲಿಯಲೆಂದು ಹಾಸ್ಟೆಲ್ ಸೇರಿದ ಮೇಲಂತೂ ಗೃಹಿಣಿಯಾದವಳಿಗೆ ಮತ್ತೆ ಒಂಟಿತನದ ಕಾವು ಸುಡತೊಡಗಿ ಮತ್ತೊಮ್ಮೆ ಗಂಡನ ಪ್ರೀತಿಗಾಗಿ ದುಂಬಾಲು ಬೀಳುತ್ತಿದ್ದಾಳೆ. ಅಂದಹಾಗೆ ಅವನು ವಿಶ್ವಾಸ್, ಉದ್ಯಮಿ. ಆಕೆ ರೇಖಾ, ಗೃಹಿಣಿಯಾಗಿದ್ದಳು.
“ಲೇ ಸುಮ್ನಿರೇ, ಆಫೀಸಿದ್ದೇ ಅತಿಯಾಯ್ತು. ಹೋಗಿ ಫೇಸ್ಬುಕ್ನಲ್ಲಿ ಕಾಲ ಕಳೆಯಬಾರದಾ..?”
ಫೇಸ್ಬುಕ್ ಅಂದರೆ ರೇಖಾಳಿಗೆ ಅಷ್ಟೊಂದು ಇಷ್ಟವಾಗುತ್ತಿರಲಿಲ್ಲ, ಮನಸ್ಸಿಗೆ ತುಂಬಾ ಬೇಸರವೆನಿಸಿದಾಗ ಸ್ಕ್ರೀನ್ ಸ್ಕ್ರೋಲ್ ಮಾಡಿಬಿಡುತ್ತಿದ್ದಳು.
“ಮತ್ತೇನು ಮಾಡುವುದು, ನಮ್ಮಂತ ಮಧ್ಯ ವಯಸ್ಸಿನವರಿಗೆ ಅದೇ ತಾನೇ ಆಸರೆ” ಗಂಡನನ್ನು ಅಣಕವಾಡುತ್ತಾ ರೂಮಿನತ್ತ ನಡೆದಳು ರೇಖಾ…
ಎರಡು ವಾರ ಕಳೆದಿರಬಹುದು. ಇತ್ತೀಚೆಗೆ ರೇಖಾ ತುಂಬಾನೇ ಬದಲಾಗಿದ್ದಾಳೆ ಅನ್ನಿಸಿತು ವಿಶ್ವಾಸನಿಗೆ…
“ಅಲ್ಲಾ, ಆಫೀಸಿಂದ ಬಂದರೂ ಕಣ್ಣೆತ್ತಿ ನೋಡುವುದಿಲ್ಲಾ, ಮಾತಾಡಿಸಿದರಷ್ಟೇ ಮಾತು, ಕಾಫಿಯಂತೂ ಕೇಳುವುದೇ ಇಲ್ಲ. ಇಡೀ ದಿವಸ ಫೇಸ್ಬುಕ್ನಲ್ಲೇ ಮುಳುಗಿರುತ್ತಾಳೆ. ಯಾಕ್ಹೀಗೆ !!”
ಆ ದಿವಸ ಆಫೀಸಿನಲ್ಲೂ ರೇಖಾಳ ವಿಚಾರಗಳೇ ಮನಸ್ಸನ್ನು ಆವರಿಸತೊಡಗಿತು.
“ಇತ್ತೀಚಿಗೆ ತುಂಬಾ ಸಂತೋಷವಾಗಿದ್ದಾಳೆ ಬೇರೆ.!! ವಿಷಯ ಬೇರೆ ಏನಾದರೂ ಇರಬಹುದಾ..? ಚಂದುವಿನ ಪತ್ನಿಯೂ ಹಿಂದೆ ಫೇಸ್ಬುಕ್ ನಲ್ಲಿ ಯಾರಲ್ಲೋ ಆತ್ಮೀಯತೆ ಬೆಳೆಸಿಕೊಂಡು ಆತನೊಂದಿಗೆ ಪರಾರಿಯಾದಳು. ರೇಖಾಳೂ..!!” ಎಂತೆಲ್ಲಾ ವಿಚಾರಗಳು ಮನಸ್ಸಿಗೆ ಬರುತ್ತಿದ್ದಂತೆ ಕೆಲಸಕಾರ್ಯ ಅರ್ಧಕ್ಕೇ ಬಿಟ್ಟು ಸೀದಾ ಮನೆ ಕಡೆ ಮುಖ ಮಾಡಿದ… ಮನೆಗೆ ಬಂದವನೇ ಸದ್ದು ಮಾಡದೇ ಹೊರಗಡೆ ಕಿಟಕಿಯಿಂದೊಮ್ಮೆ ಇಣುಕಿನೋಡಿದ. ರೇಖಾ ಆಗಲೂ ಮೊಬೈಲ್’ನಲ್ಲೇ ಚಾಟಿಂಗ್ನಲ್ಲಿ ತೊಡಗಿದ್ದಳು. ನಡುನಡುವೆ ಆಕೆಯ ತುಟಿಯಂಚಿನಲಿ ಸುಳಿದಾಡುತ್ತಿದ್ದ ಮಂದಹಾಸ, ಈತನ ಸಂಶಯಕ್ಕೆ ಇನ್ನಷ್ಟು ಪುಷ್ಠಿ ನೀಡುವಂತಿತ್ತು.
“ಛೇ, ಛೇ ನನ್ನ ರೇಖಾ ಹಾಗಿರಲಿಕ್ಕಿಲ್ಲ. ಎಲ್ಲಾ ನನ್ನ ಭ್ರಮೆ !!”
ಅಲ್ಲಿಂದ ಮೆಲ್ಲನೆ ಮನೆಯೊಳಗೆ ಕಾಲಿಟ್ಟಾಗ ಯೋಚನೆ ಮತ್ತೆ ಹೊಸರೂಪು ಪಡೆಯಿತು.
“ಅತ್ತ ಕಡೆಯಿಂದ ಮೆಸೇಜ್ ಕಳುಹಿಸುವವರು ಯಾರಿರಬಹುದು.? ಮದ್ಯ ವಯಸ್ಕನಿರಬಹುದೇ ಯುವಕನಿರಬಹುದೇ..? ಒಂದು ವೇಳೆ ಆತ ಈಕೆಯನ್ನು ಮಾತಿನಿಂದ ಮೋಡಿ ಮಾಡಿದ್ದರೆ !”
“ರೀ ಏನ್ರೀ ಇವತ್ತು ಬೇಗ”
ಆಕಸ್ಮಿಕವಾಗಿ ಬೇಗನೆ ಮನೆಗೆ ಬಂದಿದ್ದ ಪತಿಯನ್ನುದ್ದೇಶಿಸಿ ಕೇಳಿದಳು ರೇಖಾ.
“ಏನಿಲ್ಲ ಕಣೇ, ಇವತ್ತು ಏನೂ ಕೆಲಸಕಾರ್ಯವಿರಲಿಲ್ಲ..”
“ನಾನು ಬೇಗ ಬಂದು ಇವಳ ಸಂತೋಷಕ್ಕೆ ಅಡ್ಡಿಯಾಯಿತೇನೋ” ಗೋಣಗುತ್ತಲೇ ಮನೆಯೊಳಗೆ ಹೊಕ್ಕಿದ ವಿಶ್ವಾಸ್.
ಆಗಲೇ ನಾಲ್ಕು ತಿಂಗಳು ಕಳೆದಿದ್ದವು. ರೇಖಾ ತನ್ನ ಫೇಸ್ಬುಕ್ ಪ್ರಪಂಚದಲ್ಲಿ ತಲ್ಲೀನಳಾಗಿ ಸಂತೋಷದಿಂದಿದ್ದಳು, ವಿಶ್ವಾಸ್ ದಿನಕ್ಕೊಂದು ರೀತಿ ಕಲ್ಪಿಸುತ್ತಾ ಗಡ್ಡಬಿಟ್ಟಿದ್ದ… ಅದೊಂದು ಬೆಳಿಗ್ಗೆ ವಿಶ್ವಾಸ್ ಸ್ನಾನ ಗೃಹದಲ್ಲಿದ್ದಾಗ ರೇಖಾ ಜೋರಾಗಿ ನಗುತ್ತಿರುವುದು ಕೇಳಿಬಂತು. ಮೈಮೇಲೆ ಸಾಬೂನಿನ ನೊರೆಯಿರುವಂತೆಯೇ ಸೊಂಟಕ್ಕೆ ಟವೆಲ್ ಸುತ್ತಿಕೊಂಡು “ಮಾಡ್ತೀನಿ ಇರು” ಅನ್ನುತ್ತಾ ಸೀದಾ ಮೈನ್ ಹಾಲಿಗೆ ಬಂದ..
“ಏನೇ ನಿಂದು?”
“ಯಾಕ್ರೀ ಏನಾಯ್ತು…?”
“ಏನಿಲ್ಲ ಇಷ್ಟೊಂದು ಉರಿಯ ಸೋಪ್ ಯಾರಿರಿಸಿದ್ದು ಅಲ್ಲಿ? ನೋಡು ಕಣ್ಣು ತೆರೆಯಲಾಗುತ್ತಿಲ್ಲ”
“ರೀ ನಿಮ್ಮ ಅವಸ್ಥೆಯೇ” ಜೋರಾಗಿ ನಗುತ್ತಾ ಗಂಡನನ್ನು ಸ್ನಾನಗೃಹಕ್ಕೆ ಬಿಟ್ಟು ಬಂದಳು.
“ಛೇ ಯಾವುದು ಕೇಳಬೇಕೆಂದು ಬಂದೇನೋ, ಅದೇ ಕೇಳಲಾಗಲಿಲ್ಲ” ಮನಸ್ಸಿನಲ್ಲೇ ಅಂದುಕೊಳ್ಳುತ್ತಾ ಸ್ನಾನ ಮುಗಿಸಿದ ವಿಶ್ವಾಸ್.
ಆ ದಿವಸ ವಿಶ್ವಾಸ್ ಸ್ನಾನಗೃಹದಿಂದ ಹೊರಬರುತ್ತಿದ್ದಂತೆ, ರೇಖಾ ಸ್ನಾನಕ್ಕೆ ಹೊರಟಳು. ಮೊಬೈಲ್ ಲಾಕ್ ಮಾಡುವುದಕ್ಕೂ ಮರೆತಿದ್ದಳು.!! ಇದೇ ಸುಸಂದರ್ಭವೆಂದು ಆಕೆಯ ಮೊಬೈಲ್ ತೆಗೆದುಕೊಂಡು ಫೇಸ್ಬುಕ್ ಪರಿಶೀಲಿಸಿದ, ಅಲ್ಲೇನೂ ವಿಶೇಷ ಕಂಡುಬರಲಿಲ್ಲ. ವಾಟ್ಸಾಪ್ ಓಪನ್ ಮಾಡುತ್ತಿದ್ದಂತೆ “ಮಂದಾರ” ಹೆಸರಿನ ವಾಟ್ಸಾಪ್ ಗ್ರೂಪ್ ಮುಂಚೂಣಿಯಲ್ಲಿ ಕಾಣಿಸಿಕೊಂಡಿತು. ಅದರ ಡಿಸ್ಕ್ರಿಪ್ಶನ್ ನಲ್ಲಿ “ಗಂಡನಿಂದ ನಿರ್ಲಕ್ಷ್ಯಗೊಳಗಾದವರ ಮಹಿಳೆಯರಿಗೆ ಮಾತ್ರ” ಎಂದು ಬರೆಯಲಾಗಿತ್ತು. ಹತ್ತು ಸದಸ್ಯೆಯರಿದ್ದ ಆ ಗುಂಪಿನಲ್ಲಿ, ಜೋಕ್ಸ್, ಹರಟೆ ಇನ್ನಿತರ ಸಂಭಾಷಣೆಗಳು ಕಂಡುಬಂದು ವಿಶ್ವಾಸನಿಗೆ ತನ್ನ ತಪ್ಪಿನ ಅರಿವಾಯಿತು.
“ಪಾಪ ಸುಖಾಸುಮ್ಮನೆ ಅನುಮಾನಪಟ್ಟುಬಿಟ್ಟೆ. ಆಕೆಯಾದರೂ ಒಬ್ಬಂಟಿಯಾಗಿ ಹೇಗೆ ತಾನೇ ಸಮಯ ಕಳೆಯಬಲ್ಲಳು..!! ಮೆಲ್ಲಗೆ ಫೋನಿರಿಸಿ ಏನೂ ಆಗಿಲ್ಲವೆಂಬಂತೆ ರೇಖಾಳ ಆಗಮನಕ್ಕಾಗಿ ಕಾಯತೊಡಗಿದ. ಸ್ನಾನಮುಗಿಸಿಕೊಂಡು ಬಂದ ರೇಖಾಳ ಎರಡೂ ಕೈಗಳನ್ನು ಹಿಡಿದುಕೊಂಡು “ಸಂಜೆ ತಯಾರಾಗಿರು, ಇವತ್ತು ಹೊರಗಡೆ ಡಿನ್ನರ್ ಮಾಡೋಣ” ಅನ್ನುತ್ತಾ ಆಫೀಸಿಗೆ ಹೊರಟ… ರೇಖಾಳ ಸಂಭ್ರಮಕ್ಕೆ ಪಾರವೇ ಇರದಂತಾಯಿತು. ಇಬ್ಬರ ಮನಸ್ಸುಗಳೂ ಮತ್ತೆ ಒಂದಾಗಿ ದಾಂಪತ್ಯದ ‘ವಿಶ್ವಾಸರೇಖೆ’ ಅಳಿಸಿಹೋಗದಂತೆ ಕಾಪಾಡುವಲ್ಲಿ ಯಶಸ್ವಿಯಾದರು.