December 22, 2024

Newsnap Kannada

The World at your finger tips!

hathras incident

ಸಮರ್ಥ ಕಾನೂನುಗಳಿದ್ದಗಲೂ ಭಾರತದಲ್ಲಿ ಅತ್ಯಾಚಾರವಾಗುತ್ತಿರುವುದೇಕೆ ?

Spread the love

ಅತ್ಯಾಚಾರ ಪ್ರಕರಣದ ಸುದ್ದಿ ಯಾವಾಗ ಕೇಳಿದರೂ ನನಗೆ ತೆಲುಗಿನ ಟೆಂಪರ್ ಸಿನಿಮಾದ ಒಂದು ಸಂಭಾಷಣೆಯ ಸಾಲು ನೆನೆಪಾಗುತ್ತದೆ. ಸಿನಿಮಾದ ನಾಯಕ ನ್ಯಾಯಾಧೀಶರಿಗೆ ‘ಸರ್, ನಾವು ಒಂದು ಹುಡುಗಿಯನ್ನು ನೋಡಿದ ತಕ್ಷಣವೇ ಅತ್ಯಾಚಾರ ಮಾಡುತ್ತೇವೆ. ನೀವು ತಕ್ಷಣವೇ ಶಿಕ್ಷೆ ಕೊಡುತ್ತಿದ್ದೀರಾ?’ ಇದು ಸಂಭಾಷಣೆಯ ಸಾಲು. 2015ರಲ್ಲಿ ತೆರೆಕಂಡ ಈ ಚಿತ್ರದ ಸಂಭಾಷಣೆ ಇಂದಿಗೂ ಪ್ರಸ್ತುತವೆಂಬುದು ನನ್ನ ಭಾವನೆ.

ಮೊನ್ನೆ ಉತ್ತರ ಪ್ರದೇಶದಲ್ಲಿ ಮನಿಶಾ ಎಂಬ ಯುವತಿಯ ಮೇಲೆ ಗುಂಪು ಅತ್ಯಾಚಾರದ ಪ್ರಕರಣ ದೊಡ್ಡ ಸುದ್ದಿ ಮಾಡಿತು. ಯುವತಿ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಳು. ಮನೀಶಾ ದೇಹವನ್ನು ಆಕೆಯ ಕುಟುಂಬಸ್ಥರಿಗೂ ಸಹ ನೀಡದೇ ಪೋಲೀಸರೇ ಅನಾಥ ಶವದಂತೆ ಸುಟ್ಟು ಹಾಕಿದ್ದು ಅಮಾನವೀಯ ಕೃತ್ಯ. ಆಕೆಯ ಮೇಲಿನ ಅತ್ಯಾಚಾರದ ಬಗ್ಗೆ ಉತ್ತರ ಪ್ರದೇಶದ ಸರ್ಕಾರದಿಂದಾಗಲಿ ಅಥವಾ ಕೇಂದ್ರ ಸರ್ಕಾರದಿಂದಾಗಲೀ ಒಂದೇ ಒಂದು ಸಂತಾಪ ಸಂದೇಶವೂ ಬರಲಿಲ್ಲ. ಕೇವಲ ಮನೀಶಾ ಅತ್ಯಾಚಾರವೊಂದೇ ಅಲ್ಲ, ಡಿಸೆಂಬರ್ ನಲ್ಲಿ ಆಂಧ್ರ ಪ್ರದೇಶದ ಪ್ರಿಯಾಂಕ ರೆಡ್ಡಿಯ ಮೇಲಿನ ಅತ್ಯಾಚಾರ, 2017ರಲ್ಲಿ ನಲ್ಲಿನ ಉನ್ನಾವ್ ಪ್ರಕರಣ, ಅತ್ಯಾಚಾರದ ಪ್ರಕರಣವನ್ನು ಒಂದು ಸಾಂಘಿಕ ಪ್ರತಿಭಟನೆಯನ್ನಾಗಿ ಪರಿವರ್ತಿಸಿದ ದೆಹಲಿಯ ನಿರ್ಭಾಯಾಳ ಪ್ರಕರಣ, ಹೀಗೆ ಕೆದಕಿದಷ್ಟೂ ಅತ್ಯಾಚಾರದ ಪ್ರಕರಣಗಳು ಬಯಲಿಗೆ ಬರುತ್ತವೆ. ಆದರೆ ಬೆಳಕು ಬರದೇ ಇರದ ಪ್ರಕರಣಗಳು ಎಷ್ಟೋ ಸಾವಿರ ಇವೆ.

ಮೇಲೆ ಹೆಸರಿಸಿದ ಒಂದೊಂದು ಪ್ರಕರಣಗಳಿಗೂ ಶೋಕ ಗಾಥೆಯಿದೆ. ನಿರ್ಭಯಾಳ ಪ್ರಕರಣದ ಅಪರಾಧಿಗಳಿಗೆ ಗಲ್ಲಾಯಿತು, ಉನ್ನಾವ್ ಪ್ರಕರಣದಲ್ಲಿ ಬಿಜೆಪಿಯ ಮಾಜಿ ಮುಖಂಡ ಕುಲದೀಪ್ ಸಿಂಗ್ ಸೆಂಗರ್ ಗೆ ಜೀವಾವಧಿ ಶಿಕ್ಷೆಯಾಯಿತು. ಪ್ರಿಯಾಂಕ ರೆಡ್ಡಿಯ ಪ್ರಕರಣದಲ್ಲಿನ ಆರೋಪಿಗಳನ್ನು ಎನ್ ಕೌಂಟರ್ ಮಾಡಿದರು. ಆದರೆ ಉತ್ತರ ಪ್ರದೇಶದ ಮನೀಶಾ ವಿಷಯದಲ್ಲಿ ಆದ ಅನ್ಯಾಯಕ್ಕೆ ಯಾರು ಜವಾಬು ಕೊಡುವವರು? ಆಕೆಯ ಕುಟುಂಬಕ್ಕೆ ನ್ಯಾಯ ಕೊಡಿಸಬೇಕಾಗಿದ್ದ ಸರ್ಕಾರವೇ ಈ ವಿಷಯದಲ್ಲಿ ಮೌನ ವಹಿಸಿರುವಾಗ ಆಕೆಯ ಕುಟುಂಬಸ್ಥರಿಗೆ ಸಾಂತ್ವನ ಹೇಳುವರಾರು?

ನಾವು ಕೇವಲ ಮೇಲೆ ಮಾತ್ರ ಕಣ್ಣಾಡಿಸಿದಾಗ ಕಾಣುವ ಅತ್ಯಾಚಾರದ ಪ್ರಕರಣಗಳು ಕೇಲವೇ ಕೆಲವು. ಸ್ಥೂಲವಾಗಿ ಪರೀಕ್ಷೆ ಮಾಡಿದಾಗ ಎಷ್ಟೋ ಸಾವಿರ ಅತ್ಯಾಚಾರದ ಪ್ರಕರಣಗಳು ಭಾರತದಲ್ಲಿ ವರದಿಯಾಗಿವೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಸಂಸ್ಥೆಯ ಪ್ರಕಾರ ಅನೇಕ ಪ್ರಕರಣಗಳಿ ದಾಖಲಾಗಿರುವುದು ತಿಳಿದು ಬಂದಿದೆ. ಆ ಅಂಕಿ ಅಂಶಗಳನ್ನು ಈ ಕೆಳಗಿನಂತೆ ನೋಡಬಹುದು.

rape case 3

ಅಂಕಿ ಅಂಶಗಳು

2019

  • 2019ರಲ್ಲಿ ದಾಖಲಾಗಿರುವ ಒಟ್ಟು ಪ್ರಕರಣಗಳು 32,033
  • ಕರ್ನಾಟಕದ ಪಾಲು 497
  • ರಾಜಸ್ಥಾನದಲ್ಲಿ 5029 ಪ್ರಕರಣಗಳು ದಾಖಲಾಗಿ ಕುಖ್ಯಾತಿಗೆ ಪಾತ್ರವಾಗಿದೆ.
  • ನಾಗರೀಕ ಸೇವಾ ಹುದ್ದೆಗಳಲ್ಲಿರುವವರಿಂದ 13 ಮತ್ತು ಪೋಲೀಸ್ ಇಲಾಖೆಯ ಸಿಬ್ಬಂದಿಗಳಿಂದ 5 ಪ್ರಕರಣಗಳು ದಾಖಲಾಗಿವೆ.
  • 22,724 ಜನರಿಗೆ ಶಿಕ್ಷೆಯಾಗಿದೆ.

2018

  • 2018ರಲ್ಲಿ ದಾಖಲಾಗಿರುವ ಒಟ್ಟು ಪ್ರಕರಣಗಳು 33,356
  • ಕರ್ನಾಟಕದ ಪಾಲು 482
  • ಉತ್ತರ ಪ್ರದೇಶದಲ್ಲಿ ಹೆಚ್ಚು ಪ್ರಕರಣಗಳು ಅಂದರೆ 3398 ಪ್ರಕರಣ ದಾಖಲಾಗಿವೆ.
  • ನಾಗರೀಕ ಸೇವಾ ಹುದ್ದೆಗಳಲ್ಲಿರುವವರಿಂದ 13 ಮತ್ತು ಪೋಲೀಸ್ ಇಲಾಖೆಯ ಸಿಬ್ಬಂದಿಗಳಿಂದ 15 ಪ್ರಕರಣಗಳು ದಾಖಲಾಗಿವೆ.
  • 23,581 ಜನರಿಗೆ ಶಿಕ್ಷೆಯಾಗಿದೆ.

2017

  • 2017ರಲ್ಲಿ ದಾಖಲಾಗಿರುವ ಒಟ್ಟು ಪ್ರಕರಣಗಳು 32,559
  • ಕರ್ನಾಟಕದ ಪಾಲು 535
  • ಉತ್ತರ ಪ್ರದೇಶದಲ್ಲಿ 3,524 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.
  • ನಾಗರೀಕ ಸೇವಾ ಹುದ್ದೆಗಳಲ್ಲಿರುವವರಿಂದ 18 ಮತ್ತು ಪೋಲೀಸ್ ಇಲಾಖೆಯ ಸಿಬ್ಬಂದಿಗಳಿಂದ 15 ಪ್ರಕರಣಗಳು ದಾಖಲಾಗಿವೆ.
  • 23,145 ಜನರಿಗೆ ಶಿಕ್ಷೆಯಾಗಿದೆ

(ಕೃಪೆ; ರಾಷ್ಟ್ರೀಯ ಅಪರಾಧ ದಾಖಲೆಗಳ ಸಂಸ್ಥೆ – NCRB)

ನಮ್ಮ ಸಮಾಜ ಹಾಗೂ ಸಂಸ್ಕೃತಿ ಎಷ್ಟರ ಮಟ್ಟಿಗೆ ಹಾಳಾಗುತ್ತಿದೆಯೆಂದರೆ, ಬಹುಪಾಲು ಸಂತ್ರಸ್ತೆಯರು ತಮ್ಮ ಪರಿಚಯದವರಿಂದ ಅಥವಾ ಸಂಬಂಧಿಕರಿಂದ ಅತ್ಯಾಚಾರಕ್ಕೊಳಗಾದವರೇ. ಅದಕ್ಕೂ ಸಹ ಸಂಬಂಧಿಸಿದ ಅಂಕಿ ಅಂಶಗಳನ್ನೂ ಸಹ ಎನ್.ಸಿ.ಆರ್.ಬಿ ಬಿಡುಗಡೆ ಮಾಡಿದೆ.

  • 2010 ರಲ್ಲಿ, ದೇಶ 21,566 ಕರ್ನಾಟಕದಲ್ಲಿ 466
  • 2011 ರಲ್ಲಿ, ದೇಶ 22,549 ಕರ್ನಾಟಕದಲ್ಲಿ 352
  • 2012 ರಲ್ಲಿ, ದೇಶ 24,470 ಕರ್ನಾಟಕದಲ್ಲಿ 526
  • 2013 ರಲ್ಲಿ, ದೇಶ 31,807 ಕರ್ನಾಟಕದಲ್ಲಿ 953
  • 2014ರಲ್ಲಿ, ದೇಶ 32,187 ಕರ್ನಾಟಕದಲ್ಲಿ 1053
  • 2015ರಲ್ಲಿ, ದೇಶ 33,098 ಕರ್ನಾಟಕದಲ್ಲಿ 572
  • 2016ರಲ್ಲಿ, ದೇಶ 36,859 ಕರ್ನಾಟಕದಲ್ಲಿ 1655
  • 2017ರಲ್ಲಿ, ದೇಶ 30,299 ಕರ್ನಾಟಕದಲ್ಲಿ 524
  • 2018ರಲ್ಲಿ, ದೇಶ 31,320 ಕರ್ನಾಟಕದಲ್ಲಿ 488
  • 2019ರಲ್ಲಿ, ದೇಶ 32,033 ಕರ್ನಾಟಕದಲ್ಲಿ 501
rape case 1

ಇನ್ನು 2018ರಲ್ಲಿ ಭಾರತದಲ್ಲಿ 6 ವರ್ಷದ ಕೆಳಗಿನ ಮಕ್ಕಳ ಮೇಲೆ 281 ಹಾಗೂ 6 ರಿಂದ 12 ವರ್ಷಗಳ ಅವಧಿಯ ಬಾಲಕಿಯರ ಮೇಲೆ 757 ಅತ್ಯಾಚಾರ ಪ್ರಕರಣಗಳು ವರದಿಯಾಗಿದ್ದರೆ, 2019 ರಲ್ಲಿ 6 ವರ್ಷದ ಕೆಳಗಿನ ಮಕ್ಕಳ ಮೇಲೆ 144 ಹಾಗೂ 6 ರಿಂದ 12 ವರ್ಷಗಳ ಅವಧಿಯ ಬಾಲಕಿಯರ ಮೇಲೆ 428 ಮಕ್ಕಳ ಮೇಲೆ ಅತ್ಯಾಚಾರವಾಗಿದೆ. ಸುದೈವದಿಂದ ಅಪ್ರಾಪ್ತ ವಯಸ್ಸಿನ ಬಾಲಕಿಯರ ಮೇಲಿನ ಅತ್ಯಾಚಾರದ ‘ಕೊಡುಗೆ’ಯಲ್ಲಿ ಕರ್ನಾಟಕದ ಪಾತ್ರ ಇಲ್ಲ.

(ಕೃಪೆ: ರಾಷ್ಟ್ರೀಯ ಅಪರಾಧ ದಾಖಲೆಗಳ ಸಂಸ್ಥೆ – NCRB)

ಮೇಲಿನ ಅಂಕಿ ಅಂಶಗಳನ್ನು ನೋಡಿದಾಗ ಅತ್ಯಾಚ್ಯಾರಕ್ಕೊಳಗಾಗುತ್ತಿರುವವರು ಅವರ ಸಂಬಂಧಿಕರಿಂದಲೇ ಅತ್ಯಾಚಾರಕ್ಕೊಳಗಾಗುತ್ತಿರುವುದು ನಾಚಿಕೆಗೇಡಿನ ವಿಷಯ. ಪ್ರತಿ ವರ್ಷವೂ 30,000ಕ್ಕೂ ಕಡಿಮೆಯಿಲ್ಲದಂತೆ ಭಾರತದಲ್ಲಿ ಅತ್ಯಾಚಾರ ಪ್ರಕರಣ ನಡೆಯುತ್ತಿವೆ. ಅಂದಮೇಲೆ ನಮ್ಮದೆಂಥ ರಾಮರಾಜ್ಯ? ಸ್ವಲ್ಪ ಯೋಚಿಸಬೇಕಾದ ಪ್ರಶ್ನೆ. ಅದೂ ಅಲ್ಲದೇ ಈ ಎಲ್ಲ ಅಂಕಿ ಅಂಶಗಳು ಪ್ರಕರಣ ದಾಖಲಿಸಿದ್ದರಿಂದ ಸಿಕ್ಕ ಮಾಹಿತಿಗಳು. ಪ್ರಕರಣ ದಾಖಲಿಸದೇ ಇರುವ ಅನೇಕ ಪ್ರಕರಣಗಳೂ ಇನ್ನೂ ಇರಬಹುದು.

ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ ಸಂವಿಧಾನವು ಅನೇಕ ಕಾನೂನುಗಳನ್ನು ಜಾರಿಗೆ ತಂದಿದೆ. ಅವುಗಳಲ್ಲಿ ಮುಖ್ಯವಾದವುಗಳನ್ನು ಇಲ್ಲಿ ಹೆಸರಿಸಬಯುಸುತ್ತೇನೆ.

  • ಭಾರತಿಯ ದಂಡ ಸಂಹಿತೆ 228 (ಎ) (2) ಪ್ರಕಾರ ಅತ್ಯಾಚಾರಕ್ಕೆ ಸಂಬಂಧಪಟ್ಟ ಸಂತ್ರಸ್ತೆಯ ಹೆಸರನ್ನು ಹೇಳಿದರೆ ಅಥವಾ ಬಿಟ್ಟುಕೊಟ್ಟರೆ ಅಂತಹ ವ್ಯಕ್ತಿಗೆ 2 ವರ್ಷಗಳ ಕಾಲ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ.
  • ಭಾರತೀಯ ದಂಡ ಸಂಹಿತೆ 376 ರ ಪ್ರಕಾರ ಯಾವುದೇ ಮಹಿಳೆಯ ಅತ್ಯಾಚಾರವನ್ನು ನಡೆಸಿದರೆ, ಅತ್ಯಾಚಾರ ನಡೆಸಿದ ವ್ಯಕ್ತಿಗೆ 7 ವರ್ಷಗಳ ಅಥವಾ 7 ಕ್ಕಿಂತಲೂ ಹೆಚ್ಚು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ನೀಡಬಹುದಾಗಿರುತ್ತದೆ. ಒಂದು ವೇಳೆ ಸಂತ್ರಸ್ತೆ ಅತ್ಯಾಚಾರಿಯ ಅಪ್ರಾಪ್ತ ವಯಸ್ಸಿನ ಪ್ತ್ನಿಯಾಗಿದ್ದಲ್ಲಿ ಶಿಕ್ಷೆಯನ್ನು 2 ವರ್ಷಗಳಿಗೆ ಇಳಿಸಬಹುದಾಗಿರುತ್ತದೆ.
  • ಸೆಕ್ಷನ್ 376 ಬಿ ಪ್ರಕಾರ ಯಾವುದಾದರೂ ಸರ್ಕಾರಿ ಉದ್ಯೋಗಿ ತನ್ನ ಅಧೀನದಲ್ಲಿರುವ ಮಹಿಳೆಯ ಮೇಲೆ ಅತ್ಯಾಚಾರ ಮಾಡಿದರೆ ಆ ವ್ಯಕ್ತಿಗೆ 5 ವರ್ಷಗಳ ಕಾಲ ಕಠಿಣ ಶಿಕ್ಷೆ ಹಾಗೂ ದಂಡವನ್ನು ವಿಧಿಸ ಬಹುದಾಗಿರುತ್ತದೆ.
  • ಸೆಕ್ಷನ್ 376 ಸಿ ಮತ್ತು ಸೆಕ್ಷನ್ 376 ಡಿ ಪ್ರಕಾರ, ಕ್ರಮವಾಗಿ ಯಾವುದಾದರೂ ಜೈಲಿನ ಅಧಿಕಾರಿ ಅಥವಾ ವೈದ್ಯ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದರೆ 5 ವರ್ಷಗಳ ಜೈಲು ಶಿಕ್ಷೆ ಮತ್ತು ದಂಡ ವಿಧಿಸಬಹುದಾಗಿದೆ.
  • ಸೆಕ್ಷನ್ 375 (1) ರ ಪ್ರಕಾರ ಅತ್ಯಾಚಾರಿಗೆ 7 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ಸೆಕ್ಷನ್ 375 (2) ರ ಪ್ರಕಾರ ಅತ್ಯಾಚಾರಿಗೆ ಜೀವಾವಧಿ ಶಿಕ್ಷೆ ವಿಧಿಸಬಹುದಾಗಿರುತ್ತದೆ. ಕೆಲವು ವಿಶೇಷ ಪ್ರಕರಣಗಳಲ್ಲಿ ಮರಣದಂಡನೆಯನ್ನೂ ವಿಧಿಸಬಹುದಾಗಿರುತ್ತದೆ.
rape case

ಕೇವಲ ಮೇಲೆ ನಮೂದಿಸಿರುವ ದಂಡ ಸಂಹಿತೆಗಳಲ್ಲದೇ ಇನ್ನೂ ಅನೇಕ ಉಪದಂಡ ಸಂಹಿತೆಗಳು ಭಾರತೀಯ ಸಂವಿಧಾನದಲ್ಲಿವೆ.

ಭಾರತದಲ್ಲಿ ಇಷ್ಟೆಲ್ಲ ಕಾನೂನುಗಳಿದ್ದು ಸಹ ಅತ್ಯಾಚಾರಗಳೇಕೆ ಇಷ್ಟೊಂದು ತಾಂಡವವಾಡುತ್ತಿದೆ? ನಮ್ಮ ಜನಾಂಗದ ಮನುಷ್ಯತ್ವ ಮುರುಟಿ ಹೋಗಿದಿಯಾ ಅಥವಾ ನಮ್ಮ ಕಾನೂನುಗಳಲ್ಲಿರುವ ಲೋಪದೋಷಗಳಾ? ಎಷ್ಟು ಜನ ಅಪರಾಧಿಗಳಿಗೆ ಸರಿಯಾದ ಶಿಕ್ಷೆ ಸಿಕ್ಕಿದೆ ಎಂಬುದನ್ನು ನಾವು ನೋಡಿದರೆ ಫಲಿತಾಂಶ ನಮ್ಮನ್ನು ನಿರಾಶೆಗೊಳಿಸುತ್ತದೆ. ಪ್ರತಿವರ್ಷವು 30,000 ಪ್ರಕರಣಗಳು ನಡೆಯುತ್ತಿದ್ದು ಅದರಲ್ಲಿ ಸುಮಾರು 10,000 ದಷ್ಟು ಅಪರಾಧಿಗಳು ತಪ್ಪಿಸಿಕೊಳ್ಳುತ್ತಿದ್ದಾರೆ. ಏಕೆಂದರೆ ಕಾನೂನುಗಳಲ್ಲಿರುವ ಲೋಪದೋಷಗಳು, ಸರ್ಕಾರಿ ಅಧಿಕಾರಿಗಳು ಲಂಚಕ್ಕೆ ಶರಣಾಗುವುದು (ಎಲ್ಲ ಸರ್ಕಾರಿ ಅಧಿಕಾರಿಗಳೂ ಅಲ್ಲ), ರಾಜಕೀಯ ಪ್ರಭಾವಕ್ಕೆ ಕಟ್ಟು ಬೀಳುವುದು, ಕೆಲ ಹೊಟ್ಟೆ ತುಂಬಿದ ಪೋಲಿಸರ ನಿರ್ಲಕ್ಷ್ಯತೆ ಇವೆಲ್ಲ ಅಪರಾಧಿಗಳು ಶಿಕ್ಷೆಯಿಂದ ಪಾರಾಗಲು ಕಾರಣವಾಗುತ್ತವೆ. ಅಲ್ಲದೇ ಒಬ್ಬ ಅಪರಾಧಿಗೆ ಕೆಳ ಹಂತದ ನ್ಯಾಯಲಯ ಒಂದು ತೀರ್ಪು ನೀಡಿದಾಗ ಆ ತೀರ್ಪನ್ನು ಪ್ರಶ್ನೆ ಮಾಡಿ ಆ ಅಪರಾಧಿ ಮೇಲಿನ ಹಂತದ ನ್ಯಾಯಲಯಕ್ಕೆ ಅಪೀಲು ಸಲ್ಲಿಸುವ ಅವಕಾಶವನ್ನೂ ನಮ್ಮ ಸಂವಿಧಾನ ನೀಡಿದೆ. ಆದರೆ ಅದು ನಿರಪರಾಧಿಗಳಿಗೆ ಶಿಕ್ಷೆ ಆದಾಗ ಮಾಡಬೇಕಾದ ಅಪೀಲು. ಈಗ ನೋಡಿದರು ಎಲ್ಲರೂ ಅಪೀಲು ಹೋಗುವವರೇ. ತಾಲೂಕಾ ನ್ಯಾಯಾಲಯದಿಂದ ಹಿಡಿದು ಸುಪ್ರೀಂ ಕೋರ್ಟ್ ವರೆಗೂ ಅನೇಕ ಹಂತಗಳಿವೆ. ಈ ಹಂತಗಳ ವಿಚಾರಣೆ ಮುಗಿಯುವಷ್ಟರಲ್ಲಿ ಅಪರಾಧಿಯ ಜೀವನವೇ ಮುಗಿದು ಹೋಗಿರುತ್ತದೆ. ಅಥವಾ ಕೆಲವು ಬಾರಿ ಮರಣವನ್ನೂ ಹೊಂದಿರಬಹುದು. ಆಗ ನ್ಯಾಯ ಸಿಕ್ಕಿ ಏನು ಪ್ರಯೋಜನ? ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯರ ಪಾಡೇನು? ಹಾಗಾಗಿ ಇನ್ನು ಮುಂದಾದರೂ ನಮ್ಮ ದೇಶದ ಕಾನೂನಿನ ನೊಗಗಳು ಹಿಡಿತಗೊಳ್ಳಲಿ. ದೇಶ ಸುಭದ್ರವಾಗಲಿ.

5855cf72 a9d7 4be9 b313 690a66964cac
ಓಂಕಾರೇಶ್
ಸಂವಹನ ವಿಭಾಗದ ವಿದ್ಯಾರ್ಥಿ
ಬೆಂಗಳೂರು ವಿಶ್ವವಿದ್ಯಾಲಯ


Copyright © All rights reserved Newsnap | Newsever by AF themes.
error: Content is protected !!