ಯಡಿಯೂರಪ್ಪ ಸಿಎಂ ಕುರ್ಚಿ ಬದಲಾವಣೆ ನಿಶ್ಚಿತ ?

Team Newsnap
3 Min Read
  • ಬಿಜೆಪಿ ಹೈಕಮಾಂಡ್ ನಲ್ಲಿ ಬಿರುಸಿನ ಚಟುವಟಿಕೆ
  • ಪಕ್ಷಕ್ಕಾಗಿ ಸಾಕಷ್ಟು ಶ್ರಮಿಸಿರುವ ಯಡಿಯೂರಪ್ಪ ಅವರನ್ನು ಗೌರವಯುತವಾಗಿ ಬೀಳ್ಕೊಡಲು ಪ್ರಧಾನಿ ಸೂಚನೆ
  • ಬಿ ಎಲ್ ಸಂತೋಷ್ ಮೂಲಕ ಸಂದೇಶ ರವಾನೆ ಮಾಡಿ, ಕುರ್ಚಿ ಬಿಟ್ಟುಕೊಡಲು ಯಡಿಯೂರಪ್ಪ ಅವರಿಗೆ ಸೂಚನೆ.
  • ಗೌರವಯುತವಾಗಿ ಸಿಎಂ ಸ್ಥಾನ ತ್ಯಜಿಸಿದರೆ ಯಡಿಯೂರಪ್ಪ ಸೂಚಿಸಿದ ವರೇ ನೆಕ್ಸ್ಟ್ ಸಿಎಂ. ಇಲ್ಲದೇ ಹೋದರೆ ಹೈಕಮಾಂಡ್ ಬಲವಂತದ ಆಯ್ಕೆಗೂ ನಿರ್ಧಾರ
  • ಡಿಸೆಂಬರ್ ಅಂತ್ಯದ ವೇಳೆ ಸಿಎಂ ಸ್ಥಾನ ಬಿಟ್ಟು ಕೊಡಬೇಕಿದೆ.
  • ಮುಂದಿನ ಸಿಎಂ ಸ್ಥಾನಕ್ಕೆ ಸಾಮ್ರಾಟ್ ಅಶೋಕ್, ಬಸವರಾಜ ಬೊಮ್ಮಾಯಿ, ಗೋವಿಂದ ಕಾರಜೋಳ ಹಾಗೂ ಡಿಸಿಎಂ ಹುದ್ದೆಗೆ ಪುತ್ರ ಬಿ ವೈ ವಿಜಯೇಂದ್ರ ಹೆಸರನ್ನು ಯಡಿಯೂರಪ್ಪ ಹೈಕಮಾಂಡ್ ಗೆ ರವಾನೆ ಮಾಡಿದ್ದಾರಂತೆ.
  • ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಸನ್ನಿಹಿತವಾದ ಹಿನ್ನಲೆಯಲ್ಲಿ ಸಚಿವ ಸಂಪುಟ ಪನರ್ ರಚನೆ- ವಿಸ್ತರಣೆಗೂ ಬ್ರೇಕ್
vidhana

ಜೆಡಿಎಸ್‌–ಕಾಂಗ್ರೆಸ್ ಮೈತ್ರಿ ಸರ್ಕಾರ ಕೆಡವಿ ಮುಖ್ಯಮಂತ್ರಿ ಪಟ್ಟಕ್ಕೇgರಿದ ಬಿ.ಎಸ್‌. ಯಡಿಯೂರಪ್ಪ ಅವರ ಸ್ಥಾನದಲ್ಲಿ ‘ಸಮರ್ಥ’ರನ್ನು ಕೂರಿಸಲು ನಿಶ್ಚಯಿಸಿರುವ ಬಿಜೆಪಿ ವರಿಷ್ಠರು ‘ಉತ್ತರಾಧಿಕಾರಿ’ಗೆ ಹುಡುಕಾಟ ನಡೆಸಿದ್ದಾರೆ.

ಈ ಆಯ್ಕೆಯನ್ನು ಯಡಿಯೂರಪ್ಪ ಮರ್ಜಿಗೆ ಬಿಡಲಾಗುತ್ತದೆಯೋ ಅಥವಾ ವರಿಷ್ಠರು ಸೂಚಿಸಿದವರೇ ಅಧಿಕಾರ ಸೂತ್ರ ಹಿಡಿಯುತ್ತಾರೋ ಎಂಬುದು ಬಿಜೆಪಿಯಲ್ಲೀಗ ಚರ್ಚೆಯ ಪ್ರಮುಖ ವಿಷಯ. ಏತನ್ಮಧ್ಯೆ, ವರಿಷ್ಠರ ಸೂಚನೆಯನ್ನು ಧಿಕ್ಕರಿಸುವ ನಿರ್ಣಯಕ್ಕೆ ಬಂದಂತಿರುವ ಯಡಿಯೂರಪ್ಪ, ‘ಕುರ್ಚಿ ಬಿಟ್ಟು ಇಳಿಯಲಾರೆ’ ಎಂಬ ಹಟ ತೊಟ್ಟಿದ್ದಾರೆ. ಇದು, ಬಿಜೆಪಿ ಬಣ ಜಗಳದ ತೀವ್ರತೆಗೆ ಕಾರಣವಾಗಿದೆ.

ಆಡಳಿತ ನಿರ್ವಹಣೆಯಲ್ಲಿ ವಿಫಲ?:

ಆಡಳಿತ ನಿರ್ವಹಣೆಯಲ್ಲಿ ಯಡಿಯೂರಪ್ಪ ಸೋಲುತ್ತಿರುವುದು, ಅವರ ಮಗ ಬಿ.ವೈ. ವಿಜಯೇಂದ್ರ  ಪರೋಕ್ಷವಾಗಿ ಆಡಳಿತ ನಡೆಸುತ್ತಿರುವುದು ಬದಲಾವಣೆಯತ್ತ ಚಿತ್ತ ಹರಿಸಲು ಕಾರಣ ಎಂದು ಹೇಳಲಾಗಿದೆ. ಆಡಳಿತ ಹಸ್ತಕ್ಷೇಪ ಹಾಗೂ ಸಾರ್ವಜನಿಕ ಲಜ್ಜೆಯೂ ಇಲ್ಲದಂತೆ ಭ್ರಷ್ಟಾಚಾರವನ್ನು ಬಿರುಬೀಸಾಗಿ ನಡೆಸಲಾಗುತ್ತಿದೆ ಎಂಬುದು ‘ಸಂಘ ನಿಷ್ಠ’ ಬಿಜೆಪಿ ಶಾಸಕರ ಆಕ್ರೋಶ.

ಕನಿಷ್ಠ ಪ್ರಾಮಾಣಿಕತೆ ಉಳಿಸಿ ಕೊಂಡಿರುವ ಕೆಲವು ಶಾಸಕರು ‘ಇಂತಹ ಸರ್ಕಾರದಲ್ಲಿ ತಾವು ಏಕೆ ಭಾಗಿಯಾಗಿರಬೇಕು’ ಎಂದು ಪ್ರಶ್ನಿಸಿರುವುದರಿಂದ ನಾಯಕತ್ವ ಬದಲಾವಣೆಗೆ ಪಕ್ಷದ ವರಿಷ್ಠರು ಮನಸ್ಸು ಮಾಡಿದ್ದಾರೆ.

ಯಡಿಯೂರಪ್ಪಗೆ ಶುಭ ವಿದಾಯ ಹೇಳಿ:

ಕರ್ನಾಟಕದಲ್ಲಿ ಪಕ್ಷ ಕಟ್ಟಿ, ಅಧಿಕಾರಕ್ಕೆ ತಂದ ಹೆಗ್ಗಳಿಕೆ ಹೊಂದಿರುವ ಯಡಿಯೂರಪ್ಪ ಮೇಲೆ ಗೌರವ ಇಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಯಾವುದೇ ಗೊಂದಲಗಳಿಗೆ ಆಸ್ಪದವಿಲ್ಲದೇ ‘ಶುಭ ವಿದಾಯ’ದ ರೀತಿಯಲ್ಲಿ ಮುಖ್ಯಮಂತ್ರಿಯೇ ಕುರ್ಚಿ ತ್ಯಾಗ ಮಾಡಲಿ ಎಂಬ ಅಪೇಕ್ಷೆ ಹೊಂದಿದ್ದಾರೆ. ಇದಕ್ಕೆ ಯಡಿಯೂರಪ್ಪ ಒಪ್ಪಿಕೊಳ್ಳುವುದಾದಲ್ಲಿ ಅವರು ಹೇಳಿದವರನ್ನೇ ಮೊದಲ ಆದ್ಯತೆಯಾಗಿ ಪರಿಗಣಿಸಿ ಮುಖ್ಯಮಂತ್ರಿ ಸ್ಥಾನಕ್ಕೆ ಕೂರಿಸುವಲ್ಲಿ ಪಕ್ಷ ಸಿದ್ಧವಿದೆ.

ಯಾವ ನಾಯಕನಿಗೆ ಸಿಎಂ ಪಟ್ಟ?:

ಆರ್. ಅಶೋಕ್ ಮುಖ್ಯಮಂತ್ರಿ, ಬಿ.ವೈ. ವಿಜಯೇಂದ್ರ ಉಪಮುಖ್ಯಮಂತ್ರಿ ಎಂಬ ಪ್ರಸ್ತಾವವನ್ನು ಮೊದಲು ಯಡಿಯೂರಪ್ಪ ಮುಂದಿಟ್ಟಿದ್ದರು. ಬಳಿಕ  ಹಿಂದೆ ಸರಿದ ಅವರು, ಬಸವರಾಜ ಬೊಮ್ಮಾಯಿ ಹೆಸರನ್ನು ಮುಂದೆ ಇಟ್ಟಿದ್ದಾರೆ. ಗೋವಿಂದ ಕಾರಜೋಳ, ಮುರುಗೇಶ ನಿರಾಣಿ ಹೆಸರನ್ನೂ ತೇಲಿ ಬಿಟ್ಟಿದ್ದಾರೆ. ಬೊಮ್ಮಾಯಿ, ಕಾರಜೋಳ  ಆರ್‌ಎಸ್‌ಎಸ್‌ ಮೂಲದವರಾಗದೇ ಇರುವುದರಿಂದ ವರಿಷ್ಠರ ಸಮ್ಮತಿ ಸಿಗುವುದು ಕಷ್ಟ. ಗೃಹ ಸಚಿವರಾಗಿರುವ ಬೊಮ್ಮಾಯಿ, ತಮ್ಮ ಹಿಂದಿನ ಉದಾರವಾದಿ ಧೋರಣೆ ಬದಿಗಿಟ್ಟು, ಸಂಘ ಪ್ರಣೀತ ‘ಹಿಂದೂ ರಾಷ್ಟ್ರವಾದ’ದತ್ತ ತಮ್ಮ ನಿಲುವು ಬದಲಿಸಿಕೊಂಡಿದ್ದಾರೆ. ಮಂಗಳೂರಿನ ಗಲಾಟೆ, ‘ಲವ್ ಜಿಹಾದ್‌’ ಹಾಗೂ ಡ್ರಗ್ಸ್‌ ಪ್ರಕರಣದಲ್ಲಿ ಬೊಮ್ಮಾಯಿ ತೆಗೆದುಕೊಂಡಿರುವ ಕ್ರಮಗಳು ‘ಸಂಘ’ದವರನ್ನು ಮೆಚ್ಚಿಸಿವೆ. ಹೀಗಾಗಿ, ಈ ಆಯ್ಕೆಗೆ ವರಿಷ್ಠರು ಒಪ್ಪಿದರೂ ಅಚ್ಚರಿಯಿಲ್ಲ ಎಂದೂ ಹೇಳಲಾಗುತ್ತಿದೆ.

ಬಿಜೆಪಿಯ ಮತ್ತೊಂದು ಮೂಲದ ಪ್ರಕಾರ, ಈಗ ವಿಧಾನಸಭಾಧ್ಯಕ್ಷರಾಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿ, ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ, ಪ್ರಹ್ಲಾದ್ ಜೋಷಿ. ಸಂಸದ ಶಿವಕುಮಾರ ಉದಾಸಿ, ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೆಸರುಗಳು ಪರಿಶೀಲನೆಯಲ್ಲಿವೆ. ಅವಕಾಶ ಸಿಕ್ಕರೆ ತಾವೊಂದು ಕೈ ಯಾಕೆ ನೋಡಬಾರದು ಎಂಬ ಯತ್ನದಲ್ಲಿದ್ದಾರೆ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಹಾಗೂ ಕಂದಾಯ ಸಚಿವ ಆರ್. ಅಶೋಕ.  ಹೀಗೆ ಹಲವರ ಹೆಸರು ಇದ್ದರೂ ಇವರೆಲ್ಲರನ್ನು ಹಿಂದಿಕ್ಕಿ ಈ ಸ್ಥಾನ ಆಕ್ರಮಿಸುವ ಆಲೋಚನೆ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರಲ್ಲಿದೆ.

ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡುವುದಾದರೆ ಲಿಂಗಾಯತ ಸಮುದಾಯವರಿಗೆ ಆ ಸ್ಥಾನ ಬಿಟ್ಟುಕೊಡಬೇಕು. ಅದರ ಬದಲು ಒಕ್ಕಲಿಗ, ಬ್ರಾಹ್ಮಣರನ್ನು ತಂದು ಕೂರಿಸಿದರೆ ಬಿಜೆಪಿಗೆ ಉಳಿಗಾಲವಿಲ್ಲ. ಈಗ ಬದಲಾವಣೆ ಆಗುವುದಿದ್ದರೆಅ ಲಿಂಗಾಯತರಿಗೆ ನೀಡ ಲಾಗುತ್ತದೆ ಎಂಬ ಚರ್ಚೆಯೂ ಇದೆ.

ನಾಯಕತ್ವ ಬದಲಾವಣೆ ಮಾಡಲೇಬೇಕೆಂದು ಕುಳಿತಿರುವ ವರಿಷ್ಠರು ಇದನ್ನು ಯಾವ ರೀತಿ ಸ್ವೀಕರಿಸಿ, ಮುಂದಡಿ ಇಡಲಿದ್ದಾರೆ ಎಂಬುದು ಸದ್ಯದ ಕುತೂಹಲ.

Share This Article
Leave a comment