ರಕ್ಷೆಯ ಬಂಧವಿದು ರಕ್ಷಾಬಂಧನ

Team Newsnap
2 Min Read
sowmya ganesh
ಸೌಮ್ಯಗಣೇಶ್

ಶ್ರಾವಣ ಮಾಸದ ಹುಣ್ಣಿಮೆಯಂದು ಬರುವ ಮಂಗಳಕರವಾದ ಹಬ್ಬವೆಂದರೆ ಅದುವೇ ರಕ್ಷಾ ಬಂಧನ. ಈ ಹಬ್ಬವು ಸಹೋದರ – ಸಹೋದರಿಯರ ನಡುವಿನ ಬಂಧವನ್ನು ಹೆಚ್ಚಿಸಿ ಭ್ರಾತೃತ್ವದ ಭಾವನೆಯನ್ನು ಮೂಡಿಸುತ್ತದೆ. ಮೊದಲು ಉತ್ತರ ಭಾರತದಲ್ಲಷ್ಟೇ ಈ ಹಬ್ಬವನ್ನು ಆಚರಿಸುತ್ತಿದ್ದರು. ಆದರೆ ಈಗ ಭಾರತದ ಎಲ್ಲಾ ಭಾಗಗಳಲ್ಲೂ ರಕ್ಷಾ ಬಂಧನ ಹಬ್ಬವನ್ನು ಆಚರಿಸುತ್ತಾರೆ.

ಈ ಹಬ್ಬದಲ್ಲಿ ಸಹೋದರಿಯು ತನ್ನ ಸಹೋದರನ ಮಣಿಕಟ್ಟಿಗೆ ಈ ರಕ್ಷೆಯ ದಾರ(ರಕ್ಷೆಯ ಬಂಧ)ವನ್ನು ಕಟ್ಟಿ ತನ್ನ ಅಣ್ಣನ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತಾಳೆ. ಈ ರಕ್ಷೆಯ ಬಂಧದಲ್ಲಿ ಆಕೆಗೆ ತನ್ನ ಅಣ್ಣ/ ತಮ್ಮ ಯಾವುದೇ ಕಷ್ಟದ ಸಮಯದಲ್ಲಿ ಪಾರು ಮಾಡುತ್ತಾರೆ ಅನ್ನುವ ನಂಬಿಕೆ ಇರುತ್ತದೆ. ಹಾಗೆ ಅಣ್ಣನೂ ಕೂಡ ಈ ರಕ್ಷಾ ಬಂಧನ ಕಟ್ಟಿಸಿಕೊಂಡು ತನ್ನ ತಂಗಿಯ ರಕ್ಷಣೆಯ ಪಣತೊಡುತ್ತಾನೆ.

ಆಕೆಗೆ ಯಾವುದೇ ಕಷ್ಟ ಬರದಂತೆ ಬೆಂಗಾವಲಾಗಿರುತ್ತಾನೆ. ಆದಾಗಿಯೂ ಆಕೆಗೆ ಏನಾದರೂ ಕಷ್ಟ ಬಂದರೆ ಅದನ್ನು ಪರಿಹರಿಸಲು ಸದಾ ಸಿದ್ಧನಾಗಿರುತ್ತಾನೆ. ದ್ರೌಪದಿಗೆ ಕಷ್ಟ ಬಂದಾಗ ಹೇಗೆ ಕೃಷ್ಣ ಪರಮಾತ್ಮ ಸಹಾಯದ ಹಸ್ತವನ್ನು ಚಾಚಿದ್ದನು, ಹಾಗೆಯೇ ಅಣ್ಣ ತಂಗಿಯ ರಕ್ಷಣೆಯ ಭಾರ ಹೊರುತ್ತಾನೆ.ತನ್ನ ತಂಗಿಯು ರಾಖಿ ಕಟ್ಟಿದ ನಂತರ ಅಣ್ಣನು ಆಕೆಯ ಖುಷಿಗೆ ಏನಾದರೂ ಉಡುಗೊರೆ ನೀಡುವ ಸಂಪ್ರದಾಯವಿದೆ.

ಐತಿಹಾಸಿಕ ಕಥೆಗಳ ಪ್ರಕಾರ ಈ ರಕ್ಷಾಬಂಧನಕ್ಕೆ ಮಹತ್ವಪೂರ್ಣ ಸ್ಥಾನವಿದೆ. ಅಲೆಕ್ಸಾಂಡರ್ ದಂಡಯಾತ್ರೆ ಮಾಡುವಾಗ ಭಾರತದ ಮೇಲೆ ದಂಡೆತ್ತಿ ಬರುತ್ತಾನೆ. ಆಗ ಅವನನ್ನು ಪೋರಸ್ ಎನ್ನುವ ರಾಜ ಧೈರ್ಯದಿಂದ ಎದುರಿಸುತ್ತಾನೆ. ಈ ಸಂದರ್ಭದಲ್ಲಿ ಅಲೆಕ್ಸಾಂಡರ್ ನ ಪತ್ನಿ ಪೋರಸ್ಗೆ ರಕ್ಷೆಯ ದಾರವನ್ನು ಕಳುಹಿಸಿ ತನ್ನ ಪತಿಯ ಪ್ರಾಣದ ರಕ್ಷಣೆಯನ್ನು ಮಾಡಲು ಬಿನ್ನವಿಸುತ್ತಾಳೆ . ಆಗ ಪೋರಸ್ ಅಲೆಕ್ಸಾಂಡರ್ನಿಗೆ ಪ್ರಾಣಭಿಕ್ಷೆ ನೀಡುತ್ತಾನೆ.ಅದು ರಕ್ಷಾಬಂಧನಕ್ಕಿರುವ ಶಕ್ತಿ.

ಪೌರಾಣಿಕ ಕಥೆಗಳ ಪ್ರಕಾರ ಶಿಶುಪಾಲನ ಸಂಹಾರದ ಸಂದರ್ಭದಲ್ಲಿ ಶ್ರೀಕೃಷ್ಣನು ಸುದರ್ಶನ ಚಕ್ರದಿಂದ ಅವನ ಸಂಹಾರ ಮಾಡುತ್ತಾನೆ. ಆ ಸಂದರ್ಭದಲ್ಲಿ ಕೃಷ್ಣನ ಬೆರಳಿಗೆ ಗಾಯವಾಗಿ ರಕ್ತಸುರಿಯುತ್ತಿರುತ್ತದೆ. ಆಗದ್ರೌಪದಿಯು ತನ್ನ ಸೀರೆಯ ಸೆರಗಿನ ತುದಿಯನ್ನು ಹರಿದು ಕೃಷ್ಣನ ಗಾಯಗೊಂಡ ಬೆರಳಿಗೆ ಆ ವಸ್ತ್ರವನ್ನು ಕಟ್ಟುತ್ತಾಳೆ .ಆಗ ಕೃಷ್ಣನು ದ್ರೌಪದಿಯ ಅನನ್ಯ ಭಕ್ತಿ , ಪ್ರೀತಿ – ವಾತ್ಸಲ್ಯಕ್ಕೆ ಕರಗಿ ಯಾವುದೇ ಸಂದರ್ಭದಲ್ಲಿ ಆಕೆಯ ರಕ್ಷಣೆಯನ್ನು ಮಾಡುವ ವಾಗ್ದಾನವನ್ನು ಮಾಡುತ್ತಾನೆ. ಅಂತೆಯೇ ಅವಳನ್ನು ಬಹಳಷ್ಟು ಕಷ್ಟಗಳಿಂದ ಪಾರು ಮಾಡಿ ಆಕೆಯನ್ನು ಕಾಪಾಡಿದ್ದಾನೆ. ಮಥುರಾ ಹಾಗೂ ಬೃಂದಾವನದ ದೇವಾಲಯಗಳಲ್ಲಿ ಲಿಂಗಭೇದವಿಲ್ಲದೆ ಪ್ರೀತಿ ಬಾಂಧವ್ಯದ ಸಂಕೇತವಾಗಿ ಕೃಷ್ಣನಿಗೆ ಸುಂದರವಾದ ರಾಕಿಯನ್ನು ಅರ್ಪಿಸುವ ಸಂಪ್ರದಾಯ ಈಗಲೂ ಇದೆ. ಹೀಗೆ ರಕ್ಷಾ ಬಂಧನ ರಕ್ಷಣೆ ಹಾಗೂ ಸಂಬಂಧದ ಉತ್ತರದಾಯಿತ್ವ ಹೊಂದಿದೆ. ಸಹೋದರಿಯರು ತಮ್ಮ ಸಹೋದರರ ದೀರ್ಘಾಯುಷ್ಯ ಬಯಸಿದರೆ ಸಹೋದರರು ಜೀವನಪರ್ಯಂತ ತಮ್ಮ ಸಹೋದರಿಯ ರಕ್ಷಣೆಯ ಭರವಸೆ ನೀಡುತ್ತಾರೆ. ಒಟ್ಟಿನಲ್ಲಿ ಬಾಂಧವ್ಯ ವೃದ್ಧಿಗೊಳಿಸುವ ಹಬ್ಬ ರಕ್ಷಾಬಂಧನ ಎಂದರೆ ತಪ್ಪಾಗಲಾರದು.

Share This Article
Leave a comment