ನಮ್ಮೂರಿಗೆ ಮುಂದಿನ ಬಸ್ಸು ಯಾವುದು ?

Team Newsnap
0 Min Read

ಅವನೂರು ಬಿಟ್ಟು ಬಂದವನಲ್ಲ
ಅಪ್ಪನೋ ತಾತ ಮುತ್ತಾತನೋ
ಬಿಟ್ಟವರಂತೆ ; ಕಟ್ಟಿಕೊಂಡನಿವ
ಅವರು ಬಿಟ್ಟೂರ ಹೆಸರ
ಮಗ ಮಗನ ಮಗ ಹೀಗೆ
ಕಾಣದೂರಿನ ಕೊಂಡಿ
ಜೋಡಿಸಿಕೊಂಡವರೇ

ಅಲ್ಲೆಲ್ಲೋ ಇದೆಯಂತೆ ನಮ್ಮೂರು
ಮನೆ ಜಮೀನು ಸಂಬಂಧಿಕರು
ಅಲ್ಲಿಲ್ಲವೆಂದು ಹಲುಬಿದ್ದಳು ಅಜ್ಜಿ
ಎಳವಿನಲಿ ಕನಸಿಗೆ ಬಣ್ಣಕಟ್ಟಿ
ಊರ ನಡುವಿನ ಸೀನೀರ ಭಾವಿ
ಪಕ್ಕದಲಿ ಭವ್ಯ ನರಸಿಂಹನ ಗುಡಿ
ಹದವಾದ ಮಳೆ ಊರಾಚೆ ಗದ್ದೆ

ವಿಸ್ತಾರ ನದಿ ಬಯಲು ಕಣ್ಣ್ಮನಕೆ
ಆನಂದದ ಮುಗಿಲು ತಪ್ಪದ ಸೆಳೆತ
ಹೋಗೋಣವೊಮ್ಮೆ ನಮ್ಮೂರಿಗೆ
ಹೆಸರುಳಿದ ಬೇರುಭಾಗ್ಯದ ಸನಿಹ
ಗಿಜಿಬಿಜಿ ಬಜಾರಿನಲಿ ನರಸಿಂಹ
ಬತ್ತಿದ ಭಾವಿ ಹಚ್ಚೆಪಚ್ಚೆ ಮಚ್ಚೆ
ಕರುಳು ಬಳ್ಳಿಗಳಿಲ್ಲದ ಅನಾಥ

ಮಗ ಹೇಳಿದ
“ನಮ್ಮೂರಿಗೆ ಮುಂದಿನ ಬಸ್ಸು ಯಾವುದು”

…. ಬೆಂ ಶ್ರೀ ರವೀಂದ್ರ

Share This Article
Leave a comment