ದೇವರ ಮೇಲೆ ವಿಶ್ವಾಸವಿತ್ತು.
ಆದರೆ ಆತ ಏನೂ ಮಾಡಲಿಲ್ಲ. ಪಕ್ಷಪಾತ ಮಾಡಿದ, ದುಷ್ಟರ ಪರವಾಗಿ ಮುಖವಾಡದವರ ಸಲುವಾಗಿ ನಿಂತ, ಮುಗ್ದರನ್ನು ಬಹಳ ಗೋಳಾಡಿಸಿದ……….
ಕಾನೂನಿನ ಮೇಲೆ ಭರವಸೆ ಇತ್ತು. ಕ್ರಿಮಿನಲ್ ಗಳಿಗೆ ಶಿಕ್ಷೆಯಾಗುತ್ತದೆ. ಅಮಾಯಕರಿಗೆ ರಕ್ಷಣೆ ದೊರೆಯುತ್ತದೆ. ಹೇಗೋ ನೆಮ್ಮದಿಯಿಂದ ಬದುಕಬಹುದು ಎಂದು.
ಅದೂ ಕೈಗೂಡಲಿಲ್ಲ. ಕಾನೂನು ಬಲಿಷ್ಠರ ಪಾಲಾಯಿತು. ಅಲ್ಲೂ ನಿರಾಸೆಯಾಯಿತು………
ದೇವರು ಕಾನೂನು ವಿಫಲರಾದರೂ, ಮನುಷ್ಯನ ನೈತಿಕತೆ – ನಾಗರಿಕ ಪ್ರಜ್ಞೆಯಾದರೂ ಒಳ್ಳೆಯದು ಕೆಟ್ಟದ್ದನ್ನು ಗುರುತಿಸಿ ನಮಗೆ ನ್ಯಾಯ ನೀಡುತ್ತದೆ. ನಮ್ಮ ನಡುವೆ ಶಿಕ್ಷಕರು ವೈದ್ಯರು ನ್ಯಾಯಾಧೀಶರು ವಿಜ್ಞಾನಿಗಳು ತಂತ್ರಜ್ಞರು ಸ್ವಾಮಿಗಳು ಸಮಾಜ ಸೇವಕರು ಪೋಲೀಸರು ರಾಜಕಾರಣಿಗಳು ಇದ್ದಾರೆ. ಅವರಾದರೂ ಸಮಾಜದಲ್ಲಿ ನಮ್ಮ ನಡುವಿನ ಕ್ರೂರಿಗಳು – ಕರುಣಾಮಯಿಗಳ ವ್ಯತ್ಯಾಸ ಗುರುತಿಸಿ ಅದಕ್ಕೆ ತಕ್ಕಂತೆ ವರ್ತಿಸುತ್ತಾರೆ ಎಂಬ ನಂಬಿಕೆ ಇತ್ತು.
ಕೊನೆಗೆ ಅವರೂ ಕೈಬಿಟ್ಟರು……….
ನನ್ನ ಬಂಧು, ನನ್ನ ಜಾತಿಯವ, ನನ್ನ ಸ್ನೇಹಿತ, ನನ್ನ ಭಾಷೆಯವ, ನನ್ನ ಶಿಷ್ಯ, ನನ್ನ ಗುರು, ನನ್ನ ಸಂಘದವ, ನನ್ನ ಊರಿನವ, ನನ್ನ ಗ್ರಾಹಕ ಇವರೆಲ್ಲರ ಪರವಾಗಿ ನ್ಯಾಯದ ತಕ್ಕಡಿಯನ್ನು ತಮ್ಮ ಸ್ವಾರ್ಥಕ್ಕೆ ಬಗ್ಗಿಸಿಕೊಂಡ ಸಮಾಜ ನಮ್ಮದು…
ಮನಸ್ಸುಗಳೇ ಭ್ರಷ್ಟಗೊಂಡಿರುವಾಗ ನಾವು ನಂಬುವುದಾದರೂ ಯಾರನ್ನು. ಒಳ್ಳೆಯವರನ್ನು ಕೆಟ್ಟವರನ್ನು ಒಂದೇ ತಕ್ಕಡಿಯಲ್ಲಿ ಇಟ್ಟು ತಮ್ಮ ಅನುಕೂಲಕ್ಕೆ ತಕ್ಕಂತೆ ಅಳತೆ ಮಾಡಿದರೆ ವ್ಯವಸ್ಥೆಯ ಮೇಲೆ ನಂಬಿಕೆ ಬರುವುದಾದರೂ ಹೇಗೆ……
ಆತ್ಮವಂಚಕರ ಏಳು ಸುತ್ತಿನ ಕೋಟೆಯೊಳಗೆ ಸಿಲುಕಿರುವ ಮಕ್ಕಳು ಯುವಕರನ್ನು ಕಾಪಾಡುವುದು ಹೇಗೆ……
ಅವನೊಬ್ಬ ದೊಡ್ಡ ಸಾಹಿತಿ,
ಅಕ್ಷರದಲ್ಲಿಯೇ ಆದರ್ಶ ಹೇಳುತ್ತಾನೆ. ಮಾಡುವುದು ಮಾತ್ರ ಹೊಲಸು ಕೆಲಸಗಳು………
ಅವನೊಬ್ಬ ರಾಜಕಾರಣಿ,
ಮಾತಿನಲ್ಲೇ ಅರಮನೆ ಕಟ್ಟುತ್ತಾನೆ, ವಾಸ್ತವವಾಗಿ ಬಾಯಿ ಬಿಟ್ಟರೆ ಬಣ್ಣ ಗೇಡು…..
ಅವನೊಬ್ಬ ಧರ್ಮಾಧಿಕಾರಿ,
ನ್ಯಾಯ ನೀತಿಯ ಬಗ್ಗೆ ಪುಂಖಾನುಪುಂಖವಾಗಿ ಬೋಧಿಸುತ್ತಾನೆ. ಆದರೆ ನಿಜ ಬದುಕಿನಲ್ಲಿ ಮಹಾ ದುಷ್ಟ……
ಪ್ರೀತಿಯನ್ನೇ ಗುರುತಿಸಲಾಗದ,
ದ್ವೇಷವನ್ನೇ ಒಪ್ಪಿಕೊಳ್ಳುವ ಹಂತಕ್ಕೆ ನಮ್ಮ ಅಕ್ಷರಸ್ಥ ಬುದ್ದಿವಂತರು ತಲುಪಿದ್ದಾರೆ.
ಹೀಗೆ ಸಾಗುತ್ತಲೇ ಇದೆ ಬದುಕು……
ಮಾತು ಅಕ್ಷರ ಜ್ಞಾನ ಪ್ರೀತಿ ವಿಶ್ವಾಸ ಕರುಣೆ ಮಾನವೀಯತೆ ನಿಮ್ಮ ವ್ಯಕ್ತಿತ್ವದ ಭಾಗವಾಗುವವರೆಗೂ ಭಾರತೀಯ ಸಮಾಜ ಪ್ರತಿದಿನ ಅಪಾಯದ ಅಂಚಿಗೆ ಸರಿಯುತ್ತಿರುತ್ತದೆ.
ನನ್ನಂತವರ ಬರಹಕ್ಕೆ ವಿಷಯವಾಗುತ್ತಲೇ ಇರುತ್ತದೆ.
ಮುಖವಾಡ ಕಳಚುವವರೆಗೂ……..
- ವಿವೇಕಾನಂದ ಹೆಚ್ ಕೆ
- ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಬಿಡುಗಡೆ
- ಮೈಸೂರಿನ ಪ್ರಮುಖ ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರು: ಪಾಲಿಕೆ ತೀರ್ಮಾನಕ್ಕೆ ಆಕ್ಷೇಪಣೆಗಳು
- ಸಿ.ಟಿ. ರವಿ ಪ್ರಕರಣ CID ಗೆ ಹಸ್ತಾಂತರ: ಗೃಹ ಸಚಿವ ಜಿ. ಪರಮೇಶ್ವರ್ ಸ್ಪಷ್ಟನೆ
- ಶಾಲಾ ಕೊಠಡಿಯಲ್ಲಿ ಯುವತಿಯ ಅತ್ಯಾಚಾರ: ಆರೋಪಿ ಬಂಧನ
- ಡಿ.ಕೆ. ಸುರೇಶ್ ತಂಗಿ ಎಂದು ಹೇಳಿಕೊಂಡು 8.41 ಕೋಟಿ ಚಿನ್ನಾಭರಣ ವಂಚನೆ: ಎಫ್ಐಆರ್ ದಾಖಲು
More Stories
ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ