ಗೆಳೆಯನ ಬಾಳಗೆಳತಿಗೆ

Team Newsnap
1 Min Read

ಮೊದಲು ನೆನಪಿಗೆ ಬರುವನು
ಅವನು, ನನ್ನ ಅಂತರಂಗದ ಗೆಳೆಯ
ನಂತರ ನೀನು ಅವನ ಬಾಳ ಗೆಳತಿ

ನನಗೆ ಗೊತ್ತು ಅವನೀಗ ಇಲ್ಲಿಲ್ಲ
ಬೆಂದು ಹೋಗಿದೆ ನೊಂದು ಜೀವ
ಅಪರಕರ್ಮವ ಮಾಡಲಾಗಲಿಲ್ಲ
ಸ್ವರ್ಗ ಸೇರಿದನೊ ಇಲ್ಲವೊ ಎಂದು
ಕೊರಗಿ ಬಸವಳಿದು ಬೇಸರಿಸದಿರು

ಕಾಣು ನೀನವನನ್ನು ದಿನನಿತ್ಯವೂ
ಅವನ ಮಕ್ಕಳೊಳಗೆ, ಬತ್ತದ ಸೆಲೆಯ‌ ನೆಲೆಯದು ನಿನ್ನ ಮನಮಾಡಿನೊಳಗೆ
ಯೋಚಿಸರಲಿಲ್ಲ ಅವ ಸಾವಿನ ಬಗ್ಗೆ
ಅಥವಾ ನಿನ್ನ ಬಿಟ್ಟು ಹೋಗುವ ಬಗ್ಗೆ

ಚಿಂತಿಸಿದ ಯಾವಾಗಲೂ ಬದುಕನ್ನು ಸಂಪೂರ್ಣ ನಿನ್ನೊಂದಿಗೆ ಕಳೆವುದಕೆ
ನೋಡ ಬಯಸಿದ್ದನವ ಹೊಸ ಜಾಗ
ಹೊಸ ಸಿನಿಮಾ ಸಿರಿಯಲ್ಲು ಉಡುತ್ತ
ಹೊಸಬಟ್ಟೆ ಬಳಗ ಆಮೋದ ಪ್ರಮೋದ

ಅವನಲ್ಲಿತ್ತು ಆಕಾಶದಷ್ಟು ಆಲೋಚನೆ ಯಾರಿಗೂ ಹೇಳಲಿಲ್ಲ ಯಾಕೆಂದರೆ ಬದುಕುವೆನೆಂದಷ್ಟೆ ಭಾವಿಸಿದ್ದ ದುಡಿದು
ಅಪರಿಮಿತ ಕಷ್ಟದಲಿ ಕೂಡಿದ ಹಣವ
ಖರ್ಚು ಮಾಡಬಯಸಿದ್ದ ನಿನ್ನೊಂದಿಗೆ

ಬರಿಗೈಯ ಋಣದಿಂದ ಶೂನ್ಯಕ್ಕೇರಿ ಸಂಪಾದಿಸಿದ್ದ ಮುಗಿಲೆತ್ತರ ಸುರಿಸಿ
ಬೆವರು ಕೂಡಿ ಒಂದೊಂದು ರೂಪೈ
ನಿಂತನೆದ್ದ ಸರೀಕರಲಿ ಸಮಾಜದಲಿ
ಗಣ್ಯನಾಗಿ ಮಾನ್ಯನಾಗಿ ವಿನೀತನಾಗಿ

ಆಲೋಚಿಸವನ ಯೋಜನೆಗಳ ಬಗ್ಗೆ
ನನಸಾಗಬೇಕಾದ ಕನಸುಗಳು ಬುಗ್ಗೆ
ಆಗಬೇಕಾದ ಕೆಲಸಕೆ ಹಾಕುತ್ತ ಲಗ್ಗೆ
ಪ್ರೀತಿಸು ಮಕ್ಕಳ ದುಪ್ಪಟ್ಟು ಅವನ
ನೆನಪನ್ನು ಚಿರವಾಗಿ ಎದೆಯಲಿಟ್ಟು

ಹರಿಯದಿರಲಿ ಕಣ್ಣೀರು, ನೀನತ್ತಾಗ ನೋವಾಗತ್ತಿತ್ತು ಅವನಿಗೆ ಬಹಳ
ನಿನಗದು ಗೊತ್ತು ಆದಕೆ ನವಿರಾಗಿ ಪ್ರೀತಿಯಲಿ ಅವನ ನೆನಪಿಸಿಕೊ
ನಗುತಲಿರು ಸಂತಸದಿ ಚಿರವಾಗಿ.

ಬೆಂ ಶ್ರೀ ರವೀಂದ್ರ

Share This Article
Leave a comment