ಮೀನೆಂಬ ಜಲಚರದ ಆತ್ಮ ತೃಪ್ತಿಯ ಮಾತುಗಳು

Team Newsnap
1 Min Read

ಸಾಗರದ ವಿಶಾಲ ಜಗತ್ತಿನಲ್ಲಿ ವಾಸಿಸುತ್ತಿರುವ ಮೀನೆಂಬ ಜಲಚರದ ಆತ್ಮ ತೃಪ್ತಿಯ ಮಾತುಗಳು…..

ನಾನೊಂದು ಮೀನು…….

ಸಾಗರವೇ ನಮ್ಮ ಮನೆ……

ನಮಗೆ ನಿಮ್ಮಂತೆ ಪ್ರಕೃತಿಯನ್ನು ಘಾಸಿಗೊಳಿಸಿ ಕಟ್ಟಿದ ಕಟ್ಟಡಗಳಿಲ್ಲ,

ವಿಶಾಲ ಸಮುದ್ರದಲ್ಲಿ ಬೃಹತ್ ಜಲಚರ ಕುಟುಂಬದ ಜೊತೆ ವಾಸ,

ನಿಮ್ಮಂತೆ ನಮಗೆ ಹಲವು ಭಾಷೆಗಳಿಲ್ಲ,
ಇರುವುದೊಂದೇ ಭಾಷೆ,

ಜಾತಿ ಧರ್ಮಗಳು ನಮಗೆ ಗೊತ್ತೇ ಇಲ್ಲ,

ನಿಮ್ಮಂತೆ ಯಾವ ಕಾನೂನುಗಳು ನಮ್ಮನ್ನು ಕಟ್ಟಿಹಾಕಿಲ್ಲ, ಸ್ವತಂತ್ರರು ನಾವು,

ಕಳ್ಳರಲ್ಲ ನಾವು,ಅದಕ್ಕೆ ನಮಗೆ ಪೋಲೀಸರೇ ಇಲ್ಲ,

ನಮಗೆ ನಾವೇ ರಾಜರು,
ನಮ್ಮನ್ನಾಳುವ ಯಾವ ಪುಢಾರಿಗಳು ಇಲ್ಲ,

ನಿಮ್ಮಂತೆ ನಮಗೆ ವಾಚು, ಕ್ಯಾಲೆಂಡರ್ ಗಳಿಲ್ಲ,
ಹುಟ್ಟಿದಾಗಿನಿಂದ ಉಸಿರು ನಿಲ್ಲುವವರೆಗೂ ಜೀವಿಸಿರುವುದೇ ನಮ್ಮ ಬದುಕು,

ನಮ್ಮಲ್ಲಿ ಡಾಕ್ಟರ್ ಗಳಿಲ್ಲ,
ಆಕ್ಟರ್ ಗಳಿಲ್ಲ, ಇಂಜಿನಿಯರ್‌ಗಳು ,
ಸಾಪ್ಟ್ ವೇರ್ ಗಳೂ ಇಲ್ಲ,

ಪೂಜಾರಿಗಳ ಮಂತ್ರಗಳಿಲ್ಲ,
ಜ್ಯೋತಿಷಿಗಳ ತಂತ್ರಗಳಿಲ್ಲ,
ಪ್ರಾದ್ರಿಗಳ ಪ್ರಾರ್ಥನೆಗಳಿಲ್ಲ.
ಮೌಲ್ವಿಗಳ ನಮಾಜುಗಳಿಲ್ಲ,

ಬುದ್ಧಿಜೀವಿಗಳೂ ಇಲ್ಲ,
ಗುಲಾಮ ಜೀವಿಗಳು ಇಲ್ಲ,

ದೇಶಭಕ್ತರೂ ಇಲ್ಲ,
ದೇಶದ್ರೋಹಿಗಳೂ ಇಲ್ಲ,

ಚಳವಳಿಗಳೂ ಇಲ್ಲ,
ಪ್ರದರ್ಶನಗಳೂ ಇಲ್ಲ,
ಸಮಾಜ ಸೇವಕರೂ ಇಲ್ಲ,

ತಲೆ ಒಡೆಯುವವರೂ ಇಲ್ಲ,
ತಲೆ ಹಿಡಿಯುವವರೂ ಇಲ್ಲ,
ಬೆನ್ನಿಗೆ ಚೂರಿ ಹಾಕುವವರೂ ಇಲ್ಲ,
ಹೃದಯಕ್ಕೆ ಘಾಸಿಗೊಳಿಸುವವರೂ ಇಲ್ಲ,

ಬ್ಯಾಂಕ್‌ ಅಕೌಂಟುಗಳೂ ಇಲ್ಲ,
ಕಪ್ಪು ಹಣವು ಇಲ್ಲವೇ ಇಲ್ಲ,

ಚಿಕನ್ ಕಬಾಬ್ ಗಳಿಲ್ಲ,
ಹೋಳಿಗೆ ತುಪ್ಪಗಳೂ ಇಲ್ಲ,

ಹರಿಶಿನ ಕುಂಕುಮಗಳಿಲ್ಲ,
ಕಾಯಿ ಕರ್ಪೂರಗಳು ಗೊತ್ತೇ ಇಲ್ಲ,

ಮದುವೆಗಳಿಲ್ಲ,
ಡ್ಯೆವೋರ್ಸ್ ಗಳೂ ತಿಳಿದಿಲ್ಲ,

ಜೀನ್ಸ್ ಪ್ಯಾಂಟುಗಳಿಲ್ಲ,
ಮಿಡಿ ಚೂಡಿದಾರ್ ಗಳೂ ಇಲ್ಲ,
ಬ್ಯೂಟಿ ಪಾರ್ಲರಗಳೂ ಇಲ್ಲ,
ಯೋಗ ಧ್ಯಾನ ಸೆಂಟರ್‌ ಗಳೂ ಇಲ್ಲ,

ಅಶ್ಲೀಲವೂ ಇಲ್ಲ,
ಸೌಂದರ್ಯವೂ ಇಲ್ಲ,
ಸ್ವಚ್ಛಂದ ಬದುಕು, ನಿಷ್ಕಲ್ಮಶ ಸಂತಾನ,

ಕಷ್ಟಗಳೂ, ಅಪಾಯಗಳು ನಮಗೂ ಇವೆ, ಆದರೆ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ,

ಕ್ಷಮಿಸಿ,
ನಾವು ನಿಮ್ಮಂತೆ ನಾಗರಿಕ ಮನುಷ್ಯರಲ್ಲ ಅನಾಗರಿಕ ಜಲಚರಗಳು,

ಆದರೂ ನಿಮ್ಮಲ್ಲೇ ಕೆಲವರು ಮಾತನಾಡುತ್ತಿದ್ದುದು ನನಗೆ ಕೇಳಿಸಿತು,

ಮನುಷ್ಯರಿಗಿಂತ ಪ್ರಾಣಿಗಳೇ ಗುಣದಲಿ ಮೇಲು,
ನಿಜವೇ ?……….

  • ವಿವೇಕಾನಂದ. ಹೆಚ್.ಕೆ.
Share This Article
Leave a comment