ಯಡಿಯೂರಪ್ಪ ಮುಳ್ಳಿನ ಮೇಲೆ ಪಂಚೆ ಇದೆ : ಹುಷಾರಾಗಿ ತೆಗೆಯಬೇಕು ಶ್ರೀನಿವಾಸ್ ಪ್ರಸಾದ್

Team Newsnap
2 Min Read
  • ನಿಗಮ – ಮಂಡಳಿ ನೇಮಕಾತಿ ಬಗ್ಗೆ
    ಶ್ರೀನಿವಾಸ ಪ್ರಸಾದ್ ತೀವ್ರ ಅಸಮಾಧಾನ

ತಾವು ಶಿಫಾರಸು ಮಾಡಿದವರಿಗೆ ನಿಗಮ ಮಂಡಳಿಗಳಲ್ಲಿ ಸಿಎಂ ಯಡಿಯೂರಪ್ಪ ಅಧ್ಯಕ್ಷ ಸ್ಥಾನ ನೀಡದ ಬಗ್ಗೆ ಸಂಸದ ಶ್ರೀನಿವಾಸ್​ ಪ್ರಸಾದ್​ ನಿನ್ನೆಯಷ್ಟೇ ಅಸಮಾಧಾನ ಹೊರ ಹಾಕಿದ್ದರು.

ಇಂದು ಮತ್ತೆ ಯಡಿಯೂರಪ್ಪನವರ ವಿರುದ್ಧ ಮೈಸೂರಿನಲ್ಲಿ ಬಹಿರಂಗವಾಗಿ ಬೇಸರ ವ್ಯಕ್ತಪಡಿಸಿರುವ ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್, ಅಧಿಕಾರವೆಂಬುದು ಕೆಲವೊಮ್ಮೆ ಎಲ್ಲರನ್ನೂ ಬದಲಾಯಿಸಿಬಿಡುತ್ತದೆ. ಯಡಿಯೂರಪ್ಪ ಮುಳ್ಳಿನ ಮೇಲೆ ಪಂಚೆ ಹಾಕಿದ್ದಾರೆ. ಪಂಚೆಯನ್ನು ಮುಳ್ಳಿನಿಂದ ಹುಷಾರಾಗಿ ತೆಗೆಯಬೇಕು ಎಂದಿದ್ದಾರೆ.

ಯಡಿಯೂರಪ್ಪ ಬದಲಾಗಿದ್ದಾರೆ:

ಅಧಿಕಾರ ಕೆಲವೊಮ್ಮೆ ಎಲ್ಲರನ್ನೂ ಬದಲಾವಣೆ ಮಾಡಿಸಿಬಿಡುತ್ತದೆ. ಸಿಎಂ ಯಡಿಯೂರಪ್ಪ ಹಿಂದಿಗಿಂತ ಬದಲಾಗಿದ್ದಾರೆ ಎಂದು ಹೇಳೋಕೆ ಆಗುವುದಿಲ್ಲ. ಹಾಗಂತ ಅವರು ಬದಲಾಗಿಲ್ಲ ಅಂತಾನೂ ಹೇಳೋಕಾಗೋದಿಲ್ಲ. ಸಿಎಂ ಆಗಿ ಅಧಿಕಾರ ನಡೆಸೋದು ಬಹಳ ಕಠಿಣ ಕೆಲಸ. ನಿಗಮ ಮಂಡಳಿ ಆಯ್ಕೆ ವಿಚಾರ‌ದಲ್ಲಿ ನನಗೆ ಅತೃಪ್ತಿ ಇದೆ. ಇನ್ನೂ ಉತ್ತಮವಾಗಿ ಅಧ್ಯಕ್ಷರ ನೇಮಕಾತಿ ಮಾಡಬಹುದಿತ್ತು. ಎಲ್ಲರ ಸಲಹೆ ಪಡೆದು ಮಾಡಬಹುದಿತ್ತು ಅನ್ನೋದು ನನ್ನ ಅಭಿಪ್ರಾಯ ಎಂದಿದ್ದಾರೆ.

ಸಿಎಂ ಬದಲಾವಣೆ – ಹೈಕಮಾಂಡ್ ನಿರ್ಧಾರ :

ಸಿಎಂಗೆ ಇನ್ನು ಬಾಕಿ ಇರೋದು ಎರಡೂವರೆ ವರ್ಷ ಅಷ್ಟೇ. ಅಷ್ಟರೊಳಗೆ ರಾಜ್ಯದಲ್ಲಿ ಏನಾದರೂ ಮಾಡಬೇಕಲ್ಲವೇ? ರಾಜ್ಯದಲ್ಲಿ ಸಿಎಂ ಬದಲಾವಣೆ ‌ವಿಚಾರವಾಗಿ ನಾನು ಪ್ರತಿಕ್ರಿಯೆ ನೀಡೋದಿಲ್ಲ. ಅದಕ್ಕಾಗಿ ಪಕ್ಷದ ಹೈಕಮಾಂಡ್ ಇದೆ, ಹಿರಿಯ ನಾಯಕರಿದ್ದಾರೆ. ಸಿಎಂಗೆ ಕಾರ್ಯದ ಒತ್ತಡ ಇದ್ದೇ ಇರುತ್ತದೆ. ಸಿದ್ದರಾಮಯ್ಯ ಸೋತಿದ್ದು ಇದರಿಂದಲೇ ಅಲ್ಲವೇ? ಸಿಎಂಗೆ ಪರಮಾಧಿಕಾರ ಇರುತ್ತದೆ, ಅದರಂತೆ ಬುದ್ದಿವಂತಿಕೆ ಕೂಡ ಇರಬೇಕು ಎಂದಿದ್ದಾರೆ.

ಸಿದ್ದರಾಮಯ್ಯ ದಡ್ಡ:

ಸಿದ್ದರಾಮಯ್ಯನವರಿಗೆ ಬುದ್ದಿವಂತಿಕೆ ಇರಲಿಲ್ಲ. ಸಿಎಂ ಯಡಿಯೂರಪ್ಪ ನವರಿಗೆ ಅದನ್ನೇ ಹೇಳುತ್ತಿದ್ದೇನೆ. ಸಿದ್ದರಾಮಯ್ಯ ಮಾಡಿದ ತಪ್ಪನ್ನು ನೀವು ಮಾಡಬೇಡಿ, ಸ್ವಲ್ಪ ಬುದ್ದಿವಂತಿಕೆಯಿಂದ ತೀರ್ಮಾನ ತಗೊಳ್ಳಿ ಅಂತ ಯಡಿಯೂರಪ್ಪನವರಿಗೆ ಹೇಳುತ್ತಿದ್ದೇನೆ. ಉಪ ಚುನಾವಣೆಯಲ್ಲಿ ಒಳ್ಳೆಯ ಫಲಿತಾಂಶ ಬಂದಿದೆ. ಇದಕ್ಕಾಗಿ ಹೀಗ್ಗಿ ಹೀರೇಕಾಯಿ ಆಗಬೇಕಿಲ್ಲ. ವಿಪಕ್ಷಗಳು ಕುಸಿದು ಹೋಗಿವೆ. ತಿಹಾರ್ ಜೈಲಿನಲ್ಲಿದ್ದವನನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಿದರೆ ಇನ್ನೇನಾಗುತ್ತದೆ? ಹಾಗಾಗಿ ಅದರ ಲಾಭ ಬಿಜೆಪಿಗೆ ಬಂದಿದೆ ಅಷ್ಟೇ ಎಂದು ಮೈಸೂರಿನಲ್ಲಿ ಸಂಸದ ಶ್ರೀನಿವಾಸ್ ಪ್ರಸಾದ್ ಹೇಳಿದ್ದಾರೆ.

ಯಡಿಯೂರಪ್ಪನವರು ಸಿಎಂ ಆದ ನಂತರ ಶ್ರೀನಿವಾಸ್ ಪ್ರಸಾದ್ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಅವರ ಆಪ್ತ ವಲಯದಲ್ಲಿ ಗುಸು ಗುಸು ನಡೆಯುತ್ತಿತ್ತು. ಇದ್ಯಾವುದಕ್ಕೂ ಇಷ್ಟು ದಿನ ಶ್ರೀನಿವಾಸ್ ಪ್ರಸಾದ್ ನೇರವಾಗಿ ಪ್ರತಿಕ್ರಿಯಿಸಿರಲಿಲ್ಲ. ಆದರೆ, ಯಾವಾಗ ನಿಗಮ ಮಂಡಳಿಗಳ ನೇಮಕದ ಹೆಸರುಗಳು ಒಂದೊಂದಾಗೇ ಪ್ರಕಟವಾಗಲು ಪ್ರಾರಂಭವಾಯಿತೋ, ಅದರಲ್ಲಿ ತಾವು ಸೂಚಿಸಿದವರ ಹೆಸರುಗಳು ಇಲ್ಲ ಅಂತ ಗೊತ್ತಾಯ್ತೋ ಅದಾದ ಮೇಲೆ ನಿನ್ನೆಯಿಂದ ಸಿಎಂ ವಿರುದ್ಧ ಸಂಸದ ಶ್ರೀನಿವಾಸ್ ಪ್ರಸಾದ್ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

Share This Article
Leave a comment