November 22, 2024

Newsnap Kannada

The World at your finger tips!

world peace 3

ಇಂದು ವಿಶ್ವ ಶಾಂತಿ ದಿನ ಒಗ್ಗಟ್ಟಾಗಿ ಶಾಂತಿಯನ್ನು ರೂಪಿಸೋಣವೇ?

Spread the love

“ಶಾಂತಿ ನಮ್ಮೊಳಗೇ ಇದೆ. ಬೇರೆಲ್ಲೂ ಅದನ್ನು ಹುಡುಕಬೇಡಿ” – ಬುದ್ಧ

“ಒಗ್ಗಟ್ಟಾಗಿ ಶಾಂತಿಯನ್ನು ರೂಪಿಸೋಣ” ಎಂಬ ಘೋಷ ವಾಕ್ಯವನ್ನಿಟ್ಟುಕೊಂಡು ಈ ವರ್ಷ ‘ವಿಶ್ವ ಶಾಂತಿ ದಿನ’ ಬಂದಿದೆ. ಈ ಸಂದರ್ಭದಲ್ಲೇ ನಮ್ಮಲ್ಲಿಯೇ ಶಾಂತಿಯನ್ನಿಟ್ಟುಕೊಂಡು ಬೇರೆಲ್ಲಿಯೂ ಶಾಂತಿಯನ್ನು ಹುಡುಕಬೇಕಾಗಿಲ್ಲ ಎಂಬ ಬುದ್ಧನ ಸಂದೇಶ ಎಷ್ಟು ಪ್ರಸ್ತುತ ಮತ್ತು ಮಾರ್ಮಿಕ ಎನಿಸುತ್ತದೆ. ನಮ್ಮಲ್ಲಿ, ನಮ್ಮ ಸುತ್ತ ಮುತ್ತ ಶಾಂತಿಯಿದ್ದರೂ ನಾವು ಅದನ್ನು ಉಳಿಸಿ-ಬಳಸಿಕೊಳ್ಳದೇ, ಬೇರೆಡೆ ಅದನ್ನು ನಾವು ಅರಸುತ್ತಿದ್ದೇವೆ ಎಂದೆನಿಸುತ್ತದೆ.

ಶಾಂತಿ ಎಂದರೆ ಕೇವಲ ದೇಶ-ದೇಶಗಳ ನಡುವೆ ಶಾಂತಿ ಸೌಹಾರ್ದಯುತ ಸಂಬಂಧವೇ? ಮನುಷ್ಯ – ಮನುಷ್ಯರ ನಡುವೆ ಸ್ನೇಹಯುತ ವಾತಾವರಣ ಸೃಷ್ಠಿ ಮಾಡುವದೇ ನಿಜವಾದ ಶಾಂತಿಯೇ? ಎಂಬ ಪ್ರಶ್ನೆ ಧುತ್ತನೆ ಕಣ್ಣ ಮುಂದೆ ಬರಬಹುದು. ಅವುಗಳಿಗೆ ನಾವುಗಳೇ ಉತ್ತರ ಹುಡುಕಿಕೊಳ್ಳಬೇಕು. ಇಲ್ಲಿ ವ್ಯಕ್ತಿಯಿಂದ ವ್ಯಕ್ತಿಗೆ ಉತ್ತರಗಳು ಭಿನ್ನವಾಗಿರಬಹುದು. ಉತ್ತರ ಹೇಳುವದಕ್ಕೆ ಬುದ್ಧನಂತೂ ಬರುವುದಿಲ್ಲ.

ಕಾಲು ಕೆದರಿ ಕದನಕ್ಕೆ ರೆಡಿ

ಪ್ರಪಂಚದ ವಿಷಯವನ್ನು ಬಿಡಿ. ನಮ್ಮ ಭಾರತಕ್ಕೆ ಬರೋಣ. ಈ 2020ರಲ್ಲಿ ನಾವು ಯಾವ ಪರಿಸ್ಥಿತಿಯಲ್ಲಿ ಇದ್ದೇವೆ? ನಮ್ಮ ನೆರೆ ರಾಷ್ಟ್ರಗಳು ಯಾವ ಪರಿಸ್ಥಿತಿಯಲ್ಲಿವೆ ಎಂಬುದನ್ನು ಸಂಕ್ಷಿಪ್ತವಾಗಿ ನೋಡೋಣ. ಕೊರೋನಾ ಹಾವಳಿಯಿಂದ ಇಂದು ಒಬ್ಬ ಮನುಷ್ಯ ಮತ್ತೊಬ್ಬ ಮನುಷ್ಯನೊಂದಿಗೆ ಒಡನಾಡುವದಿರಲಿ, ಮುಟ್ಟಿ ಮಾತನಾಡುವದಕ್ಕೂ ಭಯ ಪಡುತ್ತಿದ್ದೇವೆ. ಪಕ್ಕದ ರಾಷ್ಟ್ರ ಪಾಕಿಸ್ತಾನ ಕಾಲು ಕೆರೆದುಕೊಂಡು ಕದನಕ್ಕೆ ಕರೆಯುವ ಪ್ರಯತ್ನ ಮಾಡುತ್ತಿದೆ. ಇತ್ತ ಇನ್ನೊಂದು ನೆರೆಯ ರಾಷ್ಟ್ರ ಚೀನಾ ಗಡಿಯ ವಿವಾದಕ್ಕಾಗಿ ತನ್ನ ಸೇನೆಯನ್ನು ಸನ್ನದ್ದುಗೊಳಿಸುತ್ತಿದೆ. ನಾವೂ ಏನೂ ಕಡಿಮೆಯಿಲ್ಲ. ಅತ್ತ ಪಾಕಿಸ್ತಾನಕ್ಕೆ ಎಚ್ಚರಿಕೆಯನ್ನು ಕೊಡುತ್ತ, ಭಾರತ-ಚೀನಾ ಗಡಿಯಲ್ಲಿ ನಮ್ಮ ಸೇನೆಯನ್ನು ನಿಲ್ಲಿಸುತ್ತಿದ್ದೇವೆ. ನಮ್ಮ ದೇಶದಲ್ಲೇ ಇಷ್ಟೊಂದು ಅಶಾಂತಿ ಇರಬೇಕಾದರೆ ಇನ್ನು ಇಡೀ ಪ್ರಪಂಚದಲ್ಲೇ ಎಷ್ಟೊಂದು ಅಶಾಂತಿ ಇರಬಹುದು ಎಂಬುದು ಯೋಚಿಸಬೇಕಾದ ಸಂಗತಿ.

ವಿಶ್ವ ಶಾಂತಿಯ ಪರಿಕಲ್ಪನೆ

ಒಂದು ಬಾರಿ ನಾವು ಈ ವಿಶ್ವ ಶಾಂತಿ ದಿನಾಚರಣೆಯ ಇತಿಹಾಸವನ್ನು ಸಂಕ್ಷಿಪ್ತವಾಗಿ ಗಮನಿಸಿಬಿಡೋಣ. ವಿಶ್ವ ಸಂಸ್ಥೆಯು 1981, ಸೆಪ್ಟೆಂಬರ್ 21 ರಲ್ಲಿ ಅಮೇರಿಕದಲ್ಲಿ ‘ವಿಶ್ವ ಶಾಂತಿ ದಿನ’ ಎಂಬ ಪರಿಕಲ್ಪನೆಯನ್ನು ಪರಿಚಯಿಸಿತು. ಅದು ಅಮೇರಿಕಾ-ರಷ್ಯಾ ಮಧ್ಯೆ ಶೀತಲ ಸಮರ ಬಹು ರಭಸದಲ್ಲಿದ್ದ ಕಾಲ. ಪ್ರಪಂಚವೇ ಇಬ್ಭಾಗವಾಗಿ ಒಡೆದುಹೋಗಿತ್ತು. ಒಂದು ಬಣ ಅಮೇರಿಕಾಕ್ಕೆ ಬೆಂಬಲ ನೀಡಿದರೆ, ಮತ್ತೊಂದು ಬಣ ರಷ್ಯಾವನ್ನು ಬೆಂಬಲಿಸಿದವು. ಭಾರತ ಸೇರಿದಂತೆ ಇನ್ನೂ ಕೆಲವು ರಾಷ್ಟ್ರಗಳು ಯಾವ ಬಣಕ್ಕೆ ತೃತೀಯ ಬಣ ಎಂಬ ಹೆಸರನ್ನು ಪಡೆದುಕೊಂಡು ‘ನಿರ್ಲಿಪ್ತ ಅಥವಾ ಆಲಿಪ್ತ ರಾಷ್ಟ್ರಗಳು’
ಎಂದೆನಿಸಿಕೊಂಡವು.

ರಷ್ಯಾ ಮತ್ತು ಅಮೇರಿಕಾಗಳ ನಡುವಿನ ಶೀತಲ ಸಮರ ಯಾವ ಮಟ್ಟಕ್ಕೆ ಹೋಗಿತ್ತೆಂದರೆ ಪ್ರಪಂಚದಲ್ಲಿ ಮತ್ತೆ ಮೂರನೇ ಯುದ್ಧವಾಗುವ ಎಲ್ಲ ಲಕ್ಷಣಗಳು ಗೋಚರಿಸತೊಡಗಿದ್ದವು. ಆ ಸಮಯದಲ್ಲೇ ವಿಶ್ವಸಂಸ್ಥೆ ‘ವಿಶ್ವ ಶಾಂತಿ ದಿನ’ವನ್ನು ಜಾರಿಗೆ ತಂದಿತು. ಆವತ್ತಿನಿಂದ ಇವತ್ತಿನವರೆಗೆ ನಾವು ಸೆಪ್ಟೆಂಬರ್ 21 ನ್ನು ಶಾಂತಿದಿನವಾಗಿ ಆಚರಿಸುತ್ತಾ ಬರುತ್ತಿದ್ದೇವೆ.

ಪ್ರಪಂಚದಲ್ಲಿರುವ ದೇಶಗಳು ಎಷ್ಟರ ಮಟ್ಟಿಗೆ ಶಾಂತಿ ಕಾಪಾಡಿಕೊಂಡು ಬಂದಿವೆ ಎಂಬುದನ್ನು ( VisionofHumanity.org )ಯು ಹಸಿರು, ತಿಳಿ ಹಸಿರು, ಹಳದಿ, ಕೇಸರಿ, ಕೆಂಪು ವಲಯಗಳಾಗಿ ವಿಂಗಡಿಸಿದೆ.

world peace 2

ಹಸಿರು ವಲಯ

  • ಹಸಿರು ವಲಯದಲ್ಲಿ ಮೊಟ್ಟ ಮೊದಲ ಸ್ಥಾನದಲ್ಲಿ ಬರುವುದು ಐಲ್ಯಾಂಡ್. ಪ್ರಪಂಚದಲ್ಲೇ ಅತ್ಯಧಿಕ ಶಾಂತಿಯನ್ನು ಕಾಪಾಡಿಕೊಂಡು ಬಂದಿರುವ ದೇಶ ಇದಾಗಿದೆ. ಇದರ ಜೊತೆ ನ್ಯೂಜಿಲ್ಯಾಂಡ್, ಡೆನ್ಮಾರ್ಕ್, ಕೆನಡಾ ಮುಂತಾದ ದೇಶಗಳಿವೆ.
  • ತಿಳಿ ಹಸಿರು ವಲಯದಲ್ಲಿ ಸ್ವೀಡನ್, ಬೆಲ್ಜಿಯಮ್, ಜರ್ಮನ್, ಮಲೇಶಿಯಾ ಸೇರಿದಂತೆ ಇನ್ನೂ ಅನೇಕ ದೇಶಗಳಿವೆ.
  • ಹಳದಿ ವಲಯದಲ್ಲಿ ಚೀನ, ನೇಪಾಳ, ಫ್ರಾನ್ಸ್, ಜೋರ್ಡಾನ್ ಸೇರಿದಂತೆ ಅನೇಕ ದೇಶಗಳು 3 ನೇ ಹಂತದಲ್ಲಿವೆ.
  • ಕೇಸರಿ ವಲಯದಲ್ಲಿ ಭಾರತ, ಕೀನ್ಯ, ಮಯನ್ಮಾರ್, ಬ್ರೆಜಿಲ್, ಈಜಿಪ್ಟ್ ಹೀಗೆ ಅನೇಕ ದೇಶಗಳಿವೆ. ಭಾರತವು ತನ್ನ ಶಾಂತಿಯನ್ನು ಕಾಪಾಡಿಕೊಳ್ಳುವಲ್ಲಿ 139 ನೇ ಸ್ಥಾನದಲ್ಲಿದೆ.
  • ಕೆಂಪು ವಲಯದಲ್ಲಿ ಪಾಕಿಸ್ತಾನ, ರಷ್ಯಾ, ಟರ್ಕಿ, ಸುಡಾನ್ ಮುಂತಾದ ದೇಶಗಳಿವೆ. ಶಾಂತಿಯನ್ನು ಅಫಘಾನಿಸ್ತಾನವು 163ನೇ, ಅಂದರೆ ಕಟ್ಟಕಡೆಯ ಸ್ಥಾನದಲ್ಲಿದೆ.

ಭಾರತ ವಿಫಲ?

world peace 1

ಈ ವಿವರಣೆಯ ಆಧಾರದ ಮೇಲೆ ನಮಗೆ ಭಾರತವು ಶಾಂತಿಯನ್ನು ಕಾಪಾಡಿಕೊಳ್ಳುವಲ್ಲಿ ವಿಫಲವಾಗಿದೆ ಎಂದು ತಿಳಿದುಬರುತ್ತದೆ. 139ನೇ ಸ್ಥಾನ ಎಂದರೆ ಸಂತೋಷ ಪಡುವಂಥದ್ದೇನೂ ಅಲ್ಲ. ನಮಗಿಂತಲೂ 132 ದೇಶಗಳು ಉತ್ತಮ ರೀತಿಯಲ್ಲಿ ಶಾಂತಿಯನ್ನು ಕಾಪಾಡಿಕೊಂಡಿವೆ. ನಾವೂ ಮೇಲೇರುವ ಪ್ರಯತ್ನ ಮಾಡಬೇಕಾಗಿದೆ. ಒಂದು ವೇಳೆ ನಾವು ಆದಷ್ಟು ಶಾಂತಿಯನ್ನು ಶಾಂತಿಯನ್ನು ಕಾಪಾಡದಿದ್ದರೆ ನಮ್ಮ ದೇಶವು ಕೆಂಪು ವಲಯದಲ್ಲಿ ನಮೂದಾಗುವ ದಿನ ಹತ್ತಿರವಿಲ್ಲ. ನಾವೂ ಸಹ ರಷ್ಯಾ, ಅಫಘಾನಿಸ್ತಾನದ ರೀತಿ ಆಗುವುದು ಬೇಡ ಎಂದುಕೊಂಡರೆ ಮಾತ್ರ ನಮ್ಮ ದೇಶದಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳಲು ಸಾಧ್ಯ.

ಶಾಂತಿಯೆಂಬುದು ಮಾನವೀಯತೆಯ ಆಧಾರದ ಮೇಲೆಯೇ ನಿಂತಿದೆಯಲ್ಲವೇ? ಒಬ್ಬ ಮನುಷ್ಯನ ಕಷ್ಟಕ್ಕೆ ಇನ್ನೊಬ್ಬ ಸ್ಪಂದಿಸುವ ಗುಣ ಇದ್ದಾಗಲೇ ಅಲ್ಲಿ ಸ್ನೇಹಯುತ ವಾತಾವರಣ ಮೂಡುತ್ತದೆ. ಸ್ನೇಹಯುತ ವಾತವರಣದಲ್ಲಿ ಶಾಂತಿಯು ನೆಲೆಸಿರುತ್ತದೆ ಎಂಬುದು ನನ್ನ ಅನಿಸಿಕೆ. ಇಂದು ಬೇರೆ ಯಾರೋ ನಮ್ಮಲ್ಲಿರುವ ಮಾನವೀಯತೆಯನ್ನು ಎಚ್ಚರಿಸುವದಕ್ಕೆ ಕಾಲದಲ್ಲಿ ನಾವಿದ್ದೇವೆ. ಸಣ್ಣದೋ, ದೊಡ್ಡದೋ ಕಷ್ಟ ಎಂದಮೇಲೆ, ಕಷ್ಟವೇ. ಆದರೆ ನಾವು ಇನ್ನೊಬ್ಬ ವ್ಯಕ್ತಿಗೆ ಸಹಾಯ ಮಾಡುವದಿರಲಿ, ಅವನ ಪಾಡಿಗೆ ಅವನನ್ನು ಬಿಡದೇ ಏನೇನೋ ಕೊಂಕು ಮಾತುಗಳನ್ನಡುವ ಸಂದರ್ಭದಲ್ಲಿದ್ದೇವೆ. ಇದರ ಜೊತೆ ರಾಜಕಾರಣಿಗಳು ಸಹ ತಮ್ಮ ಬೇಳೆ ಬೇಯಿಸಿಕೊಳ್ಳುವುದಕ್ಕೆ, ಇರುವ ಶಾಂತಿಯನ್ನು ಹಾಳು ಮಾಡುತ್ತಿದ್ದಾರೆ. ತಮ್ಮ ಮತ ಬ್ಯಾಂಕುಗಳಿಗೋಸ್ಕರ ಜನರ ನಡುವೆ ದ್ವೇಷ, ಅಸೂಯೆ, ವಿವಾದಗಳನ್ನು ತಂದು ಹಾಕುತ್ತಿದ್ದಾರೆ. ನ್ಯೂಕ್ಲಿಯರ್ ಬಾಂಬ್ ಗಳನ್ನು ತಯಾರಿಸಿ ಯುದ್ಧದ ಕಾವು ಯಾವಾಗಲೂ ಇರುವಂತೆ ರಾಜಕೀಯ ಪಕ್ಷಗಳು ನೋಡಿಕೊಳ್ಳುತ್ತಿವೆ.

ಒಂದು ಪುಟ್ಟ ಘಟನೆ

ಮೊನ್ನೆ ನಡೆದ ಘಟನೆ. ನಾನು ಚಹಾ ಕುಡಿಯಲೆಂದು ಮನೆಯ ಹತ್ತಿರವಿರುವ ಚಹಾದಂಗಡಿಗೆ ಹೋಗಿದ್ದೆ. ಅಲ್ಲಿ ಯಾವಾಗಲೂ ಹಸಿವಿನಿಂದ ಒಂದು ಬೀದಿ ನಾಯಿ ಮಲಗಿರುತ್ತಿತ್ತು. ಈಗ್ಗೆ 3-4 ದಿನಗಳಿಂದ ಮಳೆ ಬರುತ್ತಿರುವದರಿಂದ ಅದರ ದೇಹ ತುಂಬಾ ಹೊಲಸಾಗಿತ್ತು. ಆ ನಾಯಿಯ ಮೈಯನ್ನು ಯಾರೋ ಒಬ್ಬ ವ್ಯಕ್ತಿ ಒರೆಸಿ, ತಿನ್ನಲು ಅದಕ್ಕೆ ಆಹಾರ ಕೊಟ್ಟು ಹೋದ. ಆದರೆ ನಾಯಿಯು ವ್ಯಕ್ತಿ ಕೊಟ್ಟ ಆಹಾರ ತಿನ್ನದೇ ಅವನ ಹಿಂದೆಯೇ ಹೋಗುತ್ತಿತ್ತು. ಈ ದೃಶ್ಯ ನನ್ನ ಮನದಲ್ಲಿ ಅಚ್ಚಳಿಯದೇ ನಿಂತಿದೆ. ಕೇವಲ ಒಂದಷ್ಟು ಪ್ರೀತಿ, ಆಪ್ಯಾಯತೆಯನ್ನು ತೋರಿಸಿದ ಮಾತ್ರಕ್ಕೆ ಒಂದು ಮೂಕ ಜೀವಿ ಆ ವ್ಯಕ್ತಿಯನ್ನು ಸುಲಭವಾಗಿ ನಂಬಿತು. ಇನ್ನು ನಾವು ಮನುಷ್ಯರು, ಯೋಚಿಸುವ ಶಕ್ತಿ ಇರುವವರು, ಭಾವನೆಗಳಿಗೆ ಮಾತಿನಲ್ಲಿ ಸ್ಪಂದಿಸಬಲ್ಲವರು, ನಾವು ಇನ್ನೊಬ್ಬರಿಗೆ ಸ್ನೇಹದ ವಾತಾವರಣವನ್ನು ಏಕೆ ಕಲ್ಪಿಸಲಾಗುತ್ತಿಲ್ಲ? ಹಾಗೆ ಒಬ್ಬರಿಗೊಬ್ಬರು ಪರಸ್ಪರ ನಂಬಿಕೆಯ ವಾತಾವರಣ ಸೃಷ್ಟಿಸಿದ್ದೇ ಆದಲ್ಲಿ ವರ್ಷಕ್ಕೊಂದು ಬಾರಿ ನಾವು ವಿಶ್ವ ಶಾಂತಿಯನ್ನು ಆಚರಿಸುವುದೇ ಬೇಕಾಗಿಲ್ಲ. ಏಕೆಂದರೆ ಪ್ರತಿದಿನವೂ ನಮ್ಮಲ್ಲೇ ಶಾಂತಿಯಿರುತ್ತದಲ್ಲ? ಒಬ್ಬರಿಗೊಬ್ಬರು ಸೇರಿದರೆ ಜನರಲ್ಲಿ ಒಗ್ಗಟ್ಟು ಮೂಡುತ್ತದೆ. ಪರಸ್ಪರರ ನಂಬಿಕೆಯಿಂದ ಶಾಂತಿಗೆ ಆಹ್ವಾನ ಸಿಗುತ್ತದೆ.

world peace 4
ಓಂಕಾರೇಶ್,
ಸಂವಹನ ವಿಭಾಗದ ವಿದ್ಯಾರ್ಥಿ
ಬೆಂಗಳೂರು ವಿಶ್ವವಿದ್ಯಾಲಯ
ಜ್ಞಾನ ಭಾರತಿ ಆವರಣ.

Copyright © All rights reserved Newsnap | Newsever by AF themes.
error: Content is protected !!