ಕೋಟಾ ಶಿವರಾಮ ಕಾರಂತ “ಕಡಲತೀರದ ಭಾರ್ಗವ” “ನಡೆದಾಡುವ ವಿಶ್ವಕೋಶ” ಎಂದೇ ಖ್ಯಾತರಾಗಿದ್ದ ಕನ್ನಡ ಸಾಹಿತ್ಯ-ಸಂಸ್ಕೃತಿಯ ವಕ್ತಾರ, ಕವಿ, ಕಾದಂಬರಿಕಾರ, ನಾಟಕಕಾರ, ಅನುವಾದಕ, ವೈಜ್ಞಾನಿಕ ಬರಹಗಾರ. ಆಡುಮುಟ್ಟದ ಸೊಪ್ಪಿಲ್ಲ. ಹಾಗೆಯೇ ಕಾರಂತರು ಬರೆಯದ ಸಾಹಿತ್ಯ ಪ್ರಕಾರವೇ ಇಲ್ಲವೆನ್ನಲಾಗಿದೆ.
ಕಾವ್ಯನಾಮ : ಶಿವರಾಮ ಕಾರಂತ.
ನಿಜನಾಮ – ಪೂರ್ಣನಾಮ : ಕೋಟ ಶಿವರಾಮ ಕಾರಂತ.
ಜನನ : 1902 ಅಕ್ಟೋಬರ್ 10.
ಮರಣ : 1997
ತಂದೆ : ಶೇಷ ಕಾರಂತ.
ತಾಯಿ: ಲಕ್ಷ್ಮಮ್ಮ
ಜನ್ಮ ಸ್ಥಳ : ದಕ್ಷಿಣ ಕನ್ನಡ ಜಿಲ್ಲೆಯ ಕೋಟ.
ಮನೆ, ಮನೆತನ : ವೈದಿಕ
ಪತ್ನಿ : ಲೀಲಾ
ಮಕ್ಕಳು : ಉಲ್ಲಾಸ, ಹರ್ಷ. ಕ್ಷಮಾರಾವ್.
ವಿದ್ಯಾಭ್ಯಾಸ :
ಪ್ರಾಥಮಿಕ : ಕೋಟ.
ಪ್ರೌಢಶಾಲೆ : ಕುಂದಾಪುರ.
ಕಾಲೇಜು : ಮಂಗಳೂರು.
ಪದವಿ: 1935 ರಲ್ಲಿ ಎಂ. ಎ. ಪದವಿ.
ವೃತ್ತಿ:
ವಸಂತ ಮತ್ತು ವಿಚಾರವಾಣಿ ಎಂಬ ಪತ್ರಿಕೆಗಳನ್ನು ನಡೆಸಿದರು.
ಮಕ್ಕಳಿಗಾಗಿ ಬಾಲವನವನ್ನು ಸ್ಥಾಪಿಸಿದರು.
ಶಿವರಾಮ ಕಾರಂತರು ಸಮಾಜ ಸುಧಾರಣೆಗೂ ಕೈ ಹಾಕಿ,ಯಕ್ಷಗಾನ ತಂಡಗಳನ್ನು ಕಟ್ಟಿಕೊಂಡು ದೇಶ ವಿದೇಶಗಳಲ್ಲಿ ಈ ಕಲೆಯನ್ನು ಪ್ರಚುರಪಡಿಸಲು ಯತ್ನಿಸಿದರು. ಮಕ್ಕಳಲ್ಲಿದ್ದ ಪ್ರತಿಭೆ ಅರಳಿಸಲು ಪುತ್ತೂರಿನಲ್ಲಿ ಬಾಲವನ ಎಂಬ ಶೈಕ್ಷಣಿಕ ಕೇಂದ್ರವನ್ನು ತೆರೆದಿದ್ದರು. ಪುತ್ತೂರಿನಲ್ಲಿ ಒಂದು ಮುದ್ರಣಾಲಯ ತೆರೆದು, ತಮ್ಮ ಪುಸ್ತಕಗಳನ್ನು ಮುದ್ರಿಸುತ್ತಿದ್ದರಲ್ಲದೆ, ತಮ್ಮ ಹಲವು ಕಾದಂಬರಿಗಳಿಗೆ ತಾವೇ ಮುಖಪುಟದ ಚಿತ್ರಗಳನ್ನೂ ಬರೆದು ಮುದ್ರಿಸಿದ ಬಹುಮುಖ ಪ್ರತಿಭೆ ಇವರದ್ದು, ಬಹುಶಃ ಮುಖಪುಟ ಚಿತ್ರ ಬರೆದು ಪ್ರಕಟಿಸಿದ ಕನ್ನಡದ ಪ್ರಥಮ ಪ್ರಮುಖ ಸಾಹಿತಿ ಇವರೊಬ್ಬರೇ.
ನಿರಂತರ ಪ್ರಯೋಗಶೀಲರಾಗಿದ್ದ ಕೋಟ ಶಿವರಾಮ ಕಾರಂತ ಅವರು ಕನ್ನಡ ಚಿತ್ರರಂಗದಲ್ಲಿ ಕೂಡ ತಮ್ಮ ಪ್ರಯೋಗವನ್ನು ಆರಂಭ ಮಾಡಿದ್ದು. ಮೂಕಿ ಚಿತ್ರ ನಿರ್ಮಾಣಕ್ಕೆ ಕೈಹಾಕುವ ಮೂಲಕ. ಹರಿಜನರ ಬದುಕನ್ನು ಆಧರಿಸಿದ್ದ ಡೊಮಿಂಗೋ (1930) ಚಿತ್ರವನ್ನು ತಾವೇ ಚಿತ್ರೀಕರಿಸಿ, ಅಭಿನಯಿಸಿ ನಿರ್ದೇಶಿಸಿದ್ದರು. ಅನಂತರ ಭೂತರಾಜ್ಯ (1931) ಎಂಬ ಮೂಕಿ ಚಿತ್ರಗಳನ್ನು ಸಹ ನಿರ್ಮಿಸಿದರು.
ಕರ್ನಾಟಕದ ಮೂಲೆ ಮೂಲೆ, ಭಾರತದ ಬಹುತೇಕ ಸ್ಥಳಗಳು, ವಿದೇಶಗಳ ಸಾಂಸ್ಕೃತಿಕ ಕೇಂದ್ರಗಳಿಗೆ ಸುತ್ತುತ್ತ, ತಮ್ಮ ಕೊನೆಗಾಲದವರೆಗೂ ಪ್ರವಾಸ ಮಾಡಿದ್ದರು. ವಯಸ್ಸಿನ ದಣಿವು ಮರೆತು, ಜ್ಞಾನದಾರಿಯಲ್ಲಿ ಜನರನ್ನು ಕೊಂಡೊಯ್ದ ಪ್ರೀತಿಯ “ಕಾರಂತಜ್ಜ” ಆಗಿದ್ದರು. ವಿಶ್ವ ಪ್ರೇಮಿ ಹಾಗೂ ಮಹಾ ಮಾನವತಾವಾದಿ ಆಗಿದ್ದ ಕಾರಂತರು ಜ್ಞಾನ ಕ್ಷಿತಿಜವನ್ನು ಎಂಟು ದಿಕ್ಕಿಗೆ ಚಾಚಿದ ಅಕ್ಷರ ಪ್ರೇಮಿಯಾಗಿದ್ದರು.
ಶಿವರಾಮ ಕಾರಂತರಿಗೆ ಪರಿಸರವೆಂದರೆ ಬಹಳ ಪ್ರೀತಿ. ಅವರು ಬಾಲ್ಯದಲ್ಲಿ ಕೆರೆಗಳನ್ನು ಏರಿ,ಸಮುದ್ರತೀರ,ಮರದ ನೆರಳಿನ ಪ್ರದೇಶಗಳಲ್ಲಿ ಸಮಯವನ್ನು ಕಳೆಯುತ್ತಿದ್ದರು. ಆಧುನಿಕ ವಿದ್ಯಾಭ್ಯಾಸ ಕೇವಲ ಹೊಟ್ಟೆಪಾಡಿಗಾಗಿ ಎನ್ನುವುದು ಅವರ ಅಭಿಪ್ರಾಯ. ನಿಜವಾದ ವ್ಯಕ್ತಿತ್ವದ ವಿಕಸನವಾದರೆ ಅದೇ ನಿಜವಾದ ಶಿಕ್ಷಣವೆನ್ನುವುದು ಅವರ ಅಭಿಪ್ರಾಯವಾಗಿತ್ತು.
1920 ರಲ್ಲಿ ಗಾಂಧೀಜಿಯವರು ಸ್ವತಂತ್ರ ಹೋರಾಟದಲ್ಲಿ ಶಾಲಾ ಮಕ್ಕಳು ಬಾಗವಹಿಸಬೇಕೆಂದು ಕರೆಕೊಟ್ಟಾಗ ಕಾರಂತರೂ ಚಳವಳಿಯಲ್ಲಿ ಭಾಗವಹಿಸಿದ್ದರು.ಕಾರಂತರು ಅಪ್ಪ ಹಾಕಿದ ಆಲದ ಮರಕ್ಕೆ ಎಂದೂ ಜೋತು ಬಿದ್ದವರಲ್ಲ. ಅವರ ಇಡೀ ಬದುಕು ಹಲವಾರು ಪ್ರಯೋಗಗಳಿಂದ ಕೂಡಿದೆ. ಅನುಭವ ಬೆಳೆದಂತೆಲ್ಲ ಅವರು ಹಲವು ಬಾರಿ ತಮ್ಮ ಹಿಂದಿನ ನಿಲುವುಗಳನ್ನು ಬದಲಾಯಿಸಿಕೊಂಡಿದ್ದಾರೆ.
ಚಲನಚಿತ್ರವಾಗಿರುವ ಕಾದಂಬರಿಗಳು
ಕುಡಿಯರ ಕೂಸು (ಚಲನಚಿತ್ರ)
ಚಿಗುರಿದ ಕನಸು (ಚಲನಚಿತ್ರ)
ಚೋಮನ ದುಡಿ (ಚಲನಚಿತ್ರ)
ಬೆಟ್ಟದ ಜೀವ (ಚಲನಚಿತ್ರ)
ಮೂಕಜ್ಜಿಯ ಕನಸುಗಳು ಕಾದಂಬರಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ.
ಕಾರಂತರ ಚಿಂತನೆಗಳು
ನಾನು ದೇವರನ್ನು ನಂಬುವುದಿಲ್ಲ. ಏಕೆಂದರೆ ನಾನು ನೋಡಿಲ್ಲ. ನನಗೆ ಯಾವುದು ಗೊತ್ತಿಲ್ಲವೋ ಅದನ್ನು ನಂಬುವುದಿಲ್ಲ. ರಾಮಕೃಷ್ಣ ಪರಮಹಂಸರು ನಂಬಿದ್ದರು. ಅದನ್ನು ತಪಸ್ಸಿನಿಂದ ಕಂಡುಕೊಂಡರು. ನನಗೆ ರಾಮ ಎಂದರೆ ರಾಜಾ ರವಿವರ್ಮ ಅವರ ಚಿತ್ರ. ಕೃಷ್ಣ ಎಂದರೆ ಗುಬ್ಬಿ ವೀರಣ್ಣನವರ ಕೃಷ್ಣಲೀಲಾ ನೆನಪಿಗೆ ಬರುತ್ತದೆ. ಒಳ್ಳೆಯ ಕೆಲಸ ಮಾಡಿದರೆ ಒಳ್ಳೆಯದಾಗುತ್ತದೆ ಎಂದು ನಾವು ನಂಬಿ ಬಂದಿದ್ದೇವೆ. ಆದರೆ ಆ ರೀತಿ ಆಗಿಲ್ಲ. ನನಗೆ ಅನುಕೂಲವಾದಾಗ ಮಾತ್ರ ದೇವರನ್ನು ನಂಬುತ್ತೇನೆ ಎಂಬುದು ಸರಿಯಲ್ಲ.
ಸಾಹಿತಿಗಳಿಗೆ ಸಮಾಜದಲ್ಲಿ ಬೇರೆ ಪಾತ್ರವೇನೂ ಇಲ್ಲ. ಸಾಹಿತಿ ಲೋಕೋದ್ಧಾರಕ ಎಂಬ ಭಾವನೆ ಏನೂ ಬೇಡ. ಆತನೂ ನಿಮ್ಮ ಹಾಗೆ ಮನುಷ್ಯ. ಬದುಕಿನ ಬಗ್ಗೆ ತನ್ನ ಅನುಭವವನ್ನು ಮಾತ್ರ ಹೇಳುತ್ತಾನೆ. ಪರಿಹಾರ ಸೂಚಿಸುವುದಲ್ಲ. ಆತ ಬರೆದ ಮಾತ್ರಕ್ಕೆ ಮಹಾನುಭಾವ ಆಗೋಲ್ಲ. ಬರೆಯದವರೂ ದೊಡ್ಡ ಕೆಲಸಗಳನ್ನು ಮಾಡಿದ್ದಾರೆ. ಮರ ತಾನಾಗಿ ಬೆಳೆಯುತ್ತದೆ. ಆ ರೀತಿ ಮನುಷ್ಯ ಬೆಳೆಯಲಾರ. ನಮ್ಮ ಬದುಕು ಆರಂಭವಾಗುವುದಕ್ಕೆ ಸಾವಿರಾರು ವರ್ಷಗಳ ಮೊದಲೇ ಜೀವರಾಶಿ ಇಲ್ಲಿತ್ತು ಎಂಬುದನ್ನು ತಿಳಿದರೆ ಸಾಕು.
ಕಾರಂತರ ಹಾಗೆ ವೈವಿಧ್ಯಮಯ ಕೃತಿಗಳನ್ನು ರಚಿಸಿದವರು ಕನ್ನಡದಲ್ಲಿ ವಿರಳ. 44 ಕಾದಂಬರಿ, 14 ನಾಟಕ, 3 ಕಥಾಸಂಕಲನ, 6 ಪ್ರಬಂಧಗಳು, 9 ಕಲಾ ಗ್ರಂಥಗಳು, 5 ಆತ್ಮಕಥೆ-ಜೀವನ ಚರಿತ್ರೆಗಳು, ಮಕ್ಕಳ ಸಾಹಿತ್ಯ-25, ಇತ್ಯಾದಿ 150 ಕ್ಕೂ ಮಿಗಿಲಾದ ಕೃತಿಗಳನ್ನು ರಚಿಸಿರುವ ಕಾರಂತರು ಕನ್ನಡದ ಹಿರಿಮೆ ಸಾರುವ ಹತ್ತಾರು ಗ್ರಂಥಗಳನ್ನು ರಚಿಸಿದ್ದಾರೆ. ವಿಜ್ಞಾನ ಪ್ರಪಂಚ, ಬಾಲ ಪ್ರಪಂಚ, ಚಿತ್ರಮಯಿ ದಕ್ಷಿಣ ಕನ್ನಡ, ಯಕ್ಷಗಾನ ಬಯಲಾಟ, ಸಿರಿಗನ್ನಡ ಅರ್ಥಕೋಶ, ಕಿಸಾಗೌತಮಿ, ಹುಚ್ಚುಮನಸ್ಸಿನ ಹತ್ತು ಮುಖಗಳು, ಮೂಕಜ್ಜಿ ಕನಸುಗಳು ಮೊದಲಾದ ಕೃತಿಗಳು ಕನ್ನಡ ಸಾಹಿತ್ಯದ ಪ್ರಪಂಚದಲ್ಲೇ ಮೈಲಿಗಲ್ಲಿನ ಕೃತಿಗಳಾಗಿವೆ.
- ರಾಜ್ಯದಲ್ಲಿ ಮುಂದಿನ 5 ದಿನ ಮಳೆಯ ಮುನ್ಸೂಚನೆ
- 10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
- ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )
- ಹೊರರಾಜ್ಯದ ಯುವತಿಯರನ್ನ ಕರೆಸಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: ಆರೋಪಿ ಬಂಧನ
- ಬೆಂಗಳೂರಿನಲ್ಲಿ ಮಹಿಳೆಗೆ 30 ಲಕ್ಷ ರೂ. ವಂಚನೆ!
More Stories
ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ