November 16, 2024

Newsnap Kannada

The World at your finger tips!

deepa1

ಪರಿಸರ ನಾಶ- ಪರಿಸರದ ದಿನಾಚರಣೆ ಆತ್ಮವಂಚಕ ಮನಸ್ಥಿತಿ

Spread the love

ವಿಶ್ವ ಪರಿಸರ ದಿನ ಎಂಬ ನಾಟಕ,
ನೀರು ಉಳಿಸಿ ಜೀವ ಉಳಿಸಿ ಎಂಬ ಮೂರ್ಖತನ,
ಹಸಿರೇ ಉಸಿರು, ಗಿಡ ನೆಡಿ ಎಂಬ ಫ್ಯಾಷನ್,
ಪ್ರಕೃತಿಯೇ ದೇವರು ಎಂಬ ಸೋಗಲಾಡಿತನ…..

ಅರೆ, ಮನುಷ್ಯನೇ ಪ್ರಕೃತಿಯ ಒಂದು ಭಾಗ,
ಆತನ ಅಸ್ತಿತ್ವವದ ಮೂಲವೇ ಪರಿಸರ,
ಅದನ್ನು ಉಳಿಸಿಕೊಳ್ಳದೇ ನಾಶ ಮಾಡುತ್ತಿರುವ ಮನುಷ್ಯನಿಗೆ ಪರಿಸರ ದಿನ ಆಚರಿಸುವ ನೈತಿಕತೆಯೇ ಇಲ್ಲ, ಅದೊಂದು ಆತ್ಮವಂಚನೆ – ಬೂಟಾಟಿಕೆ.

ಸ್ವತಃ ತನ್ನ ಕಣ್ಣನ್ನು ತಾನೇ ತಿವಿದುಕೊಂಡು ನನ್ನ ಕಣ್ಣನ್ನು ಉಳಿಸಿ ಎಂದು ಗೋಗರೆಯುವ ನಾಟಕವೇಕೆ,

ಹೃದಯವನ್ನು ಇರಿದುಕೊಂಡು ಹೃದಯ ಉಳಿಸಿ ಎಂಬ ಕಣ್ಣೀರೇಕೆ,

ಆತ್ಮಹತ್ಯೆ ಮಾಡಿಕೊಳ್ಳಲು ವಿಷ ಕುಡಿದು ಜೀವ ಉಳಿಸಿ ಎಂದು ಬೇಡುವಂತ ದೈನೇಸಿ ಸ್ಥಿತಿ ಏಕೆ….

ಈ ಮನುಷ್ಯನಿಗೆ ಬೇಕಿರುವುದು ದೊಡ್ಡ ದೊಡ್ಡ ಉದ್ದುದ್ದದ ವಿಶಾಲ ರಸ್ತೆಗಳು, ಲೆಕ್ಜುರಿ ಅಪಾರ್ಟ್‌ಮೆಂಟ್ ಗಳು, ಬೃಹತ್ ಕಟ್ಟಡಗಳು, ಜಂಗಲ್ ಲಾಡ್ಜ್ ಗಳು, ಸ್ಮಾರ್ಟ್ ಸಿಟಿಗಳು, ನಿರಂತರ ವಿದ್ಯುತ್, ವಿಮಾನ ನಿಲ್ದಾಣಗಳು, ಭವ್ಯ ಆಸ್ಪತ್ರೆಗಳು, ರಾಸಾಯನಿಕ ಕಾರ್ಖಾನೆಗಳು,….‌

ಮೊಬೈಲ್, ಷೂ, ಲಿಪ್ ಸ್ಟಿಕ್, ಡ್ರೆಸ್, ಕಾರ್, ಕಮೋಡ್ ಗಳಲ್ಲಿ ಅತ್ಯುತ್ತಮ ಕ್ವಾಲಿಟಿ ನಿರೀಕ್ಷಿಸುವ – ಬಯಸುವ ಇದೇ ಮನುಷ್ಯನಲ್ಲಿ ಆತನ ದೇಹ ಮತ್ತು ಮಾನಸಿಕ ಆರೋಗ್ಯದಲ್ಲಿ ಯಾವುದೇ ಕ್ವಾಲಿಟಿ ಇರುವುದಿಲ್ಲ.

ನೀರನ್ನು, ಗಾಳಿಯನ್ನು, ಆಹಾರವನ್ನು ವಿಷಯುಕ್ತ ಮಾಡಿರುವ ಸರ್ಕಾರಗಳು ಈಗ ವಿಶ್ವ ಪರಿಸರ ದಿನ ಎಂಬ ಜಾಗೃತಿ ಮೂಡಿಸುವ ದಿನವನ್ನು ಆಚರಿಸುವ ನಾಟಕ ಪ್ರದರ್ಶಿಸುತ್ತಿವೆ.

ಅಭಿವೃದ್ಧಿಯ ಮಾನದಂಡಗಳನ್ನು ತಪ್ಪಾಗಿ ಅರ್ಥೈಸಿ ಆಧುನಿಕ ತಂತ್ರಜ್ಞಾನ ಉಪಯೋಗಿಸಿಕೊಂಡು ಒಂದು ಕಡೆ ಪರಿಸರ ನಾಶ, ಇನ್ನೊಂದು ಕಡೆ ಮಾನವೀಯ ಮೌಲ್ಯಗಳ ಕುಸಿತಕ್ಕೆ ಕಾರಣವಾಗಿದೆ.

ಅಭಿವೃದ್ಧಿಯೂ ಬೇಕು, ಆಧುನಿಕತೆಯೂ ಬೇಕು, ತಂತ್ರಜ್ಞಾನವೂ ಬೇಕು, ಬೃಹತ್ ಜನಸಂಖ್ಯೆಯ ಬೇಡಿಯನ್ನೂ ಪೂರೈಸಬೇಕು, ಅದರಲ್ಲಿ ಯಾವುದೇ ರಾಜಿ ಬೇಡ. ಆದರೆ ಅದರ ಅರ್ಥ ಪರಿಸರ ಮತ್ತು ಮಾನವೀಯತೆಯ ನಾಶ ಎಂದಲ್ಲ. ಅವುಗಳ ಸಮತೋಲನ ಮತ್ತು ಸಮನ್ವಯ.

ದುರಾದೃಷ್ಟವಶಾತ್ ಇಂದಿನ ಅಭಿವೃದ್ಧಿ ವಿನಾಶಕಾಲೇ ವಿಪರೀತ ಬುದ್ದಿ ಎಂಬಂತೆ ಆಗಿದೆ.

ಅಣುವಿನ ಕಣವಾಗಿ
ಪರಿಸರದ ದಿನಕ್ಕಾಗಿ
ನಾ ಕೊಡುವುದಾದರೂ ಏನು…………….

ಈಗಾಗಲೇ ಎಲ್ಲವನ್ನೂ ಕೊಟ್ಟಾಗಿದೆ.
ಈಗೇನಿದ್ದರೂ ಎಲ್ಲವೂ ಪಡೆಯುವುದೆ.

ಏನೇನು ಪಡೆದಿರುವೆ ಹೇಳಲೆ……

ತಲೆ ತಿರುಗುತ್ತಿದೆ ಕೆಟ್ಟ ಬಿಸಿಲಿನ ಝಳಕ್ಕೆ ಸಿಲುಕಿ,

ಕಣ್ಣು ಉರಿಯುತ್ತಿದೆ ಧೂಳು ತುಂಬಿದ ಗಾಳಿಗೆ ಸಿಲುಕಿ,

ಉಸಿರಾಡುವುದೂ ಕಷ್ಟವಾಗುತ್ತಿದೆ ವಿಷಪೂರಿತ ಗಾಳಿಗೆ ಸಿಲುಕಿ,

ಕಿವಿ ನೋಯುತ್ತಿದೆ ಕರ್ಕಶ ಶಬ್ದಕ್ಕೆ ಸಿಲುಕಿ,

ಬಾಯಿ ಹುಣ್ಣಾಗಿದೆ ಕಲುಷಿತ ನೀರಿಗೆ ಸಿಲುಕಿ,

ನಾಲಿಗೆ ಹೆಪ್ಪುಗಟ್ಟಿದೆ ರಾಸಾಯನಿಕ ಬೆರೆಸಿದ ತಂಪು ಪಾನೀಯಕ್ಕೆ ಸಿಲುಕಿ,

ಗಂಟಲು ಕೆಟ್ಟಿದೆ ಮಲಿನ ನೀರಿಗೆ ಸಿಲುಕಿ,

ಹೊಟ್ಟೆ ನೋಯುತ್ತಿದೆ ಕಲಬೆರಕೆ ಆಹಾರಕ್ಕೆ ಸಿಲುಕಿ,

ಸಾಕೇ ಇನ್ನೂ ಬೇಕೇ….

ಆದರೂ,

ಹೇಳುತ್ತಿದ್ದೇವೆ ಅಭಿವೃದ್ಧಿ ಹೊಂದುತ್ತಿದ್ದೇವೆಂದು,

ಶಿಕ್ಷಣದ ಗುಣಮಟ್ಟ ಹಾಳಾಗುತ್ತಿದೆ,
ಆಡಳಿತ ವ್ಯವಸ್ಥೆ ಹದಗೆಡುತ್ತಿದೆ,
ಚುನಾವಣಾ ರಾಜಕೀಯ ಹಳ್ಳ ಹಿಡಿಯುತ್ತಿದೆ,
ನ್ಯೆತಿಕತೆ ಕುಸಿಯುತ್ತಿದೆ,
ಮಾನವೀಯ ಮೌಲ್ಯಗಳು ಕಡಿಮೆಯಾಗುತ್ತಿವೆ,

ಆದರೂ,

ಹೇಳುತ್ತಿದ್ದೇವೆ ಅಭಿವೃದ್ಧಿ ಹೊಂದುತ್ತಿದ್ದೇವೆಂದು,

SMART CITY ಆಗುತ್ತಿದೆ,
BULLET TRAIN ಬರುತ್ತಿದೆ,
E-GOVERNENCE ಆಗುತ್ತಿದೆ,
DIGITAL INDIA ಬರುತ್ತಿದೆ,
HIGHTECH ಆಸ್ಪತ್ರೆ ಆಗುತ್ತಿದೆ,
FIRST CLASS. ರಸ್ತೆಗಳು ಬರುತ್ತಿವೆ,

ಶ್ರೀಮಂತರು ಜಾಸ್ತಿಯಾಗುತ್ತಿದ್ದಾರೆ,
ತಂತ್ರಜ್ಞಾನ ಮುಂದುವರಿಯುತ್ತಿದೆ,

ಆದರೆ,
ಧೈರ್ಯವಾಗಿ ಹೇಳಲು ಸಾಧ್ಯವಾಗುತ್ತಿಲ್ಲ ನಾವು ಮುಂದುವರಿಯುತ್ತಿದ್ದೇವೆಂದು.

ಈ ಅಭಿವೃದ್ಧಿ,
ಹಣ ಕೇಂದ್ರಿತ, ತಂತ್ರಜ್ಞಾನ ಆಧಾರಿತ, ಅಂಕಿ ಸಂಖ್ಯೆ ಪ್ರೇರಿತ,

ವ್ಯಕ್ತಿತ್ವಗಳೇ ಕುಸಿಯುತ್ತಿರುವಾಗ, ಮಾನವೀಯತೆ ಮರೆಯಾಗುತ್ತಿರುವಾಗ,
ಸಮಾನತೆ ಕಾಣದಾದಾಗ, ಪ್ರಬುದ್ಧತೆ ಬೆಳೆಯದಾದಾಗ,
ಅಭಿವೃದ್ಧಿ ತಾತ್ಕಾಲಿಕ ಮತ್ತು ವಿನಾಶಕಾರಕ,

ಪ್ರಕೃತಿ ಪರಿಸರಗಳನ್ನೇ ದೇವರೆಂದು ಹೇಳಿ ಅದರ ಹೃದಯಕ್ಕೆ ಬೆನ್ನಿಗೆ ಚೂರಿ ಹಾಕುವ ಈ ಮನುಷ್ಯ ಪ್ರಾಣಿಗೆ ಏನು ಮಾಡುವುದು.

ಪರಿಸರ ನಾಶ ಮಾಡುತ್ತಾ ಪರಿಸರದ ದಿನ ಆಚರಿಸುವ ಆತ್ಮವಂಚಕ ಮನಸ್ಥಿತಿ ನಮ್ಮದು.

ತಕ್ಷಣ ಮಾಡಬೇಕಾದ ಕೆಲಸ ಬಹಳಷ್ಟಿದೆ. ಆದರೆ ಮಾಡುವವರು ಯಾರು ಎಂಬುದೇ ದೊಡ್ಡ ಪ್ರಶ್ನೆ……….

ವಿವೇಕಾನಂದ. ಹೆಚ್.ಕೆ.

Copyright © All rights reserved Newsnap | Newsever by AF themes.
error: Content is protected !!