ಹತ್ತಿರದವರ ಸಾಲು ಸಾಲು ಸಾವುಗಳನ್ನು ಕಣ್ಣಾರೆ ನೋಡಿ, ಕಿವಿಯಾರೆ ಕೇಳಿ ಸಾಕಷ್ಟು ಭಯ ನೋವು ಆತಂಕ ನಿರಾಸೆ ಅನೇಕರಲ್ಲಿ ಮನೆ ಮಾಡಿದೆ. ನನ್ನ ಸರದಿ ಯಾವಾಗ ಎಂದು ಕಾಯುವಂತೆ ಭಾಸವಾಗುತ್ತಿದೆ.
ಮನಸ್ಸಿನ ಸಮಾಧಾನಕ್ಕಾಗಿ ಇಲ್ಲಿದೆ ಇತಿಹಾಸದ ಒಂದಷ್ಟು ಭಯಾನಕ ದುರಂತಗಳು……
ವಿಶ್ವದ ಎರಡು ಮಹಾ ಯುದ್ಧಗಳು,
ಅದರ ಪರಿಣಾಮದಿಂದಾಗಿ ಹಿರೋಷಿಮಾ ನಾಗಸಾಕಿಯ ಅಣು ಬಾಂಬ್ ದುರಂತ ಮತ್ತು ಹಿಟ್ಲರನ ಯಾತನಾಮಯ ಶಿಬಿರಗಳು…..
ಭಾರತದ ಫ್ಲೇಗ್ ಮಹಾಮಾರಿಯ ಭಯಾನಕ ಸಾವುಗಳು,
ಭಾರತ ಪಾಕಿಸ್ತಾನ ವಿಭಜನೆಯ ಕಾಲದ ಮಾರಣಹೋಮ….
ಈಗಲೂ ಮುಂದುವರೆಯುತ್ತಿರುವ ಸಿರಿಯಾದ ಆಂತರಿಕ ಯುದ್ಧದ ಸಾವುಗಳು….
ಆಫ್ರಿಕಾದ ಈ ಕ್ಷಣದ ಸೂಡನ್ ಇಥಿಯೋಪಿಯಾದ ಆಂತರಿಕ ಕ್ಷೋಭೆಗೆ ಬಲಿಯಾಗುತ್ತಿರುವ ಲಕ್ಷಾಂತರ ಅಮಾಯಕರು…..
ಸುನಾಮಿ ಭೂಕಂಪ ಪ್ರವಾಹಗಳ ಪ್ರಳಯ ಸದೃಶ ಭೀಕರ ದೃಶ್ಯಗಳು……
ಅಂತಹ ದುರ್ಘಟನೆಗಳಲ್ಲಿ ಈಗಿನ ಕೋವಿಡ್ 19 ಸಹ ಒಂದು….
ಸ್ವಾತಂತ್ರ್ಯ ಸಮಯದಲ್ಲಿ 30/35 ಕೋಟಿ ಇದ್ದ ಜನ ಈಗ 140 ಕೋಟಿಯ ಹತ್ತಿರ ಬಂದಿದ್ದೇವೆ. ಸುಮಾರು 5 ಪಟ್ಟು ಹೆಚ್ಚಾಗಿದ್ದೇವೆ.
ಸುಮಾರು 14 ತಿಂಗಳ ಕೊರೋನಾ ವೈರಸ್ ಕಾರಣದಿಂದ ಇಡೀ ಭಾರತದಲ್ಲಿ ಮೃತರಾಗಿರುವವರು ಇಲ್ಲಿಯವರೆಗೆ ಕೇವಲ 2.5 ಲಕ್ಷ ಮಾತ್ರ…..
ಈ ದೇಶದಲ್ಲಿ ಪ್ರತಿ ವರ್ಷದ ಕೊಲೆ ಅತ್ಯಾಚಾರ ಆತ್ಮಹತ್ಯೆ ಅಪಘಾತ ಅನಾರೋಗ್ಯ ಹಾವು ನಾಯಿ ಕಡಿತ ವೃದ್ಧಾಪ್ಯ ಸಹಜ ಸಾವು ಎಲ್ಲದರಲ್ಲೂ ಇದಕ್ಕಿಂತ ಹೆಚ್ಚು ಸಾಯುತ್ತಾರೆ.
ಈ ಬದುಕಿನಲ್ಲಿ ಒಳ್ಳೆಯ ಸಂತೋಷದ ಅನೇಕ ದಿನಗಳನ್ನು ಅನುಭವಿಸಿದ್ದೇವೆ. ಹಾಗೆಯೇ ಅದರ ಭಾಗವಾಗಿ ಈಗಿನ ನೋವು ಆತಂಕ ಭಯದ ಅನುಭವವನ್ನು ಅನುಭವಿಸೋಣ…..
ಅತ್ಯುತ್ತಮ ಗೆಳೆಯ ಗೆಳತಿ ತಂದೆ ತಾಯಿ ಹೆಂಡತಿ ಪ್ರೇಯಸಿ ಗುರುಗಳು ಶಿಷ್ಯರು ಸಹಪಾಠಿಗಳು ನೆರೆಹೊರೆಯವರು ಸ್ಪೂರ್ತಿದಾಯಕ ಹೋರಾಟಗಾರರು ಚಿಂತಕರು ಹುತಾತ್ಮರು ಎಲ್ಲರನ್ನೂ ಪಡೆದು ಅದರ ಆನಂದವನ್ನು ಪಡೆದಿದ್ದೇವೆ. ಹಾಗೆಯೇ ಈಗ ಅವರನ್ನು ಕಳೆದು ಕೊಳ್ಳುವ ನೋವನ್ನು ಸಹಿಸಿಕೊಳ್ಳಬೇಕಿದೆ…..
ಊಟ ಬಟ್ಟೆ ವಸತಿಗಳು ಇಲ್ಲದೆ ನರಳುತ್ತಿದ್ದೆವು. ಈಗ ಸಾಕಷ್ಟು ಜನರು ಒಂದಷ್ಟು ವರುಷಗಳು ಸುಖವಾಗಿ ಕಾರು ಬಂಗಲೆ ಇಷ್ಟ ಪಟ್ಟ ಊಟ ಬಟ್ಟೆ ಟಿವಿ ಮೊಬೈಲ್ ಎಲ್ಲವನ್ನೂ ಅನುಭವಿಸಿದ್ದೇವೆ. ಈಗ ಅದನ್ನು ತೊರೆಯುವ ಸಮಯವೂ ಬರಬಹುದು. ಸ್ವೀಕರಿಸಿ…..
ನೀರು ಗಾಳಿ ಆಹಾರ ಕಾಡು ಎಲ್ಲವನ್ನೂ ನಮ್ಮ ಸುಖಕ್ಕಾಗಿ ಮಲಿನ ಮಾಡಿ ಅಹಂಕಾರ ಮೆರೆದೆವು. ಕೊನೆಗೆ ಮಾನವೀಯ ಮೌಲ್ಯಗಳನ್ನೂ ಗಾಳಿಗೆ ತೂರಿ ಹಣದ ಬಲೆಗೆ ಬಿದ್ದೆವು. ಬದುಕಿನ ಬಗ್ಗೆ ಅತಿರೇಕದ ವ್ಯಾಮೋಹಕ್ಕೆ ಸಿಲುಕಿದೆವು. ಈಗ ಅದಕ್ಕೆ ಒಂದಷ್ಟು ದಂಡ ಕೊಡಬೇಕಾಗಿದೆ. ಶಿಕ್ಷೆ ಅನುಭವಿಸಬೇಕಾಗಿದೆ. ಅದನ್ನು ಒಪ್ಪಿಕೊಂಡು ಸಮಾಧಾನ ಪಟ್ಟುಕೊಳ್ಳಿ.
ಕೆಲವರು ಯಾವುದೇ ಅರ್ಹತೆ ಶ್ರಮ ಒಳ್ಳೆಯತನ ವಿಶಾಲ ಮನಸ್ಸು ಯಾವುದೂ ಇಲ್ಲದೆ ಭ್ರಷ್ಟಾಚಾರ ಮಾಡಿ, ವಂಚನೆ ಮಾಡಿ, ಜಮೀನು ಮಾರಿ ಚಿನ್ನ ಮಾರಿ, ಕೆಟ್ಟ ರಾಜಕೀಯ ಮಾಡಿ ಕೋಟಿ ಗಟ್ಟಲೆ ಹಣ ಮಾಡಿ ಮಜಾ ಮಾಡಿದಿರಿ. ಭವ್ಯ ಬಂಗಲೆಯಲ್ಲಿ ಕುಳಿತು ಬಡ್ಡಿ ಬಾಡಿಗೆ ಹಣದಲ್ಲಿ ಸೋಫಾಮೇಲೆ ಕುಳಿತು ಮಜಾ ಉಡಾಯಿಸಿದಿರಿ. ಹಣದಿಂದ ಸುಖ ಪಡೆಯಬಹುದು ಎಂದು ದೈಹಿಕ ಶ್ರಮ ಮತ್ತು ಮಾನಸಿಕ ಆರೋಗ್ಯ ಮರೆತಿರಿ. ಅದಕ್ಕೆ ಒಂದಷ್ಟು ಶಿಕ್ಷೆ ಪ್ರಕೃತಿಯೇ ನೀಡುತ್ತಿರುವಾಗ ಸ್ವೀಕರಿಸುವುದು ಅನಿವಾರ್ಯ…
ಅನಿರೀಕ್ಷಿತವಾಗಿ ಭೂಮಿಗೆ ಬೆಲೆ ಬಂದ ಕಾರಣದಿಂದಾಗಿ ಗಂಡ ಹೆಂಡತಿ ಅಕ್ಕ ತಂಗಿ ತಮ್ಮ ಅಣ್ಣ ಚಿಕ್ಕಪ್ಪ ದೊಡ್ಡಮ್ಮ ಮುಂತಾದ ರಕ್ತ ಸಂಬಂಧಗಳನ್ನು ನೋಡದೆ ಬೀದಿ ಬೀದಿಗಳಲ್ಲಿ ಬಡಿದಾಡಿ ಪೋಲೀಸ್ ಕೋರ್ಟುಗಳಿಗೆ ಅಲೆದಾಡುತ್ತಿರುವಿರಿ. ಹೆಣದ ಮುಂದೆ ಹಣಕ್ಕಾಗಿ ಸ್ವಂತ ಸಂಬಂಧಿಗಳೇ ಹೊಡೆದಾಡಿದ ದೃಶ್ಯಗಳು ಈಗಲೂ ಕಣ್ಣ ಮುಂದಿದೆ. ಈಗ ಅದರ ಆತ್ಮವಿಮರ್ಶೆಯ ಕಾಲ. ಸಹಿಸಿಕೊಳ್ಳಿ.
ಊರು ಊರು ಗ್ರಾಮ ಹಳ್ಳಿಗಳು ಸೇರಿ ಇಡೀ ದೇಶದಲ್ಲಿ ಬಾರು ಸಂಸ್ಕೃತಿ ಸೃಷ್ಟಿ ಮಾಡಿ ವಚನ ಸಂಸ್ಕೃತಿ ನಾಶ ಮಾಡಿದಿರಿ. ಅದಕ್ಕಾಗಿ ಒಂದಷ್ಟು ಪಶ್ಚಾತ್ತಾಪ ಪಡಬೇಕಲ್ಲವೇ……
ಮತವನ್ನು ಖರೀದಿ ಮಾಡಿದವರು ಕೆಲವರು, ಮತವನ್ನು ಮಾರಿಕೊಂಡವರು ಕೆಲವರು. ಇಂತಹವರಿಂದ ಪ್ರಜಾಪ್ರಭುತ್ವ ಸ್ಥಾಪಿಸಿ ಆಕ್ಸಿಜನ್ ವೆಂಟಿಲೇಟರ್ ಬೆಡ್ ಬ್ಲಾಕಿಂಗ್ ಎಲ್ಲವೂ ಅವ್ಯವಸ್ಥೆ ಎಂದು ನೊಂದು ಕೊಂಡರೆ ಹೇಗೆ. ಬೇವು ಬಿತ್ತಿ ಮಾವು ಬೆಳೆಯಲು ಸಾಧ್ಯವೇ…..
ಹಣ ಆಸ್ತಿ ಅಂತಸ್ತು ಅಧಿಕಾರ ಯಾವುದೂ ಶಾಶ್ವತವಲ್ಲ. ಗುಣ ಜ್ಞಾನ ಚಿಂತನೆ ಅಧ್ಯಯನ ಒಳ್ಳೆಯತನವೇ ನಿಜವಾದ ಆಸ್ತಿ ಮತ್ತು ಬದುಕಿರುವವರೆಗೂ ಶಾಶ್ವತ. ಅದರಿಂದ ಜೀವನದ ಯಾವುದೇ ಕಷ್ಟಗಳನ್ನು ಕೊನೆಗೆ ಸಾವಿನ ನೋವನ್ನೂ ಕಡಿಮೆ ಮಾಡಿಕೊಳ್ಳಬಹುದು ಎಂದು ಎಷ್ಟೇ ಹೇಳಿದರು ಕೇಳದೆ ಈಗ ವೈರಸ್ ಗೆ ಅಂಜಿ ಕುಳಿತರೆ ಹೇಗೆ…..
ಇಡೀ ದೇಶದಲ್ಲಿ ಡಾಬಾ ಸಂಸ್ಕೃತಿಯನ್ನು ಎಲ್ಲೆಂದರಲ್ಲಿ ಬೆಳೆಸಿ ಕ್ರೀಡಾ ಸಂಸ್ಕೃತಿಯನ್ನು ನಾಶ ಮಾಡಿ ಈಗ ಉಸಿರಾಟದ ತೊಂದರೆ ಎನ್ನುವುದು ಯಾವ ನ್ಯಾಯ……
ಅಯೋಗ್ಯರನ್ನು ಆರೋಗ್ಯ ಮಂತ್ರಿ ಕೃಷಿ ಮಂತ್ರಿ ಅರಣ್ಯ ಮಂತ್ರಿ ಮುಂತಾದ ಖಾತೆಗಳಿಗೆ ನೇಮಿಸಿ ಈಗ ಸಾವಿನ ಭಯದಿಂದ ನರಳುವುದಕ್ಕೆ ಯಾರು ಕಾರಣ….
ಗ್ರಂಥಾಲಯಗಳನ್ನು ಮುಚ್ಚಿಸಿ ಸಿನಿಮಾ ಮಂದಿರಗಳನ್ನು ಹೆಚ್ಚಿಸಿ, ಮೊಬೈಲ್ ಹುಚ್ಚು ಹಿಡಿಸಿ ಈಗ ಸಾವು ನೋವುಗಳು ಸಂಕಷ್ಟ ಎದುರಿಸಲಾಗದೆ ಅಜ್ಞಾನ ಅಂಧಕಾರದಿಂದ ಗಾಳಿ ಸುದ್ದಿಗಳನ್ನು ನಂಬಿ ವಾಸ್ತವ ಸ್ಥಿತಿ ಅರಿಯಲಾರದೆ ಬೆದರುತ್ತಿರುವುದಕ್ಕೆ ಯಾರು ಹೊಣೆ….
ಆದ್ದರಿಂದ ದಯವಿಟ್ಟು ಸ್ವಲ್ಪ ಆತ್ಮಾವಲೋಕನ ಮಾಡಿಕೊಳ್ಳಿ. ಈಗಲೂ ಕಾಲ ಮಿಂಚಿಲ್ಲ. ನಾವೇ ಮಾಡಿಕೊಂಡ ಕೆಲವು ತಪ್ಪುಗಳಿಗೆ ಶಿಕ್ಷೆಯಾಗುತ್ತಿದೆ. ಅದು ವಿವಿಧ ರೂಪಗಳಲ್ಲಿ ಪ್ರಕಟವಾಗುತ್ತಿದೆ.
ಮನುಷ್ಯ ಪ್ರಕೃತಿಯ ಒಂದು ಸಹಜ ಪ್ರಾಣಿ. ಹಣ ಅಕ್ಷರ ಅಧಿಕಾರ ಬಂದ ತಕ್ಷಣ ಆತನ ಜೀವಕೋಶಗಳು ಬದಲಾಗುವುದಿಲ್ಲ. ದೇಹ ಮತ್ತು ಮನಸ್ಸನ್ನು ಸದಾ ದಂಡಿಸುತ್ತಲೇ ಇರಬೇಕು. ಅರ್ಥಾತ್ ಶ್ರಮ ಪಡುತ್ತಲೇ ಇರಬೇಕು. ದುರಹಂಕಾರ ಪಡಲು ನೀನೇನು ನಾನೇನು ಅತಿ ಮಾನವರಲ್ಲ. ಅಧಿಕಾರ ಒಂದು ಉದ್ಯೋಗ ಮತ್ತು ಅರ್ಹತೆಯೇ ಹೊರತು ಅದು ಪ್ರತಿಷ್ಟೆಯಲ್ಲ. ಯಾವ ಮಂತ್ರಿ, ಯಾವ ನಟ, ಯಾವ ಸ್ವಾಮೀಜಿ ಪಾದ್ರಿ ಮೌಲ್ವಿ ಯಾರನ್ನೂ ಪ್ರಕೃತಿ ಬೇದವೆಣಿಸುವುದಿಲ್ಲ.
ಈಗಲಾದರೂ ಪಾಠ ಕಲಿಯೋಣ.
ಸ್ವಾತಂತ್ರ್ಯ ಸಮಾನತೆ ಜ್ಞಾನ ಒಳ್ಳೆಯತನ ಮುಂತಾದ ಮಾನವೀಯ ಮೌಲ್ಯಗಳಿಗೆ ಮಹತ್ವ ನೀಡೋಣ. ನನ್ನನ್ನೂ ಸೇರಿ ನಾವೆಲ್ಲರೂ ಜೀವಂತ ಇದ್ದರೆ ಉಳಿದಿರುವ ಬದುಕನ್ನು ಒಂದಷ್ಟು ಸಹನೀಯ ಮಾಡಿಕೊಳ್ಳೋಣ.
ಈ ಸಾಂಕ್ರಾಮಿಕ ರೋಗದಿಂದ ಉಳಿಯುವವರೆಷ್ಟೋ, ಅಳಿಯುವವರೆಷ್ಟೋ,
ಬದುಕಿರುವವರು ಸಮಚಿತ್ತದಿಂದ ಸ್ವೀಕರಿಸೋಣ. ಸತ್ತವರು…… ಅಷ್ಟೇ….
ಭಯ ಆತಂಕಕ್ಕಿಂತ ಅರಿವಿನ ಪ್ರಮಾಣ ಹೆಚ್ಚು ಮಾಡಿಕೊಳ್ಳಿ….
ವಿವೇಕಾನಂದ. ಹೆಚ್.ಕೆ.
- ಕರ್ನಾಟಕದಲ್ಲಿ ಡಿಸೆಂಬರ್ 4ರ ತನಕ ಭಾರೀ ಮಳೆ ಮುನ್ಸೂಚನೆ
- RBI ಗವರ್ನರ್ ಶಕ್ತಿಕಾಂತ ದಾಸ್ ಆಸ್ಪತ್ರೆಗೆ ದಾಖಲು: ಆರೋಗ್ಯದಲ್ಲಿ ಚೇತರಿಕೆ
- ಮುಡಾ ಹಗರಣ: ಡಿ.10ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್
- ಏಕನಾಥ್ ಶಿಂಧೆ ರಾಜೀನಾಮೆ: ದೇವರ ಮೊರೆ ಹೋದ ಬೆಂಬಲಿಗರು, ಮಹಾಯತಿ ಸರ್ಕಾರ ರಚನೆಗೆ ತಯಾರಿ
- ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಸರ್ಕಾರಿ ಶಾಲಾ ಶಿಕ್ಷಕನ ಬಂಧನ
More Stories
ನಂಬುಗೆಯೇ ಇಂಬು
ಜಲಗಾರ ಮತ್ತು ಕಾಲ ಜ್ಞಾನಿ ಕನಕ ನಾಟಕಗಳಲ್ಲಿ ದೈವ-ದೇಗುಲ ಸಂಕಥನ
ಕನ್ನಡ ರಾಜ್ಯೋತ್ಸವ