December 25, 2024

Newsnap Kannada

The World at your finger tips!

deepa1

ನೆನಪಿನ ದೋಣಿಯಲ್ಲಿ ಒಂದಷ್ಟು ಪಯಣ……..

Spread the love

ನೆನಪಿನ ದೋಣಿಯಲ್ಲಿ ಒಂದಷ್ಟು ಪಯಣ……..ನಾನೂ ಮಗುವಾದ ದಿನಗಳು……

ಡಾಕ್ಟರ್ ತಮ್ಮ ಒಳ ಛೇಂಬರ್ ಗೆ ಬರ ಹೇಳಿ ಎದುರಿನಲ್ಲಿ ಕುಳಿತುಕೊಳ್ಳಲು ಹೇಳಿದರು. ಇನ್ನಿಬ್ಬರು ಡಾಕ್ಟರ್ ಆಗಲೇ ಅಲ್ಲಿದ್ದರು‌. ಒಬ್ಬ ನರ್ಸ್ ನನ್ನ ಬಿಪಿ ಚೆಕ್ ಮಾಡಲು ಬಂದರು.

ನನಗೆ ಆಶ್ಚರ್ಯ. ಎಂಟು ತಿಂಗಳು ಹತ್ತು ದಿನ ತುಂಬಿದ್ದ ನನ್ನ ಹೆಂಡತಿಯೆಂಬ ಪ್ರೇಯಸಿಯನ್ನು ಬೆಳಗಿನ ಜಾವ ಅತಿಯಾದ ಹೊಟ್ಟೆ ನೋವು ಎಂಬ ಕಾರಣಕ್ಕಾಗಿ ಆಸ್ಪತ್ರೆಗೆ ದಾಖಲಿಸಿದ್ದೆ. ಡ್ಯೂಟಿ ಡಾಕ್ಟರ್ ಆಕೆಯನ್ನು ಪರೀಕ್ಷಿಸಿ ಸೀರಿಯಸ್ ಕೇಸ್ ಎಂದು ICU ಗೆ ದಾಖಲು ಮಾಡಿಕೊಂಡು ಪರಿಣಿತ ಡಾಕ್ಟರ್ ಗೆ ಬೇಗ ಬರಲು ಹೇಳಿ ಚಿಕಿತ್ಸೆ ಶುರು ಮಾಡಿದ್ದರು. ನಾನು ಒತ್ತಡದಿಂದಲೇ ಕಾರಿಡಾರ್ ನಲ್ಲಿ ಅತ್ತಿಂದಿತ್ತ ಓಡಾಡುತ್ತಲೇ ಇದ್ದೆ.

ಗರ್ಭಿಣಿಯಾದಾಗಿನಿಂದಲೇ ಸ್ವಲ್ಪ complicated case ಎಂದು ವೈದ್ಯರು ಹೇಳಿದ್ದರು. ಆದರೆ ಜೀವಕ್ಕೆ ಅಪಾಯವಿಲ್ಲ ಎಂಬ ಭರವಸೆ ಕೊಟ್ಟಿದ್ದರಿಂದ ಒಂದಷ್ಟು ಸಮಾಧಾನವಾಗಿತ್ತು..

ಸುಮಾರು 4 ಗಂಟೆಯಷ್ಟು ದೀರ್ಘಕಾಲದ ನಂತರ ಐಸಿಯು ನಿಂದ ಹೊರಬಂದ ಮೇಲೆಯೇ ಸೀನಿಯರ್ ಡಾಕ್ಟರ್ ತಮ್ಮ ಚೇಂಬರ್ ಗೆ ಬರ ಹೇಳಿದ್ದು.

ನಾನು ಅರ್ಥವಾಗದೆ ಕುಳಿತಿದ್ದೆ. ಆ ಒತ್ತಡದಲ್ಲಿಯೂ ಬಿಪಿ ಸಮಾಧಾನಕರವಾಗಿತ್ತು. ನನ್ನ ಎಡಭಾಗದಲ್ಲಿದ್ದ ಲೇಡಿ ಡಾಕ್ಟರ್ ಭುಜದ ಮೇಲೆ ಕೈ ಇಟ್ಟು ಸಿನಿಮೀಯ ರೀತಿಯಲ್ಲಿ
” ಕ್ಷಮಿಸಿ, ನಿಮಗೆ ಒಂದು ಒಳ್ಳೆಯ ಮತ್ತು ಇನ್ನೊಂದು ಕೆಟ್ಟ ಸುದ್ದಿ ಇದೆ ” ಎಂದರು. ಅವರ ಮಾತಿನಿಂದಲೇ ನನಗೆ ಖಚಿತವಾಯಿತು. ನನ್ನ ಮಗು ಇನ್ನಿಲ್ಲ. ದುಃಖವಾದರೂ ನಾನೆಂದು ನೋಡಿರದ ಮಗುವಿಗಿಂತ ನನಗೆ ಅದರ ತಾಯಿಯೇ ಮುಖ್ಯವಾಗಿತ್ತು. ಸದ್ಯ ತಾಯಿಯಾದರೂ ಉಳಿಯಿತಲ್ಲ ಎಂದು ಸಮಾಧಾನ ಮಾಡಿಕೊಂಡು it’s o k Doctor ಎಂದೆ. ಡಾಕ್ಟರುಗಳು ಒಬ್ಬರ ಮುಖ ಒಬ್ಬರು ನೋಡಿಕೊಂಡರು.

ಮುಖ್ಯ ಡಾಕ್ಟರ್ ಕೇಳಿದರು ” ನೀವು ಏನು ಊಹಿಸಿದಿರೂ ಗೊತ್ತಿಲ್ಲ. ನಿಮ್ಮ ಮಗುವಿನ ರೂಪದಲ್ಲಿ ನಿಮ್ಮ ಪತ್ನಿ ಸದಾ ನಿಮ್ಮೊಂದಿಗಿರುತ್ತಾರೆ. ಕ್ಷಮಿಸಿ, ಆಕೆಯನ್ನು ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನಿಸಿದೆವು. ಆಕೆಯ ರಕ್ತದೊತ್ತಡ ಸ್ಪಂದಿಸಲಿಲ್ಲ ” ಎಂದರು.

ಆ…………‌‌‌‌‌‌…………


sumaravi conventional hall 2

ಅದನ್ನು ಏನೆಂದು ವಿವರಿಸಲಿ. ಬರ ಸಿಡಿಲು ಬಡಿದಂತಾಯಿತು ಎಂದರೆ ಸರಳವಾಗುತ್ತದೆ. ಆಕಾಶ ಕಳಚಿ ತಲೆಯ ಮೇಲೆ ಬಿದ್ದಂತಾಯಿತು ಎಂದರೆ ಸಹಜವಾಗುತ್ತದೆ. ಭೂಮಿಯೇ ತಿರುಗಿದಂತಾಯಿತು ಎಂದರೆ ಕ್ಲಿಷೆಯಾಗುತ್ತದೆ. ಆ ಮನಸ್ಥಿತಿಯನ್ನು ಹೇಳುವಷ್ಟು ಭಾಷಾ ಜ್ಞಾನ ನನಗಿಲ್ಲ. ಕ್ಷಮಿಸಿ.

ಸ್ವಲ್ಪ ಸಮಯದ ನಂತರ ಇನ್ನೊಬ್ಬ ಡಾಕ್ಟರ್ ಕೇಳಿದರು ” ಮಗು Incubator ನಲ್ಲಿದೆ. ಪತ್ನಿಯ ದೇಹ ಇನ್ನೊಂದು ವಾರ್ಡಿನಲ್ಲಿದೆ. ನೀವು ಹೋಗಿ ನೋಡಬಹುದು ” ಎಂದರು.

ಕೇವಲ ನಾಲ್ಕು ಗಂಟೆಗಳ ಅಂತರದಲ್ಲಿ ಎಂತಹ ಆಯ್ಕೆ. ನನ್ನ ಜೊತೆ ಜೀವಂತ ಇದ್ದ ಪತ್ನಿ ಈಗ ನಿರ್ಜೀವ. ಆಕೆಯ ದೇಹ ಎಂಬ ಪದವನ್ನು ಅರಿಗಿಸಿಕೊಳ್ಳುವುದೇ ಕಷ್ಟವಾಗಿತ್ತು. ಆಕೆಯ ಹೊಟ್ಟೆಯಿಂದ ಈಗ ಇನ್ನೊಂದು ಜೀವ. ಯಾರನ್ನು ಮೊದಲು ನೋಡುವುದು. ಅದರೂ ತೀರ್ಮಾನ ತೆಗೆದುಕೊಳ್ಳಲೇ ಬೇಕಿತ್ತು.

ಒಂದು ಕ್ಷಣ ಯೋಚಿಸಿ ಡಾಕ್ಟರಿಗೆ ಹೇಳಿದೆ. ನಮ್ಮದು ಅಂತರ್ಜಾತೀಯ ಪ್ರೇಮ ವಿವಾಹ. ಎರಡೂ ಮನೆಯವರಿಗೂ ಇಷ್ಟವಿಲ್ಲದಿದ್ದುದರಿಂದ ನಾವು ಪ್ರತ್ಯೇಕವಾಗಿ ವಾಸವಾಗಿದ್ದೆವು. ಈ ಸಂಕಷ್ಟದಲ್ಲೂ ನನಗೆ ಅವರ ಬೆಂಬಲ ಸಿಗದಿರಬಹುದು ಅಥವಾ ಅದು ಈ ಕ್ಷಣ ನನಗೆ ಬೇಕಾಗಿಯೂ ಇಲ್ಲ. ದಯವಿಟ್ಟು ಮಗುವನ್ನು ಇಲ್ಲಿಯೇ ಮೂರು ದಿನ ನೋಡಿಕೊಳ್ಳಿ. ಪತ್ನಿಯನ್ನು ಚಿರಶಾಂತಿಗೆ ಕಳುಹಿಸಿ ಬರುತ್ತೇನೆ. ಅಲ್ಲಿಯವರೆಗೂ ಮಗುವಿನ ಜವಾಬ್ದಾರಿ ನಿಮ್ಮದೇ ” ಎಂದು ನನಗರಿವಿಲ್ಲದೇ ಕೈಮುಗಿದು ವಿನಂತಿಸಿದೆ. ಅವರು ಒಪ್ಪಿಕೊಂಡರು…..

ಅಲ್ಲಿಂದ ಮೂರು ದಿನದ ನನ್ನ ಗೋಳು ಒಂದು ಕ್ಷಣವೂ ನಿಲ್ಲಲಿಲ್ಲ. ಪೋಲೀಸರ ಮುಖಾಂತರ ಎರಡೂ ಮನೆಗೆ ತಿಳಿಸಿ ಕಾನೂನಿನ ರೀತಿಯಲ್ಲಿ ಎಲ್ಲಾ ಕೆಲಸ ಮುಗಿಸಿದೆ. ಮಗುವೆಂಬ ಜೀವ ನನ್ನ ಆತ್ಮದಲ್ಲಿ ಇಳಿದಿತ್ತು. ಆದ್ದರಿಂದ ಯಾವುದೇ ಅನುಮಾನಕ್ಕೆ ಆಸ್ಪದ ಕೊಡದೆ ಜಾಗರೂಕತೆಯಿಂದ ಪರಿಸ್ಥಿತಿ ನಿಭಾಯಿಸಬೇಕಿತ್ತು. ಒಂದು ಸಣ್ಣ ಅನುಮಾನ ಕೂಡ ನನ್ನನ್ನು ಜೈಲಿಗೆ ಒಯ್ಯಬಹುದಿತ್ತು. ಮಗು ಅನಾಥವಾಗುವ‌ ಸಾಧ್ಯತೆ ಇತ್ತು. ಅದೃಷ್ಟವಶಾತ್ ಯಾವುದೇ ಅನುಮಾನಕ್ಕೆ ಆಸ್ಪದವಿಲ್ಲದೆ ಡಾಕ್ಟರುಗಳು ಎಲ್ಲರಿಗೂ ವಿವರಿಸಿ ಪರಿಸ್ಥಿತಿ ನಿಭಾಯಿಸಿದರು.


ನನ್ನ ಮಗುವಿನ ಶಾಲೆಯ ಕಾಂಪೌಂಡಿನ ಹೊರಗೆ ಗೋಡೆಗೆ ಒರಗಿ ಒಂಟಿ ಕಾಲಿನಲ್ಲಿ ನಿಂತು ಅಳುತ್ತಿರುವಾಗ ಇದೆಲ್ಲಾ ನೆನಪಾಯಿತು. ಮೂರು ವರ್ಷದ ಮಗುವನ್ನು ಪ್ರಥಮ ಬಾರಿಗೆ ಶಾಲೆಯ ದಾದಿಯ ಕೈಗೆ ನೀಡಿದಾಗ ಮಗು ಅಪ್ಪಾ…..ಅಪ್ಪಾ ….ಎಂದು ಅಳುತ್ತಾ ನನ್ನತ್ತ ಕೈಚಾಚಿದಾಗ ನನ್ನಿಂದ ಅಳು ತಡೆಯಲಾಗಲಿಲ್ಲ. ಶಾಲೆಗೆ ಕಳಿಸುವುದು ಅನಿವಾರ್ಯ. ಮೂರು ವರ್ಷದಲ್ಲಿ ಇದೇ ಮೊದಲ ಬಾರಿಗೆ ನನ್ನ ಮಗು ನನ್ನಿಂದ ಮೂರು ಗಂಟೆಯಷ್ಟು ದೀರ್ಘಕಾಲ ದೂರ ಇರುತ್ತದೆ. ಯಾರಿಗೆ ಬೇಕು ಈ ಹಿಂಸೆ…. ಛೆ….


ಆ ಮೂರನೆಯ ದಿನ ನನ್ನ ಬೆಳಕಿನ ಕಿಡಿ ಚಿರಸ್ಥಾಯಿಯಾಗಿದ್ದ ಜಾಗದಲ್ಲಿ ಆಕೆಯ ನೆನಪುಗಳ ಬಾರದೊಂದಿಗೆ ಆಸ್ಪತ್ರೆಗೆ ಬಂದಾಗ 8 ತಿಂಗಳು 10 ದಿನಕ್ಕೆ ಜನಿಸಿದ ಮಗು ಅದೃಷ್ಟವಶಾತ್ ಆರೋಗ್ಯವಾಗಿಯೇ ಇತ್ತು. ಡಾಕ್ಟರ್ ಮತ್ತು ನರ್ಸುಗಳು ಮಗುವನ್ನು ನನ್ನ ಕೈಗಿತ್ತು ಅದನ್ನು ಜೋಪಾನ ಮಾಡಬೇಕಾದ ರೀತಿ ನೀತಿಗಳನ್ನು ಹೇಳಿಕೊಟ್ಟು ಭಾರವಾದ ಹೃದಯದಿಂದ ನನ್ನನ್ನು ಬೀಳ್ಕೊಟ್ಟಾಗ ಎರಡೂ ಕೈಗಳಿಂದ ಸುತ್ತಿದ ಬಟ್ಟೆಯಲ್ಲಿದ್ದ ಮಗುವನ್ನು ಮೊದಲ ಬಾರಿಗೆ ನೋಡಿದೆ. ಮಲಗಿದ್ದ ಮಗು ನಿದ್ರೆಯಲ್ಲಿಯೇ ನಸುನಕ್ಕಿತು. ನನ್ನ ಪತ್ನಿಯೇ ನಕ್ಕಂತಾಯಿತು. ನನ್ನ ದೇಹದಲ್ಲಿ ಮಿಂಚಿನ ಸಂಚಾರವಾದಂತಾಯಿತು.

ಅಲ್ಲಿಂದ ಇಲ್ಲಿಯವರೆಗೆ……
ಆ ಮೂರು ವರ್ಷಗಳು ………..
ವಾ…. ವ…

ಎಷ್ಟೊಂದು ಅದ್ಬುತ ಕ್ಷಣಗಳು..
ಬದುಕಿನ ಪ್ರತಿ ಕ್ಷಣವನ್ನೂ ಅನುಭವಿಸಿದ್ದೇನೆ. ಸುಮಾರು ಸಾವಿರದ ಇನ್ನೂರು ದಿನಗಳು ……
ಮಗುವಿನಲ್ಲಿ ಐಕ್ಯವಾದ ಕ್ಷಣಗಳು. ‌‌‌‌..

ಅದು ಅತ್ತಾಗ ನಾನು ಅತ್ತೆ,
ಅದು ನಕ್ಕಾಗ ನಾನು ನಕ್ಕೆ,
ಅದು ನಿದ್ರಿಸಿದಾಗ ನಾನು ನಿದ್ರಿಸಿದೆ,
ಅದು ಕುಡಿದು ತಿಂದಾಗ ನಾನು ತಿಂದು ಕುಡಿದೆ,
ಅದು ತೊದಲಿದಾಗ ನಾನು ತೊದಲಿದೆ,
ಅದು ಮಾತನಾಡಿದಾಗ ನಾನು ಮಾತನಾಡಿದೆ,
ಅದು ಮೌನವಾದಾಗ ನಾನು ಮೌನವಾದೆ,
ಅದು ಸ್ವಲ್ಪ ಸ್ವಲ್ಪ ಸರಿದಂತೆ ನಾನು ಸರಿದೆ,
ಅದು ನಡೆದಾಡಿದಾಗ ನಾನು ನಡೆದಾಡಿದೆ.
ಆದರೆ,
ಅದು ಬಿದ್ದು ನೋವಿನಿಂದ ಚೀರಿದಾಗ ಮಾತ್ರ ನನಗೆ ಅದಕ್ಕಿಂತ ಹೆಚ್ಚು ನೋವಾಗುತ್ತಿದ್ದುದು ಮಾತ್ರ ದಿಟ.

ತೊಡೆಯ ಮೇಲೆ, ಎದೆಯ ಮೇಲೆ ಅದು ಮಲಗುವ ಸಮಯದಲ್ಲಿ, ಸ್ನಾನದ ಮನೆಯಲ್ಲಿ ಅದಕ್ಕಾಗಿ ನಾನು ಹಾಡುತ್ತಿದ್ದ ಲಾಲಿ ಹಾಡು ಮಾತ್ರ ನನ್ನನ್ನು ಒಬ್ಬ ಹಾಡುಗಾರನನ್ನಾಗಿ ಮಾಡಿದ್ದು ಮಾತ್ರ ಸುಳ್ಳಲ್ಲ……..

ಮೂರು ತುಂಬಿದ ಈ ಸಂಧರ್ಭದಲ್ಲಿ ಅದನ್ನು ಶಿಶುವಿಹಾರಕ್ಕೆ ಸೇರಿಸಿ ಹೊರಗೆ ಬಂದು ನಿಮ್ಮೊಂದಿಗೆ ನನ್ನ ಭಾವನೆಗಳನ್ನು ಹಂಚಿಕೊಂಡಿದ್ದೇನೆ.

  • ವಿವೇಕಾನಂದ ಹೆಚ್ ಕೆ
Copyright © All rights reserved Newsnap | Newsever by AF themes.
error: Content is protected !!