ಪುರೋಹಿತ ತಿರುನಾರಾಯಣ ನರಸಿಂಹಾಚಾರ್ ಪು.ತಿ.ನ.ರವರ ಪೂರ್ಣ ಹೆಸರು.
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಮೇಲುಕೋಟೆಯಲ್ಲಿ (Melukote) 1905 ರ ಮಾ.17 ರಂದು ಜನಿಸಿದರು, ತಂದೆ ವೃತ್ತಿಯಿಂದ ವೈದಿಕರಾಗಿದ್ದ ತಿರುನಾರಾಯಣ ಅಯ್ಯಂಗಾರ್, ತಾಯಿ ಶ್ರೀರಂಗಮ್ಮ. ಮನೆ ಮನ ತುಂಬಿದ ಮಡದಿ ಹೆಮ್ಮಗಿಯ ಶೇಷಮ್ಮನವರು.
ಬಾಲ್ಯದ ವಿದ್ಯಾಭ್ಯಾಸವನ್ನು ಮೇಲುಕೋಟೆ (Melukote) ಮತ್ತು ಮೈಸೂರಿನಲ್ಲಿ ಮುಗಿಸಿದ ನಂತರ ಬಿ.ಎ. ಪದವಿಯನ್ನು ಗಳಿಸಿದ ಮೇಲೆ ಗೋರಕ್ಷಕ ಸಮಿತಿಯಲ್ಲಿ ಗುಮಾಸ್ತರಾಗಿ ಕಾರ್ಯನಿರ್ವಹಿಸಿದರು. ಅನಂತರ ಸೈನ್ಯದ ಮುಖ್ಯಾಧಿಕಾರಿಗಳ ಕಚೇರಿಯಲ್ಲಿ ಕೆಲಸಕ್ಕೆ ಸೇರಿದರು. ಅದೇ ಕಚೇರಿಯಲ್ಲಿ 1938ರಲ್ಲಿ ವ್ಯವಸ್ಥಾಪಕರಾಗಿಯೂ 1945ರಲ್ಲಿ ಅಧೀಕ್ಷಕರಾಗಿಯೂ ಕೆಲಸ ಮಾಡಿದ್ದ ಅವರು ಅನಂತರ 1952ರಲ್ಲಿ ಶಾಸನ ಸಭಾ ಕಚೇರಿಯ ಸಂಪಾದಕರೂ ಆಗಿದ್ದರು. ಕನ್ನಡ ವಿಶ್ವಕೋಶದ ಕಚೇರಿಯಲ್ಲಿ ಭಾಷಾಂತರಕಾರ (1963-66), ಮೈಸೂರು ವಿಶ್ವವಿದ್ಯಾಲಯದ ಇಂಗ್ಲಿಷ್-ಕನ್ನಡ ನಿಘಂಟು (1966-71) ಸಂಪಾದಕ ವರ್ಗದಲ್ಲಿ ಒಬ್ಬರಾಗಿ ಕಾರ್ಯನಿರ್ವಹಿಸಿದರು.
ಪು.ತಿ.ನ ಕನ್ನಡದ ಶ್ರೇಷ್ಠ ಗೀತ ನಾಟಕಗಾರ, ಕನ್ನಡದ ಖ್ಯಾತ ವಿದ್ವಾಂಸ, ನವೋದಯ ಕಾವ್ಯ ಶಿಲ್ಪಿ, ಕವಿಪುಂಗವ, ವಾಗ್ಗೇಯಕಾರ, ಬಹುಮುಖ ಪ್ರತಿಭೆಯ ಕನ್ನಡ ಸಾರಸ್ವತ ಲೋಕದಲ್ಲಿ ಮೇರು ಶಿಖರವೆನಿಸಿರುವ ಹಿರಿಯ ಕಾವ್ಯ ಚೇತನ.
ಪುತಿನ ಬಹುಮುಖ ಪ್ರತಿಭೆಯ ಸಮಕಾಲೀನ ಸಾಹಿತಿಗಳಲ್ಲಿ ಅತ್ಯಂತ ಪ್ರಮುಖರು. ಇವರು ಕೇವಲ ಕವಿ ಮಾತ್ರ ಅಲ್ಲ , ಬರಹಗಾರರು, ನಾಟಕಕಾರರಾಗಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸುವಲ್ಲಿ ಇವರ ಸೇವೆ ಅತ್ಯಮೂಲ್ಯವಾದದ್ದು.
ಸಾಹಿತ್ಯದ ಎಲ್ಲ ಕ್ಷೇತ್ರಗಳಲ್ಲೂ ತಮ್ಮ ಕಲ್ಪನಾ ಸೌಂದರ್ಯ, ನಿರೂಪಣೆಯ ಕೌಶಲವನ್ನು ಮೆರೆದ ಹಿರಿಯ ಕವಿ.
ಸತ್ವಪೂರ್ಣ ಸಾಹಿತ್ಯದ ರಸದೌತಣವನ್ನು ಕನ್ನಡಿಗರಿಗೆ ನೀಡಿದ ಧೀಮಂತ. ಕುವೆಂಪು, ಬೇಂದ್ರೆ ಮುಂತಾದವರ ಸಾಲಿನಲ್ಲಿ ನಿಲ್ಲುವಂತವರು.
ಹಗುರಾಗಿಹ ಮೈ
ಪು.ತಿ.ನ
ಕೆಸರಿಲ್ಲದ ಮನ
ಹಂಗಿಲ್ಲದ ಬದುಕು
ಕೇಡಿಲ್ಲದ ನುಡಿ
ಕೇಡೆಣೆಸದ ನಡೆ
ಸಾಕಿವು
ಇಹಕೂ ಪರಕೂ
ಮೇಲೇನಿದೆ ಇದಕೂ ?
ಪುತಿನರ ಕೆಲವು ಪ್ರಮುಖ ಕವನ ಸಂಕಲನಗಳು:
ಹಣತೆ, ಮಾಂದಳಿರು, ಶಾರದ ಯಾಮಿನಿ, ಗಣೇಶ ದರ್ಶನ, ರಸ ಸರಸ್ವತಿ, ಮಲೆ ದೇಗುಲ, ಹೃದಯ ವಿಹಾರಿ, ಇರುಳು ಮೆರುಗು, ಹಳೆಯ ಬೇರು ಹೊಸ ಚಿಗುರು, ಎಂಬತ್ತರ ನಲುಗು, ಹನ್ನೊಂದನೆಯದು ಕನ್ನಡ ಸಂಘ, ಕ್ರೈಸ್ಟ್ ಕಾಲೇಜ್ ಪ್ರಕಟಿಸಿದ ಹಣತೆಯ ಹಾಡು’ ಆಗಿದೆ.
ಹಣತೆ’ಯಿಂದ ಆರಂಭವಾದ ಅವರ ಕಾವ್ಯ ಜೀವನ `ಹಣತೆಯ ಹಾಡು’ ಕವನ ಸಂಕಲನದೊಂದಿಗೇ ಕೊನೆಗೊಂಡಿದ್ದು ವಿಪರ್ಯಾಸದ ಸಂಗತಿಯಾಗಿದೆ.
ಗೀತನಾಟಕಗಳು:
ಗೋಕುಲ ನಿರ್ಗಮನ, ಶ್ರೀಹರಿಚರಿತೆ, ಅಹಲ್ಯೆ, ಸತ್ಯಾಯನ ಹರಿಶ್ಚಂದ್ರ, ವಿಕಟಕವಿ ವಿಜಯ, ಶಬರಿ, ಹಂಸದಮಯಂತಿ, ಹರಿಣಾಭಿಸರಣ, ದೀಪಲಕ್ಷ್ಮಿ ,ಶ್ರೀಹರಿಚರಿತೆ.
ಕವಿ ಪುತಿನ ಅವರ ಶತಮಾನದ ಮನೆ:
ಕನ್ನಡದ ಶ್ರೇಷ್ಠ ಗೀತ ನಾಟಕಗಳನ್ನು ಬರೆದ ಕವಿ ಪುತಿನ ಹುಟ್ಟಿ ಬೆಳೆದದ್ದು ಮೇಲುಕೋಟೆಯಲ್ಲಿ ಅಲ್ಲಿನ ಪರಿಸರ, ಪಂಚಪ್ರಾಣವಾಗಿದ್ದ ಆರಾಧ್ಯ ದೇವರು ಇವರ ಸಾಹಿತ್ಯ ಕೃಷಿಗೆ ಪ್ರೇರಣೆಯಾಗಿದ್ದವು, ಮೇಲುಕೋಟೆ ಚೆಲುವನಾರಾಯಣನ ಭಕ್ತರಾದ ಪು.ತಿ.ನ ತಮ್ಮ ಕಾವ್ಯದಲ್ಲಿ ಆತನ ಮಹಿಮೆ ಇತ್ಯಾದಿ ಗುಣಗಳನ್ನು ಕೊಂಡಾಡಿದ್ದಾರೆ.
ಪುತಿನ ಮನೆ ಸ್ಮಾರಕವಾಗಿದ್ದು ವೀರಪ್ಪ ಮೊಯ್ಲಿ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ. ಅಂದರೆ, ಪುತಿನ ಬದುಕಿದ್ದ ಕಾಲದಲ್ಲೇ. ಕವಿಯ ಆಶಯವೂ ಅದೇ ಆಗಿತ್ತು; ‘ನಾನು ಬದುಕಿರುವಾಗಲೇ ಬಾಳಿ, ಬದುಕಿದ ನನ್ನ ಮನೆ ಸ್ಮಾರಕವಾಗಬೇಕು. ನಾನು ಬರೆದ ಸಾಹಿತ್ಯ ನಿಂತ ನೀರಾಗದೆ, ನನ್ನ ಸಾವಿನಾಚೆಯೂ ಮುಂದಿನ ಪೀಳಿಗೆಯನ್ನು ತಲುಪುವಂತಾಗಬೇಕು’. 1996ರಲ್ಲಿ ಈ ಮನೆ ಸ್ಮಾರಕವಾಗಿ, ಸರ್ಕಾರದ ತೆಕ್ಕೆ ಸೇರಿತು.
ಅಕ್ಟೋಬರ್ 23, 1998ರಲ್ಲಿ ನಿಧನ ಹೊಂದಿದರು. 1998 ರಲ್ಲಿ ಕವಿ ವಿಧಿವಶರಾದ ನಂತರ ಟ್ರಸ್ಟ್‌ನವರು ಕವಿಯ ಬಯಕೆಯಂತೆ ಮನೆಯ ಮೂಲ ರೂಪವನ್ನು ಬದಲಿಸದೇ 2000ನೇ ಇಸ್ವಿಯಲ್ಲಿ ಪ್ರಾಚ್ಯವಸ್ತು ಇಲಾಖೆಗೆ ಗುತ್ತಿಗೆ ನೀಡಿ ಹೊಸ ರೂಪ ಕೊಡಲು ಮುಂದಾದರು. ಶತಮಾನದ ಅಂಚಿನಲ್ಲಿದ್ದ ಮನೆಯ ಹಳೇ ಕಂಬಗಳು, ಮಹಡಿಯ ಮೆಟ್ಟಿಲುಗಳು, ಹೆಂಚುಗಳನ್ನು ಬಳಸಿಕೊಂಡೇ ಮೂಲ ಮನೆಯ ಅಂದ, ಚಂದಕ್ಕೆ ಯಾವುದೇ ಧಕ್ಕೆ ಬಾರದಂತೆ ಕವಿ ಮನೆಯನ್ನು ಸುಂದರ ಸ್ಮಾರಕವಾಗಿಸಲಾಯಿತು.
ಈ ಮನೆಯಲ್ಲಿ ಕವಿ ಪುತಿನ ಅವರ ಊರುಗೋಲು, ಬರೆಯಲು ಬಳಸುತ್ತಿದ್ದ ಮಣೆ, ಟೋಪಿ ಸೇರಿದಂತೆ ಮಹಡಿಯಲ್ಲಿ ಕುಳಿತು ಬರೆಯುತ್ತಿದ್ದ ಜಾಗವನ್ನೂ ಸಂರಕ್ಷಿಸಲಾಗಿದೆ. ಅಲ್ಲದೆ, ಕವಿಯ ‘ಮನೆ ದೇಗುಲ’, ‘ರಥ ಸಪ್ತಮಿ’, ‘ಹರಿ ಚರಿತೆ’, ‘ಮಾಂದಳಿರು’, ‘ಜಾನ್ಹವಿಗೆ ಜೋಡಿ ದೀವಿಗೆ’, ‘ಗೋಕುಲ ನಿರ್ಗಮನ’ ಸೇರಿದಂತೆ ಅನೇಕ ಕೃತಿಗಳ ಪ್ರಥಮ ಮುದ್ರಣವೂ ಇಲ್ಲಿ ನೋಡಲು ಸಿಗುತ್ತದೆ.
- ನಂಬುಗೆಯೇ ಇಂಬು
- KSRTC : ಪ್ರಯಾಣಿಕರು UPI ಮೂಲಕ ಟಿಕೆಟ್ ಖರೀದಿಸಲು ಅವಕಾಶ
- Weekly Horoscope: ವಾರದ ಜಾತಕ ನ. 24 ರಿಂದ ನ. 30, 2024.
- ಚನ್ನಪಟ್ಟಣದಲ್ಲಿ ಸಿ ಪಿ ಯೋಗೇಶ್ವರ್ ಗೆ ಭರ್ಜರಿ ಗೆಲುವು
- ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಗೆಲುವು: ಅಧಿಕೃತ ಘೋಷಣೆ ಬಾಕಿ
More Stories
ನಂಬುಗೆಯೇ ಇಂಬು
ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಗೊ.ರು.ಚ ಆಯ್ಕೆ
ಜಲಗಾರ ಮತ್ತು ಕಾಲ ಜ್ಞಾನಿ ಕನಕ ನಾಟಕಗಳಲ್ಲಿ ದೈವ-ದೇಗುಲ ಸಂಕಥನ