ಓದುವ ಮನಸು ಅರಳಿಸಿದ ಲೇಖಕಿ ಎಂ.ಕೆ. ಇಂದಿರಾ
ಆರು ದಶಕಗಳ ಹಿಂದೆ ಕನ್ನಡ ಕಾದಂಬರಿಗಳನ್ನು ಓದುವ ಗೀಳು ಹಿಡಿಸಿದ ಅದರಲ್ಲೂ ಮಹಿಳೆಯರಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿದ ಕಾದಂಬರಿಕಾರರಲ್ಲಿ ಎಂ.ಕೆ.ಇಂದಿರಾ ಹೆಸರು ಪ್ರಮುಖವಾದುದು. ಇವರ ಗೆಜ್ಜೆಪೂಜೆ ಕಾದಂಬರಿಯನ್ನು ಖ್ಯಾತ ನಿರ್ದೇಶಕ ಪುಟ್ಟಣ್ಣಕಣಗಾಲ್ ಅವರು ಚಲನಚಚಿತ್ರವಾಗಿಸಿದ ನಂತರ ಈ ಲೇಖಕಿಯ ಪರಿಚಯ ಸಾಮಾನ್ಯ ಓದುಗರಿಗೂ ಆಯಿತು.
ಜೀವನದ ಘಟನೆಗಳನ್ನು ಕಾದಂಬರಿಯಾಗಿಸುವಲ್ಲಿ ಯಶಸ್ವಿಯಾದವರು ಎಂ.ಕೆ. ಇಂದಿರಾ. ಹಾಗೆಯೇ ಕನ್ನಡ ಕಾದಂಬರಿ ಕ್ಷೇತ್ರವನ್ನು ಶ್ರೀಮಂತಗಳಿಸಿದವರಲ್ಲಿ ಇವರ ಕೊಡುಗೆಯೂ ಬಹಳ. ಇವರ ಜನಪ್ರಿಯತೆ ಉತ್ತುಂಗಕ್ಕೇರಿದ್ದು ಫಣಿಯಮ್ಮ ಕಾದಂಬರಿ ಚಲನಚಿತ್ರವಾದ ನಂತರ. ಪ್ರೇಮಾ ಕಾರಂತ್ ನಿದೇರ್ಶಿಸಿದ ಈ ಚಿತ್ರ ಸಾಕಷ್ಟು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿತಲ್ಲದೆ ಅಂತಾರಾಷ್ಟ್ರೀಯಮಟ್ಟದಲ್ಲೂ ಹೆಸರುಮಾಡಿತು. ಫಣಿಯಮ್ಮ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ದೊರೆಯಿತು. ಈ ಕೃತಿಯನ್ನು ತೇಜಸ್ವಿನಿ ನಿರಂಜನ ಆಂಗ್ಲಭಾಷೆಗೆ ಅನುವಾದ ಮಾಡಿದ್ದಾರೆ. ಈ ಅನುವಾದಕ್ಕೆ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಬಾಲವಿಧವೆಯ ಸಮಸ್ಯೆಯನ್ನು ಅರ್ಥಪೂರ್ಣವಾಗಿ ಕಟ್ಟಿಕೊಟ್ಟಿದ್ದು ಫಣಿಯಮ್ಮ ಕಾದಂಬರಿಯಲ್ಲಿ ಎಂಬುದು ಜನಜನಿತ. ಗೆಜ್ಜೆಪೂಜೆ ಮತ್ತು ಫಣಿಯಮ್ಮ ಎರಡು ಕಾದಂಬರಿಯ ಪ್ರಮುಖ ಪಾತ್ರಗಳ ಪೋಷಣೆ ಇಂದಿರಾ ಅವರ ಸಾಮಥ್ರ್ಯಕ್ಕೆ ಕನ್ನಡಿಯಾಗಿವೆ.
ಕಾದಂಬರಿ ಬರೆಯುವುದಕ್ಕೆ ವಯಸ್ಸಿನ ಮಿತಿಯಲ್ಲ ಎಂಬುದಕ್ಕೆ ಇಂದಿರಾ ಉತ್ತಮ ಉದಾಹರಣೆಯಾಗುತ್ತಾರೆ. ಯಾಕೆಂದರೆ, ಪ್ರಥಮ ಕಾದಂಬರಿ ತುಂಗಭದ್ರ ಪ್ರಕಟಗೊಂಡಿದ್ದು 1963ರಲ್ಲಿ. ಆಗ ಅವರ ವಯಸ್ಸು ಕಡಿಮೆಯೇನಿಲ್ಲ. ಅಂದರೆ 45 ವರ್ಷವಾಗಿತ್ತು. ಸಮಾಜ ಗಮನಿಸುವ ಕೆಲಸ ಮಾಡಲು ವಯಸ್ಸು ಅಳತೆಗೋಲಾಗದು ಎಂಬುದನ್ನು ಇಲ್ಲಿ ಗಮನಿಸಬಹುದು. ಸದಾನಂದ 1965, ಗೆಜ್ಜೆಪೂಜೆ 1966ರಲ್ಲಿ ಪ್ರಕಟಗೊಂಡಿದ್ದು. ಗೆಜ್ಜೆಪೂಜೆ ಚಲನಚಿತ್ರವಾಗಿದ್ದು 1969. ಅಂದರೆ ಕಾದಂಬರಿ ಪ್ರಕಟವಾಗಿ ಮೂರು ವರ್ಷದ ನಂತರ. ಸ್ತ್ರೀವಾದಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆದ ವೇಳೆ ಫಣಿಯಮ್ಮ ಕುರಿತು ಪ್ರಸ್ತಾಪವಾಗುತ್ತಿತ್ತು. ನೈಜ ಘಟನೆಯನ್ನಾಧರಿಸಿ ಇಂದಿರಾ ಬರೆದ ಕಾದಂಬರಿ ಇದಾಗಿದೆ.
ಮಾಳೂರು ಕೃಷ್ಣರಾವ್ ಇಂದಿರಾ ಹುಟ್ಟಿದ್ದು 1917 ಜನವರಿ 5ರಂದು ತೀರ್ಥಹಳ್ಳಿಯಲ್ಲಿ. ತಂದೆ ಸೂರ್ಯನಾರಾಯಣರಾವ್, ಕೃಷಿಕರಾಗಿದ್ದರು. ತಾಯಿ ಬನಶಂಕರಮ್ಮ. ಶೈಕ್ಷಣಿಕ ಅರ್ಹತೆ ಮಾತ್ರ ಸಾಧನೆಗೆ ಮಾನದಂಡವಾಗಲಾರದು ಎಂಬುದು ಕನ್ನಡ ಚಿತ್ರರಂಗದಲ್ಲಿ ವರನಟ ಡಾ. ರಾಜ್‍ಕುಮಾರ್ ನಿರೂಪಿಸಿದಂತೆ ಸಾಹಿತ್ಯ ಕ್ಷೇತ್ರದಲ್ಲಿ ತೋರಿಸಿದವರು ಎಂ.ಕೆ. ಇಂದಿರಾ. ಪ್ರೌಢಶಾಲೆಯನ್ನೂ ಮುಗಿಸಲಿಲ್ಲ. ಅಧ್ಯಯನದ ದಾಹವಿದ್ದರೆ ಸಾಧನೆಯಗೆ ಮೆಟ್ಟಿಲು ಕಾಣುತ್ತದೆ ಎಂಬುದನ್ನು ನಿರೂಪಿಸಿದ್ದಾರೆ ಇವರು. ಹಿಂದಿ ಭಾಷೆ ಕಲಿತು ಅಲ್ಲಿನ ಸಾಹಿತ್ಯವನ್ನು ತಿಳಿದಿದ್ದರು. 12ನೇ ವರ್ಷಕ್ಕೆ ಮಾಳೂರು ಕೃಷ್ಣರಾವ್ ಅವರೊಂದಿಗೆ ವಿವಾಹಬಂಧನಕ್ಕೊಳಗಾದರೂ ಸಂಸಾರ ಸಾಗರದಲ್ಲಿ ತೇಲುತ್ತಾ ಜೀವನದ ಸಿಹಿ-ಕಹಿಗಳನ್ನು ಅಕ್ಷರಕ್ಕೆ ಇಳಿಸಲು ಮುಂದಾದರು.
ಜನಪ್ರಿಯ ಕಾದಂಬರಿಗಾರ್ತಿ ತ್ರಿವೇಣಿ ಅವರನ್ನು ಮಂಡ್ಯದಲ್ಲಿ ಭೇಟಿ ಮಾಡಿದ್ದ ವೇಳೆ ತಮ್ಮ ಶೈಲಿಯನ್ನು ಬಹುವಾಗಿ ಮೆಚ್ಚಿಕೊಂಡಿದ್ದು ಬರವಣಿಗೆ ಮುಂದುವರಿಯಲು ಸ್ಫೂರ್ತಿಯಾಯಿತು ಎಂದು ಇಂದಿರಾ ಅವರೇ ಒಂದು ಕಡೆ ಹೇಳಿಕೊಂಡಿದ್ದಾರೆ.
ಬರವಣಿಗೆಯಲ್ಲಿ ತೊಡಗಿಸಿಕೊಂಡವರ ಕುಟುಂಬದವರೇ ಆಗಿದ್ದವರು ಇಂದಿರಾ. ಪತ್ರಿಕಾ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದವರು ಟಿ.ಎಸ್. ರಾಮಚಂದ್ರರಾವ್. ಛೂಬಾಣ ಟಿಎಸ್‍ಆರ್ ಎಂದೇ ಖ್ಯಾತನಾಮರು. ಇವರು ಎಂ.ಕೆ. ಇಂದಿರಾ ಸಹೋದರ. ಪ್ರಜಾವಾಣಿ ಪತ್ರಿಕೆ ಸಂಪಾದಕರಾಗಿದ್ದ ಇವರ ಹೆಸರಲ್ಲಿ ರಾಜ್ಯ ಸರ್ಕಾರ ಟಿಎಸ್‍ಆರ್ ಪ್ರಶಸ್ತಿ ಸ್ಥಾಪಿಸಿ, ಪತ್ರಿಕಾಕ್ಷೇತ್ರದಲ್ಲಿ ದುಡಿದ ಮಹನೀಯರಿಗೆ ಪ್ರತಿವರ್ಷ ಈ ಪ್ರಶಸ್ತಿ ನೀಡುತ್ತಿದೆ. ಸಾಹಿತಿ ಡಾ. ಎಚ್.ಕೆ.ರಂಗನಾಥ್, ಇವರ ಚಿಕ್ಕಮ್ಮನ ಮಗನಾದರೆ, ಶಿಶುಸಾಹಿತಿ ಹೊಯಿಸಳ, ಇಂದಿರಾ ಸೋದರಮಾವ.
ಸುಮಾರು 40 ಕಾದಂಬರಿಗಳ ಜತೆಗೆ ಕಥೆ ಹಾಗೂ ಇತರ ಸಾಹಿತ್ಯ ಪ್ರಕಾರಗಳಲ್ಲೂ ಕೃಷಿಮಾಡಿದ್ದಾರೆ. ಸದಾನಂದ, ಫಣಿಯಮ್ಮ ಕಾದಂಬರಿಗೆ, ನವರತ್ನ ಕಥಾಸಂಕಲನಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ. ‘ಶ್ರೇಷ್ಠ ಲೇಖಕಿ’ ಪ್ರಶಸ್ತಿ, ಸಾವಿತ್ರಮ್ಮ ದೇಜಗೌ ಪ್ರಶಸ್ತಿಯೂ ಇವರಿಗೆ ಲಭಿಸಿದೆ. ಈ ಸಾಧಕಿಯ ಹೆಸರಲ್ಲಿ ಉತ್ತಮ ಮಹಿಳಾ ಲೇಖಕಿಯರಿಗೆ ಪ್ರಶಸ್ತಿ ನೀಡಲಾಗುತ್ತಿದೆ.
ಚಲನಚಿತ್ರವಾಗಿರುವ ಕಾದಂಬರಿಗಳು:
ಗೆಜ್ಜೆಪೂಜೆ
ಫಣಿಯಮ್ಮ
ಮುಸುಕು
ಪೂರ್ವಾಪರ
ಗಿರಿಬಾಲೆ
ಹೂಬಾಣ ( ಮುತ್ತು ಒಂದು ಮುತ್ತು- ಚಿತ್ರದ ಹೆಸರು)
ಜಾಲ
ಗೆಜ್ಜೆಪೂಜೆ ಕಾದಂಬರಿ ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ಚಲನಚಿತ್ರವಾಗಿದೆ.
ಕಥಾಸಂಕಲನಗಳು:
ಅಂಬರದ ಅಪ್ಸರೆ
ನವರತ್ನ
ಇವರ ಸಾಮಾಜಿಕ ಕಾದಂಬರಿಗಳಲ್ಲಿ ಪ್ರಮುಖವಾದವು ತಾಳಿದವರು, ವರ್ಣಲೀಲೆ, ಕತೆಗಾರ, ಕಲಾದರ್ಶಿ, ಕೂಚುಭಟ್ಟ, ಡಾಕ್ಟರ್, ನವಜೀವನ, ಹಸಿವು, ಜಾತಿಕೆಟ್ಟವಳು, ಚಿದ್ವಿಲಾಸ. ಇಂದಿರಾ ಅವರ ಅನೇಕ ಕಾದಂಬರಿಗಳು ತೆಲುಗು, ಮಲೆಯಾಳಿ, ಇಂಗ್ಲಿಷ್ ಭಾಷೆಗೆ ಅನುವಾದಗೊಂಡಿವೆ. ಸಾಕಷ್ಟು ಜನಪ್ರಿಯ ಕಾದಂಬರಿಗಳನ್ನು ಕನ್ನಡಕ್ಕೆ ನೀಡಿದ ಎಂ.ಕೆ. ಇಂದಿರಾ 1994 ಮಾರ್ಚ್ 15ರಂದು ತಮ್ಮ “ಜೀವನಯಾತ್ರೆ’ ಮುಗಿಸಿದರು.
More Stories
ನಂಬುಗೆಯೇ ಇಂಬು
ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಗೊ.ರು.ಚ ಆಯ್ಕೆ
ಜಲಗಾರ ಮತ್ತು ಕಾಲ ಜ್ಞಾನಿ ಕನಕ ನಾಟಕಗಳಲ್ಲಿ ದೈವ-ದೇಗುಲ ಸಂಕಥನ