November 24, 2024

Newsnap Kannada

The World at your finger tips!

WhatsApp Image 2022 02 18 at 10.14.11 PM

ಮಾವಿನ ಹಣ್ಣು – ಹಣ್ಣುಗಳ ರಾಜ (Mango)

Spread the love

ಹಣ್ಣುಗಳ ರಾಜ ಎಂದೊಡನೆ ನೆನಪಾಗೋದು ಮಾವಿನ ಹಣ್ಣು. ಅದರಲ್ಲೂ ಬೇಸಿಗೆ ಬಂತೆಂದರೆ ಊಟದೊಂದಿಗೆ ಮಾವಿನ ಹಣ್ಣು ಸಾಮಾನ್ಯವಾಗಿ ಇದ್ದೇ ಇರುತ್ತದೆ. ಮಾವಿನ ಹಣ್ಣನ್ನು ಅದರ ರುಚಿಗೆ ತಿಂದರೂ ಅದರಿಂದ ಸಿಗುವ ಪ್ರಯೋಜನಗಳು ಅಪಾರ. 

ಮಾವಿನ (Mango) ಹಣ್ಣುಗಳಲ್ಲಿ ವಿಟಮಿನ್ ಸಿ ಅಂಶ ಮತ್ತು ವಿಟಮಿನ್ ಎ ಅಂಶ ಹೆಚ್ಚಾಗಿ ಕಂಡುಬರುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಅತ್ಯುತ್ತಮವಾಗಿ ನಿರ್ವಹಣೆ ಮಾಡುವ ಗುಣವನ್ನು ಇದು ಪಡೆದಿದೆ. ಇದರ ಜೊತೆಗೆ ಮಧುಮೇಹವನ್ನು ನಿರ್ವಹಣೆ ಮಾಡಿ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಸಹ ಅಚ್ಚುಕಟ್ಟಾಗಿ ಕಾಯ್ದುಕೊಂಡು ನಮ್ಮ ಹೃದಯದ ಆರೋಗ್ಯವನ್ನು ಉತ್ತಮವಾಗಿ ನಿರ್ವಹಿಸುತ್ತದೆ.

ಮಾವಿನ ಹಣ್ಣು ಕಿರಿಯರಿಂದ  ಹಿಡಿದು ಹಿರಿಯರವರೆಗೂ ಅಚ್ಚುಮೆಚ್ಚು. ಸಂಸ್ಕೃತದಲ್ಲಿ ಇದನ್ನು ʼಆಮ್ರಫಲ್ʼ ಎಂದು ಕರೆಯುತ್ತಾರೆ. ಇದರ ಮೂಲಸ್ಥಾನ ಭಾರತ ಹಾಗೂ ಬರ್ಮಾ ಎಂದು ತಿಳಿದು ಬರುತ್ತದೆ. ಇದು ಅನಕಾರ್ಡಿಯೆಸಿ ಕುಟುಂಬಕ್ಕೆ ಸೇರಿದ್ದು ಇದರ ವೈಜ್ಞಾನಿಕ ಹೆಸರು ಮ್ಯಾಂಜಿಫೆರಾ ಇಂಡಿಕಾ.

ಮಾವಿನ (Mango) ಮೌಲ್ಯವರ್ಧನೆಗಳು

ಮಾವಿನ ಹಣ್ಣು (Mango) ಸಾಧಾರಣವಾಗಿ  ಎಪ್ರಿಲ್ ಹಾಗೂ ಮೇ ತಿಂಗಳಲ್ಲಿ ಹೇರಳವಾಗಿ ಉಪಲಬ್ಧವಿರುತ್ತವೆ. ಮಾವಿನ ಹಣ್ಣಿನಲ್ಲಿ ಹೆಚ್ಚಿನ ತೆವಾಂಶ ಹೊಂದಿರುವುದರಿಂದ ಅವು ಬೇಗನೆ ಕೆಟ್ಟು ಹೋಗುತ್ತವೆ. ಅದ್ದರಿಂದ ಇವುಗಳನ್ನು ಸಮರ್ಪಕವಾಗಿ ಶೇಖರಣೆ ಮಾಡುವುದು ಅತ್ಯವಶ್ಯಕವಾಗಿದೆ. ಇಂತಹ ಕಾಲದಲ್ಲಿ ಮಾವಿನ ಹಣ್ಣಿನ  ರಸವನ್ನು ಶೇಖರಿಸಿಟ್ಟುಕೊಂಡರೆ ಇದರ ಉಪಯೋಗ ಬರೀ ಸುಗ್ಗಿಯಲ್ಲಿಯೇ ಮಾತ್ರವಲ್ಲದೇ ವರ್ಷದ ಯಾವುದೇ ಕಾಲದಲ್ಲಿಯೂ   ಬಳಸಲು ಸಾಧ್ಯವಿದೆ.

ಶೇಖರಿಸಿಟ್ಟ ಹಣ್ಣಿನ ರಸದಿಂದ ಜಾಮ್, ಸ್ಕ್ವಾಷ್, ಸಿರಪ್, ಶರಬತ್,  ಆಮರಸ್, ಅಮ್ರಖಂಡ್, ಬರ್ಫಿ, ಟಾಫಿ ಹಾಗೂ ಹೋಳಿಗೆಗಳಂತಹ ವಿವಿಧ ಪದಾರ್ಥಗಳನ್ನು ತಯಾರಿಸಬಹುದು. ಹೀಗೆ ಮಾವಿನ ಹಣ್ಣಿನ ಸಂಸ್ಕರಣೆ ಮಾಡುವುದನ್ನೇ  ಲಘು ಉದ್ಯಮವನ್ನಾಗಿ ಕೈಗೊಳ್ಳಬಹುದು.

ಮಾವಿನ (Mango) ಹಣ್ಣಿನ ಸೇವನೆಯಿಂದಾಗುವ ಆರೋಗ್ಯದಾಯಕ ಲಾಭಗಳು

ಮಾವಿನ ಹಣ್ಣಿನಲ್ಲಿ ಎ ಜೀವಸತ್ವ ಹೇರಳವಾಗಿರುವುದರಿಂದ ಕಣ್ಣಿಗೆ ಸಂಬಧಿಸಿದ ತೊಂದರೆಗಳನ್ನುಕಡಿಮೆ ಮಾಡಬಹುದು

ರಕ್ತದಲ್ಲಿ ಹಿಮೊಗ್ಲೋಬಿನ್ ಅಂಶ ಹೆಚ್ಚುವುದಲ್ಲದೇ ಶರೀರದಲ್ಲಿ ರೋಗನಿರೋಧಕ ಶಕ್ತಿಯೂ ಬೆಳೆಯುತ್ತದೆ.

ಮಾವಿನ ಹಣ್ಣಿನ ಸೇವನೆಯಿಂದ ಮಲಬದ್ಧತೆ ಸಮಸ್ಯೆ ಕಡಿಮೆಯಾಗುವುದು.

ರಾತ್ರಿ ಮಾವಿನ ಹಣ್ಣು ಸೇವನೆ ಆರೋಗ್ಯ ದೃಷ್ಟಿಯಿಂದ ಒಳಿತಲ್ಲ, ಹಣ್ಣನ್ನು ಬೆಳಿಗ್ಗೆ ಅಥವಾ ಮಧ್ಯಾಹ್ನ ಹೊತ್ತಿನಲ್ಲಿ ತಿನ್ನಬೇಕು. ಮಲಗುವ ವೇಳೆಗೆ ಮಾವಿನ ಹಣ್ಣು ಸೇವನೆ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. 

ಮಾವಿನ (Mango) ತಿನಿಸುಗಳು :

ಮಾವಿನ (Mango) ಹಣ್ಣಿನ ರಸಾಯನ

ಬೇಕಾಗುವ ಪದಾರ್‍ತಗಳು: ಮಾವಿನ ಹಣ್ಣು 4, ಸಕ್ಕರೆ 2 ಕಪ್, ತೆಂಗಿನತುರಿ ಒಂದೂವರೆ ಕಪ್, ಏಲಕ್ಕಿ ಪುಡಿ, ಚಿಟಿಕೆ ಉಪ್ಪು ರುಚಿಗೆ .

ಮಾಡುವ ಬಗೆ: ಮಾವಿನಹಣ್ಣಿನ ಸಿಪ್ಪೆ ತೆಗೆದು ಸಣ್ಣ ಹೋಳುಗಳಾಗಿ ಹೆಚ್ಚಿಟ್ಟುಕೊಳ್ಳಿ. ನಂತರ ಸಕ್ಕರೆ, ಚಿಟಿಕೆ ಉಪ್ಪು, ಹಾಗೂ ಏಲಕ್ಕಿ ಪುಡಿ ಸೇರಿಸಿ, ಚೆನ್ನಾಗಿ ಕದಡಿದರೆ ರುಚಿಯಾದ ಮಾವಿನಹಣ್ಣಿನ ರಸಾಯನ. ಇದನ್ನು ದೋಸೆ,ಚಪಾತಿ ಅತವಾ ಪೂರಿಯೊಂದಿಗೆ ಸೇವಿಸಲು ಬಲು ಸೊಗಸಾಗಿರುತ್ತದೆ.

ಮಾವಿನಕಾಯಿ ಉಪ್ಪಿನಕಾಯಿ :

WhatsApp Image 2023 04 27 at 3.16.13 PM
  • ಬೇಕಾಗುವ ಸಾಮಗ್ರಿಗಳು
  • 1. ಹುಳಿ ಮಾವಿನಕಾಯಿ – 5 ರಿಂದ 6(ಮಧ್ಯಮ ಗಾತ್ರದ್ದು)
  • 2. ಉಪ್ಪು- 1/2 ಕಪ್
  • 3. ಬ್ಯಾಡಗಿ ಮೆಣಸಿನಕಾಯಿ – 25
  • 4. ಮೆಂತ್ಯೆ – 3 ಚಮಚ
  • 5. ಸಾಸುವೆ – 10 ಚಮಚ
  • 6. ಎಣ್ಣೆ- 1 ಕಪ್
  • 7. ಇಂಗು – 1/4 ಚಮಚ
  • 8. ಜೀರಿಗೆ- 1 ಚಮಚ
  • 9. ಅರಿಶಿನ- 1 ಚಮಚ
  • ಮಾವಿನಕಾಯಿಗಳನ್ನ ಚೌಕಾಕಾರದಲ್ಲಿ ನಿಮಗೆ ಬೇಕಾದ ಗಾತ್ರಕ್ಕೆ ಕಟ್ ಮಾಡಿಕೊಂಡು ಒಂದು ಪಾತ್ರೆಯಲ್ಲಿ ಹಾಕಿ.
  • ಮತ್ತೊಂದು ಪಾತ್ರೆಯಲ್ಲಿ 2 ಕಪ್ ನೀರು, ಅದಕ್ಕೆ ಕಾಲು ಕಪ್ ಉಪ್ಪು ಹಾಕಿ ಕುದಿಸಿಕೊಂಡು ಮಾವಿನಕಾಯಿಯ ಪಾತ್ರೆಗೆ ಹಾಕಿ.
  • ಒಂದು ಬಾಣಲೆಯಲ್ಲಿ ಮೆಂತ್ಯೆ, ಜೀರಿಗೆ, ಸಾಸುವೆಯನ್ನ ಒಂದರ ನಂತರ ಒಂದರಂತೆ ಹುರಿದುಕೊಂಡು, ಇದಕ್ಕೆ ಇಂಗು ಮತ್ತು ಅರಿಶಿಣ ಬೆರೆಸಿ ಪುಡಿ ಮಾಡಿಕೊಳ್ಳಿ
  • ಈ ಪುಡಿಯನ್ನ ಬಿಸಿನೀರಿನಲ್ಲಿ ನೆನೆಸಿಟ್ಟ ಮಾವಿನ ಕಾಯಿಗೆ ಹಾಕಿ ಮಿಕ್ಸ್ ಮಾಡಿ.
  • ಒಂದು ಚಿಕ್ಕ ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿ, ಅದಕ್ಕೆ ಸಾಸುವೆ, ಇಂಗು, ಹಾಕಿ ಒಗ್ಗರಣೆ ಮಾಡಿ ಮಾವಿನಕಾಯಿ ಮಿಶ್ರಣಕ್ಕೆ ಹಾಕಿ.

 ಮಾವಿನಕಾಯಿ (Mango) ಚಿತ್ರಾನ್ನ

ಬೇಕಾದ ಸಾಮಾಗ್ರಿಗಳು: ಅನ್ನ, ಹುರಿದ ಅಥವ ಹಸಿ ಶೇಂಗಾ ಬೀಜ, ಹಸಿ ಮೆಣಸಿನಕಾಯಿ, ಒಂದೆರಡು ಒಣ ಮೆಣಸು, ಕಡಲೆ ಬೇಳೆ, ಉದ್ದಿನ ಬೇಳೆ, ಅಡುಗೆ ಎಣ್ಣೆ (ಕೊಬ್ಬರಿ ಎಣ್ಣೆಉತ್ತಮ), ಇಂಗು, ಕರಿ ಬೇವು, ಕೊತ್ತಂಬರಿ ಸೊಪ್ಪು, ಉಪ್ಪು, ತುರಿದ ಮಾವಿನಕಾಯಿ, ತೆಂಗಿನ ತುರಿ.

ಒಲೆಯ ಮೇಲಿಟ್ಟ ಬಾಣಲೆ ಸರಿಯಾಗಿ ಕಾದ ನಂತರ ಎಣ್ಣೆಯನ್ನು ಹಾಕಿ. ಶೇಂಗಾ ಬೀಜ, ಕಡಲೆ ಬೇಳೆ, ಉದ್ದಿನ ಬೇಳೆ, ಒಣ ಮೆಣಸು, ಕರಿಬೇವು, ಇಂಗು ಸೇರಿಸಿ. ಅರಿಶಿಣ, ತುರಿದುಕೊಂಡ ಮಾವಿನಕಾಯಿ ಸೇರಿಸಿ ಚೆನ್ನಾಗಿ ಬೆರೆಸಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಮಾವಿನ ಕಾಯಿಯ ಘಮ ಹೋಗದಂತೆ ಚೆನ್ನಾಗಿ ಫ್ರೈ ಮಾಡಿ. ತೆಂಗಿನ ತುರಿಯನ್ನು ಸೇರಿಸಿ ಅಂತಿಮವಾಗಿ ಅನ್ನವನ್ನು ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ. ಮಾವಿನಕಾಯಿ ಚಿತ್ರಾನ್ನ ಸವಿಯಿರಿ.

ಭಾರತದ ಪ್ರಮುಖ ಮಾವಿನ ಹಣ್ಣಿನ ತಳಿಗಳು

ರಸಪುರಿ, ಅಲ್ಫಾನ್ಸೊ, ಮಲ್ಲಿಕಾ, ತೋತಾಪುರಿ, ಬೈಗನಪಲ್ಲಿ, ಪೈರಿ, ನೀಲಂ, ಮಲ್ಗೋವಾ.

ರಫ್ತಾಗುವ ಮಾವು: ಅಲ್ಫಾನ್ಸೊ, ಮಲ್ಲಿಕಾ, ತೋತಾಪುರಿ, ಬೈಗನಪಲ್ಲಿ, ಮಲ್ಗೋವಾ. 

ಒಂದೇ ಗ್ರಾಮದಲ್ಲಿ 100 ಕ್ಕೂ ಅಧಿಕ ಮಾವಿನ ಹಣ್ಣಿನ ತಳಿಗಳು 

ಮಾವಿನ ಹಣ್ಣುಗಳ ಅನೇಕ ವಿಧದ ತಳಿಗಳು ಸಿಗುವುದು ನಮ್ಮ ದೇಶದ ಕೇರಳ ರಾಜ್ಯದ ಕನ್ನಪುರಂ ನಲ್ಲಿ ಎನ್ನುವುದು ವಿಶೇಷ. ದೇವರ ನಾಡು ಎಂದು ಖ್ಯಾತಿ ಇರುವ ಕೇರಳದಲ್ಲಿ ಜನರು ಒಂದು ರೀತಿಯಲ್ಲಿ ಪ್ರಕೃತಿ ಆರಾಧಕರು ಎಂದೇ ಹೇಳಬಹುದು. ಈ ಮಾವಿನಹಣ್ಣುಗಳ ತಳಿಗಳ ಬಗ್ಗೆ ಹೇಳುವುದಾದರೆ, ಇಲ್ಲಿ ಮಾವಿನ ಹಣ್ಣಿನ ಋತುವಿನಲ್ಲಿ 207 ಕ್ಕೂ ಅಧಿಕ ದೇಶೀಯ ತಳಿಗಳ ಮಾವಿನಹಣ್ಣುಗಳ ಬೆಳೆಯಾಗುತ್ತದೆ ಎಂಬುದು ನಿಜ. ಈ ಕುರುವಕ್ಕಾವು ಎಂಬುದು ಕನ್ನಪುರಂದ ಸಣ್ಣ ಪ್ರದೇಶವಾಗಿದ್ದು, ಇಲ್ಲಿ ಒಟ್ಟು 382 ಮರಗಳಿದ್ದು ಅದರಲ್ಲಿ 102 ಮಾವಿನಹಣ್ಣುಗಳ ಪ್ರಭೇದಗಳನ್ನು ಹೊಂದಿದೆ. ಇದು ಕೇವಲ 300 ಚದರ ಮೀಟರ್ ಸ್ಥಳದಲ್ಲಿ ವ್ಯಾಪಿಸಿದೆ. ಇಷ್ಟೆ ಪ್ರದೇಶದಲ್ಲಿ ಇಷ್ಟೊಂದು ವಿಧದ ಮಾವಿನ ತಳಿಗಳು ಬೆಳೆಯುತ್ತವೆ.

ಇಲ್ಲಿನ ಮಾವಿನಹಣ್ಣುಗಳು ಕೆಲವು ತೆಂಗಿನಕಾಯಿಯಷ್ಟು ದೊಡ್ಡದಾಗಿದ್ದರೆ ಇನ್ನು ಕೆಲವು ನೆಲ್ಲಿಕಾಯಿಯಷ್ಟು ಚಿಕ್ಕದಾಗಿರುತ್ತವೆ. ಕೆಲವು ಕಬ್ಬಿನಂತೆ ಸಿಹಿಯಾಗಿದ್ದರೆ ಮತ್ತು ಕೆಲವು ಹುಣಸೆಹಣ್ಣಿನಂತೆ ಹುಳಿಯನ್ನು ಹೊಂದಿರುತ್ತವೆ. ಕೆಲವು ಕೆಂಪು ಬಣ್ಣದ ಹಣ್ಣುಗಳಾಗಿದ್ದರೆ, ಇನ್ನು ಕೆಲವು ಹಸಿರು ಬಣ್ಣದ ಹಣ್ಣುಗಳಾಗಿರುತ್ತವೆ. ಇದು ಭಾರತದ ದಕ್ಷಿಣ ರಾಜ್ಯ ಕೇರಳದ ಕಣ್ಣೂರು ಜಿಲ್ಲೆಯಲ್ಲಿರುವ ಕನ್ನಪುರಂ ಎಂಬ ಪುಟ್ಟ ಹಳ್ಳಿಯಲ್ಲಿ ಕಂಡುಬರುವ ಮಾವಿನ ಜಾತಿಗಳ ಜೀವವೈವಿಧ್ಯದ ಒಂದು ನೋಟವಾಗಿದೆ.

Copyright © All rights reserved Newsnap | Newsever by AF themes.
error: Content is protected !!