ಜನರಲ್ ತಿಮ್ಮಯ್ಯ ವೃತ್ತಕ್ಕೆ ಗುದ್ದಿದ KSRTC ಬಸ್ : ಉರುಳಿಬಿದ್ದ ವೀರ ಸೇನಾನಿ ಜನರಲ್ ತಿಮ್ಮಯ್ಯ ಪ್ರತಿಮೆ

Team Newsnap
1 Min Read

ಸೋಮವಾರ ಬೆಳಗ್ಗೆ KSRTC ಬಸ್ ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತಕ್ಕೆ ಗುದ್ದಿದ್ದು, ಡಿಕ್ಕಿ ಹೊಡೆದ ರಭಸಕ್ಕೆ ವೀರ ಸೇನಾನಿ ತಿಮ್ಮಯ್ಯ ಅವರ ಪ್ರತಿಮೆ ನೆಲಕ್ಕುರುಳಿ ಬಿದ್ದಿದೆ.

ವೀರ ಸೇನಾನಿ ಜನರಲ್ ತಿಮ್ಮಯ್ಯ ಪ್ರತಿಮೆಗೆ ನಿಯಂತ್ರಣ ಕಳೆದುಕೊಂಡ KSRTC ಬಸ್ ಡಿಕ್ಕಿಯಾಗಿ ಮಹಾನ್ ಸೇನಾನಿ ಪ್ರತಿಮೆ ನೆಲಕ್ಕುರುಳಿದೆ.

ಮಡಿಕೇರಿ ಡಿಪೋದಿಂದ ಬಸ್ ನಿಲ್ದಾಣದ ಕಡೆ ಹೊರಟಿದ್ದ ಬಸ್‌ಗೆ ಪಿಕಪ್ ವಾಹನವೊಂದು ಅಡ್ಡ ಬಂದಿದ್ದು, ಅಪಘಾತ ತಪ್ಪಿಸಲು ಹೋಗಿ ನಿಯಂತ್ರಣ ಕಳೆದುಕೊಂಡ ಬಸ್ ಚಾಲಕ ಜನರಲ್ ತಿಮ್ಮಯ್ಯ ಪ್ರತಿಮೆಗೆ ಡಿಕ್ಕಿ ಹೊಡೆದಿದ್ದಾನೆ.

ಅದೃಷ್ಟವಶಾತ್ ಬಸ್‌ನಲ್ಲಿ ಪ್ರಯಾಣಿಕರಿಲ್ಲದ್ದರಿಂದ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಚಾಲಕ ಹಾಗೂ ಕಾರ್ಯನಿರ್ವಾಹಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಸದ್ಯ ಸ್ಥಳಕ್ಕೆ ಮಡಿಕೇರಿ ನಗರ ಪೊಲೀಸರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಬಸ್ ಚಾಲಕ ಕೊಟ್ರೇಶ್‌ನನ್ನು ವಶಕ್ಕೆ ಪಡೆದು , ಬಸ್ ಅನ್ನು ಸಂಚಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕೊಡಗಿನ ಜನರು, ಜನಪ್ರತಿನಿಧಿಗಳು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಬಸ್ ಚಾಲಕನ ಅತಿ ವೇಗದ ಚಾಲನೆಯಿಂದ ಈ ರೀತಿಯ ಘಟನೆ ನಡೆದಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ,ಮಾಜಿ MLC ಎಂಸಿ ನಾಣಯ್ಯ ಭೇಟಿ ನೀಡಿ ಪ್ರತಿಮೆ ಬಿದ್ದಿರುವುದನ್ನು ಕಂಡು ಆಕ್ರೋಶ ವ್ಯಕ್ತಪಡಿಸಿದರು.

ಸದ್ಯದ ಮಟ್ಟಿಗೆ ಜನರಲ್ ತಿಮ್ಮಯ್ಯ ಅವರ ಪ್ರತಿಮೆಯನ್ನು ಜನರಲ್ ತಿಮ್ಮಯ್ಯ ಮ್ಯೂಸಿಯಂಗೆ ಸ್ಥಳಾಂತರಿಸುವ ಕಾರ್ಯ ನಡೆಸಿ, ತಿಮ್ಮಯ್ಯ ವೃತ್ತದ ಕಾಮಗಾರಿ ಮುಗಿಯುವರೆಗೂ ಮ್ಯೂಸಿಯಂನಲ್ಲಿ ಇಡುವಂತೆ ಚರ್ಚೆ ನಡೆಸಿದ ಬಳಿಕ ಕ್ರೇನ್ ಮೂಲಕ ಪ್ರತಿಮೆಯನ್ನು ಮ್ಯೂಸಿಯಂಗೆ ಸ್ಥಳಾಂತರ ಮಾಡಲಾಯಿತು.

ಪ್ರತಿಮೆಗೆ ಸಣ್ಣ ಪುಟ್ಟ ಡ್ಯಾಮೇಜ್ ಆಗಿದ್ದು, ಪ್ರತಿಮೆ ತಜ್ಞರನ್ನು ಕರೆಸಿ ಹೆಚ್ಚಿನ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಮಡಿಕೇರಿ ಉಪವಿಭಾಗಧಿಕಾರಿ ಯತೀಶ್ ಉಲ್ಲಳ್ ತಿಳಿಸಿದ್ದಾರೆ.

Share This Article
Leave a comment