ಹೆಸರಲ್ಲೇನಿದೆ?

Newsnap Team
6 Min Read

ಒಂದು ಕಡುಬಿನ ಕಥೆ ನೀವೆಲ್ಲಾ ಕೇಳಿದ್ದೀರಿ. ಒಬ್ಬನನ್ನು ಅವನ ಸ್ನೇಹಿತ ಒಂದು ದಿನ ಊಟಕ್ಕೆ ಕರೆಯುತ್ತಾನೆ. ಅಲ್ಲಿ ಕಡುಬು ಮಾಡಿರುತ್ತಾರೆ. ಅದು ಅವನಿಗೆ ಬಹಳ ಇಷ್ಟವಾಗುತ್ತದೆ ಅದರ ಹೆಸರು ಕೇಳಿಕೊಂಡು ಹೆಂಡತಿಗೆ ಹೇಳಿ ಮಾಡಿಸಿಕೊಂಡು ತಿನ್ನೋಣ ಎಂದು ಕಡುಬು –ಕಡುಬು ಎಂದು ಜಪ ಮಾಡಿಕೊಂಡು ಮನೆಗೆ ಹಿಂದಿರುಗುತ್ತಿರುತ್ತಾನೆ. ದಾರಿಯಲ್ಲಿ ಸ್ನೇಹಿತನೊಬ್ಬ ಸಿಕ್ಕಿ ಉಭಯ ಕುಶಲೋಪರಿ ಮಾತನಾಡುತ್ತಾನೆ. ಇವನಿಗೆ ಕಡುಬು ಹೆಸರು ಮರೆತು ಹೋಗುತ್ತದೆ. ಹೆಂಡತಿಗೆ ‘ಲೇ ಅದು ಮಾಡೆ, ಅದು ಮಾಡೆ’ ಎನ್ನುತ್ತಾನೆ. ಹೆಂಡ್ತಿಗೆ ಅರ್ಥವಾಗುವುದಿಲ್ಲ. ಇವನಿಗೆ ರೇಗಿ ಅವಳ ಕೆನ್ನೆಗೆ ಬಾರಿಸ್ತಾನೆ . ಅದು ಊದಿಕೊಂಡು ಬಿಡುತ್ತದೆ. ಪಕ್ಕದಮನೆಯಾಕೆ ಬಂದವಳು “ ಇದೆನ್ರೀ ನಿಮ್ಮ ಕೆನ್ನೆ ಒಳ್ಳೆ ಕಡುಬಿನ ಹಾಗೆ ಊದಿಕೊಂಡಿದೆ’ ಎನ್ನುತ್ತಾಳೆ. ತಕ್ಷಣ ಗಂಡ ‘ ಹೊ….. ಅದೇ ಅದೇ ಕಣೆ ಕಡುಬು ಮಾಡೇ ‘ಎನ್ನುತ್ತಾನೆ.

ನೋಡಿ ಹೆಸರಿನ ಮಹಾತ್ಮೆ? ಹೆಸರಲ್ಲೇನಿದೆ ಎಂದು ಕೇಳಬಹುದು. ಆದರೆ ಇದಕ್ಕೆ ಉತ್ತರ ಹೆಸರಿನಲ್ಲಿ ಎಲ್ಲಾ ಇದೆ. ಹೆಸರು ಎನ್ನುವುದು ಸೂಚಕಾಂಕ. ಹಿಂದೆ ಹಿರಿಯರು ಮಕ್ಕಳಿಗೆ ಹೆಸರಿಡುತ್ತಿದ್ದರು. ಈಗ ಗರ್ಭ ಧರಿಸಿದ ದಿನದಿಂದಲೇ ಹೆಸರು ಹುಡುಕಿ ಒಂಭತ್ತನೆ ತಿಂಗಳಿಗೆ ಹೆಸರುಗಳನ್ನು ರೆಡಿ ಇಟ್ಟು ಕೊಂಡಿರುತ್ತಾರೆ. ನಾಮಕರಣದ ದಿನ ಬಾಳೆ ಎಲೆ ಅಥವಾ ಬೆಂಡಿನಿಂದ ಹೆಸರನ್ನು ಮುಚ್ಚಿ ಇಟ್ಟಿರುತ್ತಾರೆ. ಸುಮುಹೋರ್ತದಲ್ಲಿ ಹೆಸರನ್ನು ಲೋಕಾರ್ಪಣೆ ಮಾಡುತ್ತಾರೆ. ವಿದೇಶದಲ್ಲಂತೊ ಹುಟ್ಟುವಮಗು ಯಾವುದು ಎಂದು ಮೊದಲೇ ತಿಳಿಯುವುದರಿಂದ ಹೆಸರು ನೋಂದಣಿ ಮಾಡಿಬಿಡಬೇಕು.

ಕೂಸು ಹುಟ್ಟುವುದಕ್ಕೆ ಮುಂಚೆ ಕುಲಾವಿ ಹೊಲೆಯುವುದು ಎನ್ನುವುದು ಇದನ್ನೇ. ಸುಂದರಿ ಎನ್ನುವವಳು ಸುಂದರವಾಗಿ ಇರಬೇಕೆಂತೇನು ಇಲ್ಲ. ಹಾಗೆ ಮಂಗಮ್ಮ ಎಂದು ಹೆಸರಿಟ್ಟುಕೊಂಡವಳು ಕೋತಿ ಮುಖದವಳಾಗಿರಬೇಕಿಲ್ಲ. ಜನ್ಮ ಜನ್ಮಾ೦ತರದಿಂದ ನಮ್ಮ ಹಿರಿಯರು ಪ್ರೀತಿಪೂರ್ವಕವಾಗಿ ನಮಗೆ ನೀಡುವ ಮೊದಲ ಐಡೆಂಟಿಟೀ ಕಾರ್ಡು ಹೆಸರು. ಇದೊಂದೆ ಜನ್ಮದಿಂದ ಕೊನೆಯವರೆಗೂ ನಮಗೆ ಸಾಥ್ ನೀಡುವುದು.

ನಮ್ಮ ಅಂಗಾಗಗಳೂ ಬದಲಾವಣೆಯಾಗುತ್ತಲೇ ಇರುತ್ತದೆ. ಸರ್ನೇಮ್(sur name) ಬದಲಾಗುತ್ತದೆ ಆದರೆ ನಮ್ಮ ಹೆಸರು ನಮ್ಮ ನೆರಳಿನಂತೆ ಸದಾ ನಮ್ಮ ಜೊತೆ ಇರುತ್ತದೆ. .
ಒಮ್ಮೆ, ಸಂಸಾರವೊಂದು ತಿರುಪತಿಗೆ ಮೆಟ್ಟಲೇರಿ ಹೊರಟಿತ್ತು. ಗಂಡ ಗೋವಿಂದ ಗೋವಿಂದ ಎನ್ನುತ್ತಿದ್ದ ಪಕ್ಕದಲ್ಲಿದ್ದ ಹೆಂಡತಿ ‘ ಅವರು ಹೇಳಿದ್ದೇ ಅವರು ಹೇಳಿದ್ದೇ ಎನ್ನುತ್ತಿದ್ದಳು. ಕಾರಣ ಅವಳ ಗಂಡನ ಹೆಸರು ಗೋವಿಂದಾ ಗಂಡನ ಹೆಸರು ಹೇಳಿದರೆ ಆಯಸ್ಸು ಕಮ್ಮಿ ಎಂದು ಅವಳು ಹಾಗೆ ಹೇಳುತ್ತಿದ್ದಳು. ಹಿಂದೆ ದೇವರ ಹೆಸರಿಟ್ಟರೆ ದೇವರ ನಾಮಸ್ಮರಣೆ ಆಗುತ್ತದೆ ಎಂದು ಕೃಷ್ಣಮೂರ್ತಿ, ನಾಗರಾಜ , ಶ್ರೀನಿವಾಸ , ರಾಘವೇಂದ್ರ, ಸುಬ್ರಮಣ್ಯ, ಸಾವಿತ್ರಿ, ಪಾರ್ವತಿ, ಗಾಯತ್ರಿ, ಲಲಿತ .. ಇತ್ಯಾದಿ ಇತ್ಯಾದಿ …. ಹೆಸರಿಡುತ್ತಿದ್ದರು. ಕೊನೆಗೆ ಮನೆಯವರೆ ಎಲ್ಲ ದೇವರ ಕಿರೀಟ ಕಳೆದು ಕಿಟ್ಟಿ, ನಾಗ, ಸೀನಿ, ರಾಘು , ಸುಬ್ಬು ಸಾತಿ, ಪಾತಿ, ಗಾಯಿ, ಲಲ್ಲಿ ಎಂದೆಲ್ಲಾ ಮೊಟಕು ಗೊಳಿಸಿಬಿಡುತ್ತಿದ್ದರು.

ಈಗಂತೂ ಬಿಡಿ ಆ ಮಕ್ಕಳಿಗೆ ಉಚ್ಛಾರಣೆ ಸಾಧ್ಯವೇ ಆಗಬಾರದು ಅಂತಹ ಹೆಸರುಗಳು. ಒಂದು ಮಗುವಿನ ಹೆಸರು ದಿವಾಂಗೀತ. ಆದರೆ ಕನ್ನಡ ಬಾರದ ಅವಳ ಮ್ಯಾಮು ಅವಳನ್ನು ದಿವಂಗತ ಎಂದೇ ಕರೆಯುತ್ತಿದ್ದರು. ಉಲ್ಲಾಸ ಉಲ್ಲು ಆಗುತ್ತಾನೆ ಮಾಳವಿಕ ಮಾಲೀ ಆಗುತ್ತಾಳೆ . ಪ್ರೀತಿ ಉಕ್ಕಿ ಹರಿದರೆ ಬಂಟಿ, ಕುಂಟಿ, ಬನ್ನೋ ಗುನ್ನೂ, ಟಾಂಬು, ಅಪ್ಪು, ಎಲ್ಲಾ ಪ್ರಯೋಗವಾಗುತ್ತದೆ.

ಒಂದು ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾಕೆಯ ಹೆಸರು ಜಯಮಾಲಾ. ಅವಳನ್ನು ಎಲ್ಲರೂ ಮಾಲಾ ಎಂದೇ ಕರೆಯುತ್ತಿದ್ದರು ಇದ್ದಕ್ಕಿದ್ದಂತೆ ಅವರ ಬಾಸ್ ಗೆ ಅನಿಸಿತು ನಾವೆಲ್ಲಾ ಸ್ನೇಹಿತರಂತೆ ಮಾಲಾ ತಾವು ನನ್ನನ್ನು ನನ್ನ ಹೆಸರಿನ ಮೂರು ಮತ್ತು ನಾಲ್ಕನೆಯ ಅಕ್ಷರದಿಂದ ಕರೆಯಬಹುದು ಎಂದನಂತೆ. ಅದಕ್ಕೆ ಮಾಲಾ ಪರವಾಗಿಲ್ಲ ಸಾರ್ ಬೇಕಾದರೆ ಮೊದಲೆರಡು ಅಕ್ಷರದಿಂದ ಕರೆಯುತ್ತೇನೆ ಎಂದಳಂತೆ. ಅವನ ಹೆಸರು ಪಶುಪತಿ. ಬಾಸ್ ಬೇಸ್ತು.

ಇತ್ತೀಚೆಗಷ್ಟೇ ವಿದೇಶದಿಂದ ಸ್ವದೇಶಕ್ಕೆ ಬಂದು ದೊಡ್ಡ ವಿಲ್ಲಾ ಮನೆಯನ್ನು ಕೊಂಡಿದ್ದ ಮಹಾರಾಯನೊಬ್ಬ ತನ್ನ ಮನೆಯ ಮುಂದೆ ದೊಡ್ಡ ಬೋರ್ಡು ಬರೆಸಿದ ‘ಸುಂದರ್ ವಿಲ್ಲಾ ‘ ಎಂದು. ಕನ್ನಡದ ಭೂಪತಿ ಅದರ ಪಕ್ಕದಲ್ಲಿ ಅದಕ್ಕಿಂತಲೂ ದೊಡ್ಡ ಅಕ್ಷರದಲ್ಲಿ ಬರೆದ ‘ ಆದರೂ ಪರವಾಗಿಲ್ಲ ‘ ಒಮ್ಮೆ ಒಬ್ಬ ದೊಡ್ಡ ವಿದ್ವಾಂಸರು ತಮ್ಮ ಮನೆಯ ಮುಂದೆ ಬೋರ್ಡು ಬರೆಸಿದ್ದರು ‘ ಪ್ರೊ. ಹುಚ್ಚೂರಾಯ ಎಂದು. ಕೆಲವರು ತುಂಟರು ಸುಮ್ಮನೇ ಅವರ ಮನೆಯ ಮುಂದೆ ನಿಂತು ಹುಚ್ಚೂ ರಾಯರೇ ಎಂದು ಕೂಗಿ ಅವರ ಮನೆಯ ಕಾಲಿಂಗ್ ಬೆಲ್ ಹೊಡೆದು ಅವರು ಬಾಗಿಲು ತೆಗೆಯುವ ಮುನ್ನ ಓಡುತ್ತಿದ್ದರು. ಈ ತುಂಟರ ಉಪಟಳ ತಾಳಲಾರದೇ ತಮ್ಮ ಬೋರ್ಡನ್ನು ಸ್ವಲ್ಪ ಬದಲಾಯಿಸಿ “ಪ್ರೊ. ಹೆಚ್ ರಾವ್ ‘ ಎಂದು ಬದಲಿಸಿದರು. ಈ ತುಂಟರು ಬಿಡಬೇಕಲ್ಲ ಇದೇನಿದು ಹುಚ್ಚುರಾಯರಿಗೆ ಹುಚ್ಚು ಹೆಚ್ಚಾಗೋಗಿದೆ ಎಂದು ಮಾತನಾಡಲು ಶುರು ಮಾಡಿದರು.

ಒಬ್ಬ ವ್ಯಾಪಾರಿಯ ಬಳಿ ಕೆಲಸಕ್ಕಿದ್ದ ಹುಡುಗನ ಹೆಸರು ಸತ್ಯನಾರಾಯಣ. ಅವನ ಯಜಮಾನ ಆತುರದಲ್ಲಿ ‘ ಲೋ…. ಸತ್ತ್ ನಾರಾಯಣ ಎಂದೇ ಕರೆಯುತ್ತಿದ್ದರು. ಒಮ್ಮೊಮ್ಮೆ ಅವನಿಗೆ ಅವರ ಕೂಗು ಕೆಳದಿದ್ದರೆ’ಎಲ್ಲಿ ಸತ್ತ್ಯೋ ಎನ್ನುವರು. ಇನ್ನೂ ಕೆಲವರಿಗೆ ಅವರ ಐಬಿನಿಂದಲೇ ಅವರನ್ನು ಗುರುತಿಸುವುದು ವಾಡಿಕೆ. ಅದು ಎಷ್ಟು ಪ್ರಚಲಿತವಾಗುವುದೆಂದರೆ, ಅವರ ನಿಜ ನಾಮಧೇಯವೇ ಮರೆತು ಹೋಗುವುದು. ಏ ಕುಳ್ಳ, ಕರಿಯ, ಡುಮ್ಮ, ಗುಜ್ಜಾನೆ ಮರಿ, ದುಡುಮಿ, ಮೋಟಿ, ತೆಂಗಿನಮರ, ಬೃಹಸ್ಪತಿ, ಒಂದೇ ಕಣ್ಣೀರುವರಿಗೆ ಶುಕ್ಲಾಚಾರ್ಯ, ಕುಂಟ, ಸೂರದಾಸ, ಇತ್ಯಾದಿ.

ಶ್ವೇತ ಕಪ್ಪಿರಬಹುದು ಹಾಗೆ ಕೃಷ್ಣೆ ಬಿಳಿ. ಅಮರನಾಥನು ಅಳಿಯುತ್ತಾನೆ ಅನಂತನೂ ಸಾಯುತ್ತಾನೆ. ಕೆಲವೊಮ್ಮೆ ಅವರ ವೃತ್ತಿಯನ್ನು ಆಧರಿಸಿ ಕರೆಯುವ ವಾಡಿಕೆಯಿದೆ. ಚಿನ್ನವನ್ನು ಮಾಡುವವರಿಗೆ ಆಚಾರಿ , ಪೌರೋಹಿತ್ಯವನ್ನು ಮಾಡುವವರಿಗೆ ಪುರೋಹಿತರೆ, ಊರಿನ ಸಾಹುಕಾರನನ್ನು ‘ ಸಾವ್ಕಾರೇ ಅಥವಾ ಗೌಡರೇ, ಹಾಲು ಮಾರುವವಳನ್ನು ಹಾಲಮ್ಮ, ಕಸ ಗುಡಿಸುವವಳನ್ನು ಲಚ್ಚಿ, ಅಡುಗೆ ಮಾಡುವವರನ್ನು ಭಟ್ಟರೆ, ಮನೆ ಉಸ್ತುವಾರಿ ನೋಡಿಕೊಳ್ಳುವವನನ್ನು ‘ಮೇಸ್ತ್ರಿ’ , ಕುಂಬಾರ, ವಾಸ್ತುಶಿಲ್ಪಿ, ಸಸ್ಯಾಹಾರಿಯನ್ನು ‘ಎ ಪುಳಿಚಾರು’ ಇತ್ಯಾದಿ. ಇಲ್ಲಿ ಕೆಲಸ ಮುಖ್ಯವಾಗುತ್ತದೆ.


ಶ್ರೀರಾಮ ದೇವರು ಆಗಿನ ಕಾಲಕ್ಕೆ ಪ್ರಗತಿಶೀಲ. ಈಗಿನ ಕಾಲದಲ್ಲಿ ಹೆಂಗಸರು ತಮ್ಮ ಹೆಸರಿನ ಮುಂದೆ ಗಂಡನ ಹೆಸರನ್ನು ಸೇರಿಸಿಕೊಂಡರೆ, ಶ್ರೀರಾಮ ತನ್ನ ಹೆಸರಿನ ಹಿಂದೆ ತನ್ನ ಹೆಂಡತಿಯ ಹೆಸರನ್ನು ಸೇರಿಸಿಕೊಂಡಿದ್ದ – ಸೀತಾರಾಮ, ಜಾನಕಿರಾಮ, ಎಂದು. ಶಿವನನ್ನು ಅಲ್ಪ ಸ್ವಲ್ಪ ತಿರುಚಿದರೆ ಪಾರ್ವತಿ. ಉದಾಹರಣೆಗೆ ಶಿವ – ಶಿವೆ, ಮಹೇಶ-ಮಹೇಶ್ವರಿ , ಸೋಮಸುಂದರ-ಸೋಮಸುಂದರಿ.


ಒಂದು ದೊಡ್ಡ ಮಾಲ್ ತೆಗೆದುಕೊಳ್ಳಿ. ಕೋಟ್ಯಾಂತರ ಹಣ ಸುರಿದಿರುವ ಯಜಮಾನನನ್ನು ಇಲ್ಲಿ ಏನೆಲ್ಲಾ ಸಿಗುತ್ತದೆ ಎಂದು ಕೇಳಿದರೆ ಅವನ ಉತ್ತರ “you name it you will get it…..’ ಆಗಿರುತ್ತದೆ.
ನಮ್ಮ ಸ್ನೇಹಿತರೊಬ್ಬರು ಅವರ ಮಗಳಿಗೆ ‘ರಿಂದ’ ಎನ್ನುವ ಹೆಸರಿಟ್ಟಿದ್ದರು. ಸ್ವಲ್ಪ ವಿಚಿತ್ರವೆನಿಸಿತು ಕೇಳಿದರೆ ತಂದೆಯ ಹೆಸರು ಬದರಿ ತಾಯಿ ಸುನಂದ ಇಬ್ಬರ ಹೆಸರಿನ ಕೊನೆಯ ಅಕ್ಷರಗಳನ್ನು ಸೇರಿಸಿ ಹೆಸರಿಟ್ಟಿದ್ದರು. ಇನ್ನೂ ಒಂದು ಮಗುವಿನ ಹೆಸರು ಲುಬಿನ್. ಲ್ಯುಕಾಸ್ ಮತ್ತು ಬೇರಿನ್ ದಂಪತಿಗಳ ಮಗು. ಚಿತ್ಕಲಾ ಮತ್ತು ರಂಜಿತ್ ಮಗು ಚಿತ್ತರಂಜನ್. ನಮ್ಮ ಕಛೇರಿಯಲ್ಲಿ ಒಬ್ಬಾಕೆಯ ಹೆಸರು ‘ಕೋತೈನಾಯಗಿ’ ನಮ್ಮ ಉಚ್ಛಾರಣೆಯಲ್ಲಿ ಆಕೆಯ ಹೆಸರು ‘ ಗೋದಾನಾಯಕಿ ‘ ತಮಿಳಿನವರಾದುದರಿಂದ ಬೇರೆಯದೇ ಉಚ್ಛಾರಣೆ. ಮತ್ತೊಬ್ಬನ ಹೆಸರು ‘ಅಪ್ಪಾಜಿ’ ಅವನ ಹೆಂಡತಿಯು ಸೇರಿ ಎಲ್ಲರೂ ಅವನನ್ನು ಅಪ್ಪಾಜಿ ಎಂದೇ ಕರೆಯಬೇಕು.


ಸಾಧಾರಣವಾಗಿ ಸಿನಿಮಾದಲ್ಲಿ ಪಾತ್ರ ಮಾಡುವವರಿಗೆ ಹೆಸರು ಬದಲಾಯಿಸುವುದು ಸರ್ವೇ ಸಾಮಾನ್ಯ. ಕಲ್ಪನಾ, ಜಯಂತಿ, ತಾರಾ, ವಿಷ್ಣುವರ್ಧನ್, ಅನೇಕರು ಹೆಸರು ಬದಲಿಸಿಕೊಂಡಿರುವವರೆ. ನಮ್ಮ ಪರಿಚಯದವರೊಬ್ಬರು ತಮ್ಮ ಮಗಳು ದೇಶವನ್ನಾಳಬೇಕೆಂದು ಇಂದಿರಾ ಪ್ರಿಯದರ್ಶಿನಿ ಎಂದು ಹೆಸರಿಟ್ಟಿದ್ದರು. ಆದರೆ ಪ್ರಿಯ ಎಂದು ಕರೆಯುತ್ತಿದ್ದರು. ಅವಳು ಬಹಳ ಸೌಮ್ಯವಾದ ಅತ್ಯಂತ ನಾಚಿಕೆಯ ಸ್ವಭಾವದ ಹೆಣ್ಣು ಮಗಳು. ಭಾಷಣ ಮಾಡುವುದು ದೂರದ ಮಾತು. ಮಾತನಾಡಲೂ ಹೆದರುತ್ತಿದ್ದಳು.

ಗ್ರೇಸಿ ಎಂದು ಮತ್ತೊಬ್ಬಳ ಹೆಸರು. ಆದರೆ ಬೈಯ್ಯುವುದೇ ಅವಳ ಕೆಲ್ಸ. ಇದುವರೆಗೂ ಶೂರ್ಪಣಖೀ ತ್ರಿಜಟಾ, ಮಂಡೋದರಿ, ಕೈಕಸೆ, ಕೆಕೈಯೀ , ಮಂಥರೆ, ಪೂತನಿ, ಕಂಸ, ಶಿಶುಪಾಲ, ದುರ್ಯೋಧನ, ಶಕುನಿ ಈ ಹೆಸರುಗಳನ್ನು ಹೊಂದಿರುವರು ಯಾರು ಇಲ್ಲವೇ ಇಲ್ಲ ಎಂದೆನಿಸುತ್ತದೆ.

ಇನ್ನೂ ಕೆಲವು ಹೆಸರುಗಳು ಅಂಬಾಬಾಯಿ, ಸುಶೀಲಾಬಾಯಿ, ರಮಾಬಾಯಿ. ಆದರಸೂಚಕ ನಾಮಧೇಯಗಳು. ಕೆಲವೊಮ್ಮೆ ಹೇಳುವುದಿದೆ ‘ನನ್ನ ಹೆಸರು ಹೇಳು ನಾನು ಕಳಿಸಿದೆನೆಂದು ಹೇಳು. ನನ್ನ ಹೆಸರು ಹೇಳಿದರೆ ಮಾತ್ರ ಅವರಿಗೆ ತಿಳಿಯುತ್ತದೆ. ‘ ‘ ಸತ್ತ ಮೇಲೂ ಹೆಸರು ಉಳಿಯುವಂತಹ ಕೆಲಸ ಮಾಡಬೇಕು ಎನ್ನುವ ಮಾತಿದೆ. ಒಳ್ಳೆಯ ಕೆಲಸ ಮಾಡಿದರೆ ನಮ್ಮ ಹೆಸರು ಉಳಿಸಿದೆ ಎನ್ನುವವರು ಏನಾದಾರು ಹೆಚ್ಚು ಕಮ್ಮಿ ಆದರೆ ನಮ್ಮ ಹೆಸರಿಗೆ ಮಸಿ ಬಳಿದು ಬಿಟ್ಟೇ ಎನ್ನುವರು. ಹೆಸರು ಕೇವಲ ಹೆಸರಾಗಿ ಉಳಿಯದೆ ಒಂದು ಅಸ್ಮಿತೆಯಾಗಿ ಉಳಿಯುತ್ತದೆ.


ಹೆಸರಿಡುವ ಮುನ್ನ ಅದರ ಅರ್ಥ ಆಳ ವ್ಯಾಪ್ತಿ ತಿಳಿದು ಇಡುವುದು ಸೂಕ್ತ ಏಕೆಂದರೆ ಉಸಿರು ಅಳಿದರು ಹೆಸರು ಉಳಿಯುತ್ತದೆ.

usharani
ಟಿ.ಆರ್ ಉಷಾರಾಣಿ
ಮಂಗಳೂರು.
Share This Article
Leave a comment