December 23, 2024

Newsnap Kannada

The World at your finger tips!

Map karnataka flag

ಕನ್ನಡದ ಡಿಂಡಿಮ – ರಾಜ್ಯೋತ್ಸವದ ಸಂಭ್ರಮ

Spread the love

ಕರ್ನಾಟಕದ ಏಕೀಕರಣಕ್ಕೆ ಹೋರಾಡಿದ ಮಹನೀಯರನ್ನು ಸ್ಮರಿಸುವ ಉದ್ದೇಶದಿಂದ ಹಾಗೂ ಕನ್ನಡ ಹೋರಾಟಗಳ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸುವ ಉದ್ದೇಶದಿಂದ ಕನ್ನಡ ರಾಜ್ಯೋತ್ಸವ ಅತ್ಯಂತ ಮಹತ್ವವನ್ನು ಪಡೆದುಕೊಂಡಿದೆ.

ಕರ್ನಾಟಕದ ಇತಿಹಾಸ ಕರ್ನಾಟಕದ ಹುಟ್ಟಿಗೆ ಕಾರಣರಾದ ಕನ್ನಡದ ಕುಲಪುರೋಹಿತ ಎಂದೇ ಹೆಸರಾದ ಆಲೂರು ವೆಂಕಟರಾವ್ ಅವರು ಮೊದಲಿಗೆ ಕರ್ನಾಟಕ ಏಕೀಕರಣ ಚಳುವಳಿಯನ್ನು ಸ್ವಾತಂತ್ರ್ಯ ಪೂರ್ವವೇ 1905ರಲ್ಲಿ ಪ್ರಾರಂಭಿಸಿದರು. ನಂತರ ಭಾರತಕ್ಕೆ ಸ್ವಾತಂತ್ರ್ಯ ದೊರೆತು ಗಣರಾಜ್ಯವಾದ ನಂತರ ಭಾಷೆಗಳ ಆಧಾರದ ಮೇಲೆ 1956ರ ನವೆಂಬರ್ 1 ರಂದು ರಾಜ್ಯಗಳನ್ನು ವಿಂಗಡಿಸಿದರು.

ಮೈಸೂರು ಪ್ರಾಂತ್ಯ ಎಂಬ ಹೆಸರಿನ ಮೂಲಕ ಕರೆಯಲ್ಪಡುತ್ತಿದ್ದ ಹಾಗೂ ವಿಭಾಗಗಳಾಗಿ ಚದುರಿದ್ದ ನಾಡನ್ನು 1956ರ ನವೆಂಬರ್ 1ರಂದು ಒಂದುಗೂಡಿಸಿ ಭಾಷಾವಾರು ರಾಜ್ಯವನ್ನು ರಚನೆ ಮಾಡಲಾಯಿತು, ನಂತರ 1973ರ ನವೆಂಬರ್ 1ರಂದು ಅಂದಿನ ಮುಖ್ಯಮಂತ್ರಿ ದೇವರಾಜ್ ಅರಸು ಮೈಸೂರು ರಾಜ್ಯವನ್ನು “ಕರ್ನಾಟಕ” ಎಂದು ಮರು ನಾಮಕರಣ ಮಾಡಿದರು. ಅಂದಿನಿಂದ ಪ್ರತಿ ವರ್ಷ ನವೆಂಬರ್ 1ರಂದು ನಾಡಿನಾದ್ಯಂತ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ.

ಮದ್ರಾಸ್, ಮುಂಬಯಿ ಮತ್ತು ಹೈದರಾಬಾದ್ ಪ್ರಾಂತ್ಯದ ಕನ್ನಡ ಮಾತನಾಡುವ ಪ್ರದೇಶಗಳೆಲ್ಲವೂ ವಿಲೀನಗೊಂಡು ಮೈಸೂರು ರಾಜ್ಯ ಉದಯವಾಯಿತು. ನಂತರ ಮೈಸೂರು ರಾಜ್ಯವನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಯಿತು. ಅವುಗಳೆಂದರೆ ಉತ್ತರ ಕರ್ನಾಟಕ, ಹಳೆಯ ಮೈಸೂರು ಹಾಗೂ ಮಲೆನಾಡು ಸೇರಿಸಿ ಅಖಂಡ ಕರ್ನಾಟಕದ ಹಿರಿಯರ ಕನಸನ್ನು ನನಸು ಮಾಡಲಾಯಿತು.

ಕರ್ನಾಟಕದ ಏಕಕೀಕರಣಕ್ಕೆ ಹೋರಾಡಿದ ಮಹನೀಯರು

ಕರ್ನಾಟಕ ನಾಡು ಏಕೀಕರಣವಾಗಲು ನಾಡಿನ ಹಲವು ಕವಿಗಳು, ಸಾಹಿತಿಗಳು, ನಟರು, ವಿಚಾರವಂತರು ಸೇರಿದಂತೆ ಹಲವು ಮಹನೀಯರ ಕೊಡುಗೆ ಅಪಾರ. ಕನ್ನಡದ ಕುಲಪುರೋಹಿತ ಆಲೂರು ವೆಂಕಟರಾವ್, ಅನಕೃ, ಕೆ.ಶಿವರಾಮ ಕಾರಂತ, ಕುವೆಂಪು, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಎ.ಎನ್.ಕೃಷ್ಣರಾವ್, ಬಿ. ಎಂ. ಶ್ರೀಕಂಠಯ್ಯ, ನಾಡಿಗೇರ್, ಹುಯಿಲಗೋಳ ನಾರಾಯಣರಾವ್, ಆಚಾರ್ಯ, ಜಿ. ಬಿ. ಜೋಷಿ, ಕೆ. ವಿ. ಅಯ್ಯರ್, ವಿ. ಬಿ. ನಾಯಕ್, ಕರ್ಣ, ಗಂಗಾಧರ ದೇಶಪಾಂಡೆ, ಡೆಪ್ಯುಟಿ ಚೆನ್ನಪಬಸಪ್ಪ, ಮಂಗಳವೇಡೆ ಶ್ರೀನಿವಾಸರಾಯರು, ಕೆಂಗಲ್ ಹನುಮಂತಯ್ಯ, ಎಚ್. ಎಸ್. ದೊರೆಸ್ವಾಮಿ, ಕೋ. ಚನ್ನಬಸಪ್ಪ, ಅಲ್ಲಂ ಸುಮಂಗಳಮ್ಮ, ಗೋರೂರು ರಾಮಸ್ವಾಮಿ ಅಯ್ಯಂಗಾರ್, ಪಾಟೀಲ್ ಪುಟ್ಟಪ್ಪ, ಹಾರನಹಳ್ಳಿ ರಾಮಸ್ವಾಮಿ ಸೇರಿದಂತೆ ನೂರಾರು ಮಹನೀಯರು, ಲಕ್ಷಾಂತರ ಪ್ರಜೆಗಳ ಹೋರಾಟದ ಫಲವಾಗಿ ನಾವಿಂದು ಏಕೀಕೃತ ನಾಡನ್ನು ಕಟ್ಟಿಕೊಂಡಿದ್ದೇವೆ.

ಕನ್ನಡ ರಾಜ್ಯೋತ್ಸವ ಆಚರಣೆ

ನವೆಂಬರ್ 1ರಂದು ನಾಡಿನ ಸಮಸ್ತ ಜನತೆ ಯಾವುದೇ ಜಾತಿ, ಧರ್ಮ, ಪಂಥಗಳ ಬೇಧವಿಲ್ಲದೆ ಒಗ್ಗಟ್ಟಿನಿಂದ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸುತ್ತಾರೆ. ಅರಿಶಿನ ಹಾಗೂ ಕುಂಕುಮದ ಸಂಕೇತ ಕರ್ನಾಟಕ ಹಳದಿ ಕೆಂಪು ಮಿಶ್ರಿತ ಧ್ವಜವನ್ನು ಸರ್ಕಾರಿ ಕಚೇರಿ, ಕಂಪನಿಗಳು, ಶಾಲಾ-ಕಾಲೇಜುಗಳಲ್ಲಿ ಹಾರಿಸುತ್ತಾ, ಕುವೆಂಪು ರಚಿತ ಜಯ ಭಾರತದ ಜನನಿಯ ತನುಜಾತೆ ನಾಡಗೀತೆ ಸೇರಿದಂತೆ ನಾಡಿನ ಹಿರಿಮೆಯನ್ನು ಬಿಂಬಿಸುವ ಗೀತೆಗಳ ಮೂಲಕ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ದತ್ತಣ್ಣ, ಅವಿನಾಶ್, ಪತ್ರಕರ್ತ ಎಚ್ ಆರ್ ಶ್ರೀಶಾ ಸೇರಿ 67 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ ,ನವೆಂಬರ್ 1ರಂದು ಸಾಧಕರಿಗೆ ಸನ್ಮಾನ

ರಾಜ್ಯೋತ್ಸವ ಪ್ರಶಸ್ತಿಯ ಮೂಲಕ ಗೌರವ

ಕರ್ನಾಟಕ ಸರ್ಕಾರ ನಾಡಿಗಾಗಿ ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಮಹನೀಯರನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿಯ ಮೂಲಕ ಗೌರವಿಸುತ್ತದೆ. ಕೆಲವು ಕನ್ನಡ ಪರ ಸಂಘಟನೆಗಳು, ಸ್ವಯಂ ಸೇವಾ ಸಂಘಗಳು, ಎನ್ ಜಿ ಒ ಗಳು ಸಹ ಕನ್ನಡ ಮಾತೆ ಭುವನೇಶ್ವರಿಯ ಭಾವಚಿತ್ರವನ್ನಿಟ್ಟು ಮೆರವಣಿಗೆ, ಜಾಥಾ ನಡೆಸುತ್ತದೆ. ರಕ್ತದಾನ ಶಿಬಿರಗಳು, ಕನ್ನಡ ಪರ ಸ್ಪರ್ಧೆಗಳನ್ನು ಏರ್ಪಡಿಸುತ್ತವೆ. ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಗಳ ಮೂಲಕ ಕನ್ನಡಕ್ಕಾಗಿ ದುಡಿದವರಿಗೆ ಗೌರವಿಸುತ್ತದೆ.

ಚರ್ಚಾಸ್ಪರ್ಧೆ, ಭಾಷಣಗಳ ಮೂಲಕ ಕನ್ನಡ ಭಾಷೆಯ ಇತಿಹಾಸ, ಮೌಲ್ಯ, ಪ್ರಾಮುಖ್ಯತೆ ಸಾರುವ ಕಾರ್ಯ ಎಂದಿನಿಂದಲೂ ನಡೆಯುತ್ತಲೇ ಇದೆ. ಕರ್ನಾಟಕ ಸೇರಿದಂತೆ ದೇಶ-ವಿದೇಶಗಳಲ್ಲಿ ಇರುವ ಕನ್ನಡಿಗರು ಸಹ ಆಯಾ ಪ್ರದೇಶಗಳಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಾ, ಅಲ್ಲಿಯೂ ಕನ್ನಡದ ಕಂಪನ್ನು ಪಸರಿಸುತ್ತಿದ್ದಾರೆ. ಒಟ್ಟಾರೆ ನವೆಂಬರ್ ಸಂಪೂರ್ಣ ತಿಂಗಳು ಕನ್ನಡಮಯವಾಗಿ ಕನ್ನಡ ರಾಜ್ಯೋತ್ಸವ ಆಚರಣೆ ನಡೆಯುತ್ತದೆ.

Copyright © All rights reserved Newsnap | Newsever by AF themes.
error: Content is protected !!