November 26, 2024

Newsnap Kannada

The World at your finger tips!

deepa1

ಎಲ್ಲಿಯಾದರೂ ಸಿಕ್ಕಾನೆಯೇ ಬುದ್ದ……

Spread the love

ಸುಖ ಭೋಗಗಳನ್ನು ತ್ಯಜಿಸಿ ಇನ್ನೇನೋ ಹುಡುಕುತ್ತಾ ಸಿದ್ದಾರ್ಥ ಎಂಬ ಮನುಷ್ಯ ಬುದ್ಧನಾದ…….

BUDDA1

ಬುದ್ದನನ್ನು ಹುಡುಕುತ್ತಾ ಮತ್ತೊಬ್ಬ ಸುಖ ಭೋಗಗಳ ದಾಸನಾದ…

ಸಿದ್ದಾರ್ಥನನ್ನು ಹುಡುಕಬಹುದು, ಆತ ಸಿಗುತ್ತಾನೆ.
ಆದರೆ ಬುದ್ದನನ್ನು ಹುಡುಕುವುದೆಲ್ಲಿ,
ಒಳಗೋ ಹೊರಗೋ…….

ಕ್ರಿಸ್ತ ಪೂರ್ವದ ಬುದ್ಧನೆಲ್ಲಿ,
2021 ರ ಬುದ್ದು ( ದಡ್ಡ )ವೆಲ್ಲಿ,

ಸ್ವಂತ ಮನೆಯಲ್ಲಿ ಕುಳಿತು ಆಹಾರ ಸೇವಿಸುತ್ತಾ ಟಿವಿ ನೋಡುತ್ತಾ ಬುದ್ದನನ್ನು ಹುಡುಕಿದನೊಬ್ಬ….

ಲೈಬ್ರರಿಯಲ್ಲಿ ಕುಳಿತು ಪುಸ್ತಕ ಓದುತ್ತಾ, ಬರೆಯುತ್ತಾ ಹುಡುಕಿದ ಬುದ್ದನನ್ನು ಇನ್ನೊಬ್ಬ…..

ಅಧ್ಯಯನ ಮಾಡುತ್ತಾ, ಚಿಂತಿಸುತ್ತಾ ಉಪನ್ಯಾಸ ನೀಡುತ್ತಾ ಬುದ್ದನನ್ನು ಹುಡುಕಿದ ಮಗದೊಬ್ಬ….

ಪ್ರಶಸ್ತಿಗಾಗಿ, ಪ್ರಚಾರಕ್ಕಾಗಿ, ಪ್ರಖ್ಯಾತಿಗಾಗಿ, ಬುದ್ದಿಯ ಪ್ರದರ್ಶನಕ್ಕಾಗಿ ಹುಡುಕುತ್ತಲೇ ಇದ್ದಾರೆ ಅನೇಕ ಸಿದ್ದಾರ್ಥರು ಬುದ್ದನನ್ನು…….

ಸಿಕ್ಕಾನೆಯೇ ಬುದ್ದ……

ಕಾಡು ಮೇಡುಗಳಲ್ಲಿ ಅಲೆದು, ದೇಹ ಮನಸ್ಸುಗಳನ್ನು ದಂಡಿಸಿ, ಚರ್ಚೆ ಸಂವಾದ ಮಂಥನಗಳನ್ನು ಮಾಡಿ, ಧ್ಯಾನದ ಉತ್ತುಂಗ ತಲುಪಿ ಬುದ್ದನಾದವನನ್ನು ಹುಡುಕುವುದು ಸುಲಭವೇ……

ಬೆಳಗಿನ ತಿಂಡಿ, ಮಧ್ಯಾಹ್ನದ ಊಟ, ಸಂಜೆಯ ಉಪಹಾರ, ರಾತ್ರಿಯ ಭೋಜನ ಮಾಡಿ, ಬೆಚ್ಚಗಿನ ಮನೆಯಲ್ಲಿ, ಕುಟುಂಬದೊಂದಿಗೆ, ನಾಳಿನ ಯೋಚನೆಗಳೊಂದಿಗೆ, ಸ್ನಾನ ಶೌಚಗಳ ಅನುಕೂಲದೊಂದಿಗೆ, ಮೈಥುನದ ಸುಖದೊಳಗೆ, ಮೊಬೈಲ್ ಮಾಯೆಯೊಳಗೆ ಸಿಕ್ಕಾನೆಯೇ ಬುದ್ದ…..

ದೇಹದಲ್ಲಿ ಅಡಗಿದ್ದಾನೆಯೇ ಬುದ್ದ,
ಮನಸ್ಸಿನಲ್ಲಿ ಅಡಗಿದ್ದಾನೆಯೇ ಬುದ್ದ,
ಹೃದಯದಲ್ಲಿ ಅಡಗಿದ್ದಾನೆಯೇ ಬುದ್ದ,…

ಜ್ಞಾನದಿಂದ ಸಿಗುವನೇ ಬುದ್ದ,
ಭಕ್ತಿಯಿಂದ ಸಿಗುವನೇ ಬುದ್ದ,
ಕರ್ಮದಿಂದ ಸಿಗುವನೇ ಬುದ್ದ,
ಯೋಗ ಧ್ಯಾನಗಳಿಂದ ಸಿಗುವನೇ ಬುದ್ದ……

ಇವುಗಳಿಂದ ದೇವರನ್ನು ಹುಡುಕಬಹುದು,
ಆದರೆ ಬುದ್ದನನ್ನು ಹುಡುಕಬಹುದೆ….

ಹೌದು, ಬುದ್ದನನ್ನು ಹುಡುಕಬಹುದು, ಎಲ್ಲಿ ? ಹೇಗೆ ?….

ಮಾನವೀಯ ಮೌಲ್ಯಗಳಲ್ಲಿ ಬುದ್ದನನ್ನು ಹುಡುಕಬಹುದು…..

ಪ್ರೀತಿಯಲ್ಲಿ,
ತ್ಯಾಗದಲ್ಲಿ,
ಕರುಣೆಯಲ್ಲಿ,
ವಿನಯದಲ್ಲಿ,
ಸಭ್ಯತೆಯಲ್ಲಿ,
ಕ್ಷಮಾಗುಣದಲ್ಲಿ,
ಸ್ನೇಹದಲ್ಲಿ,
ಸಂಬಂಧಗಳಲ್ಲಿ,
ತಾಳ್ಮೆಯಲ್ಲಿ,
ಸಂಯಮದಲ್ಲಿ,
ಧೈರ್ಯದಲ್ಲಿ,
ನಿರಂತರ ಪ್ರಯತ್ನದಲ್ಲಿ,……

ಬುದ್ದ ಸಿಕ್ಕರೂ ಸಿಗಬಹುದು…

ವೈರಸ್ಸಿನ ಭಯದಲ್ಲಿ,
ಸಾವಿನ ಆತಂಕದಲ್ಲಿ,
ಸೋಲುವ ಭೀತಿಯಲ್ಲಿ,
ಕುಟುಂಬದ ಮೋಹದಲ್ಲಿ,
ಹಣದ ದಾಹದಲ್ಲಿ,
ಅಧಿಕಾರದ ಗುಂಗಿನಲ್ಲಿ,
ಪ್ರಚಾರದ ಅಮಲಿನಲ್ಲಿ,
ಸಾಧನೆಯ ಅಹಂಕಾರದಲ್ಲಿ….

ಬುದ್ದನನ್ನು ಹುಡುಕುವ ನಾಟಕವೇಕೆ……

ನಾನು ಸಹ ಹುಡುಕುತ್ತಲೇ ಇದ್ದೇನೆ ಬುದ್ದನನ್ನು,
ನನ್ನೊಳಗಿನ ಬೆಳಕನ್ನು ಬೆಳಗಿಸುವಾ ಬುದ್ದನನ್ನು….

ಸಿಕಿಲ್ಲ ಆತ ಇನ್ನೂ……


ಯಾರೋ ನೀನು ಸಿದ್ಧಾರ್ಥ,

ಒಂದು ರಾಜ್ಯದ ರಾಜಕುಮಾರನಂತೆ,
ಕಷ್ಟ, ನೋವು, ಬೇಸರ ಏನೂ ಗೊತ್ತಿಲ್ಲದೆ ಬೆಳೆದ ಯುವರಾಜನಂತೆ,

ಹೆಂಡತಿ – ಮಕ್ಕಳೊಂದಿಗೆ ಹಾಯಾಗಿದ್ದ ಸುಖಪುರುಷನಂತೆ,

ಆದರೆ ಅದೇನಾಯಿತೋ ಸಿದ್ಧಾರ್ಥ ನಿನಗೆ,

ಒಮ್ಮೆ ರಾಜ್ಯವನ್ನೆಲ್ಲಾ ಸುತ್ತಾಡುವಾಗ ಜನರ ಬದುಕು ನೋಡಿ ಗಾಬರಿಯಾದೆಯಂತೆ,

ಕಷ್ಟ, ನೋವು, ರೋಗ, ಸಾವುಗಳು ನಿನ್ನನ್ನು ಕಾಡಲಾರಂಬಿಸಿದವಂತೆ,

ಅದಕ್ಕೆ ಕಾರಣಗಳೇನು, ಪರಿಹಾರಗಳೇನು ಎಂದು ಮನಸ್ಸು ನಿನ್ನನ್ನು ಗಲಿಬಿಲಿಗೊಳಿಸಿತಂತೆ,

ಆಗ ಒಂದು ದಿನ ಇದ್ದಕ್ಕಿದ್ದಂತೆ ರಾಜ್ಯ, ಸಂಸಾರ, ಸುಖ ಭೋಗ ಎಲ್ಲಾ ತೊರೆದು ರಾತ್ರೋರಾತ್ರಿ ಹೊರಟೆಯಂತೆ,

ಬೀದಿಬೀದಿಗಳನ್ನ, ರಾಜ್ಯ ಪ್ರದೇಶಗಳನ್ನ, ಅಲೆಮಾರಿಯಂತೆ ಸುತ್ತಾಡಿದೆಯಂತೆ,

ಮಹಾನ್ ಪಂಡಿತ, ಪಾಮರ, ಜ್ಞಾನಿಗಳನ್ನು ಭೇಟಿ ಮಾಡಿ ಚರ್ಚಿಸಿದೆಯಂತೆ,

ಭಿಕ್ಷುಕನಂತೆ ಭಿಕ್ಷೆ ಬೇಡಿ ತಿಂದು ಬದುಕಿದೆಯಂತೆ,

ಉಪವಾಸವಿದ್ದು ತಿಂಗಳುಗಟ್ಟಲೆ ದೇಹ ದಂಡಿಸಿದೆಯಂತೆ,

ವರ್ಷಾನುಗಟ್ಟಲೆ ಕಾಡು ಮೇಡುಗಳಲ್ಲಿ ಅಲೆದು ಧ್ಯಾನ, ತಪಸ್ಸು ಮಾಡಿದೆಯಂತೆ,

ಒಂದು ದಿನ ನಿನಗೆ ಭೋದಿವೃಕ್ಷದ ಕೆಳಗೆ ಜ್ಞಾನೋದಯವಾಯಿತಂತೆ…….

ಅಬ್ಬಾ,….

ಅದೇನು ಜ್ಞಾನೋದಯವಾಯಿತೋ ಅಥವಾ ನೀನೇ ಜ್ಞಾನವಾದೆಯೋ,
ಅಲ್ಲಿಂದ ಆದೆ ನೋಡು ನೀನು ಗೌತಮ ಬುದ್ದ,

ಯಪ್ಪಾ,
ಅದೇನು ಚಿಂತನೆ, ಅದೇನು ಜ್ಞಾನ, ಅದೇನು ಅರಿವು,

ಯಾವ ಡಾಕ್ಟರುಗಳು, ಯಾವ ಮನಶಾಸ್ತ್ರಜ್ಞರು, ಯಾವ ಜೀವ ವಿಜ್ಞಾನಿಗಳಿಗೂ,
ಸಾಧ್ಯವಾಗದ ಮನುಷ್ಯನ ಆತ್ಮ, ಮೆದುಳು, ಮನಸ್ಸು, ಭಾವನೆ, ಜೀವನಕ್ರಮವನ್ನು
ಅರೆದು ಕುಡಿದು ಅದರ ಎಲ್ಲವನ್ನೂ ತೆರೆದಿಟ್ಟ ಮಹಾನ್ ವ್ಯಕ್ತಿಯಾದೆ,

ಜನರ ಬದುಕು ಇಷ್ಟೊಂದು ಸಂಕೀರ್ಣವಾಗಿರದ, ನಾಗರಿಕತೆಯ ಮೊದಲ ಮೆಟ್ಟಿಲು ಏರುತ್ತಿದ್ದ,
ಆ ದಿನಗಳಲ್ಲೇ ಮನುಷ್ಯ ಜನಾಂಗದ ಇಡೀ ವ್ಯಕ್ತಿತ್ವವನ್ನು ಅನಾವರಣಗೊಳಿಸಿದ ಅದ್ಭುತ ವ್ಯಕ್ತಿಯಾದೆ,

ನಿನ್ನ ಒಂದೊಂದು ಮಾತುಗಳು ಅರಗಿಸಿಕೊಳ್ಳುವುದೇ ಕಷ್ಟ,

ಕಲ್ಲಿನ ಕೆತ್ತನೆಯಿಂದ ಹಿಡಿದು ಫೇಸ್ ಬುಕ್ – ವಾಟ್ಸ್ ಆ್ಯಪ್ – ಟ್ವಿಟರುಗಳ ತನಕ ಎಲ್ಲಾ ಸ್ಥಳಗಳಲ್ಲಿ ನಿನ್ನ
ಮಾತುಗಳಿಗೇ ಪ್ರಥಮ ಸ್ಥಾನ.

ಅಷ್ಟೇ ಏಕೆ, ಪಾಶ್ಚಾತ್ಯ, ಪೌರಾತ್ಯ ಸಂಸ್ಕೃತಿಗಳನ್ನ,
ವಿಶ್ವದ ಬಹುತೇಕ ಧರ್ಮಗಳನ್ನ, ಅಸಾಮಾನ್ಯ ಗ್ರಂಥಗಳನ್ನ, ಅನೇಕ ದೇಶಗಳ ಸಂವಿಧಾನಗಳನ್ನ,
ಓದಿ ಅರ್ಥ್ಯೆಸಿಕೊಂಡಿದ್ದ ಅಂಬೇಡ್ಕರ್ ಅವರೇ ನಿನಗೆ ಶರಣಾದರೆಂದರೆ ನೀನೇನು ಮನುಷ್ಯನೇ,

ಪ್ರಕೃತಿಯ ಅದ್ಭುತ, ಆಶ್ಚರ್ಯಕರ, ಸೃಷ್ಟಿಯಾದ ಗೌತಮ ಬುದ್ದನೇ,
ನಿನ್ನನ್ನು ಒಂದೇ ಒಂದು ಬಾರಿ ನೋಡಬೇಕೆನಿಸಿದೆ, ಮಾತನಾಡಬೇಕಿನಿಸಿದೆ,

ಈ ಹುಚ್ಚರ ಸಂತೆಯಲ್ಲಿ ನಿನ್ನನ್ನು ನಿಲ್ಲಿಸಿ ಎಲ್ಲರಿಗೂ ಹೇಳಬೇಕಿದೆ,

ಮನುಷ್ಯರೆಂದರೆ ಏನೆಂದು ಈ ಅನಾಗರಿಕರಿಗೆ,

ಬಾರೋ ಗೌತಮ ಬುದ್ದನಾದ ಸಿದ್ಧಾರ್ಥನೇ, ಮತ್ತೊಮ್ಮೆ ಹುಟ್ಟಿ ಬಾ,

  • ವಿವೇಕಾನಂದ. ಹೆಚ್.ಕೆ.
Copyright © All rights reserved Newsnap | Newsever by AF themes.
error: Content is protected !!