December 26, 2024

Newsnap Kannada

The World at your finger tips!

WhatsApp Image 2022 04 01 at 12.19.11 AM

ಬೇವು ಬೆಲ್ಲ ಸಮಾಗಮದ ಯುಗಾದಿ ಹಬ್ಬ

Spread the love

ಹೊಸ ವರ್ಷ, ಹೊಸ ನಿರೀಕ್ಷೆಗಳ ಜೊತೆ ಯುಗಾದಿ ಹಬ್ಬ ಮತ್ತೆ ಬಂದಿದೆ. ಶುಭಕೃತ್ ಸಂವತ್ಸರ ಕಳೆದು ಶೋಭಕೃತ್ ಸಂವತ್ಸರಕ್ಕೆ ಪಾದಾರ್ಪಣೆ, ವಸಂತ ಋತುವಿನ ಆರಂಭದ ದಿನ, ಚೈತ್ರ ಮಾಸ ಶುಕ್ಲ ಪಕ್ಷದ ಪಾಡ್ಯದಂದು ಯುಗಾದಿ ಹಬ್ಬವನ್ನು ಆಚರಿಸಲಾಗುತ್ತದೆ.

ಯುಗಾದಿಯ ಅರ್ಥ ‘ಯುಗದ ಆದಿ’ ‘ಯುಗಾದಿ’ ಎಂಬ ಶಬ್ದ ಸಂಸ್ಕೃತದ ‘ಯುಗ’ ಮತ್ತು ‘ಆದಿ’ ಎಂಬ ಎರಡು ಶಬ್ದಗಳಿಂದ ಕೂಡಿದೆ. ಯುಗವೆಂದರೆ ಸೃಷ್ಟಿಯ ಕಾಲಮಾನ. ಅರ್ಥಾತ್ ಹೊಸ ವರ್ಷ,ಆದಿ ಎಂದರೆ ಆರಂಭ.

ಹಿಂದೂ ಪಂಚಾಂಗದ ಪ್ರಕಾರ ಯುಗಾದಿಯಿಂದಲೇ ಹೊಸ ವರ್ಷದ ಮೊದಲ ದಿನ ಆರಂಭವಾಗುತ್ತದೆ. ಸಂವತ್ಸರ ಬದಲಾಗುವುದು ಕೂಡ ಯುಗಾದಿಯಿಂದಲೇ .

ಯುಗಾದಿ ಬಂದಿತೆಂದರೆ ಎಲ್ಲೆಡೆಯಲ್ಲೂ ಸಂತೋಷ, ಸಂಭ್ರಮ ತುಂಬಿ ತುಳುಕುತ್ತಿರುತ್ತದೆ. ಚೈತ್ರಮಾಸದಿಂದ ವಸಂತ ಋತು ಶುರುವಾಗುತ್ತದೆ. ವನಗಳೆಲ್ಲ ಚಿಗುರಿ ಹೂ ಬಿಟ್ಟು ಯುಗಾದಿಯ ಹರ್ಷವನ್ನು ಬೀರುವವು. ಎಲ್ಲಿ ನೋಡಿದರೂ ಮರಗಿಡಬಳ್ಳಿಗಳು ಹಸಿರಾಗಿ ನಳನಳಿಸುತ್ತಿರುವುದು.

ಯುಗಾದಿಯನ್ನು ಚಂದ್ರಮಾನ-ಸೌರಮಾನ ಹೀಗೆ ಎರಡು ಬಗೆಯಲ್ಲಿ ಆಚರಿಸುವ ಪದ್ಧತಿ ಇದೆ. ಚಂದ್ರನ ಚಲನೆಯನ್ನು ಗುರುತಿಸಿ ಮಾಡುವ ಪದ್ಧತಿಗೆ ಚಂದ್ರಮಾನ ಯುಗಾದಿ ಎನ್ನುವರು. ಹಾಗೂ ಸೂರ್ಯ ಮೇಷರಾಶಿಗೆ ಬಂದಾಗ ಸೌರಮಾನ ಯುಗಾದಿಯನ್ನು ಆಚರಿಸುವರು. ದಕ್ಷಿಣ ಭಾರತೀಯರು ಚಾಂದ್ರಮಾನವನ್ನು ಅನುಸರಿಸಿ ಚೈತ್ರಶುದ್ಧ ಪಾಡ್ಯಮಿಯಂದು ಯುಗಾದಿ ಆಚರಿಸುವರು.

ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ ಗುಜರಾತ್ ಗಳಲ್ಲಿ ಚಂದ್ರಮಾನ ಯುಗಾದಿ ಆಚರಿಸಿದರೆ ತಮಿಳುನಾಡು, ಕೇರಳ ಮತ್ತು ಉತ್ತರ ಭಾರತದ ಕೆಲವು ಸ್ಥಳಗಳಲ್ಲಿ ಸೌರಮಾನ ಯುಗಾದಿ ಆಚರಿಸುತ್ತಾರೆ.

ಶ್ರೀರಾಮಚಂದ್ರ ಅಯೋಧ್ಯೆಯಲ್ಲಿ ರಾಮ ರಾಜ್ಯ ಸ್ಥಾಪಿಸಿದ ದಿನ ,ಲಂಕೆಗೆ ಹೋಗಿ ರಾವಣನನ್ನು ಸಂಹರಿಸಿ ಸೀತಾ ಸಮೇತ ಶ್ರೀರಾಮಚಂದ್ರರು ಅಯೋಧ್ಯೆಗೆ ಮರಳುತ್ತಾರೆ. ಅಯೋಧ್ಯೆಯಲ್ಲಿ ರಾಜ್ಯಭಾರ ಆರಂಭಿಸುತ್ತಾರೆ. ರಾಮರಾಜ್ಯ ಆರಂಭವಾದ ದಿನವೇ ಯುಗಾದಿಯ ದಿನವೆಂದು ಪುರಾಣಗಳಲ್ಲಿ ಹೇಳಲಾಗಿದೆ. ದ್ವಾಪರ ಯುಗವು ಕೊನೆಯಾಗಿ ಯುಗಾದಿಯ ದಿನ ಕಲಿಯುಗವು ಆರಂಭವಾಯಿತೆಂದು ವೇದವ್ಯಾಸರು ತಮ್ಮ ಗ್ರಂಥದಲ್ಲಿ ವಿವರಿಸಿದ್ದಾರೆ.

ಯುಗಾದಿ ಹಬ್ಬದ ಮಹತ್ವ ಹಾಗೂ ನಿಯಮಗಳು

ಯುಗಾದಿ ಹಬ್ಬದಲ್ಲಿ ಬೇವು-ಬೆಲ್ಲಕ್ಕಿರುವಷ್ಟೇ ಪ್ರಾಧಾನ್ಯತೆ ಅಭ್ಯಂಜನ ಪಂಚಾಂಗ ಶ್ರವಣ, ಪ್ರಮುಖವಾದದ್ದು. ಜೀವನದ ಸಿಹಿ-ಕಹಿಗಳೆರಡನ್ನೂ ಪಡೆಯಬೇಕೆಂದು ನೆನಪಿಸಲು ಬೇವು-ಬೆಲ್ಲಗಳ ಮಿಶ್ರಣವನ್ನು ಸೇವಿಸಲಾಗುತ್ತದೆ.

ಬೇವು-ಬೆಲ್ಲವು ಸುಖ-ದುಃಖ, ರಾತ್ರಿ-ಹಗಲು ಇವುಗಳ ಸಂಕೇತಗಳಾಗಿವೆ. ಮಾನವರ ಬದುಕಿನಲ್ಲಿ ಸುಖ-ದುಃಖಗಳು ಅವಿಭಾಜ್ಯ ಅಂಶಗಳು. ಇವೆಲ್ಲವುಗಳೊಂದಿಗೆ ಸಮತೋಲನ ಕಾಯ್ದುಕೊಂಡೇ ಮನುಷ್ಯ ಬದುಕಬೇಕು. ಜೀವನ ಕಷ್ಟ-ಸುಖ. ನೋವು ನಲಿವುಗಳ ಸಮ್ಮಿಶ್ರಣವಾಗಿದೆ. ಇವೆರಡೂ ಒಟ್ಟಿಗೆ ಇರುವವು. ಎರಡನ್ನೂ ಸಮದೃಷ್ಟಿಯಿಂದ ಸವಿಯುವುದನ್ನು ಕಲಿಯಲೆಂದೇ ಯುಗಾದಿಯಂದು ಬೇವು-ಬೆಲ್ಲವನ್ನು ಸೇವಿಸುವರು.

ತೈಲ ಅಭ್ಯಂಜನ ಮಾಡಬೇಕು

ಯುಗಾದಿ ಹಬ್ಬದಂದು ಅಭ್ಯಂಜನ ಸ್ನಾನ ಮಾಡುವ ವಿಶೇಷ ಸಂಪ್ರದಾಯವಿದೆ. ಇದನ್ನು ನಾನಾ ಗ್ರಂಥಗಳಲ್ಲಿ, ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಯುಗಾದಿಯಂದು ಮೈಗೆಲ್ಲಾ ಹರಳೆಣ್ಣೆ ಹಚ್ಚಿಕೊಂಡು ಕೆಲ ಕಾಲ ಬಿಸಿಲಿಗೆ ಮೈಯೊಡ್ಡಿ ತದನಂತರ ಸ್ನಾನ ಮಾಡುವ ಸಂಪ್ರದಾಯವಿದೆ.

ಅಭ್ಯಂಜನ ಸ್ನಾನ ಕೇವಲ ಸಂಪ್ರದಾಯವಲ್ಲದೆ ವೈಜ್ಞಾನಿಕ ಹಿನ್ನಲೆಯನ್ನ ಪಡೆದಿದೆ. ಹರಳೆಣ್ಣೆ ದೇಹವನ್ನು ತಂಪಾಗಿಸುತ್ತದೆ. ವರ್ಷದ ಶಾಖದ ದಿನಗಳನ್ನು ಕಳೆಯುವುದಕ್ಕೆ ದೇಹವನ್ನು ಸಜ್ಜುಗೊಳಿಸುವ ಒಂದು ಪ್ರಕ್ರಿಯೆ ಇದಾಗಿದೆ.

ಮನೆದೇವರನ್ನು, ಇಷ್ಟದೇವರನ್ನು ಪೂಜಿಸಬೇಕು

ಅಭ್ಯಂಜನ ಸ್ನಾನದ ಬಳಿಕ ಹೊಸ ಬಟ್ಟೆ ಧರಿಸಿ ಮನೆಯವರೆಲ್ಲಾ ಕುಲದೇವರನ್ನು, ಇಷ್ಟ ದೇವರನ್ನು ಆರಾಧನೆ ಮಾಡಲಾಗುತ್ತದೆ. ಈ ಸಮಯದಲ್ಲಿ ಭಕ್ತಿಯಿಂದ ನಮಿಸಿದರೆ ವರ್ಷವಿಡೀ ದೈವಕೃಪೆ, ಕುಲದೇವರ ಕೃಪೆ ನಮ್ಮನ್ನು ಕಾಯುತ್ತದೆ.

ಪಂಚಾಂಗ ಶ್ರವಣ ಮಾಡಬೇಕು

ಯುಗಾದಿ ಹಬ್ಬದಂದು ಪಂಚಾಂಗ ಪಠಣ ಹಾಗೂ ಶ್ರವಣದಿಂದ ವಿಶೇಷವಾದ ಫಲಗಳು ಪ್ರಾಪ್ತಿಯಾಗುತ್ತವೆ. ತಿಥಿಯ ಬಗ್ಗೆ ತಿಳಿದುಕೊಳ್ಳುವುದರಿಂದ ಶ್ರೇಯಸ್ಸು. ವಾರದ ಸ್ಪಷ್ಟ ಕಲ್ಪನೆಯಿಂದ ಆಯುಷ್ಯವೃದ್ದಿ ನಕ್ಷತ್ರಗಳ ಬಗ್ಗೆ ತಿಳಿದುಕೊಳ್ಳುವುದರಿಂದ ಪಾಪ ಪರಿಹಾರ. ಯೋಗದ ಬಗ್ಗೆ ಅರಿತರೆ ರೋಗ ನಿವಾರಣೆ. ಕರಣದ ಬಗ್ಗೆ ತಿಳಿಯುವುದರಿಂದ ಕಾರ್ಯ ಸಿದ್ದಿಯಾಗುತ್ತೆ.

ಬೇವು ಬೆಲ್ಲ ಸೇವಿಸಬೇಕು

ಯುಗಾದಿ ಹಬ್ಬದ ದಿನ ಬೇವು ಬೆಲ್ಲ ಸೇವಿಸಿ ಇತರರಿಗೆ ಹಂಚುವ ವಿಶೇಷ ಸಂಪ್ರದಾಯವಿದೆ. ಬೇವು ಬೆಲ್ಲ ಸೇವಿಸುವ ಆಚರಣೆಯು ಇಡೀ ಮನುಕುಲಕ್ಕೆ ಒಂದು ಪಾಠವನ್ನ ಹೇಳುತ್ತದೆ. ಜೀವನದಲ್ಲಿ ಎದುರಾಗುವ ಸುಖ ದುಃಖವನ್ನು , ನೋವು ನಲಿವನ್ನು ಸಮನಾಗಿ ಸ್ವೀಕರಿಸಬೇಕು. ಇದರ ಜೊತೆಗೆ ಬೇವು ಬೆಲ್ಲಕ್ಕೆ ವಿಶೇಷವಾದ ಔಷಧಿ ಗುಣಗಳು ಇರುವುದನ್ನು ಆಯುರ್ವೇದದಲ್ಲಿ ಉಲ್ಲೇಖಿಸಲಾಗಿದೆ. ಬೇವು ಬೆಲ್ಲ ಸ್ವೀಕರಿಸಿದರೆ ಶರೀರ ವಜ್ರಕಾಯವಾಗುತ್ತೆಂಬ ಮಾತನ್ನು ವೇದಗಳಲ್ಲಿ ಉಲ್ಲೇಖಿಸಲಾಗಿದೆ. ಆ ಕುರಿತಾದ ಒಂದು ಶ್ಲೋಕವು ಹೀಗಿದೆ . ಈ ಶ್ಲೋಕವನ್ನು ಬೇವು ಬೆಲ್ಲ ಸೇವಿಸುವಾಗ ಹೇಳಿಕೊಳ್ಳಬೇಕೆಂಬ ಮಾತನ್ನು ಶಾಸ್ತ್ರಗಳಲ್ಲಿ ಹೇಳಲಾಗಿದೆ.

ಶತಾಯು: ವಜ್ರದೇಹಾಯ ಸರ್ವಸಂಪತ್ಕರಾಯಚ|
ಸರ್ವಾರಿಷ್ಟ ವಿನಾಶಾಯ ನಿಂಬಕಂದಳ ಭಕ್ಷಣಂ|| –

ಅರ್ಥ ಹೀಗಿದೆ – ನೂರು ವರುಷಗಳ ಆಯುಷ್ಯ, ಸದೃಢ ಆರೋಗ್ಯ, ಸಕಲ ಸಂಪತ್ತುಗಳ ಪ್ರಾಪ್ತಿಗಾಗಿಯೂ, ಸಕಲ ಅರಿಷ್ಟ ನಿವಾರಣೆಗಾಗಿಯೂ ಬೇವು ಬೆಲ್ಲ ಸೇವನೆ ಮಾಡುತ್ತೇನೆ.

ಚಂದ್ರ ದರ್ಶನ

ಚಂದ್ರನನ್ನು ಯುಗಾದಿ ದಿನದಂದು ನೋಡಲು ಪ್ರಮುಖವಾದ ಕಾರಣಗಳಿವೆ.
ಗಣಪತಿಯು ತನ್ನ ವಾಹನವಾದ ಇಲಿಯನ್ನೇರಿ ಹೋಗುತ್ತಿರುವಾಗ ಆಯ ತಪ್ಪಿ, ಗಣೇಶ ಇಲಿಯ ಮೇಲಿಂದ ಕೆಳಗೆ ಬೀಳುತ್ತಾನೆ. ಇದನ್ನು ಕಂಡು ಚಂದ್ರ ಮೇಲಿನಿಂದ ಗಹಗಹಿಸಿ ನಗುತ್ತಾನೆ. ಇದನ್ನು ಕಂಡಂತಹ ಗಣೇಶನು ಚೌತಿಯ ದಿನದಂದು ಅಂದರೆ ಗಣೇಶ ಚತುರ್ಥಿಯಂದು ನೋಡಿದರೆ ಅಪವಾದ ಬರುತ್ತದೆ ಎಂದು ಶಾಪವಿತ್ತಾಗ, ಶಾಪ ವಿಮೋಚನೆಗಾಗಿ ಯುಗಾದಿ ಚಂದ್ರನ ದರ್ಶನದಿಂದ ಪಾಪ ಪರಿಹಾರವಾಗುವುದರೊಂದಿಗೆ ಮುಕ್ತಿಯು ದೊರೆಯುತ್ತದೆಂಬ ನಂಬಿಕೆ ಬಹಳ ಹಿಂದಿನದು.

ಚಂದ್ರನು ನವಗ್ರಹಗಳಲ್ಲೊಂದು ತಾರೆ. ಶುದ್ಧತೆ, ಬುದ್ಧಿವಂತಿಕೆ ಹಾಗೂ ಉತ್ತಮ ನಡವಳಿಕೆಯ ಸಂಕೇತವಾಗಿ ಬಿಂಬಿಸಲಾಗುತ್ತದೆ. ಅಂತಹ ಚಂದ್ರನನ್ನು ಯುಗಾದಿಯಂದು ವೀಕ್ಷಿಸಿದರೆ ಇಡೀ ವರ್ಷವೆಲ್ಲಾ ಸುಖ-ಸಂತೋಷದಿಂದ ಬಾಳಬಹುದೆಂಬ ನಂಬಿಕೆಯಿಂದ ಹಿಂದಿನಿಂದಲೂ ಯುಗಾದಿ ಚಂದ್ರನನ್ನು ನೋಡುವುದು ವಾಡಿಕೆಯಾಗಿದೆ. ಯುಗಾದಿಯು ಅಮಾವಾಸ್ಯೆಯಲ್ಲಿ ಬರುವುದರಿಂದ ಮರು ದಿವಸದ ಚಂದ್ರನ ದರ್ಶನ ಅಷ್ಟು ಸುಲಭವಲ್ಲ. ಅದಕ್ಕಾಗಿ ಶ್ರಮ ಪಡಬೇಕು. ಕಣ್ಣಲ್ಲಿ ಕಣ್ಣಿಟ್ಟು ನೋಡಬೇಕು. ಹೀಗೆ ಚಂದ್ರ ದರ್ಶನ ಮಾಡಿ ನಮಿಸಿದರೆ ವರ್ಷವೆಲ್ಲಾ ಸಂತಸದಿಂದ ಇರಬಹುದು.

ಒಟ್ಟಿನಲ್ಲಿ ಯುಗಾದಿ ಹಬ್ಬ ಅಂದ್ರೆ ಹೊಸತನದ ಹುರುಪು. ಎಣ್ಣೆ ಸ್ನಾನ , ಹೊಸ ಉಡುಗೆ ತೊಡುವ ಸಂಭ್ರಮ, ಮನೆ ಮನೆಗಳಲ್ಲಿ ಹಸಿರು ತೋರಣಗಳ ಅಲಂಕಾರ. ಹೋಳಿಗೆಯ ಘಮಲು ಇರುತ್ತೆ. ಹಿಂದೂ ಧರ್ಮದ ಪ್ರತಿ ಹಬ್ಬಕ್ಕೂ ವಿಶೇಷ ಮಹತ್ವವಿದೆ.

ದ.ರಾ ಬೇಂದ್ರೆ ಅವರ ಈ ಕವಿತೆ ಸದಾ ಮೆಲುಕು ಹಾಕುತ್ತಾ ಯುಗಾದಿ ಸಂಭ್ರಮಿಸೋಣ

ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತಿದೆ.
ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ
ಹೊಂಗೆ ಹೂವ ತೊಂಗಲಲಿ ಭೃಂಗದ ಸಂಗೀತ ಕೇಳಿ ಮತ್ತೆ ಕೇಳಿ ಬರುತ್ತಿದೆ,
ಬೇವಿನ ಕಹಿ ಬಾಳಿನಲ್ಲಿ ಹೂವಿನ ನಸುಗಂಪು ಸೂಸಿ ಜೀವ ಕಳೆಯ ತರುತಿದೆ
ವರುಷಕೊಂದು ಹೊಸತು ಜನ್ಮ ವರುಷಕೊಂದು ಹೊಸತು ನೆಲೆಯು ಅಖಿಲ ಜೀವಜಾತಕೆ,
ಒಂದೆ ಒಂದು ಜನ್ಮದಲ್ಲಿ ಒಂದೆ ಬಾಲ್ಯ ಒಂದೆ ಹರಯ ನಮಗದಷ್ಟೆ ಏತಕೋ
ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಲ ನವೀನ ಜನನ ನಮಗೆ ಏಕೆ ಬಾರದೋ…

Copyright © All rights reserved Newsnap | Newsever by AF themes.
error: Content is protected !!