ನಾಯಿಯೂ ಅದರ ಕಾರುಬಾರೂ

Team Newsnap
12 Min Read

ಬೌ ಬೌ ಭೌ ಭೌಭೌ. . . . ಎದುರು ಮನೆಯ ನಾಯಿ ಒಂದೇ ಸಮನೆ ಬೊಗಳುತ್ತಲೇ ಇತ್ತು. ಅಪರೂಪಕ್ಕೆ ಅಂತ ವಾರಕ್ಕೊಂದೇ ಭಾನುವಾರ ಸಿಗೋದು. ದಿನಾ ಇದ್ದಿದ್ದೇ ಮನೆ ಕೆಲ್ಸ, ಹೊರಗಿನ ಕೆಲ್ಸ.. ಭಾನುವಾರ ಅಂದ್ರೆ ಬೆಳಿಗ್ಗೆ ಸ್ವಲ್ಪ ತಡವಾಗಿ ಎದ್ದು, ಮನೆಗೆ ಬರೋ ಐದಾರು ಭಾನುವಾರದ ವಿಶೇಷ ಪತ್ರಿಕೆಗಳನ್ನು ಓದುತ್ತಾ, ಬಿಸಿಬಿಸಿ ಕಾಫಿಯನ್ನು ಹನಿಹನಿಯಾಗಿ ಗುಟುಕರಿಸುತ್ತ, ಏನ್ ತಿಂಡಿ ಮಾಡೋದು ಇವತ್ತೂ ಅನ್ನೋ ಹೊತ್ತಿಗೆ ಎಂಟೂವರೆ ಆಗಿರುತ್ತೆ.
ಆಮೇಲೆ ತಿಂಡಿಗೆ ತರಕಾರಿ ಹೆಚ್ಚಿಕೊಂಡು ತಟ್ಟೆಗೆ ತಿಂಡಿ ಬೀಳೋ ಹೊತ್ತಿಗೆ ಬೇಗ ಅಂದ್ರೂ ಹತ್ತಾಗಿರುತ್ತೆ. ಅಪ್ಪ ಮಗನಿಗೆ ಮಾಡ್ಕೊಟ್ಟು ನಾ ಟಿವಿ ನೋಡ್ತಾ ತಿಂಡಿ ಮುಗಿಸೋ ಹೊತ್ತಿಗೆ ಹನ್ನೊಂದು ಹೊಡೆಯುವ ಹಾದಿ. ಸರಿ ಸೋಮಾರಿತನಕ್ಕಾಗಲೇ ಕಣ್ಣು ಎಳೀತಿರತ್ತೆ. ‘ರ್ರೀ ಪ್ಲೀಸ್ ಯಾರೂ ಡಿಸ್ಟರ್ಬ್ ಮಾಡ್ಬೇಡೀ.. ಒಂದ್ ಹತ್ತ್ ನಿಮಿಷ ತೂಕಡಿಸಿ ಏಳ್ತೀನಿ. ತಿಂಡಿ ಜಾಸ್ತಿಯಾಗಿ ಕಣ್ಣು ಕೂಡ್ತಾ ಇದೆ’ ಅಂದು ರೂಮಿನ ಬಾಗಿಲು ಎಳೆದು ದಿಂಬಿಗೆ ತಲೆ ಕೊಟ್ರೆ ಆಹಾ ಸ್ವರ್ಗಕ್ಕೆ ಮೂರೇ ಗೇಣು.
ಎಷ್ಟು ಹೊತ್ತು ಮಲ್ಗೋಕಾಗುತ್ತೆ? ಒಂದ್ಕಾಲು ಗಂಟೆ ತೂಕಡಿಸಿದ್ದೇ ಆಯ್ತು. ಎದ್ದು ಅಡುಗೆ ಕೆಲಸ ಮಾಡ್ಬೇಕಲ್ಲಾ.. ಸರಿ ಭಾನುವಾರ ಎಲ್ರೂ ಮನೇಲೇ ಇರ್ತೀವಲ್ಲಾ ಅಂತ ಎಲ್ಲಾ ತರಕಾರಿಗಳನ್ನು ಹಾಕಿ ಹುಳಿ ಮಾಡಿ, ಹಪ್ಪಳ ಕರಿದು, ಪುಳಿಯೋಗರೆಯೋ, ಬಾತೋ ಕಲೆಸಿ, ಬಿಸಿಬಿಸಿ ಮುದ್ದೆ ಮಾಡಿ ಎಲ್ಲರೂ ಟಿ.ವಿ. ಮುಂದೆ ಹರಟುತ್ತಾ ಊಟ ಮುಗಿಯುವ ಹೊತ್ತಿಗೆ ಮೂರು ಗಂಟೆ ಅನ್ನೀ.


ಭಾನುವಾರವಾದ್ರೂ ಮಧ್ಯಾಹ್ನ ಒಂದು ಘಳಿಗೆ ತೂಕಡಿಸೋಣ ಆಂತ ತಲೆಯಾನಿಸಿ ಹತ್ತು ನಿಮಿಷ ಆಗಿಲ್ಲ ಬೌ ಬೌ ಭೌ ಭೌಭೌ. . . . ಅಂತ ಎದುರು ಮನೆಯ ಹೊಸ ನಾಯಿ ಒಂದೇ ಸಮನೆ ಬೊಗಳುತ್ತಲೇ ಇತ್ತು. ಈ ಹಾಳು ನಾಯಿಯ ಕಾಟ, ನಮ್ಮನೇಲೂ ನೆಮ್ಮದಿಯಾಗಿ ನಿದ್ದೆ ಮಾಡೋಕಾಗಲ್ಲ ಅಂತ ಬೈಕೊಂಡೆ. ಪಕ್ಕದಲ್ಲೇ ಮಲಗಿ ಹಾಯಾಗಿ ಟಿ.ವಿಯಲ್ಲಿ ರಿಲೇ ಆಗುತ್ತಿದ್ದ ಕ್ರಿಕೆಟ್ ಅನ್ನು ಬಿಟ್ಟ ಕಣ್ಣಿನಿಂದ ನೋಡುತ್ತಿದ್ದ ಯಜಮಾನರಿಗೆ ನಾಯಿ ಬೊಗಳಿದ ಸದ್ದೂ ಕೇಳಿಲ್ಲ ಅನ್ನಿಸ್ತು. ರೀ… ರ್ರೀ… ಅಂತ ಕೂಗಿದೆ. ಕೇಳಲಿಲ್ಲ. ಅದೂ ಸರೀ ಅನ್ನಿ ಮೂರು ರಸ್ತೆಗೆ ಕೇಳೋ ಹಾಗಿ ಬೊಗಳಿದ ನಾಯಿಯ ಸದ್ದೇ ಅವರಿಗೆ ಕೇಳಿಲ್ಲ ಅಂದ್ರೆ, ಇನ್ನು ನಿದ್ದೆಗಣ್ಣಿನ ನನ್ನ ರೀ… ಅವರಿಗೆಲ್ಲಿ ಕೇಳುತ್ತೆ.? ಅವರ ತೋಳನ್ನು ಜಗ್ಗಿದೆ. ಆಗ ಧ್ಯಾನದಿಂದ ಎಚ್ಚೆತ್ತ ಸ್ಥಿತಿಯಿಂದ “ಏನಮ್ಮಾ.. ಅಷ್ಟು ಚೆನ್ನಾಗಿ ಗೊರಕೆ ಹೊಡೀತಿದ್ದೆ ಯಾಕೆ ಎಚ್ಚರ ಆಯ್ತು?” ಅಂತ ಕೇಳಿದ್ರು. “ನೋಡ್ರೀ ಸಿಗೋದೊಂದು ಭಾನುವಾರ ಸ್ವಲ್ಪ ನಿದ್ದೆ ಮಾಡೋಣ ಅಂದ್ರೆ ಆ ನಾಯಿ ಎಷ್ಟು ಜೋರಾಗಿ ಹೊಡ್ಕೋತಿದೆ, ಏನಾದ್ರೂ ಮಾಡ್ರೀ” ಅಂತ ಗೋಗರ್ಕೊಂಡೆ. ನನ್ನ ಗಂಡ ನಿಧಾನವಾಗಿ “ಮನೇನಲ್ಲಿ ಹಿತ್ತಾಳೆ ಬೀಗ ಇದೆಯಲ್ವಾ?” ಅಂತ ಕೇಳಿದ್ರು. ನಾನೋ ಪೆದ್ದಂಗೆ ತಕ್ಷಣ “ಹೂಂ ರೀ. ಇದೇ ತಂದುಕೊಡ್ಲಾ?” ಅಂದೆ. ಕೊಂಕುನಗುವಿನೊಂದಿಗೆ “ಕೊಡೇ ಮಾರಾಯ್ತಿ, ಹೋಗಿ ಆ ನಾಯಿಯ ಬಾಯಿಗೆ ಬೀಗ ಹಾಕಿ ಬರ್ತೀನಿ” ಅಂದ್ರು. ಅವರ ವ್ಯಂಗ್ಯ ಆಗ ನಂಗೆ ಅರ್ಥ ಆಯ್ತು. ಕಣ್ಣಂಚಲ್ಲಿ ಹನಿ ತುಂಬಿತು. “ಏನೋ ನನ್ನ್ ಗಂಡ ಅಂತ ನನ್ನ ಕಷ್ಟ ನಿಮ್ ಹತ್ರ ಹೇಳ್ಕೊಂಡೆ. ಇನ್ಯಾರಿಗೆ ಹೇಳ್ಕೊಳ್ಳಲಿ ರೀ?” ಅಂತ ಅಲವತ್ತುಕೊಂಡೆ. “ಅಯ್ಯೋ ರಾಮಾ.. ನಾನೇನೇ ಮಾಡೋಕಾಗುತ್ತೇ? ನಮ್ ಮನೇ ನಾಯಿ ಆಗಿದ್ರೆ ಗದರಿಸಿದ್ರೆ ಆ ಕ್ಷಣಕ್ಕಾದ್ರೂ ಸುಮ್ಮನಿರ್ತಿತ್ತು. ಅದ್ಯಾರ್ದೋ ಮನೆ ನಾಯೀಗೆ ನಾ ಏನ್ ಮಾಡೋಕಾಗುತ್ತೆ? ನಿನ್ ಕಿವಿ ಮೊದಲೇ ಅತೀ ಚುರುಕು. ಅದಕ್ಕೇ ಅಷ್ಟು ಜೋರಾಗಿ ಕೇಳುತ್ತೆ. ಕಿವಿಗೆ ಹತ್ತಿ ಇಟ್ಕೊಂಡು ಮಲ್ಕೋ” ಅಂದ್ರು. ಅವರಿಗೆ ಕಿವಿ ತುಸು ಮಂದ, ನನ್ ಕಿವಿ ಅತೀ ಚುರುಕು, ಹೀಗಾಗಿ ಅವರ ನೆಮ್ಮದಿ ನಂಗಿಲ್ಲ. ಮಲಗಿದಾಗ ಇವರು ಓದುವ ಪೇಪರಿನ ಸರಕ್ ಅನ್ನೋ ಶಬ್ದಕ್ಕೇ ಎಚ್ಚರ ಆಗೋ ನಂಗೆ ಇನ್ನು ಆಪಾಟಿ ಬೊಗಳೋ ನಾಯಿಯ ಸದ್ದಿಗೆ ಹೇಗಾಗಬೇಡಾ..
ಸರಿ ಕಿವಿಗೆ ಹತ್ತಿ ಇಟ್ಕೊಂಡು ಮಲಗಾಯ್ತು. ಹದಿನೈದು ಇಪ್ಪತ್ತು ನಿಮಿಷ ಆಗಿರಬೇಕು, ಮತ್ತೆ ನಾಯಿ ಬೌ ಭೌ ಅಂತ ರಾಗ ಶುರುಮಾಡ್ತು. ಬೀದೀಲಿ ಯಾರು ಓಡಾಡಿದ್ರೂ, ಒಂದು ಸುಂಡಿಲಿ ಸೊಯ್ ಅಂತ ಸರಿದರೂ ಆ ನಾಯಿ ಬೊಗಳ್ತಾನೇ ಇರುತ್ತೆ. ಇನ್ನು ಅಕ್ಕ ಪಕ್ಕದ ಬೀದಿನಾಯಿಗಳು ಬೊಗಳಿದರೋ ಅದಕ್ಕೆ ಸ್ಪರ್ಧೆ ಅನ್ನೋ ಹಾಗೆ ಇದು ಇನ್ನೂ ಜಾಸ್ತಿ ಬೊಗಳುತ್ತೆ. ಬೊಗಳೋದನ್ನು ಬಿಟ್ರೆ ಈ ನಾಯಿಗಳಿಗೆ ಏನೂ ಕೆಲ್ಸವೇ ಇಲ್ಲ ಅನ್ನೋದು ನನ್ನ ಭಾವನೆ. ನಮಗೆ, (ಅಲ್ಲಾ ನನಗೆ), ನಾಯಿ ಬಗ್ಗೆ ಸಿಕ್ಕಾಪಟ್ಟೆಯೇನೂ ಗೊತ್ತಿಲ್ಲ. (ನಮಗೆ ಅಂದ್ರೆ ಇವ್ರು ಗುರ್ರ್ ಅಂತಾರೆ, ನಿಂಗೆ ಗೊತ್ತಿಲ್ಲಾ ಅಂದ್ರೆ ನಂಗೂ ಗೊತ್ತಿಲ್ಲಾ ಅಂತಾನಾ ಅಂತ).

jarman shafrd1


ನಮ್ಮ ಚಿಕ್ಕಂದಿನಲ್ಲಿ ಸಾಮಾನು ತರೋಕೋ, ತರಕಾರಿ ತರೋಕೋ ಅಮ್ಮ ಹೊರಗೆ ಹೋಗಿರೋ ಸಮಯ ನೋಡಿಕೊಂಡು ಬೀದಿಯಲ್ಲಿ ಓಡಾಡೋ ಪುಟ್ಟ ಪುಟ್ಟ ನಾಯಿಮರಿಗಳನ್ನು ಹಿಡಿದು ಮನೆಗೆ ತಂದು ಬಚ್ಚಲುಮನೆಯಲ್ಲಿದ್ದ ಕೆಂಪು ಸೋಪನ್ನು ತಂದು ಅದರ ಮುಖ ಮೂತಿ ಮೈಗೆಲ್ಲಾ ಹಚ್ಚಿ ಅದು ಬಿಡುಗಡೆಗಾಗಿ ಒದ್ದಾಡುತ್ತಿದ್ದರೂ ನೀರು ಸುರಿದು ಸ್ನಾನ ಮಾಡಿಸಿ, ಟವೆಲ್‍ಇಂದ ಒರೆಸಿ ಮನೇಲಿದ್ದ ಬಿಸ್ಕೆಟ್ ತಿನ್ನಿಸಿ ಅದರ ಜೊತೆ ಆಟ ಆಡುತ್ತಿದ್ದೆ. ಅಮ್ಮ ಮನೆಗೆ ಬಂದ ಮೇಲೆ ನನಗೆ ಹಬ್ಬ ಇರ್ತಿತ್ತು. ಈಗಿನ ಥರ ಒಬ್ಬೊಬ್ಬರಿಗೆ ಒಂದೊಂದು ಸೋಪು, ಬೇರೆ ಬೇರೆ ಟವೆಲ್ ಅಂತೆಲ್ಲಾ ಇರ್ಲಿಲ್ಲ. ಒಂದು ಸೋಪು ಬಚ್ಚಲು ಮನೇಲಿದ್ರೆ ಅದೇ ಎಲ್ರಿಗೂ. ಇರೋ ನಾಲ್ಕು ಟವೆಲ್‍ನಲ್ಲಿ ಒಗೆದದ್ದನ್ನು ಉಪಯೋಗಿಸೋದು ಅಷ್ಟೇ. ಆ ನಾಯಿಗೆ ಹಚ್ಚಿದ ಸೋಪನ್ನೇ ಮತ್ತೆ ನಾವು ಬಳಸೋದು ಹೇಗೆ ಅಂತ ಗೊಣಗುತ್ತಾ ಅದೇ ತಾನೇ ತಂದಿದ್ದ ಸಾಮಾನಿನ ಬ್ಯಾಗಿನಿಂದ ಮತ್ತೊಂದು ಸೋಪು ತೆಗೆದು ಬಚ್ಚಲುಮನೆಯಲ್ಲಿಟ್ಟಿ ‘ಮತ್ತೇನಾದ್ರೂ ಆ ನಾಯೀನ ತಂದು ಸ್ನಾನಾ ಗೀನಾ ಅಂದ್ಯೋ ಬರೆ ಹಾಕ್ತೀನಿ’ ಅಂತ ಅಮ್ಮ ಗದರಿದ್ದೂ ಆಯ್ತು, ನಾ ಮುದುರಿದ್ದೂ ಆಯ್ತು. ನಾನೂ ನಾಯಿ ಬಾಲದ ಥರಾನೇ. ದಬ್ಬೆ ಬಿಚ್ಚಿದ ಮೇಲೆ ಡೊಂಕೇ.
ಅದೆಲ್ಲಾ ಸವಿನೆನಪು ಈಗ. ಆದರೆ ಈಗ ನಾಯಿ ಬೊಗಳಿದರೆ ನಂಗೆ ತಲೆನೋವು. ಅದ್ಯಾವ ಜಾತಿ ನಾಯಿ ಈಪಾಟಿ ಜೋರಾಗಿ ಸದ್ದು ಮಾಡತ್ತೆ ಅಂತೆ ತಲೆಗೆ ಹುಳು ಹತ್ತಿತು. ಹುಳು ಹೊಕ್ಕ ಮೇಲೆ ಸುಮ್ಮನಿರಲಾದೀತೇ? ಗೂಗಲ್ ಹುಡುಕಿದೆ. ಬೀಗಲ್ ಅನ್ನೋ ನಾಯಿ ಜಾತಿ ಜಾಸ್ತಿಯಲ್ದಿದ್ರೂ ಸಿಕ್ಕಾಪಟ್ಟೆ ಜೋರಾಗಿ ಬೊಗಳುತ್ತೆ ಅಂತ. ಹಾಗಿದ್ರೆ ಜೋರಾಗಿ ಹೊಡ್ಕೊಳ್ಳೋ ನಮ್ ರಸ್ತೆಯ ಆ ನಾಯಿ ಬೀಗಲ್ ಜಾತಿಯದ್ದೇ ಅಂತ ನಾ ತೀರ್ಮಾನಿಸಿಬಿಟ್ಟೆ. ಅದಕ್ಕೆ ಸರ್ಯಾಗಿ ಆ ಮನೆಯವರು ನಾ ಕೆಲಸಕ್ಕೆ ಹೋಗಿದ್ದಾಗ ರಸ್ತೆ ತುಂಬ ಗಸ್ತು ತಿರುಗುತ್ತ ನಮ್ ನಾಯಿ ಫಾರಿನ್ನಿನದ್ದು. ತುಂಬ ಸೆನ್ಸಿಟಿವ್. . ಹಾಗೇ ಹೀಗೇ.. ಅಂತ ಕೊಚ್ಕೊಳ್ತಿದ್ರಂತೆ. ಹಾಗಂತ ನಮ್ ಪಕ್ಕದ ಮನೆ ಸುಂದ್ರಮ್ಮ ಹೇಳ್ತಿದ್ರು.
ಸರಿ ನನ್ನ್ ನಿದ್ದೆ ಹಾಳುಮಾಡಿದ ಆ ನಾಯೀನ ಒಂದ್ಸಲ ನೋಡ್ಬೇಕಲ್ಲಾ.. ಓನರ್ ಇಲ್ದಿದ್ದಾಗ ಒಂದು ಹಿಡಿ ಶಾಪ ಹಾಕಿ, ಗದರಿ, ಬೈದು ಬುದ್ಧಿ ಹೇಳಿ ಬರ್ಬೇಕು ಅನ್ನೋ ದುರ್ಬುದ್ಧಿ ನಂಗ್ಯಾಕೆ ಬಂತೋ ಗೊತ್ತಿಲ್ಲ. ಆಂತೂ ಕಳ್ಳಂಗೊಂದು ಪಿಳ್ಳೆ ನೆಪ ಮಾಡಿಕೊಂಡು ಅವರ ಮನೆಗೆ ಹೋದೆ. ಆ ನಾಯಿ ನನ್ನ ನೋಡಿದ್ದೇ ತಡ ಗೊರ್ರ್ ಗೊರ್ರ್ ಅಂತ ನನ್ನೇ ಗುರುಗುಟ್ಟುತ್ತ ನೋಡುತ್ತಿತ್ತು. ಮೊದಲೇ ಅಳ್ಳೆದೆ ನಂಗೆ. ಅದರ ಉರಿಯುವ ಕಣ್ಣುಗಳನ್ನು ನೋಡಿ ಪೇರಿ ಕಿತ್ತೋಕಂತ ಕಾಲು ತೆಗೆದೆ. ಅಷ್ಟರಲ್ಲಿ ಆ ಮನೆಯ ಯಜಮಾನ್ತಿ “ಬನ್ರೀ ಒಳಕ್ಕೇ. ಯಾಕೆ ಹಾಗೇ ಹೋಗ್ತಿದೀರಾ?” ಅಂತ ಕರೆದ್ರಾ.. ಸಿಕ್ಕಾಕೊಂಡೆ.


ಒಂದೈದು ವರ್ಷದ ಹಿಂದ ನಮ್ಮ್ ಕೇಬಲ್ ಆಪರೇಟರ್ ಮನೆಗೆ ಏನೋ ಕೆಲಸ್ ನನ್ ಮಗನ್ನೂ, ಅವನ ಜೊತೆಗಿರಲಿ ಅಂತ ರಜೆಗೆಂದು ಬಂದಿದ್ದ ನನ್ನ್ ಕಸಿನ್ ಮಗನ್ನೂ ಕಳ್ಸಿದ್ದೆ. ಅವರಿಬ್ಬರಿಗೆ ಅವರ ಮನೆಯ ನಾಯಿಯ ವಿಷಯ ಗೊತ್ತಿರಲಿಲ್ಲ. ಕಾಲಿಂಗ್ ಬೆಲ್ ಮಾಡಿದಾರೆ, ಯಾರೂ ಬರಲಿಲ್ಲ. ನೋಡೋಣ ಅಂತ ಬಾಗಿಲು ತಳ್ಳಿದರೆ ಸರ್ರ್ ಅಂತ ಬಾಗಿಲು ತೆರೆದುಕೊಂಡಿತಂತೆ. ಒಳಗೆ ಮೆಲ್ಲಗೆ ಹೆಜ್ಜೆ ಇಟ್ಟು ‘ಅಂಕಲ್, ಅಂಕಲ್’ ಅಂತ ಕೂಗಿದಾರೆ. ಅದೆಲ್ಲಿತ್ತೋ ತೋಳದಂಥ ಜರ್ಮನ್ ಶಫರ್ಡ್ ನಾಯಿ ಅಟ್ಟಿಸಿಕೊಂಡು ಓಡಿ ಬಂತಂತೆ. ಇವ್ರಿಬ್ರೂ ಎದ್ವೋ ಬಿದ್ವೋ ಆಂತ ಅಲ್ಲಿದ್ದ ಸೋಫ ಮೇಲೆ ಕೆಳಗೆ ಜಂಪ್ ಮಾಡಿ ವಾಪಸ್ ಬಾಗಿಲ ಬಳಿ ಬರುವಷ್ಟರಲ್ಲಿ ನನ್ನ ಮಗನ ಕಾಲಿಗೆ ಗಪ್ಪನೆ ಬಾಯಿ ಹಾಕಿದ ಅದು ತನ್ನ ಹಲ್ಲನ್ನೂ ಊರೇಬಿಟ್ಟಿತು. ಬಿಡಿಸೋಕೆ ಬಂದ ನನ್ನ ಕಸಿನ್ ಮಗನ ಕಾಲಿನ ರುಚಿಯನ್ನೂ ನೋಡಿತು. ಇವರ ಕಿರುಚಾಟಕ್ಕೆ ಅದೇ ತಾನೇ ಎಚ್ಚರಗೊಂಡವರಂತೆ ಮನೆಯ ಓನರ್ರು ಬಂದು ಅದನ್ನು ಎಳೆದು ಕಟ್ಟಿಹಾಕಿದರಂತೆ. ಬದುಕಿದೆಯಾ ಬಡಜೀವವೇ ಅಂತ ಹೋದ ಕೆಲಸವನ್ನು ಮರೆತು ಮಕ್ಕಳಿಬ್ಬರೂ ಮನೆಗೆ ಬಂದರು. ಒಬ್ಬನೇ ಮಗನನ್ನು ರಜೆಗೆಂದು ನಮ್ಮ ಮನೆಗೆ ಕಳುಹಿಸಿದ್ದ ನನ್ನ ಕಸಿನ್‍ಗೆ ಏನು ಹೇಳೋದೂ ಆಂತಾನೇ ಗೊತ್ತಾಗದೆ ಚಡಪಡಿಸಿದೆವು. ಮಕ್ಕಳಿಬ್ಬರೂ ಇಂಜೆಕ್ಷನ್ ನೋವಿಗೆ ವಾರವೆಲ್ಲಾ ನರಳಿದ್ದು ನನಗಿನ್ನೂ ನೆನಪಿದೆ.


ಆ ನೆನಪಿನಲ್ಲೇ ಹೆದರಿ ಮತ್ತೆ ವಾಪಸ್ ಹೊರಡೋ ಹೊತ್ತಿಗೆ ಆ ಮನೆಯ ಯಜಮಾನ್ತಿ ನನ್ನ ಕಂಡು ಕರೆದದ್ದೂ ಆಯ್ತು. “ಏ ಬ್ಲ್ಯಾಕಿ ಸುಮ್ನಿರೂ ಅವ್ರು ನನ್ ಫ್ರೆಂಡ್” ಅಂತ ನಾಯಿಗೆ ಪೂಸಿ ಹೊಡೆದು ನನ್ನ ಒಳಗೆ ಕರ್ಕೊಂಡು ಹೋದ್ರು. ಏನೋ ಮಹಾ ಮೇಧಾವಿಯಂತೆ “ನಿಮ್ ನಾಯಿ ಬೀಗಲ್ ಜಾತಿಯದ್ದೇ?” ಅಂತ ನಾ ಕೇಳಿದ್ದೇ ತಡ ಅಲ್ಲಾರೀ ಇದು ಜರ್ಮನ್ ಷಫರ್ಡ್ ಅಂತ ಆಕೆ ಏರುಧ್ವನಿಯ ಉತ್ಸಾಹದಿಂದ ಮಾತು ಶುರುಮಾಡಿದರು. ಅದ್ಯಾವ ಮಗ್ಗುಲಿನಲ್ಲಿ ಎದ್ದಿದ್ನೋ, ನಾಯಿಯ ಆದ್ಯಂತ ಪುರಾಣವನ್ನೆಲ್ಲಾ ನನಗೆ ಊದಿದರು. ಎಷ್ಟು ದುಡ್ಡು ಕೊಟ್ಟು ತಂದ್ರು, ಎಷ್ಟು ಹಾಲು ಕುಡಿಯುತ್ತೆ, ಎಷ್ಟು ಮೊಟ್ಟೆ ತಿನ್ನುತ್ತೆ, ಎಷ್ಟು ಹೊತ್ತಿಗೆ ಏಳುತ್ತೆ, ಎಷ್ಟು ಹೊತ್ತಿಗೆ ಮಲಗುತ್ತೆ, ಎಷ್ಟು ಶಿಸ್ತಿನಿಂದ ಒಂದು ಎರಡು ಎಲ್ಲೆಲ್ಲಿ ಮಾಡುತ್ತೆ, ಯಾರನ್ನು ಕಂಡ್ರೆ ಬೊಗಳುತ್ತೆ, ಯಾರನ್ನು ಕಂಡ್ರೆ ಗುರುಗುಟ್ಟುತ್ತೆ, ಅದು ಅದರ ತಾಯಿಯ ಎಷ್ಟನೇ ಮರಿ (ನನ್ನ ಪುಣ್ಯಕ್ಕೆ ಅದರ ತಂದೆ ಯಾರು ಅನ್ನೋ ಸಂಶೋಧನೆಯನ್ನು ಆ ಮಾರಾಯ್ತಿ ಇನ್ನೂ ಮಾಡಿರಲಿಲ್ಲ ಅನ್ಸುತ್ತೆ ಆ ವಿಷಯ ಹೇಳಲಿಲ್ಲ) ರಾಮಾ… ಮೊದಲೇ ನಾಯಿಶಬ್ದದಿಂದಾದ ಅರೆನಿದ್ರೆಯಿಂದ ತಲೆನೋವು ಶುರುವಾಗಿದ್ದ ನನಗೆ ಈಗ ಇಡೀ ತಲೆ ಧಿಮಿಧಿಮಿಗುಟ್ಟತೊಡಗಿತು. ಸುಮ್ನೆ ಮನೇಲೇ ಇದ್ದಿದ್ದ್ರೆ ಅರ್ಧನಾದ್ರೂ ಸಮಾಧಾನ ಇರ್ತಿತ್ತು. ಈಗ ನಾಯಿಪುರಾಣದಿಂದ ತಲೆ ಕೆಟ್ಟುಹೋಯ್ತು. ಬಾರದ ಫೆÇೀನನ್ನು ಮೆಲ್ಲಗೆ ಕಿವಿಗೆ ಇಟ್ಟುಕೊಂಡು ‘ಹಾ ಹೂ ಬರ್ತಾ ಇದೀನಿ. ಹ್ಮ್ಮ್ ಹ್ಮ್ಮ್’ ಅಂತ ಮಾತಾಡುತ್ತ ಹೊರಬಂದೆ. ನಿಯತ್ತು ಅಂದ್ರೆ ನಾಯೀರೀ. ತಮ್ಮೆಜಮಾನರ ಮನೆಯಿಂದ ನಾನೇನೋ ಎತ್ಕೊಂಡು ಹೋಗ್ತಿದೀನಿ ಅಂತಾನೋ ಏನೋ ನನ್ ಮೊಬೈಲ್ ನೋಡಿ ಹೋ ಅಂತ ಹಾರಿತು. ಬದುಕಿದೆಯಾ ಬಡ ಜೀವವೇ ಅಂತ ಹಾರಿಕೊಂಡು ಮನೆ ಸೇರಿಕೊಂಡೆ.


ಅಂದಿನ ಭಾನುವಾರ ಎಕ್ಕುಟ್ಟುಹೋಯ್ತು. ಇದಾದ ಮೂರೇ ದಿನಕ್ಕೆ ನಮ್ಮ ರಸ್ತೆಯಲ್ಲಿ ಒಂದು ಕಳ್ಳತನ ಆಯ್ತು. ಅದೂ ಎರಡು ಮನೆಯಾಚೆಗಿನದ್ದು. ಹಳೆಯದಾಗಿದ್ದ ಮನೆಯ ಹಿಂದಿನಿಂದ ಕಿಟಕಿಯ ಸರಳನ್ನು ಮುರಿದು ಒಳನುಗ್ಗಿ ಸಾವಿರಾರು ರೂಪಾಯಿ ಕದ್ದಿದ್ದರು. ಚೂರು ಪಾರು ಚಿನ್ನ ಕೂಡ ಕಳ್ಳತನವಾಗಿತ್ತು. ಮನೆಯವರು ಬೆಳಗಿನ ಸಕ್ಕರೆಯ ಸವಿ ನಿದ್ರೆಯಲ್ಲಿದ್ದಿದ್ದರಿಂದ ಅವರಿಗೆ ಚಾಣಾಕ್ಷ ಕಳ್ಳರ ಕೈಚಳಕ ತಿಳಿದದ್ದು ಬೆಳಿಗ್ಗೆಯೇ. ಆ ನಾಯಿ ಮನೆಯವರೂ ಬೆಳಿಗ್ಗೆ ನೋಡುತ್ತಾರೆ. ಮನೆಯ ಹಿಂದಿನ ತೆಂಗಿನ ಮರದಿಂದ ಒಂದು ಗರಿ, ಎರಡು ಕಾಯಿಗಳು ನೆಲಕಚ್ಚಿದ್ದವು. ಶಬ್ದಕ್ಕೆ ನಾಯಿ ಜೋರಾಗಿ ಬೊಗಳಿದ್ದರಿಂದ ಕಳ್ಳರು ಓಟಕಿತ್ತಿದ್ದರು. ಇದೇ ಸಾಕಾಯ್ತು ಅವರಿಗೆ ಮತ್ತೂ ಕೊಚ್ಚಿಕೊಳ್ಳಲು. ‘ನಮ್ ಮನೇಲಿ ಹುಲೀ ಥರದ ನಾಯಿ ಇದ್ದಿದ್ದ್ರಿಂದಾನೇ ನಮ್ ಮನೆಗೆ ನುಗ್ಗೋಕೆ ಯಾವೋನೂ ಧೈರ್ಯ ಮಾಡೋಲ್ಲ. ನಮ್ ಬ್ಲ್ಯಾಕಿನೇ ಬ್ಲ್ಯಾಕೀ’ ಅಂದಿದ್ದಾಯ್ತು, ಆಡಿದ್ದಾಯ್ತು. ಅದು ನಿಜವೇ. ನಿಯತ್ತಿಗೆ ಇನ್ನೊಂದು ಹೆಸರೇ ನಾಯಿ. ಕಾರ್ಯವಾಸಿ ಕತ್ತೆ ಕಾಲ್ಕಟ್ಟು ಅನ್ನೋಹಾಗೆ ತಮ್ಮ ಕೆಲಸ ಆಗುವ ತನಕ ಒಂದು ಮುಖ ತೋರುವ ಮನುಷ್ಯರು ತಮ್ಮ ಕೆಲಸ ಆದಮೇಲೆ ಮೂಸಿಯೂ ನೋಡೋಲ್ಲ. ಒಂದು ಸಣ್ಣ ಮಾತಿಗೂ ಸ್ನೇಹ, ಪ್ರೀತಿಯನ್ನು ಮರೆತು ಬೆನ್ನು ಹಾಕಿ ಅಹಮಿಗೆ, ದುರಭಿಮಾನಕ್ಕೆ ಮನಸೋಲುವ ಮನುಷ್ಯರಿಗಿಂತ ನಾಯಿ ನಿಜಕ್ಕೂ ಸಾವಿರಪಾಲು ಮೇಲು. ಈ ಪ್ರಾಣಿ ಯಾವ ಅಹಂ ಇಲ್ಲದೆ ಪ್ರೀತಿಯಿಂದ ಸಾಕಿದ ಒಡೆಯನ ಕಾಲಬುಡದಲ್ಲೇ ಹೊರಳಾಡುತ್ತಿರುತ್ತದೆ. ಆದರೆ ನಾವು ಅದನ್ನು ನಮ್ಮ ಪ್ರೀತಿಯನ್ನೂ, ಕೋಪತಾಪಗಳನ್ನೂ ಹೊರಹಾಕುವ ಪೀಕುದಾನಿಯ ಹಾಗೆ ಬಳಸಿಕೊಳ್ಳುತ್ತೇವೆ.
ತಮ್ಮ ನಾಯಿಯ ಹೆಗ್ಗಳಿಕೆಗೆ ಆ ಮಹಾತಾಯಿ ಅಂದು ಇಡೀ ರಸ್ತೆಯಲ್ಲಿ ಅದರ ಮೆರವಣಿಗೆ ಮಾಡಿದಳು. ನಾಯಿಯನ್ನು ಈಕೆ ಕರ್ಕೊಂಡು ಹೋಗ್ತಿದ್ದಳೋ, ನಾಯಿಯೇ ಈಕೆಯನ್ನು ಎಳಕೊಂಡು ಹೋಗ್ತಿತ್ತೋ ನಂಗಂತೂ ಫುಲ್ ಕನ್ಫ್ಯೂಶನ್. ಒಂದು ವಿಷಯ ಗಮನಿಸಿದೆ. ಪಕ್ಕದ ರಸ್ತೆಯ ಹೆಣ್ಣುನಾಯಿಯನ್ನು ಕಂಡಾಗ ಬ್ಲ್ಯಾಕಿ ಬೊಗಳೋದನ್ನೇ ಮರೆತು ಸುಮ್ಮನೆ ಬಾಲ ಅಲ್ಲಾಡಿಸುತ್ತಾ ಇರುತ್ತಾನೆ.


ಬಹುಶಃ ಪಕ್ಕದ ಮನೆಯ ಸುಂದ್ರಮ್ಮಾನೂ ಇದನ್ನು ಗಮನಿಸಿದ್ರೂ ಅನ್ಸುತ್ತೆ. ನನ್ನ ನಿದ್ರಾಭಂಗದ ವಿಷಯ ಅವರಿಗೆ ತಿಳಿದಿತ್ತಲ್ಲಾ ಅದಕ್ಕೆ ‘ನಿಮ್ಮನೆಗೆ ಅದೇ ಜಾತಿಯ ಒಂದು ಹೆಣ್ಣು ನಾಯಿ ತಂದುಬಿಡ್ರಿ. ಬ್ಲ್ಯಾಕಿಸದ್ದು ಗದ್ದಲ ಇಲ್ದೆ ಬಾಲ ಅಲ್ಲಾಡಿಸಿಕೊಂಡು ಸುಮ್ಮನಿರ್ತಾನೇ’ ಅಂತ ಬೊಂಬಾಟ್ ಐಡಿಯಾ ಕೊಟ್ರು. ಅಲ್ವಾ…. ನಂಗಿದು ಹೊಳೆದೇ ಇರ್ಲಿಲ್ವಲ್ಲಾ ಆಂದ್ಕೊಂಡು, ನಮ್ಮೆಜಮಾನರಿಗೆ ಕಳ್ಳಕಾಕರ ಭಯ ಇರಲ್ಲಾರೀ ಅಂತ ಪೂಸಿ ಹೊಡೆದೆ. ‘ಬ್ಯಾಡಾ ಕಣೇ ಅಷ್ಟು ದೂರದಲ್ಲಿ ನಾಯಿ ಬೊಗಳೋ ಸದ್ದಿಗೇ ನಿಂಗೆ ಕಿರಿಕಿರಿ ಆಗ್ತಿರತ್ತೆ. ಇನ್ನು ನಮ್ಮನೇ ಕಾಂಪೌಂಡಲ್ಲೇ ಆದ್ರೆ ನಿನ್ ಕಿವಿನೇ ಕಿತ್ತೋಗತ್ತೆ’ ಅಂತ ಇನ್ನಿಲ್ಲದ ಹಾಗೆ ಬುದ್ಧಿ ಹೇಳಿದರು. ನನ್ನ ಜಾಣತನದ ನಿಜವಾದ ಕಾರಣ ಅವರಿಗೆ ಹೇಳೋಕಾಗುತ್ಯೇ? ನೀವು ಊರಿನಲ್ಲಿ ಇಲ್ಲದೇ ಹೋದಾಗ ನಂಗೆ ಭಯಾ ಆಗೋಲ್ವಾ ಅದ್ಕೇ ಪ್ಲೀಸ್ ಅಂತ ಗೋಗರೆದು ಅದೇ ಜಾತಿಯ ಹೆಣ್ಣು ನಾಯಿಯನ್ನು ನಮ್ಮನೆಗೂ ತರಿಸಿದೆ. ಗೃಹಪ್ರವೇಶ ಮಾಡಿದ ಹೊಸ ನಾಯಿಗೆ ಸ್ವೀಟಿ ಅಂತ ನಾಮಕರಣವೂ ಆಯ್ತು. ಆ ದಿನವೆಲ್ಲಾ ಬ್ಲ್ಯಾಕೀ ಸೈಲೆಂಟಾಗಿ ಬಾಲ ಅಲ್ಲಾಡಿಸುತ್ತಾ ಗೇಟಿನ ಬಳಿಯೇ ನಿಂತಿದ್ದ. ರಸ್ತೆಯಲ್ಲಿ ಯಾರು ಓಡಾಡಿದರೂ ಅವನಿಗೆ ಅದರ ಪರಿವೇ ಇಲ್ಲದವನಂತಿದ್ದ. ಎದುರು ಬದುರು ಮನೆ ನೋಡೀ.. ಸ್ವೀಟಿಯೂ ಅಷ್ಟೇ ಬಲು ಸ್ವೀಟಾಗಿ ಬ್ಯಾಕಿಯನ್ನೇ ನೋಡುತ್ತಾ ನಿಂತಿರುತ್ತಿದ್ದಳು.
ನನ್ನ ಜಾಣತನಕ್ಕೆ ನಾನೇ ಬೆನ್ನು ತಟ್ಟಿಕೊಂಡೆ. ಆ ದಿನ ಮಧ್ಯಾಹ್ನ ನೆಮ್ಮದಿಯಾಗಿ ನಿದ್ದೆ ಮಾಡಿದೆ. ಗೆದ್ದ ಖುಷಿಯಿಂದ ಬೀಗುತ್ತಾ ಯಜಮಾನರಿಗೆ “ನೋಡಿದ್ರಾ ಈಗ ಬ್ಲ್ಯಾಕಿಯ ಸದ್ದೇ ಇಲ್ಲ. ನಾ ಮಾಡಿದ್ದು ಒಳ್ಳೇ ಕೆಲ್ಸ ತಾನೇ?” ಎಂದೆ. ಮುಸಿಮುಸಿ ನಕ್ಕ ಅವರನ್ನು ನೋಡಿ ನನ್ನ ಯಾವ ಕೆಲಸಕ್ಕೂ ಇವರು ಸೈ ಅನ್ನೋದೇ ಇಲ್ಲ ಎಂದು ಅವರ ಮುಖ ನೋಡಿ ನಾ ಸಿಟ್ಟುಗೊಂಡೆ.
ನಾಲ್ಕು ದಿನ ಕಳೆದಿತ್ತು ಅನ್ಸುತ್ತೆ. ಒಂದಿನ ಸಂಜೆ ವಾಕಿಂಗಿಗೆ ಅಂತ ಕರೆದುಕೊಂಡುಹೋದ ನಮ್ಮ ಸ್ವೀಟಿಯೂ, ಯಾರೋ ಬಂದರು ಅಂತ ಗೇಟು ಹಾರುಹೊಡೆದಿದ್ದ ಬ್ಲ್ಯಾಕಿಯೂ ಕಾಣೆಯಾದರು. ಎಲ್ಲರೂ ಹುಡುಕಿದ್ದೇ ಹುಡುಕಿದ್ದು. ಒಂದು ಗಂಟೆಯ ಸ್ವೈರವಿಹಾರ ಮುಗಿಸಿ ಕೆಂಪುಕೆಂಪಾಗಿ ಸ್ವೀಟಿಯೂ ಬ್ಲ್ಯಾಕಿಯೂ ಮನೆಗೆ ಬಂದರು. ಸದ್ಯ ನಮ್ಮನೆ ನಾಯಿಗಳು ಮನೆಗೆ ಮತ್ತೆ ಬಂದ್ವಲ್ಲಾ ಅಂತ ನಿಟ್ಟುಸಿರು ಬಿಟ್ಟು ಒಳಕರೆದುಕೊಂಡು ಬಂದು ಕಟ್ಟಿ ಹಾಕಿದೆವು. ಸ್ವೀಟಿಗೂ, ಬ್ಲ್ಯಾಕಿಗೂ ಆರಂಭದ ಆಕರ್ಷಣೆ ಕಡಿಮೆಯಾಗಿದೆ ಅನ್ಸುತ್ತೆ. ಇಬ್ರೂ ಸೇರಿ ಈಗ ಹಾದಿ ಬೀದೀಲಿ ಹೋಗೋವ್ರನ್ನು ನೋಡಿ ಬೊಗಳಿದ್ದೇ ಬೊಗಳಿದ್ದು. ಇವರ ಜುಗಲ್ ಬಂದಿಯನ್ನು ಕೇಳಿ ನಮ್ಮೆಜಮಾನ್ರು ನನ್ನ ನೋಡಿ ನಕ್ಕಿದ್ದೇ ನಕ್ಕಿದ್ದು. ಇದರ ಜೊತೆಗೆ ಸ್ವೀಟಿಯ ತಿಂಗಳ ಖರ್ಚು ಸರಿಸುಮಾರು ಒಂದೂವರೆ ಸಾವಿರಕ್ಕೆ ಸರಿಗಟ್ಟಿತು. ನಾ ಹೌಹಾರಿದೆ.
ನನ್ನ ಜಾಣತನಕ್ಕೆ ನಾನೇ ಹೊಡೆದುಕೊಳ್ಳೋ ಹಾಗಾಯಿತು. ಒಂದು ನಾಯಿಯ ಸದ್ದು ಸಾಲದೂ ಅಂತ ನನ್ ಜೇಬಿಗೆ ನಾನೇ ಇರುವೆ ಬಿಟ್ಟುಕೊಂಡ ಹಾಗೆ ಎರಡು ನಾಯಿಗಳ ಸದ್ದಿಗೆ ನನಗೆ ಮೈಗ್ರೇನ್ ಬಂದಿದೆ. ಹಗಲಿರಲಿ, ರಾತ್ರಿಯೂ ಸರಿಯಾದ ನಿದ್ರೆಯಾಗದೆ ನಿದ್ದೆಗಾಗಿ ಕಾತರಿಸಿ ಹಂಬಲಿಸುವಂತಾಗಿದೆ.
ಇದಾಗಿ ಎರಡು ತಿಂಗಳಾಗಿರಬೇಕಷ್ಟೇ. ಈಗ ನಮ್ಮ ಕಾಂಪೌಂಡಿನಲ್ಲಿ ಸ್ವೀಟಿಯ ಆರು ಮರಿಗಳು ಕುಯ್ಯೋಮರ್ರೋ ಅಂತಿವೆ. ಬಿಟ್ಟಿ ಕೊಡ್ತೇವೆ ಅಂತ ಗೊತ್ತಾಗಿ ಈ ರಸ್ತೆಯ ಮತ್ತು ಅಕ್ಕ ಪಕ್ಕದ ರಸ್ತೆಯ ನಾಲ್ಕಾರು ಮಂದಿ ಈ ಮರಿಗಳನ್ನು ದತ್ತು ತೆಗೆದುಕೊಳ್ಳೋಕೆ ನಾ ಮುಂದು ತಾ ಮುಂದು ಅಂತ ಬಂದಿದ್ದಾರೆ. ಎಷ್ಟಾದರೂ ನಾನೂ ಹೆಣ್ಣು. ತಾಯಿ ಮಕ್ಕಳ ಕಷ್ಟ ನಂಗೆ ಅರ್ಥ ಆಗದೇ ಇರುತ್ತಾ? ಪಾಪ ಇನ್ನೂ ಪುಟಾಣಿ ಮರಿಗಳಲ್ವಾ ಅಮ್ಮನ ಬೆಚ್ಚನೆಯ ಮಡಿಲಲ್ಲಿ ಒಂದು ತಿಂಗಳಾದ್ರೂ ಇರಲಿ ಅಂತ ಹೇಳಿದೆ. ಹೋಗುವಾಗ ಮರಿಗಳ ಜೊತೆ ತಾಯಿಯನ್ನೂ ಕರೆದುಕೊಂಡು ಹೋಗುವಿರಂತೆ ಅಂತ ನಾ ಹೇಳಿದೆ. ಮರಿಗಳನ್ನು ಕರೆದುಕೊಂಡು ಹೋದವರು ಭಯದಿಂದ ತಾಯಿಯ ಕಡೆಗೆ ತಿರುಗಿಯೂ ನೋಡಲಿಲ್ಲ. ಈಗ ನಮ್ಮ ಮನೆಯ ಮುಂದೆ ‘ಬೀವೇರ್ ಆಫ್ ಡಾಗ್’ ಅನ್ನೋ ಬದಲು ‘ನಾಯಿ ಬೇಕೇ – ಕೊಂಡವರಿಗೆ ನಾಯಿ ಬೆಲ್ಟ್, ವರ್ಷಕಾಗುವಷ್ಟು ಪೆಡಿಗ್ರೀ ಫ್ರೀ’ ಎನ್ನುವ ಬೋರ್ಡಿದೆ.
ನಮ್ಮ ಅಕ್ಕಪಕ್ಕದ ರಸ್ತೆಯಲ್ಲೆಲ್ಲಾ ನಾಯಿಗಳದ್ದೇ ದರ್ಬಾರು. ಅವುಗಳದ್ದೇ ಬೌ ಬೌ ಸದ್ದು. ನಮ್ಮ ರಸ್ತೆಯ ಹೆಸರನ್ನು ‘ವರಾಹಿ ರಸ್ತೆ’ ಎನ್ನುವ ಬದಲು ‘ದತ್ತಾತ್ರೇಯ ರಸ್ತೆ’ ಅಂತಲೋ ‘ಶ್ವಾನ ರಸ್ತೆ’ ಅಂತ ಹೆಸರಿಡೋಕೆ ನಮ್ಮ ಕಾರ್ಪೊರೇಟರ್‍ಗೆ ಅಹವಾಲು ಸಲ್ಲಿಸಿದ್ದೇನೆ.

IMG 20180306 WA0008 1 edited
-ಡಾ.ಶುಭಶ್ರೀಪ್ರಸಾದ್, ಮಂಡ್ಯ

Share This Article
Leave a comment