ಇಂದು ನಟ ಪುನೀತ್‌ ರಾಜ್‌ಕುಮಾರ್‌ಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ – ರಜನಿ, ಜ್ಯೂ NTR ಭಾಗಿ

Team Newsnap
1 Min Read

ರಾಜರತ್ನ ಅಪ್ಪು ಇಂದಿನಿಂದ ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಆಗಲಿದ್ದಾರೆ. ರಾಜ್ಯ ಸರ್ಕಾರ ನೀಡುವ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಕರ್ನಾಟಕ ರತ್ನ ಪ್ರಶಸ್ತಿಯನ್ನು ಮರಣೋತ್ತರವಾಗಿ ದಿವಂಗತ ನಟ ಪುನೀತ್ ರಾಜ್‌ಕುಮಾರ್‌ಗೆ ಪ್ರದಾನ ಮಾಡಲಾಗುತ್ತದೆ.

ವಿಧಾನಸೌಧದ ಮೆಟ್ಟಿಲುಗಳ ಮೇಲೆ ನಿರ್ಮಿಸಲಾದ ವಿಶೇಷ ವೇದಿಕೆ ಮೇಲೆ ಪ್ರಶಸ್ತಿ ಕಾರ್ಯಕ್ರಮದಲ್ಲಿಪುನೀತ್ ಪತ್ನಿ ಅಶ್ವಿನಿ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.

ಇಂದು ಸಂಜೆ 4 ಗಂಟೆಗೆ ಸಮಾರಂಭ ನಡೆಯಲಿದೆ. ಸುಮಾರು 25 ಸಾವಿರ ಮಂದಿ ಭಾಗವಹಿಸುವ ಸಾಧ್ಯತೆ ಇದೆ , ಗಣ್ಯರಿಗೆ 5 ಸಾವಿರ ಪಾಸ್‌ಗಳನ್ನು ವಿತರಿಸಲಾಗಿದೆ. ಡಾ.ರಾಜ್ ಕುಟುಂಬಕ್ಕೂ ರಾಜ್ಯ ಸರ್ಕಾರ ಆಹ್ವಾನ ನೀಡಿದೆ. ನಿನ್ನೆ ಅಪ್ಪು ನಿವಾಸಕ್ಕೆ ಭೇಟಿ ನೀಡಿದ ಸಚಿವ ಅಶೋಕ್, ಸುನೀಲ್ ಕುಮಾರ್ ಇಂದಿನ ಕಾರ್ಯಕ್ರಮಕ್ಕೆ ಅಶ್ವಿನಿ ಪುನೀತ್‌ರನ್ನು ಆಹ್ವಾನಿಸಿದ್ದಾರೆ. ಡಾ.ರಾಜ್‌ಕುಮಾರ್ ಕುಟುಂಬ ಸದಸ್ಯರು ಬಸ್‌ನಲ್ಲಿ ಒಟ್ಟಿಗೆ ವಿಧಾನಸೌಧಕ್ಕೆ ಬಂದಿಳಿಯಲಿದ್ದಾರೆ. ಇಡೀ ಕುಟುಂಬದವರು ಪಾಲ್ಗೊಳ್ಳಲಿದ್ದಾರೆ

ಮುಖ್ಯ ಅತಿಥಿಯಾಗಿ ಖ್ಯಾತ ನಟರಾದ ಸೂಪರ್ ಸ್ಟಾರ್ ರಜನಿಕಾಂತ್, ಜ್ಯೂ.ಎನ್‌ಟಿಆರ್, ಇನ್ಫೋಸಿಸ್ ಸುಧಾಮೂರ್ತಿ ಭಾಗಿಯಾಗುತ್ತಿರುವುದು ಸಂಭ್ರಮವನ್ನು ಇಮ್ಮಡಿಗೊಳಿಸಿದೆ.
ರಜನಿಕಾಂತ್ ದಶಕಗಳ ಹಿಂದೆ ಪುನೀತ್ ಅಭಿನಯದ 2002ರಲ್ಲಿ ತೆರೆ ಕಂಡ ಅಪ್ಪು ಚಿತ್ರದ ನೂರನೇ ದಿನ ಸಂಭ್ರಮಕ್ಕೆ ಸಾಕ್ಷಿಯಾಗಿದ್ದರು. ಈಗ ಇವತ್ತಿನ ಕ್ಷಣಕ್ಕೂ ಸಾಕ್ಷಿಯಾಗಲಿದ್ದಾರೆ. ಅಪ್ಪುಗೆ ಚಕ್ರವ್ಯೂಹ ಚಿತ್ರದಲ್ಲಿ ಜೂನಿಯರ್ ಎನ್‌ಟಿಆರ್ ಹಾಡೊಂದನ್ನ ಹಾಡಿದ್ರು. ಅಪ್ಪು ನಿಧನ ಬಳಿಕ ಅಪ್ಪುವನ್ನ ನೆನೆದು ಗದ್ಗದಿತರಾಗಿದ್ರು. ಇದೀಗ ಗೆಳೆಯನಿಗೆ ಪ್ರಶಸ್ತಿ ಕೊಡಲು ಮುಖ್ಯ ಅತಿಥಿಯಾಗಿ ಜೂನಿಯರ್ ಎನ್‌ಟಿಆರ್ ಬರ್ತಿದ್ದಾರೆ.

ಯಾವ ಮಾರ್ಗಗಳು ಬಂದ್? :

ವಿಧಾನಸೌಧದ ಪೂರ್ವ ಹಾಗೂ ಅಂಬೇಡ್ಕರ್ ರಸ್ತೆ, ತಿಮ್ಮಯ್ಯ ಕಾರ್ನರ್‌ನಿಂದ ಕೆ.ಆರ್ ಸರ್ಕಲ್‌ವರೆಗೆ, ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 10 ಗಂಟೆವರೆಗೂ ಮಾರ್ಗ ಬದಲಾವಣೆ, ಅಂಬೇಡ್ಕರ್ ರಸ್ತೆ, ಇನ್ಫೆಂಟ್ರಿ ರಸ್ತೆ, ಅಲಿ ಅಸ್ಕರ್ ರಸ್ತೆ, ಅರಮನೆ ರಸ್ತೆ, ರಾಜಭವನ ರಸ್ತೆ, ಕಬ್ಬನ್ ಪಾರ್ಕ್ ರಸ್ತೆ, ಕ್ವೀನ್ಸ್ ರಸ್ತೆ ಹಾಗೂ ಕನ್ನಿಂಗ್ ಹಾಮ್ ರಸ್ತೆಯಲ್ಲಿ ವಾಹನ ನಿಲುಗಡೆಗೆ ನಿಷೇಧ ಇರಲಿದೆ. ಕಾರ್ಯಕ್ರಮಕ್ಕೆ ಬರುವವರಿಗೆ ಕಬ್ಬನ್ ಪಾರ್ಕ್‌ನಲ್ಲಿ ವಾಹನ ನಿಲುಗಡೆಗೆ ಅವಕಾಶ ಇರಲಿದೆ.

Share This Article
Leave a comment