January 11, 2025

Newsnap Kannada

The World at your finger tips!

deepa1

ಪ್ರೇಮದ ವಿದಾಯ ಸಂದೇಶ….

Spread the love

ತುಂಬು ಗೆನ್ನೆಯ – ಹೊಳೆವ ಕಂಗಳ – ಸೊಂಪು ಕೂದಲಿನ – ನಲ್ಮೆಯ ಗೆಳೆಯ,

ಇದೋ ನನ್ನ ಮನದ ವಿದಾಯ.
©°°°°°©,

ಎಷ್ಟೊಂದು ಮುದ್ದಾಗಿದ್ದೆ ನೀನು. ಸೌಂದರ್ಯ ದೇವತೆ ಹೆಣ್ಣೇ ಇರಬಹುದು.
ಆದರೆ ಆ ಮನ್ಮಥನೂ ನಿನ್ನಷ್ಟು ಸುಂದರ ಇರಲಾರನು. ಆ ನಿನ್ನ ನಗು, ಮಾತು, ನೋಟ, ಮುಗ್ಧತೆ ನನ್ನನ್ನು ಸಂಪೂರ್ಣ ಆವರಿಸಿಕೊಂಡು ಬಿಟ್ಟಿತ್ತು.

ನಿನ್ನನ್ನು ನೆನಪಿಸದ ಕ್ಷಣವೇ ಇರಲಿಲ್ಲ. ಕಣ್ಣ ಮುಂದೆ ಇದ್ದಾಗಲೂ ಮಾತಿಗಿಂತ ನಿನ್ನನ್ನು ನೋಡುತ್ತಿದ್ದರೆ ಮನಸ್ಸು ಕುಣಿಕುಣಿದು ಕುಪ್ಪಳಿಸುತ್ತಿತ್ತು. ಇದು ಕೇವಲ ಆ ಕ್ಷಣದ ಭಾವವಾಗಿರಲಿಲ್ಲ. ಸತತ 5 ವರ್ಷಗಳು ನನ್ನನ್ನು ಭೂತದಂತೆ ಹಿಡಿದಿಟ್ಟುಕೊಂಡಿತ್ತು, ಈ ಕ್ಷಣದವರೆಗೂ ಕೂಡ. ಅದಕ್ಕೆ ನಿನಗೆ ಧನ್ಯವಾದಗಳು ಗೆಳೆಯ.

ಆ ದಿನ ನನಗಿನ್ನೂ ನೆನಪಿದೆ. ನಾನು ನನ್ನ ಕ್ಲಿನಿಕ್ ನಲ್ಲಿ ರೋಗಿಗಳನ್ನು ಪರೀಕ್ಷಿಸುತ್ತಾ ಇರುವಾಗ ಸಂಜೆಯ ಸಮಯದಲ್ಲಿ ನೀಲಿ ಬಣ್ಣದ ಟೀ ಶರ್ಟ್, ಜೀನ್ಸ್ ಪ್ಯಾಂಟ್ ತೊಟ್ಟು ವಿಸಿಟಿಂಗ್ ಕಾರ್ಡ್ ನೊಂದಿಗೆ ಒಳ ಬಂದು MEDICAL REPRESENTATIVE ಎಂದು ಪರಿಚಯಿಸಿಕೊಂಡ ಆ ಕ್ಷಣ ನೆನಪಿನಾಳದಲ್ಲಿ ಅಚ್ಚೊತ್ತಿದಂತಿದೆ.

MEDICINE PACKAGE ಬಗ್ಗೆ ಗಂಟೆ ಗಟ್ಟಲೆ ವಿನಯಪೂರಿತ ಧ್ವನಿಯಲ್ಲಿ ಆಕರ್ಷಕವಾಗಿ ಹೇಳುತ್ತಾ ಹೋದ ನಿನ್ನ ಮಾತಿನ ಮೋಡಿಗೆ ನನಗರಿವಿಲ್ಲದೇ ಸಿಲುಕಿದ್ದೆ. ಮುಂದಿನ ಹಲವು ಭೇಟಿಗಳಲ್ಲಿ ಎಲ್ಲಿಯೂ ಸಭ್ಯತೆಯ ಗೆರೆದಾಟದ ನಗುಮುಖದ Gentleman ನೀನಾಗಿದ್ದೆ.

ಅಲ್ಲಿಂದ ಪ್ರಾರಂಭವಾದ ನಮ್ಮ ಗೆಳೆತನದ ಪಯಣ ಯಾವ ಮಾಯೆಯಲ್ಲೋ ಪ್ರೀತಿಗೆ ತಿರುಗಿದ್ದು ಡಾಕ್ಟರ್ ಆದ ನನಗೇ ಅರಿವಾಗಲಿಲ್ಲ.

ಓ, ಆ ಸಂಜೆಗಳು, ಆ ಪ್ರವಾಸಗಳು, ಪ್ರಕೃತಿಯ ಮಡಿಲಿನ ಆ Tracking ಗಳು, ಆ ಪಾರ್ಟಿಗಳು ಈ ಕ್ಷಣದಲ್ಲೂ ಮೈ ಮನಸ್ಸನ್ನು ರೋಮಾಂಚನಗೊಳಿಸುತ್ತಿದೆ. ಹಣ, ಅಂತಸ್ತು, ಸೌಂದರ್ಯ, ಆರೋಗ್ಯ, ಅದೃಷ್ಟ ಒಟ್ಟಿಗೇ ಮೇಳೈಸಿದ ದಿನಗಳವು. ಅಪ್ಪನಿಲ್ಲದ ನನ್ನನ್ನು ಗಂಡಸೊಬ್ಬ ಹೊಸ ಲೋಕಕ್ಕೆ ಕೊಂಡೊಯ್ದು ಘಳಿಗೆಗಳವು.

ಆದರೆ,
ಅದೊಂದು ದಿನ ಅನಿರೀಕ್ಷಿತವಾಗಿ ನಿನಗೆ ಅಪಘಾತವಾಯಿತು. ತಲೆ, ಕೈಕಾಲು, ದೇಹಕ್ಕೆಲ್ಲಾ ಗಂಭೀರ ಗಾಯಗಳಾದವು.
ಡಾಕ್ಟರ್ ಆದ ನನಗೇ ಪ್ರೀತಿಯ ಅಮಲಿನಲ್ಲಿ ವೃತ್ತಿ ಧರ್ಮದ ಜ್ಞಾನ ಮರೆತು ಆಘಾತವಾಯಿತು. ಉಳಿಯುವ ಸಾಧ್ಯತೆ 50/50 ಎಂದು ನುರಿತ ವೈಧ್ಯರು ಹೇಳಿದಾಗ ನನ್ನ ಜಂಘಾಬಲವೇ ಕುಸಿಯಿತು. ಹಣದ ಯಾವ ಲೆಕ್ಕವನ್ನೂ ಗಮನಿಸದೆ ಅತ್ಯುತ್ತಮ ಆಸ್ಪತ್ರೆಗೆ ದಾಖಲಿಸಿ ನಿನ್ನ ಜೀವ ಉಳಿಸಲು ಟೊಂಕಕಟ್ಟಿ ನಿಂತೆ.

ಹಗಲು ರಾತ್ರಿಗಳು ಗೊತ್ತೇ ಆಗಲಿಲ್ಲ. ನಿನಗೆ ಕೋಮಾದಿಂದ ಎಚ್ಚರವಾಗಲೇ ಒಂದು ತಿಂಗಳಾಯಿತು. ಈ ನಡುವೆ ನಿನ್ನ ಮೊಬ್ಯೆಲ್ ನಿಂದ ಸಂಬಂಧಿಕರ ಸಂಪರ್ಕಿಸಿದಾಗಲೇ ನನಗೆ ತಿಳಿದದ್ದು, ನೀನು ಅಪ್ಪ ಅಮ್ಮ ಇಲ್ಲದ ಅನಾಥ. ಇಲ್ಲಿ ಅಕ್ಕ ಭಾವನ ಮನೆಯಲ್ಲಿ ಇದ್ದು ಕೆಲಸ ಮಾಡಿಕೊಂಡಿರುವುದು ಎಂದು.

ನೀನು ಆ ಬಗ್ಗೆ ನನಗೆ ಸರಿಯಾದ ಮಾಹಿತಿಯೇ ನೀಡಿರಲಿಲ್ಲ. ಅಕ್ಕನ ಮನೆಯಲ್ಲಿ ಇರುವುದೆಂದು ಮಾತ್ರ ತಿಳಿದಿತ್ತು. ವಿಷಯ ತಿಳಿದ ನಂತರ ಒಂದೆರೆಡು ದಿನ ಬಂದು ಯೋಗಕ್ಷೇಮ ವಿಚಾರಿಸಿದ ನಿಮ್ಮ ಅಕ್ಕ ಭಾವ ಆಸ್ಪತ್ರೆಯ ಬಿಲ್ ಜಾಸ್ತಿಯಾಗುತ್ತಿದ್ದಂತೆ ಮತ್ತು ಡಾಕ್ಟರ್ ಆದ ನಾನು ಅತಿಯಾಗಿ ನಿನ್ನ ಆರೈಕೆಯಲ್ಲಿ ತೊಡಗಿಸಿಕೊಂಡಿದ್ದರಿಂದ ಬರಬರುತ್ತಾ ಅಪರೂಪದ ಅತಿಥಿಗಳಾದರು.

ಮುಂದೆ ನೀನು ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಆಸ್ಪತ್ರೆಯಲ್ಲಿಯೇ ಆರು ತಿಂಗಳಾದುದು ನಿನಗೇ ತಿಳಿದಿದೆ. ಆಸ್ಪತ್ರೆಗೆ ಆದ ಖರ್ಚು ನನ್ನ ಪ್ರೀತಿಯ ಲೆಕ್ಕದಲ್ಲಿ ದಾಖಲಾಗಲೇ ಇಲ್ಲ ಗೆಳೆಯ,
ಈ ಕ್ಷಣಕ್ಕೂ.

ಈ ನಡುವೆ ನಾನು ಹೋಗಲಾಗದೆ, ಅದನ್ನು ನಿರ್ವಹಿಸಲಾಗದೆ, ಬಾಡಿಗೆ ಕಟ್ಟಲಾಗದೆ ನನ್ನ ಕ್ಲಿನಿಕ್ ಸಹ ಮುಚ್ಚಲ್ಪಟ್ಟಿತು. ನೀನು ಕೂಡ ಆಸ್ಪತ್ರೆಯಿಂದ ನೇರ ನನ್ನ ಮನೆಗೇ ಬಂದೆ, ಇಲ್ಲ ಕ್ಷಮಿಸು ನಾನೇ ಕರೆದುಕೊಂಡು ಬಂದೆ ನನ್ನ ಅಮ್ಮನ ವಿರೋಧದ ನಡುವೆಯೂ ಮತ್ತೂ ಒಂದು ವರ್ಷದ ಸತತ ಆರೈಕೆಯ ನಂತರ ನೀನು ಮತ್ತೆ ಮೊದಲಿನಂತಾದೆ.

ಆ ಎಲ್ಲಾ ಕಷ್ಟದ ದಿನಗಳು ಮರೆಯಾಗಿ ಮತ್ತೆ ಮನಸ್ಸು ನಿನ್ನನ್ನು ಆಸ್ವಾದಿಸತೊಡಗಿತು. ಈ ನಡುವೆ ನಿನ್ನಲ್ಲಿ ಆದ ವ್ಯತ್ಯಾಸಗಳನ್ನು ಗುರುತಿಸಲು ನನ್ನ ಪ್ರೀತಿಗೆ ಸಾಧ್ಯವಾಗಲೇ ಇಲ್ಲ ಗೆಳೆಯ.

ಹೌದು ನನ್ನ ಸ್ನೇಹಿತೆ, ಪ್ರಖ್ಯಾತ ಡಾಕ್ಟರ್, ಗಂಡನಿಂದ ಆಗತಾನೇ DIVORCE ಆಗಿದ್ದ ಆಕೆಯನ್ನು ನಿನಗೆ ಪರಿಚಯಿಸುವುದು ನಿನ್ನ ಆರೈಕೆಯ ದೃಷ್ಟಿಯಿಂದ ಅನಿವಾರ್ಯವಾಗಿತ್ತು. ಕ್ಲಿನಿಕ್ ಮುಚ್ಚಿದ್ದರಿಂದ, ನಿನ್ನ ಆಸ್ಪತ್ರೆಯ ಖರ್ಚಿಗೆ ಅಪಾರ ಹಣ ಖರ್ಚಾಗಿದ್ದರಿಂದ ನಾನು ಬೇರೆ ನರ್ಸಿಂಗ್ ಹೋಮ್ ನಲ್ಲಿ ಹಗಲು ರಾತ್ರಿ ಕೆಲಸ ಮಾಡಲೇ ಬೇಕಿತ್ತು.

ಬ್ಯಾಂಕ್ ನಿಂದ ಪಡೆದ ಸಾಲದ ಕಂತುಗಳ ಚೆಕ್ ಗಳು BOUNCE ಆಗುತ್ತಿದ್ದವು. ಆಗ ನಿನ್ನ ಅನುಮತಿಯೊಂದಿಗೆ ನಾನು ಕೆಲಸಕ್ಕೆ ಸೇರಿದೆ. ನಿನ್ನ ಆರೋಗ್ಯದ ಜವಾಬ್ದಾರಿ ಆಕೆಗೆ ವಹಿಸಿದೆ. ಆಗಲೂ ನನಗೆ ನಿನ್ನ ನೆನಪಿನ ಸಂಭ್ರಮಗಳಿಗೇನು ಕೊರತೆ ಇರಲಿಲ್ಲ.

ಒಂದು ದಿನ ಅಮ್ಮ ಕಣ್ಣೀರಾಕುತ್ತಾ ಇನ್ನು ಸುತ್ತಾಡಿದ್ದು ಸಾಕು, ನೀವಿಬ್ಬರೂ ಮದುವೆಯಾಗಿ ಎಂದು ಒತ್ತಾಯಿಸಿದರು. ಎಷ್ಟಾದರೂ ತಾಯಿಯಲ್ಲವೇ.

ಆಗ ನಾನೇ ನಿನಗೆ ಕೇಳಿದೆ.
” ನನ್ನನ್ನು ನಿನಗೆ ಅರ್ಪಿಸಿಕೊಳ್ಳುವಾಗ ನೀನೇ ಮಾತು ಕೊಟ್ಟಂತೆ ನಾನು ಹೇಳಿದ ಕ್ಷಣವೇ ನೀನು ತಾಳಿಕಟ್ಟಲು ಸಿದ್ದನಿದ್ದೆ “

ಅದಕ್ಕೆ ನೇರವಾಗಿ ನಾನೇ ಮುಂದಿನ ತಿಂಗಳ 16 ನೇ ತಾರೀಖು ಸರಳವಾಗಿ ಮದುವೆಯಾಗಲು ನಿನ್ನ ಒಪ್ಪಿಗೆ ಕೇಳಿದೆ. ಸ್ವಲ್ಪ ವಿಚಲಿತನಾದ ನೀನು ಎರಡು ದಿನ ಸಮಯ ಕೇಳಿ ನಿನ್ನ ಅಕ್ಕ ಬಾವನಿಗೆ ಒಂದು ಮಾತು ಹೇಳುವ ಸಲುವಾಗಿ ನನ್ನ ಮನೆಯಿಂದ ಹೊರಟೆ.

ಗೆಳೆಯ ಆಗಲೂ ನನ್ನ ಪ್ರೀತಿ ನಿನ್ನನ್ನು ಅನುಮಾನಿಸಲಿಲ್ಲ. ನಿನ್ನೆ ಇಡೀ ದಿನ ನೀನು ನನ್ನ ಪೋನ್ ರಿಸೀವ್ ಮಾಡದಿದ್ದಾಗಲೂ ನಿನ್ನ ಆರೋಗ್ಯದ ಬಗ್ಗೆ ಆತಂಕವಾಯಿತಷ್ಟೆ. ಅದಕ್ಕಾಗಿ ಈಗ ನಿನ್ನ ನೇರ ಬೇಟಿಗೆ ನಿಮ್ಮ ಅಕ್ಕನ ಮನೆಗೆ ಹೊರಡಲು ರೆಡಿಯಾಗುತ್ತಿದ್ದ ಸಮಯದಲ್ಲೇ ನಿನ್ನಿದ ಬಂದ WATSAPP ಮತ್ತು MAIL ನೋಡಿ ಅದಕ್ಕೆ ಹೀಗೆ ನೆನಪಿನಾಳದಿಂದ ವಿದಾಯದ MESSAGE ಕಳಿಸುತ್ತಿದ್ದೇನೆ.

ಶಹಬಾಷ್ ಗೆಳೆಯ,
ಕಲ್ಪನಾ ಲೋಕದಿಂದ ಬದುಕಿನ ವಾಸ್ತವಕ್ಕೆ ನನ್ನನ್ನು ತೆರೆದಿಟ್ಟಿದ್ದಕ್ಕೆ. ನನಗೇನು ಪಶ್ಚಾತಾಪ ಇಲ್ಲ ಗೆಳೆಯ.
ಶುದ್ಧ ಪ್ರೀತಿಯ ಶಕ್ತಿ ನಿನ್ನ ಊಹೆಗೂ ನಿಲುಕದ್ದು. ನಿಜವಾದ ಪ್ರೀತಿಯಲ್ಲಿ ತ್ಯಾಗ, ಪ್ರಬುದ್ಧತೆ, ಸ್ಥಿತಪ್ರಜ್ಞತೆಗಳು ಮಿಳಿತವಾಗಿರುತ್ತವೆ.

ನಾನೇ ಪರಿಚಯಿಸಿದ ಆ ಡಾಕ್ಟರ್ ಗೆಳತಿ ನನಗಿಂತ ಚೆಂದವಿದ್ದಾಳೆ. ನನಗಿಂತ ಹತ್ತುಪಟ್ಟು ಹಣವಂತೆ. ನಿಜ, ನೀನೇ MESSAGE ನಲ್ಲಿ ಹೇಳಿರುವಂತೆ, ನಿನಗೆ ಜೀವನದಲ್ಲಿ ಸಾಧಿಸುವುದು ಬಹಳಷ್ಟಿದೆ. ಈಗ ಹಣಕಾಸಿನ ವಿಷಯದಲ್ಲಿ ನಾನು ದುರ್ಬಲಳಾಗಿರುವಾಗ ನಿನಗೆ ಸಹಾಯ ಮಾಡಲು ಆಗುವುದಿಲ್ಲ. ಆಕೆ ಈಗಾಗಲೇ ನಿನಗಾಗಿ ಸಾಕಷ್ಟು ಹಣ ನೀಡಿ ಮುಂದೆ ನಿನ್ನ ಬಿಸಿನೆಸ್ ಗೆ ದಾರಿ ಮಾಡಿಕೊಡುವುದಾಗಿ ಹೇಳಿದ್ದಾಳೆ. ಅದಕ್ಕಾಗಿ ನೀನು ಆಕೆಗೆ ಬಾಳು ಕೊಡಲು ಸಿದ್ದನಾಗಿದ್ದೀಯ.

ನನ್ನ ಪ್ರೀತಿಗೆ ಉಪಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತಾ ನನ್ನ ಅನುಮತಿಯನ್ನೂ ಕೇಳಿರುವೆ.
ನನ್ನ ಪ್ರೀತಿ ನಿಜವೇ ಆಗಿದ್ದಲ್ಲಿ ನಾನು ನಿನಗೆ ತೊಂದರೆ ಕೊಡಬಾರದು ಎಂದು ವಿನಂತಿಸಿ ನನಗೆ ಒಳ್ಳೆಯದಾಗಲಿ ಎಂದು ಹಾರೈಸಿರುವೆ.

ಅಹಹಾ…..
ಇಗೋ ಗೆಳೆಯ, ನನ್ನ ಸಂಪೂರ್ಣ ಅನುಮತಿ. ನೀನು ಮತ್ತೆ ಬಂದರೂ ನಾನು ಸ್ವೀಕರಿಸುವುದಿಲ್ಲ. ಈ MESSAGE ಓದಿಯೇ ನನ್ನ ಹೃದಯ ಸ್ತಭ್ಧವಾಯಿತು.
ಹಾಗೇ ನನ್ನ ಪ್ರೀತಿಯ ಮನಸ್ಸು ಮತ್ತಷ್ಟು ಗಟ್ಟಿಯಾಯಿತು.

ಏಕೆಂದರೆ, ನನ್ನ ಪ್ರೀತಿ ADJUSTMENT – COMPROMISE – SUCCESS – ACHIVEMENT ಎಂಬ ಪದಗಳ – ಭಾವಗಳ ಬಂಧಿಯಲ್ಲ. ಅಲ್ಲಿ ಅವುಗಳಿಗೆ ಜಾಗವೇ ಇಲ್ಲ. ಕೇವಲ ಹಣ ಯಶಸ್ಸುಗಳು ಆ ಪ್ರೀತಿಯನ್ನು ಸೋಲಿಸಲು ಸಾಧ್ಯವಿಲ್ಲ.

ನಿಜ ಪ್ರೀತಿ , ಜ್ಞಾನಕ್ಕೆ – ಬುದ್ಧಿಗೆ ನಿಲುಕುವುದಿಲ್ಲ. ಅದು ಆಕಾರ, ರೂಪ, ಬಣ್ಣ, ಗುಣಗಳಿಲ್ಲದ ಅನಂತ ಸ್ಥಿತಿ. ಅದನ್ನು ಅನುಭವಿಸುತ್ತಿರುವ ನಾನೇ ಧನ್ಯಳು.

ನಿನ್ನನ್ನು ಈ ಕ್ಷಣಕ್ಕೂ ಪ್ರೀತಿಸುತ್ತೇನೆ. ಆದರೆ ಮುಂದೆಂದೂ ಜೊತೆಯಾಗುವುದಿಲ್ಲ. ನನ್ನ ಮುಂದಿನ ಭವಿಷ್ಯ ನಿನ್ನೊಂದಿಗೆ ಸಾಗುತ್ತದೆ, ಆದು ಇಹದಲ್ಲಲ್ಲ, ನಿನ್ನ ನೆನಪಿನೊಂದಿಗೆ. ನಿನ್ನಿಂದ ನಾನು ಕಳೆದುಕೊಂಡಿದ್ದಕ್ಕಿಂತ ಪಡೆದುಕೊಂಡದ್ದೇ ಹೆಚ್ಚು.

ಗೆಳೆಯ ನಿಮ್ಮ ದಾಂಪತ್ಯ ಜೀವನ ನನ್ನ ಗೆಳತಿಯೊಂದಿಗೆ ಸುಖಕರವಾಗಿರಲಿ. ಎಲ್ಲಾ ಯಶಸ್ಸುಗಳು ನಿಮ್ಮದಾಗಲಿ.

ನಿನ್ನಿಂದ ಮೋಸವಾಗಲಿಲ್ಲ, ಅನುಭವವಾಯಿತು.

ಪ್ರೀತಿ ಪ್ರೀತಿಯಷ್ಟೆ ಬೇರೇನಿಲ್ಲ.

ಹೃದಯದ – ಮನಸ್ಸಿನ ಭಾಷೆಯೊಂದಿಗೆ,……….

ನಿನ್ನ……..

  • ವಿವೇಕಾನಂದ. ಹೆಚ್.ಕೆ.
Copyright © All rights reserved Newsnap | Newsever by AF themes.
error: Content is protected !!