ಮಣ್ಣೆತ್ತಿನ ಅಮಾವಾಸ್ಯೆ (mannettina amavase)

Team Newsnap
3 Min Read
A new moon of pottery ಮಣ್ಣೆತ್ತಿನ ಅಮಾವಾಸ್ಯೆ #thenewsnap #amavasya #latestnews #newmoonday #karnataka #kannadanews #horoscope #mysuru #bengaluru #mandyanews

ಭಾರತ ದೇಶ ವೈವಿಧ್ಯತೆಯಿಂದ ಕೂಡಿರುವ ದೇಶ. ನಮ್ಮಲ್ಲಿ ಸಂಪ್ರದಾಯ, ಹಬ್ಬಗಳಿಗೆ ತುಂಬಾನೇ ಮಹತ್ವ ನೀಡಲಾಗುವುದು. ಇನ್ನು ರೈತ ವರ್ಗವು ಆಚರಿಸುವ ಹಲವಾರು ಹಬ್ಬಗಳಿವೆ. ರೈತರ ಉಸಿರೆಂದರೆ ಮಣ್ಣು ಹಾಗೂ ಜಾನುವಾರುಗಳು, ಹಾಗಾಗಿ ಅನೇಕ ರೈತರ ಹಬ್ಬಗಳಲ್ಲಿ ಎತ್ತುಗಳಿಗೆ ತುಂಬಾನೇ ಮಹತ್ವವಿದೆ.

ರೈತನು ಮಣ್ಣನ್ನು ಹದ ಮಾಡಿ, ಬೆಳೆ ಬಿತ್ತಲು ಸಹಾಯ ಮಾಡುವ ಎತ್ತುಗಳಿಗೆ ಕೃತಜ್ಞತೆ ಸಲ್ಲಿಸಲು ಉತ್ತರ ಕರ್ನಾಟಕದ ಕಡೆ ಖಾರ ಹುಣ್ಣಿಮೆ ಆಚರಿಸಲಾಗುವುದು. ಅದೇ ರೀತಿ ಮಣ್ಣೆತ್ತಿನ ಅಮವಾಸ್ಯೆ ದಿನ ಕೂಡ ಮಣ್ಣಿನ ಎತ್ತಿನ ಪ್ರತಿಮೆಗಳಿಗೆ ಸಿಂಗರಿಸಿ ಪೂಜೆ ಮಾಡಲಾಗುವುದು.ಇದನ್ನು ಓದಿ –ಕೆಂಪೇಗೌಡ ಜಯಂತಿಯನ್ನು ದಸರಾ ಮಾದರಿ ಅದ್ದೂರಿ ಆಚರಣೆಗೆ ಒಪ್ಪಿಗೆ 

ಮಣ್ಣೆತ್ತಿನ ಅಮವಾಸ್ಯೆಯ ವಿಶೇಷತೆ

ಸಾಮಾನ್ಯವಾಗಿ ಮುಂಗಾರು ಪ್ರಾರಂಭವಾದಾಗ ಕೃಷಿ ಚಟುವಟಿಕೆಗಳು ಶುರುವಾಗುವುದು… ಪುನರ್ವಸು ಮಳೆ ಪ್ರಾರಂಭವಾಗುವ ಹೊತ್ತಿಗೆ ಬಿತ್ತನೆ ಆಗಿ, ನಾಟಿ ಕೂಡ ಮುಗಿದಿರುತ್ತದೆ, ಈ ಸಂಭ್ರಮವನ್ನು ಆಚರಿಸಲು ರೈತರು ಮಣ್ಣೆತ್ತಿನ ಅಮವಾಸ್ಯೆ ಆಚರಿಸುತ್ತಾರೆ.

ಮಣ್ಣಿನಿಂದ ಎತ್ತುಗಳನ್ನು ಮಾಡಿ ಪೂಜಿಸುವ ಸಂಪ್ರದಾಯದ ಮುಂಗಾರಿನ ಆರಂಭದ ಹಬ್ಬವೇ ಮಣ್ಣೆತ್ತಿನ ಅಮವಾಸ್ಯೆ. ಕಾರ ಹುಣ್ಣಿಮೆ ನಂತರ ಬರುವ ಈ ಹಬ್ಬ ರೈತಾಪಿ ಜನರು ತಮ್ಮ ಬದುಕಿಗೆ ಆಸರೆಯಾಗಿರುವ ಎತ್ತುಗಳನ್ನು ಪೂಜಿಸಿ ಸಂಭ್ರಮ ಪಡುವ ಹಬ್ಬ.

ಭೂತಾಯಿಯನ್ನು ಉಳುವ ಸಂಕೇತವಾದ ಎತ್ತುಗಳನ್ನು ಮಣ್ಣಿನಿಂದ ಕೆಲವರು ಮನೆಯಲ್ಲಿಯೇ ತಯಾರಿಸಿ ಕೊಳ್ಳುತ್ತಾರೆ. ಇಲ್ಲವೇ ಊರ ಕುಂಬಾರ ಮನೆಗಳಿಂದಲೂ ಮಣ್ಣಿನಿಂದ ತಯಾರಿಸಿದ ಜೋಡಿ ಎತ್ತುಗಳನ್ನು ಗಣಪನಂತೆ ಮಣ್ಣಿನಿಂದ ಮಾಡಿ ಪೂಜಿಸಿ ಎತ್ತುಗಳಿಗೆ ದೈವಿ ಸ್ವರೂಪ ಕೊಡುವುದು ನಮ್ಮ ಸಂಪ್ರದಾಯ. ಅದರಂತೆ ದೇವರ ಜಗುಲಿಯ ಮೇಲಿಟ್ಟು ಪೂಜೆ ಮಾಡುತ್ತಾರೆ.

ಕೃಷಿಕರ ಅತ್ಯಂತ ಒಡನಾಡಿಯಾಗಿರುವ ದನಕರುಗಳನ್ನು,ಕಾರ ಹುಣ್ಣಿಮೆಯಲ್ಲಿ ವಿಶೇಷವಾಗಿ ಮೈ ತೊಳೆದು, ಬಣ್ಣ ಹಚ್ಚಿ, ವಿವಿಧ ಪರಿಕರ ಗಳಿಂದ ಸಿಂಗಾರ ಮಾಡಿ, ಹೋಳಿಗೆ, ಕಡಬು ಮುಂತಾದ ಸಿಹಿ ತಿನಿಸುಗಳನ್ನು ಮಾಡಿ ಎಡೆ ಹಿಡಿದು ಸಂಜೆಗೆ ಕರಿ ಹರಿಯುವ ಸಂಭ್ರಮ ಹೇಳತೀರದು. ಸಿಂಗರಿಸಿದ ಜೋಡೆತ್ತುಗಳನ್ನು ನೋಡುವುದೇ ಒಂದು ಸೊಗಸು ದನಕರುಗಳನ್ನು ಮನಬಂದಂತೆ ಓಡಾಡಿಸುವ ಮೂಲಕ ತಿಂಗಳೊಪ್ಪತ್ತಿನಿಂದ ವಿಶ್ರಾಂತಿಗೆ ಸರಿದಿದ್ದ ಅವುಗಳನ್ನು ಮತ್ತೆ ಕೃಷಿ ಕಾಯಕಕ್ಕೆ ಸಜ್ಜು ಮಾಡುತ್ತಾರೆ.

ಮಣ್ಣೆತ್ತುಗಳಿಗೆ ಹೂವಿನಿಂದ ಪೂಜಿಸಿ ಕಾಯಿ ಕರ್ಪೂರ, ಲೋಭಾನ ಆರತಿ ಮಾಡಿ ವಿವಿಧ ಸಿಹಿ ಪದಾರ್ಥಗಳನ್ನು ನೈವೇದ್ಯ ಮಾಡಿ ಒಟ್ಟಾಗಿ ಕುಳಿತು ಊಟ ಮಾಡುತ್ತಾರೆ. ಸಂಜೆ ವೇಳೆಗೆ ಹೊಳೆ , ಕೆರೆ, ಹರಿಯುವ ನೀರಿನ ದಂಡೆಗೆ ಹೋಗಿ ಮಣ್ಣೆತ್ತುಗಳ ಮುಖ ತೊಳೆದು ವಿಭೂತಿ ಕುಂಕುಮ ಹಚ್ಚಿ ಆರತಿ ಬೆಳೆಗಿ , ಮಳೆ ಬೆಳೆ ಸಮೃದ್ಧಿಗೆ ಬೇಡಿ ಕೊಂಡು ಎತ್ತುಗಳನ್ನು ನೀರಿಗೆ ಬಿಡುವುದು ಪೂರ್ವಜರ ಕಾಲದಿಂದಲೂ ನಡೆದು ಬಂದಿದೆ.

ಇದು ಹಳ್ಳಿಯ ಮಕ್ಕಳ ಮಣ್ಣೆತ್ತಿನ ಅಮವಾಸ್ಯೆಯ ಸಂಭ್ರಮ. ಭೂತಾಯಿಗೆ ರೈತಾಪಿ ಜನ ಮಳೆ, ಬೆಳೆ ಚೆನ್ನಾಗಿ ಆಗಲೆಂದು ಕೃಷಿ ವರ್ಷಾರಂಭದಲ್ಲಿ ಬೇಡಿಕೊಳ್ಳುವ ಹಬ್ಬವಾಗಿದೆ.

ಮಣ್ಣಿನ ಹಬ್ಬಕ್ಕೆ ಚಾಲನೆ

ಹಬ್ಬಗಳಿಗೂ ಮತ್ತು ಮಣ್ಣಿಗೂ ಸಂಬಂಧವಿದೆ. ಮಣ್ಣೆತ್ತಿನ ಅಮವಾಸ್ಯೆಯಂದು ಮಣ್ಣಿನ ಎತ್ತು, ನಾಗರ ಪಂಚಮಿಗೆ ಮಣ್ಣಿನ ನಾಗರ ಹಾವು, ಗೌರಿ ಹುಣ್ಣಿಮೆಗೆ ಮಣ್ಣಿನ ಗೌರಿ. ಗಣೇಶ ಚತುರ್ಥಿಗೆ ಮಣ್ಣಿನ ಗಣೇಶ, ಜೋಕುಮಾರನ ಹಬ್ಬಕ್ಕೆ ಮಣ್ಣಿನ ಜೋಕುಮಾರ ಮಣ್ಣಿನ ಮೂರ್ತಿ ಮಾಡಿಸಿ ಭಕ್ತರು ಪೂಜೆ ಸಲ್ಲಿಸುವುದು ಹಳ್ಳಿಗಳಲ್ಲಿಈಗಲೂ ಚಾಲ್ತಿಯಲ್ಲಿದೆ.

ಮಣ್ಣು ಮತ್ತು ಮಾನವನಿಗೆ ಅವಿನಾಭಾವ ಸಂಬಂಧ. ರೈತರಿಗೆ ಎತ್ತುಗಳು ಕಣ್ಣುಗಳಿದ್ದಂತೆ. ಮತ್ತೊಂದಡೆ ಮಣ್ಣು ಕೂಡಾ ದೇವ ಸ್ವರೂಪಿ. ಎತ್ತುಗಳು ಜಮೀನಿನಲ್ಲಿ ರೈತನಿಗೆ ಹಗಲಿರುಳು ದುಡಿಯುವಲ್ಲಿ ನೆರವಾಗುತ್ತವೆ. ಮತ್ತೊಂದೆಡೆ ಭೂತಾಯಿ ರೈತನಿಗೆ ಅನ್ನ ನೀಡ್ತಾಳೆ. ಹೀಗಾಗಿ ಮಣ್ಣು ಮತ್ತು ಎತ್ತುಗಳನ್ನು ರೈತರು ಪೂಜನೀಯ ಭಾವದಿಂದ ಕಾಣುತ್ತಾರೆ. ಹೀಗಾಗಿ ರೈತರು ಎತ್ತು ಮತ್ತು ಮಣ್ಣನ್ನು ಪೂಜೆ ಮಾಡ್ತಾರೆ.

ಕನ್ನಡದ ಮೊದಲ ಜಾನಪದ ಸಂಶೋಧನಾ ಪ್ರಬಂಧಕಾರ ಬಾದಾಮಿ ತಾಲೂಕು ಕೆರೂರಿನ ಡಾ.ಬಿ,ಎಸ್,ಗದ್ದಗಿಮಠರು ಸಂಗ್ರಹಿಸಿದ ಹೆಣ್ಣು ಮಕ್ಕಳು ಹಾಡುವ ಅರಳೆಲೆ ಬಸವನ ಪದ ಹೀಗಿದೆ…

ಒಂದು ಸುತ್ತಿನ ಕ್ವಾಟಿ
ಅದರೊಳು ಹೊಂದಿ ನಿಂತನು ಬಸವ
ಬಸವಕ ಬಸವೆನ್ನಿರೆ
ಬಸವನ ಪಾದಕ ಶರಣನ್ನಿರೆ

MANNETTHINA AMAVAS

ಎರಡು ಸುತ್ತಿನ ಕ್ವಾಟಿ
ಅದರೊಳು ಸೊಡರು ತೂಗುವ ಬಸವ
ಬಸವಕ ಬಸವೆನ್ನಿರೆ
ಬಸವನ ಪಾದಕ ಶರಣನ್ನಿರೆ

ಮೂರು ಸುತ್ತಿನ ಕ್ವಾಟಿ
ಅದರೊಳು ಮೂರ್ತಗೊಂಡನ ಬಸವ
ಬಸವಕ ಬಸವೆನ್ನಿರೆ
ಬಸವನ ಪಾದಕ ಶರಣನ್ನಿರೆ

ನಾಲ್ಕು ಸುತ್ತಿನ ಕ್ವಾಟಿ
ಅದರೊಳು ನ್ಯಾಯಮೂರ್ತಿಯು ಬಸವ
ಬಸವಕ ಬಸವೆನ್ನಿರೆ
ಬಸವನ ಪಾದಕ ಶರಣನ್ನಿರೆ

ಐದು ಸುತ್ತಿನ ಕ್ವಾಟಿ
ಅದರೊಳು ಐಕ್ಯಮೂರ್ತಿಯು ಬಸವ
ಬಸವಕ ಬಸವೆನ್ನಿರೆ
ಬಸವನ ಪಾದಕ ಶರಣನ್ನಿರೆ

ಆರು ಸುತ್ತಿನ ಕ್ವಾಟಿ
ಅದರೊಳು ಅರಳಿ ನಿಂತಾನ ಬಸವ
ಬಸವಕ ಬಸವೆನ್ನಿರೆ
ಬಸವನ ಪಾದಕ ಶರಣನ್ನಿರೆ

ಏಳು ಸುತ್ತಿನ ಕ್ವಾಟಿ
ಅದರೊಳು ಜಗವನಾಳುವ ಬಸವ
ಬಸವಕ ಬಸವೆನ್ನಿರೆ
ಬಸವನ ಪಾದಕ ಶರಣನ್ನಿರೆ

ಎಂಟು ಸುತ್ತಿನ ಕ್ವಾಟಿ
ಶಿವನಿಗೆ ಕಂಟಲೆತ್ತೇನೋ ಬಸವ
ಬಸವಕ ಬಸವೆನ್ನಿರೆ
ಬಸವನ ಪಾದಕ ಶರಣನ್ನಿರೆ

ಒಂಭತ್ತು ಸುತ್ತಿನ ಕ್ವಾಟಿ
ಅದರೊಳು ತುಂಬಿ ಬಂದಾನೊ ಬಸವ
ಬಸವಕ ಬಸವೆನ್ನಿರೆ
ಬಸವನ ಪಾದಕ ಶರಣನ್ನಿರೆ
ಹತ್ತು ಸುತ್ತಿನ ಕ್ವಾಟಿ
ಅದರೊಳು ಸುತ್ತ ನೋಡಲು ಬಸವ
ಬಸವಕ ಬಸವೆನ್ನಿರೆ
ಬಸವನ ಪಾದಕ ಶರಣನ್ನಿರೆ

Share This Article
Leave a comment