December 24, 2024

Newsnap Kannada

The World at your finger tips!

raksha Bandhan

” ಅಪರೂಪದ ಅನುಬಂಧ”

Spread the love
uma nagraj
ಉಮಾ ನಾಗರಾಜ್.

ಅಮ್ಮ ಅಮ್ಮ ಇವತ್ತು ಅನ್ವಿತಾ ಪುಟ್ಟಿ ನನಗೆ ಫಸ್ಟ್ ಟೈಮ್ ರಾಖೀ ಕಟ್ತಾಳೆ..! ನಾನು ಅವಳಿಗೆ ಗಿಫ್ಟ್ ಕೊಡಬೇಕಲ್ವಾ…!? ಅಂತ ಪುಟ್ಟ ಅಮೇಯ್ ಸಂಭ್ರಮದಿಂದ ಮನೆಯಲ್ಲೆಲ್ಲ ಕುಣಿದಾಡುತಿದ್ದ.

ಮಕ್ಕಳ ಖುಷಿ ನೋಡಿ ಪ್ರಾಪ್ತಿ ಮತ್ತು ಆಶಿಷ್ ಗೆ ಸ್ವರ್ಗವೇ ಧರೆಗಿಳಿದಂತೆ ಅನಿಸಿತ್ತು. ಇಬ್ಬರೂ ಬೇಡಿ ಬಯಸಿದಂತೆ ಒಂದು ಗಂಡು ಮತ್ತೊಂದು ಹೆಣ್ಣು ಮಗುವನ್ನು ದೇವರು ವರವನ್ನಾಗಿ ನೀಡಿದ್ದು ಅವರ ಇಂದಿನ ಸಂತೋಷಕ್ಕೆ ಪ್ರಮುಖ ಕಾರಣವಾಗಿತ್ತು.

ಅಮೇಯ್ ಗಿಫ್ಟ್ ಏನು ಕೊಡ್ತಿದೀಯಾ…!? ಅಂತ ಆಶಿಷ್ ಕೇಳುತ್ತಲೇ ತನ್ನ ಪಿಗಿ ಬ್ಯಾಂಕ್ ತಂದಿಟ್ಟು ದುಡ್ಡನ್ನು ಲೆಕ್ಕ ಹಾಕುತ್ತಾ ಇರೋದನ್ನು ನೋಡ್ತಿದ್ರೆ ಒಂದು ಕ್ಷಣ ಆಶಿಷ್ ಗೆ ತನ್ನ ಗತ ಜೀವನದ ಆಗು ಹೋಗುಗಳೆಲ್ಲ ಕಣ್ಮುಂದೆ ಸುರುಳಿಯಾಗಿ ಬರಲಾರಂಭಿಸಿತು.

ಕಣ್ರೆಪ್ಪೆಯಂತೆ ನೋಡಿಕೊಳ್ಳುತ್ತ ಮುದ್ದು ತಂಗಿಯ ಎಲ್ಲ ತುಂಟಾಟಗಳನ್ನು ಸಹಿಸಿ ಸದಾಕಾಲ ಅವಳಿಗೆ ಅಪ್ಪನಂತೆ ಪ್ರೀತಿ ,ವಾತ್ಸಲ್ಯ ನೀಡುತ್ತಾ ತನ್ನ ಕುರಿತು ಕ್ಷಣ ಮಾತ್ರವೂ ಯೋಚಿಸದೇ ನಿಸ್ವಾರ್ಥದಿಂದ ಅದೆಷ್ಟೇ ನಿಷ್ಕಲ್ಮಶ ಪ್ರೀತಿ ಕಾಳಜಿ ತೋರಿದರೂ ಸಹ ಪ್ರತಿಯಾಗಿ ದೊರೆತಿದ್ದೇನು..!?

ಸ್ವಾರ್ಥ ಸಾಧನೆಯನ್ನೇ ಮುಖ್ಯ ಉದ್ದೇಶವನ್ನಾಗಿ ಮಾಡಿಕೊಂಡು ಒಡಹುಟ್ಟಿದವರೆಲ್ಲ ತಮ್ಮ ತಮ್ಮ ಕೆಲಸ ಸಾಧಿಸಿಕೊಂಡರೆ ಹೊರತು ನಿಸ್ವಾರ್ಥ ಪ್ರೀತಿ ನೀಡಿದ ಅಣ್ಣನ ಮೇಲೆ ಗೌರವ ಭಾವ ಕಿಂಚಿತ್ತೂ ಇಲ್ಲದಿರುವ ಬಗ್ಗೆ ಆಶಿಷ್ ಗೆ ಅರಿವಾಗುವ ಹೊತ್ತಿಗೆ ತುಂಬಾ ತಡವಾಗಿತ್ತು. ಪ್ರೀತಿಗೆ ಪೂರಕವಾಗಿ ಪ್ರೀತಿಯನ್ನೇ ಬಯಸೋದು ಎಲ್ಲರ ಮನಸ್ಸು.ಅಂತಹ ನಿಷ್ಕಲ್ಮಶ ಪ್ರೀತಿಯಲ್ಲಿ ಅಡಕವಾಗಿರುವ ಸ್ವಾರ್ಥದ ಮುಖವಾಡ ಕಳಚಿದ್ದು, ತನ್ನದೆಲ್ಲವನೂ ಒಡಹುಟ್ಟಿದವರಿಗೆ ಧಾರೆಯೆರೆದು ಕೈ ಖಾಲಿಯಾದಂತೆ ಒಬ್ಬೊಬ್ಬರದೇ ಬಣ್ಣ ಬಯಲಾಗುತ್ತ ಬಂದಿತು.

ತನ್ನ ಜೀವನದ ಮೇಲಿನ ಆಸೆಯನ್ನೇ ಕಳೆದುಕೊಂಡವನ ಬಾಳಿಗೆ ವರವಾಗಿ ಬಂದಿದ್ದು ಪ್ರಾಪ್ತಿ. ಅಣ್ಣನ ಮುದ್ದಿನ ತಂಗಿಯಾದವಳು ತನ್ನಣ್ಣ ಆದಿತ್ಯನ ಇಚ್ಛೆಯಂತೆ ಆಶಿಷ್ ನ ಜೀವನದಲ್ಲಿ ಬೆಳಕಾಗಿ ಬಂದಿದ್ದು. ಬದುಕಿನಲ್ಲಿ ಬಂದಂತಹ ಕಷ್ಟಗಳಿಗೆಲ್ಲ ಆಪದ್ಭಾಂಧವರಂತೆ ತಂಗಿಗೋಸ್ಕರ ಅಣ್ಣ ಅಣ್ಣನಿಗೋಸ್ಕರ ತಂಗಿ ಮಿಡಿಯುತ್ತ ಒಬ್ಬರಿಗೊಬ್ಬರು ಬೆನ್ನೆಲುಬಾಗಿ ನಿಂತಿದ್ದು ಇಂದಿನ ತನ್ನ ಯಶಸ್ವಿ ಜೀವನಕ್ಕೆ ಸಾಕ್ಷಿಯಾಗಿತ್ತು. ಒಬ್ಬರಿಗೊಬ್ಬರ ಮೇಲಿರುವ ಅಪಾರ ಪ್ರೀತಿ ಮತ್ತು ಆತ್ಮೀಯತೆ ನೋಡಿ ಆಶಿಷ್ ನಿಗೆ ಸಂತೃಪ್ತ ಭಾವ ಹೊರಹೊಮ್ಮಿತು.

ವಾಹ್!!! ಎಂತಹ “ಸುಂದರ ಬಾಂಧವ್ಯ”ವಿದು ಎಂದು ಆಶಿಷ್ ನ ಕಣ್ಣಲ್ಲಿ ಆನಂದ ಭಾಷ್ಪ ಮಿನುಗಿತು.ಅಷ್ಟೇ ಹೆಮ್ಮೆಯೂ ಮನದಲ್ಲಿ ಮೂಡಿತ್ತು. ಅದೆಷ್ಟು ಪ್ರೀತಿ ,ಕಾಳಜಿ ತಂದೆಗೆ ಮಗಳ ಮೇಲಿರುವಂತೆ,ತಾಯಿಗೆ ಮಗನ ಮೇಲಿರುವ ಮಮತೆಯಂತೆ. ಅಂದೇ ಇಂತಹ ಸಂಸ್ಕಾರವನ್ನು ಮಕ್ಕಳಿಗೆ ಕೊಡಲೇಬೇಕೆಂದು ನಿರ್ಧರಿಸಿದ್ದ.

ಅದರಂತೆ ತಮ್ಮ ಪ್ರೇಮ ಸೌಧದ ಆಧಾರ ಸ್ತಂಭವಾಗಿರುವ ಮಕ್ಕಳಿಬ್ಬರಲ್ಲಿ ಮತ್ತೇ ತನ್ನ ಕಳೆದು ಹೋದ ಬಾಲ್ಯವನ್ನು ಹುಡುಕುತ್ತ ಬಂದಂತಹ ನೆನಪುಗಳಿಂದ ದುಃಖಿತನಾದಾಗ ತನ್ನ ಪುಟ್ಟ ಪುಟ್ಟ ಕೈಗಳಿಂದ ಅನ್ವಿತಾ ಪುಟ್ಟಿ ಅಪ್ಪನ ಬೆನ್ನ ಮೇಲೆ ಬಂದು ಪಾ…ಪಾ…ಅನ್ನುತ್ತ ಗಟ್ಟಿಯಾಗಿ ಅಪ್ಪಿಕೊಂಡಾಗ ವಾಸ್ತವಕ್ಕೆ ಮರಳಿದ ಆಶಿಷ್ ಗೆ ಆಶ್ಚರ್ಯ…! ತನ್ನ ಕನಸಿನ ಕೂಸು ಕೈ ಯಲ್ಲಿ ರಾಖೀ ಹಿಡಿದುಕೊಂಡು ಅಪ್ಪನ ಕಡೆಗೆ ಬಂದಿದ್ದಳು. ಕಳೆದುಕೊಂಡ ತಾಯಿ ಮತ್ತು ತಂಗಿಯ ರೂಪದಲ್ಲಿ ಪುಟ್ಟ ಕಂದಮ್ಮ ನನ್ನು ನೋಡಿ ವಿಶ್ವ ವನ್ನೇ ಗೆದ್ದಂತಹ ಭಾವ ಮನದಲ್ಲಿ ಮೂಡಿತು ಕೂಡಲೇ ಮಗ ಮತ್ತು ಮಗಳನ್ನು ಗಟ್ಟಿಯಾಗಿ ಎದೆಗಪ್ಪಿಕೊಳ್ಳುತ್ತಲೇ ಅಮೇಯ್ ಮುದ್ದು ಮುದ್ದಾಗಿ

🎼ಫೂಲೊಂಕಾ ತಾರೊಂಕಾ ಸಬ್‌ ಕಾ ಕೆಹನಾ ಹೈ…! ಏಕ್ ಕರೋಡೊಂಮೇ ಮೇರಿ ಬೆಹೆನಾ ಹೈ…!! ಸಾರೀ ಊಮರ್ ಹಮೇ ಸಂಗ್ ರೆಹೆನಾ ಹೈ…!!!🎼

ಅಂತ ಹಾಡುತ್ತ ಪುಟ್ಟ ತಂಗಿಗೆ ಸಿಹಿ ಮುತ್ತನ್ನು ಕೊಡುವಾಗ ಪ್ರಾಪ್ತಿ ಅಲ್ಲಿಯೇ ಇದ್ದ ಕ್ಯಾಮೆರಾದಲ್ಲಿ ಈ ಸುಂದರ ಅವಿಸ್ಮರಣೀಯ ಕ್ಷಣವನ್ನು ಸೆರೆ ಹಿಡಿದು 💞 ಈ “ಅಪರೂಪದ ಅನುಬಂಧ”ಕೆ ಅನುರೂಪ ಪ್ರೀತಿ ಮತ್ತು ಕಾಳಜಿಗಿಂತ ಮಿಗಿಲಾದ ಉಡುಗೊರೆ ಬೇರೊಂದಿಲ್ಲ…!💝 ಅಂತ ಕ್ಯಾಪ್ಶನ್ ಸೇರಿಸಿ ತನ್ನಣ್ಣ ಆದಿತ್ಯನಿಗೆ ರಕ್ಷಾ ಬಂಧನದ ಹಾರ್ದಿಕ ಶುಭಾಶಯವನ್ನು ತಿಳಿಸಿದಳು.

Copyright © All rights reserved Newsnap | Newsever by AF themes.
error: Content is protected !!