November 23, 2024

Newsnap Kannada

The World at your finger tips!

deepa1

75 ವರ್ಷಗಳ ಹರೆಯದ ಕೂಸು ಈ ಭಾರತ……

Spread the love

ಏಳಿ ಎದ್ದೇಳಿ ಎಚ್ಚರಗೊಳ್ಳಿ,
ದೇಶದ ಸಮಸ್ತರ ಒಳಿತಿಗಾಗಿ ಹೋರಾಡಿ……….

75 ವರ್ಷಗಳ ಹರೆಯದ ಕೂಸು ಈ ಭಾರತ……

ಈ ನೆಲದ ಹುಟ್ಟು ಎಷ್ಟೋ ವರ್ಷಗಳ ಹಳೆಯದಾದರು ನಿಜವಾದ ಭಾರತ – ಸ್ವಾತಂತ್ರ್ಯ ಭಾರತ ಸೃಷ್ಟಿಯಾದದ್ದು 1947 ರ ಆಗಸ್ಟ್ 15 ರಿಂದ ಮಾತ್ರ…..

ಎಷ್ಟೊಂದು ತ್ಯಾಗ ಬಲಿದಾನಗಳ ಶ್ರಮದ ನಾಡು ಈ ಭಾರತ…..

ಬೆಲೆ ಕಟ್ಟಲಾಗಿದ ಈ ತ್ಯಾಗದ ಫಲವನ್ನು ಉಣ್ಣುತ್ತಿರುವವರು ಈಗ ಮಾನವೀಯ ಮೌಲ್ಯಗಳಿಗೂ ಬೆಲೆ ಕಟ್ಟುವ ಹಂತ ತಲುಪಿದ್ದಾರೆ….

ಈ ಕ್ಷಣದಲ್ಲಿ ಸ್ವಾತಂತ್ರ್ಯ ಎಂದರೆ……..

ಮತದಾರನಿಗೆ ಹಣ – ಹೆಂಡ ಪಡೆದು ಯಾರಿಗೆ ಬೇಕಾದರೂ ಮತ ಹಾಕುವ ಸ್ವಾತಂತ್ರ್ಯ,
ಹಾಗೆಯೇ ಗೆದ್ದ ಅಭ್ಯರ್ಥಿ ಯಾವ ಪಕ್ಷದವರು ಹೆಚ್ಚು ದುಡ್ಡು ಕೊಡುತ್ತಾರೋ ಅಥವಾ ಮಂತ್ರಿಗಿರಿ ಕೊಡುತ್ತಾರೋ ಅವರ ಪಕ್ಷಕ್ಕೆ ಹಾರುವ ಸ್ವಾತಂತ್ರ್ಯ
ಹಾಗೆಯೇ ಮಂತ್ರಿಯಾದವನು ತನ್ನ ಕುಟುಂಬದ ಏಳು ತಲೆಮಾರಿಗಾಗುವಷ್ಟು ಸಂಪತ್ತು ಗಳಿಸುವ ಸ್ವಾತಂತ್ರ್ಯ…………

ಟಿವಿ, ಫೇಸ್ ಬುಕ್, ಟ್ವಿಟರ್, ವಾಟ್ಸ್ ಆಪ್ ಮುಂತಾದ ಮೀಡಿಯಾಗಳಲ್ಲಿ ಯಾರನ್ನು ಬೇಕಾದರೂ ಅವರ ವೈಯಕ್ತಿಕ ನೆಲೆಯಲ್ಲಿಯೂ ಬಾಯಿಗೆ ಬಂದಂತೆ ಮಾತನಾಡುವ ಸ್ವಾತಂತ್ರ್ಯ,
ಸಾಹಿತಿಗಳು – ಕಲಾವಿದರು – ಹೋರಾಟಗಾರರು – ಮಠಾದೀಶರು ಮುಂತಾದ ಜನಪ್ರಿಯರೂ ಕೂಡ ತಮ್ಮ ಸ್ಥಾನ ಮತ್ತು ಜವಾಬ್ದಾರಿಯ ಅರಿವಿಲ್ಲದೆ ಜನರ ಮಧ್ಯೆ ಬೆಂಕಿಹಚ್ಚುವ ಸಂಪೂರ್ಣ ಸ್ವಾತಂತ್ರ್ಯ……..

ಸಿಕ್ಕ ಸಿಕ್ಕ ವಿಷಯಗಳಿಗೆ ಇಡೀ ಭಾರತವನ್ನೇ ಬಂದ್ ಮಾಡಿ ಮನಸ್ಸೋ ಇಚ್ಚೆ ಗಲಭೆ ಮಾಡುವ ಮತ್ತು ಮಾಡಿಸುವ ಸ್ವಾತಂತ್ರ್ಯ…….

ಕೆಲವು ಕೊಲೆ – ಅತ್ಯಾಚಾರ – ಭ್ರಷ್ಟಾಚಾರ – ವಂಚನೆ – ಕಳ್ಳತನವನ್ನು ಮಾಡಿಯೂ ಪೋಲೀಸರಿಂದಲೋ ತಪ್ಪಿದರೆ ನ್ಯಾಯಾಲಯದಿಂದಲೋ ಬಚಾವ್ ಆಗಿ ಬರುವ ಸ್ವಾತಂತ್ರ್ಯ………

ದಾರಿಯಲ್ಲಿ ಓಡಾಡುವ ಹೆಣ್ಣುಮಕ್ಕಳನ್ನು ಅಸಹ್ಯವಾಗಿ ಚುಡಾಯಿಸಿ ಭಾರತ್ ಮಾತಾಕಿ ಜೈ ಎನ್ನುವ ಸ್ವಾತಂತ್ರ್ಯ………

ತಾವು ಹುಟ್ಟಿದ ಜಾತಿ ಹೇಳಿಕೊಂಡು ನಮಗೇಗೆಬೇಕೋ ಹಾಗೆ ಅದರ ಲಾಭ ಪಡೆಯುವ ಸ್ವಾತಂತ್ರ್ಯ…….

ಆಧುನಿಕ ಯುವಕರು ಯಾವುದೋ ಸಿದ್ಧಾಂತಕ್ಕೋ, ಇಲ್ಲ ಯಥೇಚ್ಛ ಹಣಕ್ಕೋ ಅಥವಾ ತಂತ್ರಜ್ಞಾನಕ್ಕೋ ತಮ್ಮನ್ನು ಮಾರಿಕೊಳ್ಳುವ ಸ್ವಾತಂತ್ರ್ಯ……

” ಸ್ವಾತಂತ್ರ್ಯವೆಂದರೆ ನಮಗಿಷ್ಟ ಬಂದಂತೆ ಆಡುವ ಸ್ವೇಚ್ಛಾಚಾರ ಅಥವಾ ಸ್ವಾತಂತ್ರ್ಯವೆಂದರೆ ಇನ್ನೊಬ್ಬರಿಗೆ ಮಾರಿಕೊಳ್ಳುವ ಗುಲಾಮಿತನ. “………,,

ಆದರೆ ನಿಜವಾದ ಸ್ವಾತಂತ್ರ್ಯ ಮತ್ತು ಅದಕ್ಕಾಗಿ ಮಾಡುವ ಹೋರಾಟವೆಂದರೆ…,.

ಮಹಾತ್ಮ ಗಾಂಧಿ ಎಂಬ ಬರಿಮೈ ಫಕೀರ ತನ್ನ ನಡವಳಿಕೆಯಿಂದ ಹರಿದು ಹಂಚಿಹೋಗಿದ್ದ ಇಡೀ ದೇಶವನ್ನೇ ಒಂದು ಮಾಡಿ ಸತ್ಯ ಅಹಿಂಸೆ ಸತ್ಯಾಗ್ರಹ ಅಸಹಕಾರದ ಮೂಲಕ ಸ್ವಾತಂತ್ರ್ಯ ಗಳಿಸಿಕೊಟ್ಟದ್ದು.

ಬಸವಣ್ಣ ಎಂಬ ವ್ಯಕ್ತಿ ಸೂಳೆ ಸಂಕವ್ವಳೆಂಬ ವೇಶ್ಯೆಯಿಂದ ಪ್ರಾರಂಭಿಸಿ ಇಡೀ ಸಮಾಜದ ಎಲ್ಲ ಸ್ತರದ ಜನರನ್ನೂ ಸಮಾನತೆಯತ್ತ ದೂಡಿದ್ದು.

ಅಂಬೇಡ್ಕರ್ ಎಂಬ ಅತ್ಯಂತ ಕೆಳಹಂತದ ವ್ಯಕ್ತಿ ತನ್ನ ಅಪಾರ ಪಾಂಡಿತ್ಯದಿಂದ ವಿಶ್ವದ ಬಹುದೊಡ್ಡ ಪ್ರಜಾಪ್ರಭುತ್ವಕ್ಕೆ ಸಂವಿಧಾನ ರಚಿಸುವಷ್ಟು ಪ್ರಬುದ್ದತೆ ಪಡೆದದ್ದು.

ಸಿದ್ಧಾರ್ಥನೆಂಬ ರಾಜಕುಮಾರ ಸರ್ವಸಂಗ ಪರಿತ್ಯಾಗಿಯಾಗಿ ಮೆದುಳು ಮನಸ್ಸುಗಳ ಅಂತರಂಗವನ್ನು ಬಗೆದು ತೆಗೆದು ಗೌತಮ ಬುದ್ದನಾದದ್ದು.

ವೇದವ್ಯಾಸನೆಂಬ ವ್ಯಕ್ತಿ ಒಂದಿಡೀ ಸಮಾಜದ, ಅದರ ಎಲ್ಲಾ ಮುಖಗಳನ್ನು ಸಾಧ್ಯವಿದ್ದ 64 ವಿದ್ಯೆಗಳನ್ನು ಮಹಾಭಾರತವೆಂಬ ಕೃತಿಯ ಅಕ್ಷರಗಳಲ್ಲಿ ಮೂಡಿಸಿದ್ದು.

ಸ್ವಾಮಿ ವಿವೇಕಾನಂದರೆಂಬ ವ್ಯಕ್ತಿ ಪ್ರಖರ ವೈಚಾರಿಕ ಮತ್ತು ಆಧ್ಯಾತ್ಮಿಕ ವಿಚಾರಗಳಿಂದ ಇಡೀ ವಿಶ್ವದ ಗಮನ ಸೆಳೆದದ್ದು.

ಈಗ ನಾವು ನಿಜವಾದ ಸ್ವಾತಂತ್ರ್ಯ ಮತ್ತು ಮಾನವೀಯ ಮೌಲ್ಯಗಳನ್ನು ಉಳಿಸಿಕೊಳ್ಳಬೇಕಿದ್ದರೆ…..

ಧೈರ್ಯದಿಂದ ಮಾತನಾಡಿ..,…..

ಇದು ಪಾಕಿಸ್ತಾನ ಅಲ್ಲ ಭಾರತ,
ಇದು ಜಿನ್ನಾ ಕಟ್ಟಿದ ದೇಶವಲ್ಲ,
ಮಹಾತ್ಮ ಗಾಂಧಿ ಹುಟ್ಟಿದ ದೇಶ,

ಇದು ಹಿಟ್ಲರ್ ಆಳಿದ ಸರ್ವಾಧಿಕಾರಿ ದೇಶವಲ್ಲ,
ಬಾಬಾ ಸಾಹೇಬ್ ಅಂಬೇಡ್ಕರ್ ನೀಡಿದ ಅಭಿವ್ಯಕ್ತಿ ಸ್ವಾತಂತ್ರ್ಯದ ದೇಶ,

ಇದು ಹಿಂಸೆಯ ಸಿರಿಯಾ ಅಲ್ಲ,
ಇದು ಮಹಾವೀರರ ಅಹಿಂಸೆಯ ಇಂಡಿಯಾ,

ಇದು ಭಯೋತ್ಪಾದಕ ಆಫ್ಘಾನಿಸ್ತಾನ ವಲ್ಲ, ಇದು ಶಾಂತಿಯುತ ಹಿಂದೂಸ್ತಾನ,

ಇದು ಬಿನ್ ಲಾಡೆನ್ ಕಾರ್ಯಸ್ಥಾನವಲ್ಲ,
ಇದು ಬುದ್ದರ ವಾಸಸ್ಥಾನ,

ಇದು ಉಸಿರು ಕಟ್ಟಿಸುವ ಉತ್ತರ ಕೊರಿಯಾ ಅಲ್ಲ,
ಇದು ಉಸಿರು ನೀಡುವ
ಜನ್ಮ ಭೂಮಿ,

ಇದು ನಿಮ್ಮ ಧ್ವನಿಯನ್ನು ಧಮನಿಸುವ ಚೀನಾ ಅಲ್ಲ,
ಇದು ನಿಮ್ಮ ಧ್ವನಿಗೆ ಧ್ವನಿ ಸೇರಿಸುವ ಇಂಡಿಯಾ……………

ಹೆದರಬೇಡಿ, ಭಯಪಡಬೇಡಿ,
ಸಂಕೋಚ ಪಡಬೇಡಿ…..

ಮಾತನಾಡಿ, ನಿಮಗೆ ಕಂಡ ಸತ್ಯವನ್ನು ದೃಢವಾಗಿ ಹೇಳಿ..

ಜನಪ್ರಿಯತೆಯೇ ಸತ್ಯವಲ್ಲ….

ಚುನಾವಣೆಯಲ್ಲಿ ಕೊಲೆಗಡುಕರು ಗೆದ್ದಿದ್ದಾರೆ, ಅತ್ಯಾಚಾರಿಗಳು ಗೆದ್ದಿದ್ದಾರೆ,
ಭ್ರಷ್ಟರು, ವಂಚಕರು, ದರೋಡೆಕೋರರು ಗೆದ್ದಿದ್ದಾರೆ. ಆದ್ದರಿಂದ ಸತ್ಯಕ್ಕೆ ಚುನಾವಣೆಯೇ ಮಾನದಂಡವಲ್ಲ. ಪ್ರಜಾಪ್ರಭುತ್ವ ಒಂದು ಉತ್ತಮ ಆಡಳಿತ ವ್ಯವಸ್ಥೆ. ಆದರೆ ಅದೇ ಸತ್ಯವಲ್ಲ.

ಸುಳ್ಳುಗಾರರು, ಮೋಸಗಾರರು, ಆತ್ಮವಂಚಕರು,
ದೇಶ ದ್ರೋಹಿಗಳು, ಮುಖವಾಡಗಳನ್ನು ಧರಿಸಿರುವವರು ಲಜ್ಜೆಗೆಟ್ಟು ಮಾತನಾಡುವಾಗ,
ತಿಳಿದಿರುವ ವಿಷಯಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಲು ಸಂಕೋಚವೇಕೆ. ಕೆಟ್ಟವರ ಮಾತಿಗಿಂತ ಒಳ್ಳೆಯವರ ಮೌನ ಇನ್ನೂ ಅಪಾಯಕಾರಿ……..

ಮೀಸಲಾತಿಯೇ ಇರಲಿ, ರಾಮಮಂದಿರವೇ ಇರಲಿ,
ಮಹಿಳಾ ಸ್ವಾತಂತ್ರ್ಯವೇ ಇರಲಿ, ಜಾತ್ಯಾತೀತತೆಯೇ ಇರಲಿ,
ದೇಶ ಭಕ್ತಿಯೇ ಇರಲಿ,
ಧರ್ಮ ದೇವರುಗಳ ಚರ್ಚೆಗಳೇ ಇರಲಿ,
ಮುಕ್ತವಾಗಿ ಅಭಿಪ್ರಾಯ ಹಂಚಿಕೊಳ್ಳಿ.

ನೀವು ಹಿಂದುವಾಗಿರಿ, ಮುಸ್ಲಿಂ ಆಗಿರಲಿ, ಕ್ರಿಶ್ಚಿಯನ್ ಆಗಿರಲಿ,
ಸಿಖ್ ಬೌದ್ಧ ಜೈನ್ ಪಾರ್ಸಿ ಯಾರೇ ಆಗಿರಲಿ, ಯಾವ ಜಾತಿ ಭಾಷೆ ಪ್ರದೇಶದವರೇ ಆಗಿರಲಿ, ಯಾವ ವೃತ್ತಿಯವರೇ ಆಗಿರಲಿ ನಿಮಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಹಕ್ಕು ಎಲ್ಲರಂತಯೇ ಸಮನಾಗಿ ಇದೆ.

ಆ, ಇದಕ್ಕೆ ಪ್ರತಿಕ್ರಿಯೆಯಾಗಿ ನಿಮಗೆ ನಿಂದನೆ, ನೋವು, ಹಿಂಸೆ, ಬೆದರಿಕೆ, ಹಲ್ಲೆ, ವ್ಯಂಗ್ಯ ಎಲ್ಲವೂ ಅನುಭವ ಆಗಬಹುದು. ಅದಕ್ಕೆ ಮಾನಸಿಕ ಸಿದ್ದತೆಯ ಅವಶ್ಯಕತೆ ಇದೆ. ನಿಮ್ಮ ಉದ್ದೇಶ ಒಳ್ಳೆಯದಾಗಿದ್ದರೆ ಇದು ನಿಮಗೆ ಸಮಸ್ಯೆಯೇ ಅಲ್ಲ.

ಆದರೆ ಒಂದು ಮಾತ್ರ ನೆನಪಿರಲಿ…..

ನೀವು ನಾಗರಿಕ ಸಮಾಜದಲ್ಲಿ ವಾಸಿಸುತ್ತಿರುವಿರಿ. ಇಲ್ಲಿ ಕಾನೂನು ಮತ್ತು ನೈತಿಕತೆ ಅಸ್ತಿತ್ವದಲ್ಲಿದೆ. ಸಂಯಮ, ಸಭ್ಯತೆ, ಪ್ರೀತಿ, ವಿಶ್ವಾಸ ಮೀರದಂತೆ ಸದಾ ಎಚ್ಚರಿಕೆ ವಹಿಸಬೇಕು. ಇನ್ನೊಬ್ಬರ ವೈಯಕ್ತಿಕ ನಿಂದನೆ, ಸುಳ್ಳು ಆರೋಪ, ಉದ್ದೇಶ ಪೂರ್ವಕವಾದ ಮಾನ ಹಾನಿ ಮಾಡಬಾರದು. ಅದು ಅಪರಾಧ ಸಹ.

ಮಾತಿನ ಮೇಲೆ ಹಿಡಿತವಿರಲಿ,
ಭಾಷೆಯ ಮೇಲೆ ನಿಯಂತ್ರಣವಿರಲಿ,
ಹೃದಯ ಒಳಗೆ ಕರುಣೆ ಇರಲಿ,
ಮನಸ್ಸಿನಲ್ಲಿ ಕ್ಷಮಾಗುಣವಿರಲಿ,
ಈ ನೆಲದ ಬಗ್ಗೆ ಅಭಿಮಾನವಿರಲಿ….

ಏಕೆಂದರೆ ಇದು ಭಾರತ,
ಸರ್ವಧರ್ಮ ಸಮನ್ವಯದ ನಾಡು,
ಭಗವದ್ಗೀತೆ, ಖುರಾನ್, ಬೈಬಲ್ ಗಳು ಪ್ರತಿನಿತ್ಯ ಪಠಿಸುವ ದೇಶ. ಸಂವಿಧಾನವೆಂಬ ಧರ್ಮವನ್ನು ಆನುರಿಸುವ ನಾಡು….

ಅಂಜದಿರಿ, ಅಳುಕದಿರಿ,
ಸತ್ಮಮೇವ ಜಯತೇ….
ಇದು ಇಂಡಿಯಾ,
ಇದೇ ಇಂಡಿಯಾ…..

75 ನೇ ಭಾರತ ಸ್ವಾತಂತ್ರ್ಯೋತ್ಸವದ ಶುಭಾಶಯಗಳು….

  • ವಿವೇಕಾನಂದ ಹೆಚ್ .ಕೆ.
Copyright © All rights reserved Newsnap | Newsever by AF themes.
error: Content is protected !!