December 29, 2024

Newsnap Kannada

The World at your finger tips!

deepa1

ರೈತರ ಕಷ್ಟ ಅರಿಯದವರು

Spread the love

ಕೃಷಿ ಎಂದರೆ……

ಕೇವಲ ಬೇಸಾಯದ ನೆಲ ಮಾತ್ರವಲ್ಲ..

ಕೇವಲ ಭೂಮಿ ಉಳುಮೆ ಮಾಡುವುದು ಮಾತ್ರವಲ್ಲ…..

ಕೇವಲ ನೀರು ಹಾಯಿಸುವುದು ಮಾತ್ರವಲ್ಲ…..

ಕೇವಲ ಬಿತ್ತನೆ ಮಾಡುವುದು ಮಾತ್ರವಲ್ಲ…….

ಕೇವಲ ಬೆವರು ಸುರಿಸಿ ಶ್ರಮ ಪಡುವುದು ಮಾತ್ರವಲ್ಲ……….

ಕೇವಲ ಫಸಲು ಬೆಳೆಯುವುದು ಮಾತ್ರವಲ್ಲ……….

ಕೇವಲ ಕೊಯ್ಲು ಮಾಡುವುದು ಮಾತ್ರವಲ್ಲ…..

ಕೇವಲ ಅದನ್ನು ಶುಧ್ಧಿ ಮಾಡುವುದು ಮಾತ್ರವಲ್ಲ…..

ಕೇವಲ ಅಚ್ಚುಕಟ್ಟಾಗಿ ಸಂಗ್ರಹಿಸುವುದು ಮಾತ್ರವಲ್ಲ……

ಕೇವಲ ಅದನ್ನು ಉಪಯೋಗಿಸುವುದು ಮಾತ್ರವಲ್ಲ…..

ಕೇವಲ ಮಾರಾಟ ಮಾಡುವುದು ಮಾತ್ರವಲ್ಲ….

ಕೇವಲ ಹಣ ಗಳಿಸುವುದು ಮಾತ್ರವಲ್ಲ…..

ಕೇವಲ ಗಳಿಸಿದ ಹಣವನ್ನು ಖರ್ಚು ಮಾಡುವುದು ಮಾತ್ರವಲ್ಲ…..

ಕೃಷಿ ಎಂಬುದು ಒಂದು ಬದುಕು,
ಕೃಷಿ ಎಂಬುದು ಒಂದು ಜೀವನ ವಿಧಾನ,
ಕೃಷಿ ಎಂಬುದು ಒಂದು ಸಂಸ್ಕೃತಿ,
ಕೃಷಿ ಎಂಬುದು ಒಂದು ಸಮಾಜ,
ಕೃಷಿ ಎಂಬುದು ಒಂದು ಸೇವೆ,
ಕೃಷಿ ಎಂಬುದು ಒಂದು ಪೀಳಿಗೆಯ ಮುಂದುವರಿಕೆಯ ಮಾರ್ಗ…….

ಕೃಷಿ ಈ ಎಲ್ಲದರ ಒಟ್ಟು ಮೊತ್ತ….

ಅಂದರೆ ಕೃಷಿ ಇಲ್ಲದೆ ವ್ಯಕ್ತಿ, ಸಮುದಾಯ, ಸಮಾಜ, ದೇಶ, ಭಾಷೆ, ಧರ್ಮ, ದೇವರು ಅಸ್ತಿತ್ವವಿರುವುದಕ್ಕೆ ಸಾಧ್ಯವೇ ಇಲ್ಲ…

ಹೀಗಿರುವಾಗ
ಇಂದು ಕೃಷಿ ಮತ್ತು ರೈತ ನಮ್ಮ ಕಣ್ಣ ಮುಂದೆಯೇ ಬಿಕ್ಕಳಿಸುವುದನ್ನು ನೋಡುವ ದೌರ್ಭಾಗ್ಯ ನಮ್ಮದು….

.ಎಷ್ಟೊಂದು ಅಧಿಕಾರಿಗಳು,
ಎಷ್ಟೊಂದು ರಾಜಕಾರಣಿಗಳು,
ಎಷ್ಟೊಂದು ಧರ್ಮಾಧಿಕಾರಿಗಳು,
ಎಷ್ಟೊಂದು ವಕೀಲರು,
ಎಷ್ಟೊಂದು ಪೋಲೀಸರು,
ಎಷ್ಟೊಂದು ಶಿಕ್ಷಕರು,
ಎಷ್ಟೊಂದು ಎಂಜಿನಿಯರುಗಳು,
ಎಷ್ಟೊಂದು ಕಂಟ್ರಾಕ್ಟರುಗಳು,
ಎಷ್ಟೊಂದು ಡಾಕ್ಟರುಗಳು,
ಎಷ್ಟೊಂದು ಕಲಾವಿದರು,
ಎಷ್ಟೊಂದು ವ್ಯಾಪಾರಿಗಳು,
ಎಷ್ಟೊಂದು ಎಷ್ಟೊಂದು ಎಷ್ಟೊಂದು ಇತರೆ ಜನ ಇರುವುದರಲ್ಲಿ ಒಂದಷ್ಟು ಆರಾಮವಾಗಿ ಬದುಕುತ್ತಿದ್ದಾರೆ.

ಅವರ ಆರಾಮದ ಮೂಲ ಕಾರಣ ಕೃಷಿ ಮತ್ತು ರೈತ…….

ಪ್ರತಿ ತುತ್ತು ತಿನ್ನುವ ಮುನ್ನ ಇದನ್ನು ನೆನಪಿಡಿ………..

ನಿಂಬೆ ಹಣ್ಣು ಮಾರುವ ಅಜ್ಜಿಯ ಬಳಿ ಚೌಕಾಸಿ ಮಾಡದಿರಿ…….

ಸೊಪ್ಪಿನ ಅಜ್ಜನ ಬಳಿ ಕೊಸರಾಡದಿರಿ…….

ಕಡಲೆಕಾಯಿ ಮಾರುವವರ ಹತ್ತಿರ ಜಗಳವಾಡದಿರಿ……..

ಹಣ್ಣಿನವನ ಹತ್ತಿರ ಪೌರುಷ ತೋರದಿರಿ…..

ಎಳನೀರಿನವರ ಬಳಿ ಜುಗ್ಗುತನದಿಂದ ವರ್ತಿಸದಿರಿ……..

ಹೂವಿನವರ ಹತ್ತಿರ ನಿಮ್ಮೆಲ್ಲಾ ಜಿಪುಣತನ ಖರ್ಚುಮಾಡದಿರಿ…….

ಗೊತ್ತೇ ನಿಮಗೆ ಭತ್ತ ಬೆಳೆಯುವವರ ಕಷ್ಟ,…..

ಗೊತ್ತೇ ನಿಮಗೆ ಭತ್ತ ಬೆಳೆಯಲು ಎಷ್ಟು ದಿನ ಬೇಕೆಂದು……

ಗೊತ್ತೇ ನಿಮಗೆ ಅದು ಫಸಲಾಗಲು ಎಷ್ಟು ಜನರು ಶ್ರಮಪಡಬೇಕೆಂದು…..

ಗೊತ್ತೇ ನಿಮಗೆ ಅದಕ್ಕೆ ತಗಲುವ ಖರ್ಚು ಎಷ್ಟೆಂದು……….

ಗೊತ್ತೇ ನಿಮಗೆ ಅದರ ಆರೈಕೆ ಎಷ್ಟು ಕಷ್ಟವೆಂದು…….

ಗೊತ್ತೇ ನಿಮಗೆ ಅದರ ಕಟಾವಿನಲ್ಲಿ ಸುರಿಯುವ ಬೆವರು ಎಷ್ಟೆಂದು…….

ಗೊತ್ತೇ ನಿಮಗೆ ಅದರ ಸಾಗಾಣಿಕೆಯ ಕರ್ಮಕಾಂಡ………

ಗೊತ್ತೇ ನಿಮಗೆ ಅದರಲ್ಲಿ ಆಗುವ ಸೋರಿಕೆಯ ನಷ್ಟ ಎಷ್ಟೆಂದು…….

ಗೊತ್ತೇ ನಿಮಗೆ ಇಷ್ಟಾದರೂ ಅದಕ್ಕೆ ಸಿಗುವ ಪ್ರತಿಫಲ ಎಷ್ಟೆಂದು…..

ನಿಮ್ಮ ಮನೆಯಲ್ಲಿ ಬೇಯುವ ಅನ್ನ ಕಂಪ್ಯೂಟರ್ ನಲ್ಲಿ ತಯಾರಾದದ್ದಲ್ಲ……

ನೀವು ಊಟ ಮಾಡುವ ತರಕಾರಿ ಇಂಟರ್ನೆಟ್ ನಲ್ಲಿ ಬೆಳೆದದ್ದಲ್ಲ……

ಅದು ರೈತರ ಬೆವರ ಹನಿಗಳಿಂದ ಬಸಿದದ್ದು………..

ತಾಕತಿದ್ದರೆ Pizza – Burger ಹೋಟೆಲ್ ಗಳಲ್ಲಿ ಚೌಕಾಸಿ ಮಾಡಿ……..

ಧೈರ್ಯವಿದ್ದರೆ Shopping mall ಗಳಲ್ಲಿ ಕೊಸರಾಡಿ……….

ಶಕ್ತಿಯಿದ್ದರೆ Multiplex theater ಟಿಕೆಟ್ ಕೌಂಟರ್ ನಲ್ಲಿ ಜಗಳವಾಡಿ……..

ಕ್ಷಮಿಸಿ,
ಇದು ಯಾರ ವಿರುದ್ಧದ ದ್ವೇಷವೂ ಅಲ್ಲ,
ನಿಮ್ಮ ಮನಸ್ಸಿನ ಜಾಗೃತಿಗಾಗಿ,
ನಿಮ್ಮ ಗಮನ ಸೆಳೆಯಲು,
ರೈತರ ಶ್ರಮವನ್ನು ನಿಮಗೆ ನೆನಪಿಸಲು,
ಆಹಾರದ ಮಹತ್ವ ಸಾರಲು ಮಾತ್ರ…….
** ಅಲ್ಲಿನ ಸ್ವಾಮೀಜಿಯವರೊಂದಿಗೆ. ಮಾತುಕತೆ ನಡೆಸಲಾಯಿತು.

ವಿವೇಕಾನಂದ. ಹೆಚ್.ಕೆ.

Copyright © All rights reserved Newsnap | Newsever by AF themes.
error: Content is protected !!