ಮಾರ್ಗಶಿರ ಮಾಸದ ಶುದ್ಧ ಷಷ್ಠಿ ದಿನವನ್ನು ಚಂಪಾಷಷ್ಠಿ ಅಥವಾ ಕುಕ್ಕೆ ಷಷ್ಠಿಯೆಂದೇ ಕರೆಯುತ್ತಾರೆ. ಇದೊಂದು ವಿಶೇಷ ಹಬ್ಬವೂ ಹೌದು.
ಚಂಪಾಷಷ್ಠಿ ಸುಬ್ರಹ್ಮಣ್ಯನಿಗೆ ಪ್ರಿಯವಾದ ದಿನ. ಈ ದಿನ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಶ್ರೀ ಸ್ವಾಮಿಯನ್ನು ಶುಭ ಮುಹೂರ್ತದಲ್ಲಿ ಬ್ರಹ್ಮರಥಾರೋಹಣ ಮಾಡಿಸುತ್ತಾರೆ. ಇದಕ್ಕಿಂತ ಮೊದಲು ಉಮಾಮಹೇಶ್ವರ ದೇವರು ಪಂಚಮಿ ರಥದಲ್ಲಿ, ಸುಬ್ರಹ್ಮಣ್ಯ ದೇವರು ಬ್ರಹ್ಮರಥದಲ್ಲಿ ವಿರಾಜಮಾನರಾಗುತ್ತಾರೆ. ಶ್ರೀ ದೇವರ ಬ್ರಹ್ಮರಥಾರೋಹಣವಾದ ನಂತರ ಸುವರ್ಣವೃಷ್ಟಿಯಾಗುತ್ತದೆ. ಈ ಸಂದರ್ಭದಲ್ಲಿ ಗರುಡನು ಬಂದು ಮೂರು ಪ್ರದಕ್ಷಿಣೆ ಹಾಕುತ್ತಾನೆ ಎಂಬ ನಂಬಿಕೆ ಇದೆ.
ಕಾರ್ತಿಕೇಯ, ಮುರುಗನ್, ಸ್ಕಂದ, ವೇಲನ್ ಕುಮಾರನ್, ಷಣ್ಮುಖ, ಕುಮಾರಸ್ವಾಮಿ ಹೀಗೆ ನಾನಾ ಹೆಸರುಗಳಿಂದ ಕರೆಯಲ್ಪಡುವ ಸುಬ್ರಹ್ಮಣ್ಯ ಶಿವ ಹಾಗೂ ಪಾರ್ವತಿಯರ ಪುತ್ರ. ಶಿವ ಹಾಗೂ ಪಾರ್ವತಿಯರ ಮಗನಾದ ಕಾರ್ತಿಕೇಯನು ಕುಮಾರಧಾರ ತಟದಲ್ಲಿ ನೆಲೆಯಾದ ಸ್ಥಳ ಕುಕ್ಕೆ ಸುಬ್ರಹ್ಮಣ್ಯ.
ಮೊದಲು ಪಂಚಮಿರಥವನ್ನು ಎಳೆದರೆ ನಂತರ ಚಂಪಾಷಷ್ಠಿ ಬ್ರಹ್ಮರಥೋತ್ಸವವು ಜರಗುತ್ತದೆ. ಭಕ್ತರು ತಮ್ಮ ಹರಕೆಯಂತೆ ರಥವನ್ನು ಎಳೆಯುವುದರ ಮೂಲಕ ಹಾಗೂ ಕಾಳುಮೆಣಸು, ನಾಣ್ಯ, ದವಸ ಧಾನ್ಯಗಳನ್ನು ರಥಕ್ಕೆ ಎಸೆದು ಕೃತಾರ್ಥರಾಗುತ್ತಾರೆ.
ಸಾಮಾನ್ಯವಾಗಿ ಚಂಪಾಷಷ್ಠಿಯಂದು ಎಲ್ಲಿ ಸುಬ್ರಹ್ಮಣ್ಯ ದೇಗುಲವಿದೆಯೋ ಅಲ್ಲೆಲ್ಲಾ ವಿಶೇಷ ಪೂಜೆಗಳು ನಡೆಯುತ್ತವೆ. ಅಶ್ವತ್ಥ ಕಟ್ಟೆಯಲ್ಲಿ ಸರ್ಪಾಕಾರದ ವಿಗ್ರಹವನ್ನಿಟ್ಟು ಸುಬ್ರಹ್ಮಣ್ಯ ಸ್ವಾಮಿಯನ್ನು ಆವಾಹನೆ ಮಾಡಿ ಹಾಲೆರೆದು ಅಭಿಷೇಕ ಮಾಡಿ ಪಾಯಸದ ನೈವೇದ್ಯ ಅರ್ಪಿಸಿ ಅಂದು ಉಪವಾಸ ವೃತವನ್ನು ಆಚರಿಸಲಾಗುತ್ತದೆ. ಕುಕ್ಕೆಸುಬ್ರಹ್ಮಣ್ಯ ಕ್ಷೇತ್ರವು ನಾಗಪೂಜೆಗೆ ಹೆಸರುವಾಸಿಯಾಗಿದೆ. ವಲ್ಮೀಖ ಅರ್ಥಾತ್ ಹುತ್ತ ಇಲ್ಲಿನ ಆರಾಧ್ಯ ದೈವ. ಅಲ್ಲಿಂದ ತೆಗೆದ ಮಣ್ಣು ಪ್ರಸಾದವಾಗಿದೆ. ಸರ್ಪದೋಷಕ್ಕೊಳಗಾದವರು ಇಲ್ಲಿ ಸರ್ಪ ಸಂಸ್ಕಾರ ಮಾಡಿ ತಮ್ಮ ಪಾಪ ಕಳೆದುಕೊಳ್ಳುತ್ತಾರೆ.
ಚಂಪಾಷಷ್ಠಿಯ ಹಿಂದೆ ಪುರಾಣ ಕಥೆ
ಸುಬ್ರಹ್ಮಣ್ಯ ದೇವಾಲಯವು ಸುಮಾರು ಎಂಟನೆಯ ಶತಮಾನದ್ದು ಎನ್ನಲಾಗಿದೆ. ಇಲ್ಲಿ ನರಸಿಂಹ, ಉಮಾಮಹೇಶ್ವರ ಮೂರ್ತಿಗಳಿಗೆ ಪೂಜೆ ಸಲ್ಲಿಸಲಾಗುತ್ತದೆಯಾದರೂ ಸುಬ್ರಹ್ಮಣ್ಯನೇ ಆದಿದೈವನಾಗಿದ್ದಾನೆ. ಹಿಂದೆ ಸುಬ್ರಹ್ಮಣ್ಯವು ಬಲ್ಲಾಳರಾಜನ ರಾಜಧಾನಿಯಾಗಿತ್ತು ಎನ್ನಲಾಗಿದೆ. ಇಲ್ಲಿನ ದೇವಾಲಯದಲ್ಲಿರುವ ಮೂರ್ತಿ ಬಲ್ಲಾಳ ಅರಸರದ್ದಾಗಿದೆ. ಇತಿಹಾಸದ ಪ್ರಕಾರ ದಕ್ಷಿಣಕನ್ನಡ ಜಿಲ್ಲೆಯನ್ನು ಹನ್ನೊಂದನೇ ಶತಮಾನದಲ್ಲಿ ಹೊಯ್ಸಳ ಬಲ್ಲಾಳ ಅರಸರು ಆಳುತ್ತಿದ್ದರೆನ್ನಲಾಗಿದೆ.
ಇಕ್ಕೇರಿ ಅರಸರು ಆಳ್ವಿಕೆ ನಡೆಸಲು ಆರಂಭಿಸಿದ ಬಳಿಕ ಕೆಲವೊಂದು ಗ್ರಾಮಗಳಲ್ಲಿ ಮಾತ್ರ ಬಲ್ಲಾಳ ಅರಸರ ಆಳ್ವಿಕೆ ನಡೆಯುತ್ತಿತ್ತು. ಆ ಸಂದರ್ಭ ಸುಬ್ರಹ್ಮಣ್ಯವೂ ಅವರ ಆಳ್ವಿಕೆಗೆ ಒಳಪಟ್ಟಿತ್ತು ಎನ್ನಲಾಗುತ್ತಿದೆ. ಈ ದೇಗುಲದಲ್ಲಿ ಪ್ರತಿಷ್ಠಾಪಿತವಾಗಿರುವ ಬಲ್ಲಾಳ ಅರಸರ ಮೂರ್ತಿಯ ಹಿಂದೆ ದಂತಕಥೆಯೊಂದು ಇರುವುದನ್ನು ನಾವು ಕಾಣಬಹುದು. ಅದೇನೆಂದರೆ ವೇದವ್ಯಾಸ ಸಂಪುಟದ ವಿಗ್ರಹವನ್ನು ಯಾರಿಂದಲೂ ಭಗ್ನಗೊಳಿಸುವುದು ಅಸಾಧ್ಯ ಎಂಬ ನಂಬಿಕೆ ಹರಡಿತ್ತು. ಇದನ್ನು ಪರೀಕ್ಷಿಸಿ ನೋಡಿಯೇ ಬಿಡೋಣ ಎಂಬ ತೀರ್ಮಾನಕ್ಕೆ ಬಂದ ಅರಸ ಆನೆಯ ಮೂಲಕ ಮುರಿಯಲು ಮುಂದಾದನು.
ಈ ಸಂದರ್ಭ ಅರಸನಿಗೆ ಇದ್ದಕ್ಕಿಂದತೆಯೇ ಮೈಮೇಲೆ ಉರಿಬಾಧೆ ಕಾಣಿಸಿಕೊಂಡಿತು, ತಕ್ಷಣ ಅವನಿಗೆ ತಾನು ಮಾಡಿದ ತಪ್ಪಿನ ಅರಿವಾಗಿ ಸುಬ್ರಹ್ಮಣ್ಯ ದೇವರನ್ನು ಪ್ರಾರ್ಥಿಸಿದನೆಂದೂ ಈ ಸಂದರ್ಭ ಸುಬ್ರಹ್ಮಣ್ಯ ಸ್ವಾಮಿ ಅರಸನ ಪ್ರತಿಮೆಯನ್ನು ದೇವಾಲಯದ ಮುಖ್ಯದ್ವಾರದಲ್ಲಿಡಲು ಆದೇಶಿಸಿದನೆಂದೂ ಅದರಂತೆ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದೆ ಎಂದು ಹೇಳಲಾಗಿದೆ.
ಇಂದಿಗೂ ಕೂಡ ಚಂಪಾಷಷ್ಠಿಯ ದಿನದಂದು ಸುಬ್ರಹ್ಮಣ್ಯಸ್ವಾಮಿಯ ಉತ್ಸವ ಮೂರ್ತಿಯನ್ನು ಹೊರಗೆ ಮೆರವಣಿಗೆಯಲ್ಲಿ ತಂದಾಗ ಮೊದಲು ಬಲ್ಲಾಳರಸರ ಪ್ರತಿಮೆಗೆ ಪೂಜೆ ಸಲ್ಲಿಸಿದ ಬಳಿಕ ಮುಂದಿನ ಕೈಂಕರ್ಯಗಳು ನಡೆಯುತ್ತದೆ. ಕುಮಾರಸ್ವಾಮಿಯು ದೇವಸೇನೆಯೊಂದಿಗೆ ಮತ್ತು ಭಕ್ತ ವಾಸುಕಿಯೊಂದಿಗೆ ಇಲ್ಲಿ ನೆಲೆಸಿದ್ದರಿಂದ ಪುತ್ರನ ಮೇಲಿನ ವಾತ್ಸಲ್ಯದಿಂದ ಶಿವಪಾರ್ವತಿಯರು ಕುಕ್ಕೆಲಿಂಗ ರೂಪದಲ್ಲಿ ನೆಲೆಸಿದ್ದಾರೆ ಎಂಬ ನಂಬಿಕೆಯಿದೆ.
ಕುಮಾರಸ್ವಾಮಿಯು ನಾಲ್ಕು ಪುರುಷಾರ್ಥಗಳನ್ನು ಅನುಗ್ರಹಿಸಬಲ್ಲ ದೇವತೆಯಾಗಿದ್ದು, ಬ್ರಹ್ಮಜ್ಞಾನ, ಆಯಸ್ಸು, ಆರೋಗ್ಯ, ಉಪಸ್ಮಾರ, ಕುಷ್ಠಾದಿ ಮಹಾರೊಗಗಳ ಪರಿಹಾರ, ಭೂತ ಪೀಡೆ ಪರಿಹಾರ, ಸಂತಾನ ಸೌಭಾಗ್ಯ, ಪುಷ್ಠಿ, ತುಷ್ಠಿ, ಕೀರ್ತಿ, ಶತ್ರುಜಯವನ್ನು ವಿಶೇಷವಾಗಿ ಕರುಣಿಸುತ್ತಾನೆ.
ಸುಬ್ರಹ್ಮಣ್ಯ ಕೇತ್ರದಲ್ಲಿ ಹರಿಯುವ ಕುಮಾರಧಾರಾ ನದಿ ಪವಿತ್ರವಾಗಿದ್ದು, ಇದು ಭೂಮಿಯ ಒಡಲಾಳದಿಂದ ಉಕ್ಕಿಹರಿದ ಎಲ್ಲಾ ತೀರ್ಥಗಳ ಸಾರವನ್ನು ಹೊಂದಿದೆ ಎಂದು ನಂಬಲಾಗಿದೆ. ಇದನ್ನು ಹಿಂದೆ ಮಹೀನದಿ ಎಂದು ಕರೆಯಲಾಗುತ್ತಿತ್ತಂತೆ ಕಾಲಾಂತರದಲ್ಲಿ ಈ ನದಿಯ ನೀರನ್ನು ಕುಮಾರಸ್ವಾಮಿ(ಸುಬ್ರಹ್ಮಣ್ಯ)ಯ ಪೂಜೆಯ ಅಭಿಷೇಕಕ್ಕೆ ಉಪಯೋಗಿಸಲು ಆರಂಭಿಸಿದ ಬಳಿಕ ಕುಮಾರಧಾರಾ ಎಂಬ ಹೆಸರು ಬಂತೆಂದು ಹೇಳಲಾಗುತ್ತಿದೆ. ಈ ನದಿಯಲ್ಲಿ ಸ್ನಾನ ಮಾಡಿದರೆ ಚರ್ಮರೋಗಗಳು ವಾಸಿಯಾಗುವುದಾಗಿ ನಂಬಿಕೆಯಿದೆ.
ಪರಮ ಪವಿತ್ರ ಕ್ಷೇತ್ರ, ಪ್ರವಾಸಿ ತಾಣವೂ ಆಗಿರುವ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರವು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿಗೆ ಸೇರಿದೆ. ಕೊಡಗು, ಹಾಸನ ಜಿಲ್ಲೆಗಳಿಗೆ ಹೊಂದಿಕೊಂಡಂತಿರುವ ಈ ಕ್ಷೇತ್ರದ ಪೂರ್ವಕ್ಕೆ ಸಹ್ಯಾದ್ರಿ ಶ್ರೇಣಿಯ ಕುಮಾರ ಪರ್ವತ, ಶೇಷ ಪರ್ವತ ಹಾಗೂ ಸಿದ್ದ ಪರ್ವತಗಳಿದ್ದು, ದಟ್ಟ ಕಾಡನ್ನು ಹೊಂದಿ ತನ್ನದೇ ಆದ ನಿಸರ್ಗ ರಮಣೀಯತೆಯಿಂದ ಪ್ರವಾಸಿಗರನ್ನು ತನ್ನತ್ತ ಸೂಜಿಗಲ್ಲಿನಂತೆ ಸೆಳೆಯುತ್ತದೆ.
ಹಾಗಾಗಿ ಇಲ್ಲಿಗೆ ಕೇವಲ ಸ್ವಾಮಿ ಸುಬ್ರಹ್ಮಣ್ಯನ ದರ್ಶನ ಮಾಡಲು ಮಾತ್ರ ಭಕ್ತರು ಬರುವುದಲ್ಲದೆ, ಚಾರಣ ಮಾಡಲು ಕೂಡ ಪ್ರವಾಸಿಗರು ಆಗಮಿಸುತ್ತಾರೆ. ಸುಬ್ರಹ್ಮಣ್ಯ ಕ್ಷೇತ್ರವು ವರ್ಷದ ಎಲ್ಲಾ ದಿನಗಳಲ್ಲಿಯೂ ಭಕ್ತರಿಂದ ತುಂಬಿ ತುಳುಕುತ್ತಿರುತ್ತದೆ. ಅಷ್ಟೇ ಅಲ್ಲ ಸುತ್ತಲೂ ಪರ್ವತ ಹಾಗೂ ಅರಣ್ಯದಿಂದ ಆವೃತವಾಗಿರುವುದರಿಂದ ಮಳೆಯೂ ಹೆಚ್ಚಾಗಿಯೇ ಸುರಿಯುತ್ತಿರುತ್ತದೆ.
- ಹೊರರಾಜ್ಯದ ಯುವತಿಯರನ್ನ ಕರೆಸಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: ಆರೋಪಿ ಬಂಧನ
- ಬೆಂಗಳೂರಿನಲ್ಲಿ ಮಹಿಳೆಗೆ 30 ಲಕ್ಷ ರೂ. ವಂಚನೆ!
- ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
- ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
- ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ
More Stories
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ
ದೇವತೆಗಳ ಆರಾಧನೆಗೆ ಮೀಸಲಾದ ದೇವಮಾಸ ಮಾರ್ಗಶಿರಮಾಸ