ಸ್ವಾಮೀಜಿಗಳೇ ಒಂದಾಗಿ,
ಜಾತಿ ರಕ್ಷಣೆಗೆ ಮುಂದಾಗಿ,
ಕುರ್ಚಿ ಉಳಿಸಲು ಹೋರಾಡಿ,
ಮೌಲ್ಯಗಳ ಅಳಿಸಲು ಕಿರುಚಾಡಿ….
ಸಾರ್ಥವಾಯಿತು ನಿಮ್ಮ ಬದುಕು,
ಅರ್ಥವಾಯಿತು ನಿಮ್ಮ ಹುಳುಕು,
ಪಾದ ಪೂಜೆಗೆ ಅರ್ಹರು ನೀವು,
ಅಡ್ಡ ಪಲ್ಲಕ್ಕಿಗೆ ಯೋಗ್ಯರು ನೀವು…
ಜೀವ – ಜೀವನದ ಆಯ್ಕೆಯ ಕೋವಿಡ್ ಸಂದರ್ಭದಲ್ಲಿ, ಇನ್ನೂ ವ್ಯವಸ್ಥೆ ಆತಂಕದಿಂದ ದಿನ ದೂಡುತ್ತಿರುವಾಗ ಕನಿಷ್ಟ ಪ್ರಜ್ಞೆ ಇಲ್ಲದೆ ನಿಮ್ಮಂತ ಜವಾಬ್ದಾರಿ ಸ್ಥಾನದಲ್ಲಿ ಇರುವವರು ಸಾರ್ವಜನಿಕವಾಗಿ ಇಷ್ಟೊಂದು ಅಸಹ್ಯಕರವಾಗಿ ಒಂದು ಜಾತಿಗಾಗಿ ಮಾರಾಟವಾಗಿರುವ ವಿಷಯ ನಿಮ್ಮ ಬಗ್ಗೆ ತುಂಬಾ ಗಂಭೀರವಾಗಿ ಯೋಚಿಸುವಂತೆ ಮಾಡಿದೆ…..
ಇರಲಿ, ಒಬ್ಬ ವ್ಯಕ್ತಿಯ ಬಗ್ಗೆ, ಒಂದು ಪಕ್ಷದ ಬಗ್ಗೆ ನಿಮ್ಮ ನಿಷ್ಠೆ ಅಭಿಮಾನ ಅದು ಖಾಸಗಿಯಾದುದು ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಿಮ್ಮ ಸ್ವಾತಂತ್ರ್ಯ. ಅದನ್ನು ಗೌರವಿಸುತ್ತಾ……
ನಿಮಗೆ ನಿಮ್ಮ ನಿಜವಾದ ಕರ್ತವ್ಯದ ಬಗ್ಗೆ ನೆನಪು ಮಾಡುತ್ತಾ…..
ಹಿಂದೆ ಕೋಂದಡರಾಮಯ್ಯ ಎಂಬುವವರು ಬೆಂಗಳೂರಿನ ಪೋಲೀಸ್ ಕಮಿಷನರ್ ಆದ ಸಂದರ್ಭದಲ್ಲಿ ಅಧಿಕಾರ ಸ್ವೀಕರಿಸಿದ ಮೊದಲ ಪತ್ರಿಕಾಗೋಷ್ಠಿಯಲ್ಲಿ ಹೀಗೆ ಹೇಳಿದರು ” ನನ್ನ ವ್ಯಾಪ್ತಿಯ ಪೋಲೀಸ್ ಸ್ಟೇಷನ್ ಗಳಲ್ಲಿ ರೌಡಿಗಳಿರಬೇಕು ಅಥವಾ ಪೋಲಿಸರಿರಬೇಕು. ಇಬ್ಬರು ಒಟ್ಟಿಗೆ ಇರುವುದನ್ನು ನಾನು ಸಹಿಸುವುದಿಲ್ಲ. ಏಕೆಂದರೆ ಪೋಲೀಸರು ದಕ್ಷತೆ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿದರೆ ರೌಡಿಗಳು ಇರಲು ಸಾಧ್ಯವೇ ಇಲ್ಲ ಅಥವಾ ರೌಡಿಗಳು ಮೆರೆಯುತ್ತಿದ್ದರೆ ಪೋಲೀಸರು ಇರುವುದೇ ವ್ಯರ್ಥ ” ಎಂದು ಹೇಳಿದ್ದರು…..
ಈಗ ಅದೇ ಮಾತನ್ನು ಹೀಗೆ ಹೇಳಬೇಕಾಗಿದೆ…..
” ಈ ಸಮಾಜದಲ್ಲಿ ಮಠ ಮಾನ್ಯಗಳು ಧಾರ್ಮಿಕ ನಾಯಕರು ಇರಬೇಕು ಅಥವಾ ಜಾತಿ ವ್ಯವಸ್ಥೆ ಇರಬೇಕು. ಎರಡು ಒಟ್ಟಿಗೆ ಇರುವುದನ್ನು ನಾವು ಸಹಿಸುವುದಿಲ್ಲ. ಏಕೆಂದರೆ ಸರ್ವ ಸಂಗ ಪರಿತ್ಯಾಗಿಗಳಾದ ಸ್ವಾಮೀಜಿಗಳು ಇರುವಾಗ ಜಾತಿ ವ್ಯವಸ್ಥೆ ಇರಲೇ ಬಾರದು. ಜಾತಿ ವ್ಯವಸ್ಥೆ ಇರುವಾಗ ಸ್ವಾಮೀಜಿಗಳು ಇದ್ದರೆ ಅದು ನಿಷ್ಪ್ರಯೋಜಕ ಅಥವಾ ಅಪಾಯಕಾರಿ “
ಬೀದಿ ಬೀದಿಗಳಲ್ಲಿ ಪಾದಯಾತ್ರೆ ಮಾಡುತ್ತಾ ಸಿಕ್ಕ ಸಿಕ್ಕ ಮನೆಗಳಲ್ಲಿ ದವಸ ಧಾನ್ಯಗಳನ್ನು ಸಂಗ್ರಹಿಸಿ ತಮ್ಮ ಮಠಕ್ಕೆ ಕೊಂಡೊಯ್ದು ಯಾವುದೇ ಜಾತಿ ಧರ್ಮ ಭಾಷೆ ಲಿಂಗ ಪ್ರದೇಶಗಳ ತಾರತಮ್ಯ ಮಾಡದೇ ಎಲ್ಲರಿಗೂ ಅನ್ನ ದಾಸೋಹ ಅಕ್ಷರ ದಾಸೋಹ ಆಶ್ರಯ ದಾಸೋಹ ಮಾಡಿದ ಒಂದು ಪರಂಪರೆ ಮಠ ಸಂಸ್ಕೃತಿಯನ್ನು ಬೆಳೆಸಿದ ಇತಿಹಾಸ ನಮ್ಮಲ್ಲಿ ದಾಖಲಾಗಿದೆ. ನಡೆದಾಡುವ ದೇವರು ಎಂದು ಇವರುಗಳನ್ನು ಕರೆಯಲಾಗುತ್ತಿತ್ತು.
ಇಂದು ಅಸ್ತಿತ್ವದಲ್ಲಿರುವ ಅನೇಕ ಮಠಗಳು ವಿಶ್ವಕ್ಕೆ ಸಮಾನತೆಯನ್ನು ಮಾನವೀಯತೆಯನ್ನು ಸಾರಿದ ಅನುಭವ ಮಂಟಪದ ಹರಿಕಾರ ಅನುಭಾವಿ ಬಸವಣ್ಣನವರ ಚಿಂತನೆಗಳಿಂದ ಪ್ರೇರಿತವಾದಂತಹುಗಳು. ಎಂಟು ಶತಮಾನಗಳ ಹಿಂದೆಯೇ ಮನುಷ್ಯರ ನಡುವಿನ ಜಾತಿ ಕಂದಕವನ್ನು ಮುಚ್ಚಲು ಹೋರಾಟ ಮಾಡಿ ಹುತಾತ್ಮರಾದ ಮಹನೀಯರ ತ್ಯಾಗ ಬಲಿದಾನಗಳ ನೆನಪು ಇನ್ನೂ ಹಸಿಯಾಗಿರುವಾಗಲೇ ಅದಕ್ಕೆ ವಿರುದ್ಧವಾದ ನಿಲುವುಗಳನ್ನು ಬಹಿರಂಗವಾಗಿ ಪ್ರಕಟಿಸಲು ನಿಮಗೆ ಮನಸ್ಸಾದರು ಹೇಗೆ ಬಂತು…..
ಒಂದು ಜಾತಿಯ ಒಂದು ಪಕ್ಷದ ಪರವಾಗಿ ನೀವು ಗುರುತಿಸಿಕೊಂಡರೆ ಇತರ ಸಾಮಾನ್ಯ ಜನರು ನಿಮ್ಮನ್ನು ಏನೆಂದು ಕರೆಯಬೇಕು. ಮಾನವೀಯ ಮೌಲ್ಯಗಳು ವಿನಾಶದ ಅಂಚಿನಲ್ಲಿರುವಾಗ, ನೀರು ಅನ್ನ ಆಹಾರಗಳನ್ನು ನೀಡುವ ಪರಿಸರ ಕಲ್ಮಶವಾಗುತ್ತಿರುವಾಗ, ಮನಸ್ಸುಗಳು ಸಂಕುಚಿತವಾಗಿ ಜಾತಿಗೆ ಸೀಮಿತವಾಗಿರುವಾಗ, ಮೌಢ್ಯ ಅಜ್ಞಾನಗಳು ವ್ಯಾಪಕವಾಗಿ ಹರಡಿರುವಾಗ ಮಠ ಮಾನ್ಯಗಳು ಮಾಡಬೇಕಾದ ಕೆಲಸ ಬೇರೆಯದೇ ಆಗಿದೆ. ವ್ಯಕ್ತಿ ಶಾಶ್ವತವಲ್ಲ ನಮ್ಮ ನಡವಳಿಕೆ ಮುಂದಿನ ಜನಾಂಗಕ್ಕೆ ಅನುಕರಣೀಯವಾಗಿರಬೇಕು.
ಈಗಲೂ ಕಾಲ ಮಿಂಚಿಲ್ಲ. ಸ್ವಾಮೀಜಿಗಳ ಬಗ್ಗೆ ಸಾಕಷ್ಟು ಗೌರವ ಇನ್ನೂ ಉಳಿದಿದೆ. ದಯವಿಟ್ಟು ಜಾತಿ ಸಂಕೋಲೆಗಳ ಬಲೆಯೊಳಗೆ ಬಂಧಿಗಳಾಗದೆ ಆತ್ಮಸಾಕ್ಷಿಯನ್ನು ಬಡಿದೆಬ್ಬಿಸಿ ಬಸವಣ್ಣನವರ ನಿಜ ಆಶಯಗಳನ್ನು ಈ ಸಮಾಜದಲ್ಲಿ ಹರಡಲು ಬೇಗ ಕಾರ್ಯೋನ್ಮುಖರಾಗಿ.
ವಿಧಾನಸೌಧ ಸುತ್ತುವುದನ್ನು ನಿಲ್ಲಿಸಿ, ಹಣ ಅಧಿಕಾರ ಪ್ರಚಾರದ ಆಸೆಗಳನ್ನು ಮಿತಿಗೊಳಿಸಿ, ಐಷಾರಾಮಿ ಜೀವನ ಶೈಲಿಯನ್ನು ತ್ಯಜಿಸಿ. ಜಾತಿಯ ಸಂಕೋಲೆಗಳಿಂದ ಹೊರಬನ್ನಿ. ಒಂದಷ್ಟು ದಿನ ಧ್ಯಾನಾಸಕ್ತರಾಗಿ, ಒಂದಷ್ಟು ದಿನ ಅಧ್ಯಯನಶೀಲರಾಗಿ, ಒಂದಷ್ಟು ದಿನ ಚಿಂತಿಸಿ, ಒಂದಷ್ಟು ದಿನ ಸಮಾಜದಲ್ಲಿ ಸಂಚರಿಸಿ, ಮುಂದೆ ಸಮಾಜಮುಖಿ ಕೆಲಸಗಳಲ್ಲಿ ಕಾರ್ಯೋನ್ಮಖರಾಗಿ.
” ನನ್ನ ಬದುಕೇ ನನ್ನ ಆದರ್ಶ “
ಇದು ನಿಮ್ಮ ಘೋಷಣೆಯಾಗಲಿ.
ಇದು ಎಲ್ಲಾ ಧಾರ್ಮಿಕ ಸಂಸ್ಥೆಗಳ ಎಲ್ಲಾ ಧಾರ್ಮಿಕ ನಾಯಕರುಗಳಿಗೆ ಸಮನಾಗಿ ಅನ್ವಯ…..
- ವಿವೇಕಾನಂದ ಎಚ್ ಕೆ
- ವಿಚಿತ್ರ ಕಾಯಿಲೆಗೆ 15 ಜನರು ಬಲಿಪಡೆದ ಅನುಮಾನಾಸ್ಪದ ಘಟನೆ
- ಆಕಸ್ಮಿಕ ಗುಂಡು ಸಿಡಿದು ವ್ಯಕ್ತಿ ಸಾವು
- ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ದಾಳಿ – ಆಸ್ಪತ್ರೆಯಲ್ಲಿ ಚಿಕಿತ್ಸೆ
- ಇನ್ಫೋಸಿಸ್ ಕ್ಯಾಂಪಸ್ನಲ್ಲಿ ಚಿರತೆ ಹುಡುಕಾಟ ಸ್ಥಗಿತ
- ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಐತಿಹಾಸಿಕ ಸಾಧನೆ: ಗರಿಷ್ಠ ರನ್ ಹಾಗೂ ಭರ್ಜರಿ ಗೆಲುವು
More Stories
ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ದಾಳಿ – ಆಸ್ಪತ್ರೆಯಲ್ಲಿ ಚಿಕಿತ್ಸೆ
ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಐತಿಹಾಸಿಕ ಸಾಧನೆ: ಗರಿಷ್ಠ ರನ್ ಹಾಗೂ ಭರ್ಜರಿ ಗೆಲುವು
KPSC ಪರೀಕ್ಷೆಗಳಲ್ಲಿ ಕನ್ನಡ ದೋಷಗಳ ವಿವಾದ – ಮರುಪರೀಕ್ಷೆಗೆ ಪ್ರಬಲ ಒತ್ತಾಯ