ಆದಿಚುಂಚನಗಿರಿಯಲ್ಲಿ ಭಕ್ತ ಸಾಗರದ ನಡುವೆ ಮಹಾರಥೋತ್ಸವ

Team Newsnap
2 Min Read

ಅಡ್ಡಪಲ್ಲಕ್ಕಿಯಲ್ಲಿ ಕುಳಿತು ಭಕ್ತರನ್ನು ಆಶೀರ್ವದಿಸಿದ ಚುಂಚಶ್ರೀ ನಾಗಮಂಗಲ ತಾಲೂಕಿನ ಧಾರ್ಮಿಕ ಕ್ಷೇತ್ರ ಆದಿಚುಂಚನಗಿರಿಯಲ್ಲಿ ಶ್ರೀ ಗವಿಗಂಗಾಧರೇಶ್ವರ ಮಹಾರಥೋತ್ಸವ ಭಕ್ತ ಸಾಗರದ ನಡುವೆ ವಿಜೃಂಭಣೆಯಿಂದ ಜರುಗಿತು.

ಶುಕ್ರವಾರ ಮುಂಜಾನೆ 4.58ರ ಬ್ರಾಹ್ಮಿ ಮುಹೂರ್ತದಲ್ಲಿ ರಥೋತ್ಸವಕ್ಕೆ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಚಾಲನೆ ನೀಡಿದರು.

9 ದಿನಗಳ ಜಾತ್ರಾಮಹೋತ್ಸವದ 8ನೇ ದಿನ ನಡೆಯುವ ಶ್ರೀ ಗವಿಗಂಗಾಧರೇಶ್ವರ ಮಹಾ ರಥೋತ್ಸವ ಹಾಗೂ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿಯವರ ಅಡ್ಡ ಪಲ್ಲಕ್ಕಿ ಉತ್ಸವವನ್ನು ಲಕ್ಷಾಂತರ ಭಕ್ತರು ಕಣ್ತುಂಬಿಕೊಂಡರು.

Add pallakki

ರಥೋತ್ಸವದ ಅಂಗವಾಗಿ ರಾತ್ರಿಯಿಡೀ ಶ್ರೀ ಮಠದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನಡೆದವು. ಬೆಳಗಿನ ಜಾವ ಶ್ರೀ ಗಂಗಾಧರೇಶ್ವರ ಮೂರ್ತಿಯನ್ನು ಅಲಂಕಾರಗೊಂಡ‌ ಬೃಹದಾಕಾರದ ರಥಕ್ಕೆ ಶ್ರೀಗಳು ಪೂಜೆ ಸಲ್ಲಿಸುತ್ತಿದ್ದಂತೆ ಮಹಾರಥೋತ್ಸವ ಆರಂಭವಾಯಿತು.

ಈ ಮಹಾರಥೋತ್ಸವ ಹಿನ್ನಲೆ ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಭಕ್ತರು ಚುಂಚನಗಿರಿಗೆ ಆಗಮಿಸಿದ್ದರು. ರಥಬೀದಿಯಲ್ಲಿ ರಥೋತ್ಸವ ಆರಂಭಗೊಳ್ತಿದ್ದಂತೆ ಆರಾಧ್ಯದೈವ ಕಾಲಭೈರವ ಹಾಗೂ ಗಂಗಾಧರೇಶ್ವರ ಸ್ವಾಮಿಗೆ ಜೈಕಾರ ಕೂಗುತ್ತಾ ಲಕ್ಷಾಂತರ ಭಕ್ತರು ರಥ ಎಳೆದರು.

ರಥದ ಮೇಲೆ ಹಣ್ಣು ಜವನ ಎಸೆದ ಭಕ್ತ ಸಮೂಹ ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಪ್ರಾರ್ಥಿಸುತ್ತಾ ಭಕ್ತಿ ಭಾವ‌ ಮೆರೆದರು.

ಭಕ್ತರನ್ನು ಆಶೀರ್ವದಿಸಿದ ಚುಂಚಶ್ರೀಗಳು :

ರಥೋತ್ಸವದ ಜೊತೆ ಜೊತೆಗೆ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ಅಡ್ಡ ಪಲ್ಲಕ್ಕಿ ಉತ್ಸವವೂ ಕೂಡ ಪ್ರಾರಂಭವಾಯಿತು. ಚಿನ್ನದ ಕಿರೀಟ ಧರಿಸಿ ಪಲ್ಲಕ್ಕಿಯಲ್ಲಿ ಕುಳಿತಿದ್ದ ಶ್ರೀಗಳು ನೆರೆದಿದ್ದ ಭಕ್ತರಿಗೆ ದರ್ಶನ ನೀಡುತ್ತ ಆಶೀರ್ವದಿಸಿದರು. ಭಕ್ತ ಸಮೂಹ ಅಡ್ಡ ಪಲ್ಲಕ್ಕಿಯನ್ನು ಹೆಗಲಮೇಲೆ ಹೊತ್ತು ಸಾಗಿತು.

ದೀಪಾಲಂಕಾರದಿಂದ‌ ಕಂಗೊಳಿಸಿದ ಚುಂಚನಗಿರಿ :

ಜಾತ್ರಾಮಹೋತ್ಸವ ಹಿನ್ನೆಲೆಯಲ್ಲಿ ಆದಿಚುಂಚನಗಿರಿಯು ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಬಣ್ಣ ಬಣ್ಣ ವಿದ್ಯುತ್ ದೀಪಗಳನ್ನು ದೇವಾಲಯ, ಬೆಟ್ಟ, ರಸ್ತೆಗಳಿಗೆ ಅಲಂಕರಿಸಲಾಗಿದೆ.

ಬಾಣಬಿರುಸುಗಳ‌ ಕಲರವ:

ರಥೋತ್ಸವಕ್ಕೆ ಚಾಲನೆ ಸಿಗ್ತಿದ್ದಂತೆ ಹರ್ಷೋದ್ಘಾರ ನಡುವೆ ಲಕ್ಷಾಂತರ ಭಕ್ತರು ರಥ ಎಳೆದರು. ಈ ವೇಳೆ ಸಿಡಿಮದ್ದು, ಪಟಾಕಿಗಳನ್ನು ಸಿಡಿಸಲಾಯಿತು.‌ ಬಾನೆತ್ತರಕ್ಕೆ ಚಿಮ್ಮುತ್ತ ಸಿಡಿಯುತ್ತಿದ್ದ ಬಾಣಬಿರುಸುಗಳು ಬಣ್ಣ ಬಣ್ಣದ ಚಿತ್ತಾರ ಮೂಡಿಸುತ್ತಿದ್ದವು. ಅತ್ತ ಕಾಲಭೈರವ ಹಾಗೂ ಗವಿಗಂಗಾಧರೇಶ್ವರ ಸ್ವಾಮಿಗೆ ಜೈಕಾರ ಹಾಕುತ್ತ ರಥ ಎಳೆಯುತ್ತಿದ್ದ ಭಕ್ತರು ಪಟಾಕಿ ಸದ್ದು ಕೇಳುತ್ತಾ ಹರ್ಷೋದ್ಘಾರ ವ್ಯಕ್ತ ಪಡಿಸಿದರು.

ರಥೋತ್ಸವದ ವೇಳೆ ಅಭಿಮಾನ ತೋರಿದ ಅಪ್ಪು ಅಭಿಮಾನಿಗಳು.

ರಥೋತ್ಸವಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಭಕ್ತ ಸಮೂಹದ ನಡುವೆಯೂ ಅಪ್ಪು ಭಾವಚಿತ್ರ ಎತ್ತಿ ಹಿಡಿದ ಅಭಿಮಾನಿಗಳು ಪುನೀತ್ ಮೇಲಿನ ಅಭಿಮಾನ ವ್ಯಕ್ತಪಡಿಸಿದರು.

Share This Article
Leave a comment