ಅಂಕಲ್,
” ಸಿಗರೇಟು ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕರ ” ಅಂತ ಎಲ್ಲಾ ಕಡೆ ಬರೆದಿರುತ್ತಾರೆ. ಅದು ಕ್ಯಾನ್ಸರ್ ಗೆ ಕಾರಣವಾಗುತ್ತದೆ ಎಂದು ಹೇಳುತ್ತಾರೆ. ಆದರೂ ಸಿಗರೇಟ್ ಎಲ್ಲಾ ಕಡೆ ಸಿಗುತ್ತದೆ. ಹಾಗಾದರೆ ಅದರ ಮೇಲೆ ಬರೆದಿರುವುದು ಸುಳ್ಳೇ ?
ಆಂಟಿ,
” ಮದ್ಯಪಾನದಿಂದ ಮನೆಗಳು ಸರ್ವನಾಶ ಆಗುತ್ತದೆ. ದೇಹ ರೋಗಗಳ ಗೂಡಾಗುತ್ತದೆ ” ಎಂದು ಪ್ರತಿನಿತ್ಯ ಮಾಧ್ಯಮಗಳಲ್ಲಿ ಹೇಳುತ್ತಾರೆ. ಆದರೂ ಪ್ರತಿ ಬೀದಿಗಳಲ್ಲೂ ಬಾರುಗಳಿವೆ.
ಏಕೆ ?
ಅಣ್ಣ,
ನಮ್ಮ ದೇಶದಲ್ಲಿ ಬಹಳಷ್ಟು ವಿನಾಶಕಾರಿಯಾದ ಮತ್ತು ಕೆಲ ದೇಶಗಳಲ್ಲಿ ನಿಷೇಧಿಸಲಾದ ಆರೋಗ್ಯಕ್ಕೆ ಮಾರಕವಾದ ಔಷಧಿಗಳನ್ನು ಮೆಡಿಕಲ್ ಸ್ಟೋರುಗಳಲ್ಲಿ ಈಗಲೂ ಮಾರಲಾಗುತ್ತಿದೆ. ಏಕೆ ಯಾರೂ ಏನೂ ಮಾಡುತ್ತಿಲ್ಲ.
ಅಕ್ಕ,
ತನ್ನದಲ್ಲದ ಇನ್ನೊಬ್ಬರ ಹಣ ಆಸ್ತಿ ಹೇಸಿಗೆಗೆ ಸಮಾನ ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಾರೆ. ಆದರೆ ಭ್ರಷ್ಟಾಚಾರ ಇಲ್ಲದ ಕ್ಷೇತ್ರವೇ ಇಲ್ಲ. ಹಾಗಾದರೆ ಹೇಳುವುದಕ್ಕೂ ಮಾಡುವುದಕ್ಕೂ ಸಂಬಂಧವಿಲ್ಲವೇ ?
ಅಮ್ಮ,
ನಾವು ಮಾಡುವ ಪ್ರತಿಯೊಂದು ಕೆಲಸವನ್ನೂ ದೇವರು ನೋಡುತ್ತಲೇ ಇರುತ್ತಾನೆ. ಆತನಿಗೆ ತಿಳಿಯದಂತೆ ಇಲ್ಲಿ ಏನೂ ನಡೆಯುವುದಿಲ್ಲ ಎಂದು ಹೇಳಿದೆಯಲ್ಲ. ಆದರೆ ಇಲ್ಲಿ ಪ್ರತಿನಿತ್ಯ ಕೊಲೆ ಸುಲಿಗೆ ವಂಚನೆ ಅತ್ಯಾಚಾರ ನಡೆಯುತ್ತಲೇ ಇದೆಯಲ್ಲ. ಹಾಗಾದರೆ ದೇವರು ಇರುವುದು ಸುಳ್ಳೇ ?
ಅಪ್ಪ,
ವಿದ್ಯೆ ಮನುಷ್ಯನನ್ನು ಸಂಸ್ಕಾರವಂತನನ್ನಾಗಿ ಮಾಡುತ್ತದೆ ಎಂದು ಹೇಳಿದೆ. ಈಗ ಬಹುತೇಕ ಎಲ್ಲರೂ ವಿದ್ಯಾವಂತರೆ. ಆದರೆ ಸಂಸ್ಕಾರ ಮಾತ್ರ ಮಾಯವಾಗಿದೆ. ಹಾಗಾದರೆ ನೀವು ಹೇಳಿದ್ದು ಸುಳ್ಳೇ ?
ಅಜ್ಜ ಅಜ್ಜಿ,
ಪ್ರತಿ ನ್ಯಾಯಾಲಯದ ಪ್ರತಿ ಕೇಸಿನಲ್ಲೂ ಪ್ರತಿ ಕಕ್ಷಿದಾರನೂ ” ನಾನು ಸತ್ಯವನ್ನೇ ಹೇಳುತ್ತೇನೆ. ಸತ್ಯವಲ್ಲದೆ ಬೇರೇನನ್ನೂ ಹೇಳುವುದಿಲ್ಲ ” ಎಂದು ಪ್ರಮಾಣ ಮಾಡುತ್ತಾನೆ. ಆದರೆ ಸುಳ್ಳು ಹೇಳುವುದೇ ಹೆಚ್ಚು. ಹೀಗೇಕೆ ?
ಆ ಬಾಲಕನಿಗೆ ಸರಿಯಾದ ಉತ್ತರ ಹೇಳಬೇಕಿದೆ.
ಇಲ್ಲ,
ಸಮಾಜ ಇರುವುದೇ ಹೀಗೆ. ನೀನು ಇನ್ನೂ ಚಿಕ್ಕವನು. ನಿನಗೆ ಅರ್ಥವಾಗುವುದಿಲ್ಲ. ಇದು ಅವರವರ ಪಾಪ ಕರ್ಮದ ಫಲ ಹಾಗೆ ಹೀಗೆ ಎಂದು ಮತ್ತೆ ಸುಳ್ಳಿನ ಭ್ರಮಾಲೋಕದ ಪಲಾಯನವಾದದ ಉತ್ತರ ಬೇಡ.
ಆತ್ಮಸಾಕ್ಷಿಯ ವಾಸ್ತವ ನೆಲೆಯ ಉತ್ತರ ಹೇಳಬೇಕಿದೆ.
ಬಹುಶಃ ಈ ಪ್ರಶ್ನೆಗಳಿಗೆ ನಿಜವಾದ ಉತ್ತರ ಸಿಕ್ಕಲ್ಲಿ ನಮ್ಮ ಜನರ ಜೀವನಮಟ್ಟ – ಸಮಾಜದ ನೆಮ್ಮದಿಯ ಮಟ್ಟ – ವ್ಯಕ್ತಿತ್ವದ ಉನ್ನತ ಮಟ್ಟ ಸಾಧ್ಯವಾಗಬಹುದು. ಇದನ್ನು ಸಮಷ್ಟಿ ಪ್ರಜ್ಞೆಯ ದೃಷ್ಟಿಯಿಂದ ನೋಡಬೇಕಿದೆ.
” ನುಡಿದಂತೆ ನಡೆಯುವ, ನಡೆದಂತೆ ನುಡಿಯುವ ” ವಾಸ್ತವ ಪ್ರಜ್ಞೆಗೆ ಮರಳಬೇಕಿದೆ. ಭ್ರಮೆಗಳನ್ನು – ಮುಖವಾಡಗಳನ್ನು ಕಳಚಬೇಕಿದೆ.
ಆಗ ಮಾತ್ರ ನಮ್ಮಲ್ಲಿ, ಸಮಾಜದಲ್ಲಿ ನಾಗರಿಕ ಪ್ರಜ್ಞೆ ಮೂಡಲು ಸಾಧ್ಯ.
ಹಾಗಾಗಲಿ ಎಂದು ನಿರೀಕ್ಷಿಸುತ್ತಾ……..
- ವಿವೇಕಾನಂದ. ಹೆಚ್.ಕೆ.
- ಲೋಕಾಯುಕ್ತ ಬಲೆಗೆ ಬಿದ್ದ ನಗರಸಭೆ ಆಯುಕ್ತ ಮತ್ತು ಸಹಾಯಕ ಕಾರ್ಯಪಾಲಕ ಇಂಜಿನಿಯರ್
- ಕೊಡಗಿನಲ್ಲಿ ನಿರ್ಮಾಣಗೊಳ್ಳಲಿದೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ
- KSRTC ಬಸ್-ಲಾರಿ ನಡುವೆ ಡಿಕ್ಕಿ: ಐವರು ಸ್ಥಳದಲ್ಲೇ ಸಾವು
- ವರದಕ್ಷಿಣೆ ಕಿರುಕುಳ ತಾಳಲಾರದೇ ಮಹಿಳೆ ಆತ್ಮಹತ್ಯೆ – ಪತಿ ವಿಷ ಸೇವಿಸಿ ಆತ್ಮಹತ್ಯೆ ಯತ್ನ
- ತಿರುಪತಿಯಲ್ಲಿ ಕಾಲ್ತುಳಿತ: 6 ಮಂದಿ ಸಾವು, ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ
More Stories
ಮಳೆ ನಿಂತರೂ ಮರದ ಹನಿ ನಿಲ್ಲದು
ನಮ್ಮ ಸಮೃದ್ಧ ಚಾಮರಾಜನಗರದ ಮಹದೇಶ್ವರ ಮಲೆಯ ಸುತ್ತಾಮುತ್ತಾ
ತಾಯ್ತನ ಮತ್ತು ಗಟ್ಟಿತನ