ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ ಮಾತಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ ಎನ್ನಿಸಿದರೂ, ಕನ್ನಡ ಕಲಿಯಲು ಬಯಸುವ ಕನ್ನಡೇತರರಿಗೇನೂ ಕೊರತೆಯಿಲ್ಲ. ರಾಜ್ಯದ ರಾಜ್ಯಪಾಲರಾದಿಯಾಗಿ ಅನೇಕರು ಕನ್ನಡ ಭಾಷೆಯ ಸೊಗಡಿಗೆ ಮಾರು ಹೋಗಿ, ಅದರ ಸವಿಯನ್ನು ಸವಿಯುವ ಸಲುವಾಗಿ, ಕನ್ನಡವನ್ನು ಕಲಿಯ ತೊಡಗುತ್ತಾರೆ. ಶಿಕ್ಷಕರ ಮುಖಾಂತರವೋ, ಆನ್ ಲೈನ್‌ನ ಸಹಾಯದಿಂದಲೋ, ಆಪ್‌ಗಳ ಬಳಕೆಯಿಂದಲೋ ಕನ್ನಡದ ಪರಿಚಯ ಮಾಡಿಕೊಳ್ಳುತ್ತಾರೆ. ಕನ್ನಡ ಪತ್ರಿಕೆಗಳು ಮತ್ತು ಪುಸ್ತಕಗಳನ್ನು ಓದಲು ಆರಂಭಿಸಿ, ಸ್ವಂತ ಬರವಣಿಗೆಯವರೆಗೂ ಪ್ರಾವೀಣ್ಯತೆ ಗಳಿಸುವ ಕನ್ನಡೇತರರಿದ್ದಾರೆ. ಈ ನಿಟ್ಟಿನಲ್ಲಿ ಆನ್‌ಲೈನ್ ನ ಮೂಲಕ ಕನ್ನಡ ಕಲಿಸುವ ಶಿಕ್ಷಕರ ಪಾತ್ರ ತುಂಬಾ ಹಿರಿದು. ಇವರ ನಡುವೆ, ಹಿರಿಯ ಸ್ಥಾನದಲ್ಲಿ ನಿಲ್ಲುತ್ತಾರೆ ಎಸ್ತರ್ ಶಾಮಸುಂದರ್.
ಹವ್ಯಾಸ-ವೃತ್ತಿ
ಇಪ್ಪತ್ತು ವರ್ಷಗಳ ಹಿಂದೆ, ಮಲೆಯಾಳಿ ಸ್ನೇಹಿತೆಯೊಬ್ಬರಿಗೆ ಕನ್ನಡ ಕಲಿಸುವಲ್ಲಿ ಎಸ್ತರ್ ಅವರು ಯಶಸ್ವಿಯಾಗುತ್ತಾರೆ. ಹೀಗೆ ಬೆಂಗಳೂರಿನಿಂದ ಆರಂಭವಾದ ಇವರ ಕನ್ನಡ ಕಲಿಕಾ ಶಿಕ್ಷಣವಿಂದು ಐದು ಸಾವಿರವನ್ನೂ ದಾಟಿ, ದೇಶ-ವಿದೇಶಗಳಲ್ಲೂ ಪಸರಿಸಿರುವುದು ಅತ್ಯಂತ ಸಂತಸ ಮತ್ತು ಹೆಮ್ಮೆಯ ವಿಷಯ. ಅವರ ʻಕನ್ನಡ ಫ್ಲೂಯೆನ್ಸಿʼ ವೆಬ್‌ಸೈಟ್, ಕನ್ನಡ ಕಲಿಯ ಬಯಸುವವರಿಗೆ ದಾರಿದೀಪವಾಗಿದೆ.
ವ್ಯಕ್ತಿಗತ ಕೋರ್ಸುಗಳು
ಎಸ್ತರ್ ಶಾಮಸುಂದರ್ ಅವರ ಕನ್ನಡ ಶಿಕ್ಷಣದ ವಿಧಾನ ಬಹಳ ಭಿನ್ನ. ಇಲ್ಲಿ ಕನ್ನಡ ಕಲಿಯಲು ವ್ಯಕ್ತಿಗಳ ಬಿಡುವಿನ ವೇಳೆ, ಅವಧಿ, ಶುಲ್ಕ ಮತ್ತು ಕನ್ನಡದ ಬಗ್ಗೆ ಅವರಿಗಿರುವ ಆಸಕ್ತಿಯ ಮಟ್ಟಕ್ಕೆ ಅನುಸಾರವಾಗಿ ಕಡಿಮೆ ಮತ್ತು ದೀರ್ಘಾವಧಿಯ ಕೋರ್ಸುಗಳನ್ನು ಯೋಜಿಸಲಾಗಿದೆ. ಮಕ್ಕಳಿಗೆ, ವೈದ್ಯರಿಗೆ, ಇಂಜಿಯರ್‌ಗಳಿಗೆ, ಅನಿವಾಸಿ ಭಾರತೀಯರಿಗೆ, ವಿದೇಶೀ ಪ್ರಜೆಗಳಿಗೆ-ಹೀಗೆ ಪ್ರತ್ಯೇಕವಾದ ಮತ್ತು ವೈಯಕ್ತಿಕವಾದ ವಿಶೇಷ ಆನ್‌ಲೈನ್ ತರಗತಿಗಳು ಲಭ್ಯವಿವೆ. ಹೀಗೆ, ಹಗಲಿರುಳೂ ಕನ್ನಡವನ್ನು ಜನಪ್ರಿಯಗೊಳಿಸುವ ಕೆಲಸದಲ್ಲಿ ತೊಡಗಿರುವ ಇವರು ಮೂಲತಃ ಆಹಾರ ತಜ್ಞೆ. ಕನ್ನಡ ಕಲಿಸಲು ಬೇಡಿಕೆ ಬಂದ ಕಾರಣಕ್ಕಾಗಿ ತಮ್ಮ ಕೆಲಸವನ್ನು ಬಿಟ್ಟು ಪೂರ್ಣಾವಧಿಯ ಕನ್ನಡ ಶಿಕ್ಷಕಿಯಾಗಿದ್ದಾರೆ. ತಮ್ಮ ಮಾತೃಭಾಷೆ ಕನ್ನಡದ ಜೊತೆ ತೆಲುಗು, ತಮಿಳು, ಹಿಂದಿ ಮತ್ತು ಇಂಗ್ಲೀಷ್‌ನಲ್ಲೂ ಪರಿಣಿತಿ ಹೊಂದಿರುವುದರಿಂದ ಆ ಭಾಷೆಗಳ ಮುಖಾಂತರ ಕನ್ನಡವನ್ನು ಕಲಿಸುತ್ತಿದ್ದಾರೆ ಎಸ್ತರ್.
ಕನ್ನಡ ತಂತ್ರಗಾರಿಕೆ!
ಕನ್ನಡವನ್ನು ಹೊಸ ಹೊಸ ತಂತ್ರಜ್ಞಾನದ ಜೊತೆಗೆ ಮಿಳಿತಗೊಳಿಸಿಕೊಂಡು, ಕನ್ನಡ ಕಲಿಸುವಿಕೆಗೆ ಆಧುನಿಕ ಸ್ಫರ್ಶ ಕೊಡುತ್ತ ಬಂದಿರುವ ೫೮ ವಯಸ್ಸಿನ ಎಸ್ತರ್ ಅವರನ್ನು ʻ೫0 ಸ್ಪೂರ್ತಿದಾಯಕ ಮಹಿಳೆಯರʼ ಪಟ್ಟಿಯಲ್ಲಿ ಸೇರಿಸಲಾಗಿದ್ದು, ʻಅತ್ಯಂತ ಸ್ಫೂರ್ತಿದಾಯಕ ಶೈಕ್ಷಣಿಕ ಬ್ಲಾಗರ್ʼ ಎಂಬ ಕೀರ್ತಿಗೂ ಭಾಜನರಾಗಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ʻಕನ್ನಡದ ಮೊದಲ ಆನ್ ಲೈನ್ ಶಿಕ್ಷಕಿʼ ಮಾನ್ಯತೆ ಇವರಿಗೆ ಸಂದಿದೆ.
“ಕನ್ನಡ ಮಧುರವಾದ ಭಾಷೆ. ಇದನ್ನು ಕಲಿಯಲು ವಿಶ್ವದ ಅನೇಕರು ಆಸಕ್ತಿ ತೋರುತ್ತಿದ್ದಾರೆ. ಇದು ಹೆಮ್ಮೆಯ ವಿಷಯ. ಸಾವಿರಾರು ಜನರಿಗೆ ಕನ್ನಡ ಕಲಿಸುತ್ತಿರುವುದು ನನಗೆ ಸಂತೋಷ ತಂದಿದೆ. ಆದರೆ, ನಮ್ಮ ಜನರೇ ನಮ್ಮ ಭಾಷೆಯನ್ನು ಮಾತಾಡಲು ಹಿಂದೆಗೆಯುತ್ತಿರುವುದು ಬೇಸರದ ಸಂಗತಿʼʼ ಎನ್ನುತ್ತಾರೆ ಎಸ್ತರ್ ಶಾಮಸುಂದರ್. ಇವರ ವಾಟ್ಸಾಪ್ ಸಂಖ್ಯೆ: ೯೯೭೨೨೬೮೨೯೦
ಭಾಗ್ಯಲಕ್ಷ್ಮಿ ಪದಕಿ,
ಪತ್ರಿಕೋದ್ಯಮ ಶಿಕ್ಷಕಿ, ಹವ್ಯಾಸಿ ಪತ್ರಕರ್ತೆ.
೬೫, ಮೊದಲನೇ ʼಸಿʼ ಮುಖ್ಯರಸ್ತೆ, ಬಿನ್ನಿ ಲೇಔಟ್, ವಿಜಯನಗರ ಎರಡನೇ ಹಂತ,
ಬೆಂಗಳೂರು-೫೬೦೦೪೦. ಮೊಬೈಲ್: ೯೫೩೫೦೭೭೫೧೨
- ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
- IDBI ಬ್ಯಾಂಕಿನಲ್ಲಿ 600 ಹುದ್ದೆಗಳ ನೇಮಕಾತಿ – 2024
- ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ
- ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ: 25 ಕಡೆಗಳಲ್ಲಿ ಪರಿಶೀಲನೆ
- ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಗೊ.ರು.ಚ ಆಯ್ಕೆ
More Stories
ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
IDBI ಬ್ಯಾಂಕಿನಲ್ಲಿ 600 ಹುದ್ದೆಗಳ ನೇಮಕಾತಿ – 2024
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ