ಕೊರೋನಾ ನಿಯಂತ್ರಣಕ್ಕೆ ಅವಕಾಶ ಕೊಟ್ಟರೆ ಏನೆಲ್ಲಾ ಮಾಡಬಹುದು ?

Team Newsnap
6 Min Read

ನಾನು,
ಕರ್ನಾಟಕದ ಕೋವಿಡ್ ನಿಯಂತ್ರಣ ಮತ್ತು ಪರಿಹಾರ ಸಮಿತಿಯ ಅಧ್ಯಕ್ಷನಾದರೆ,
ಚುನಾವಣಾ ಆಯೋಗದ ರೀತಿಯ ಸಾಂವಿಧಾನಿಕ ಸ್ವಾಯುತ್ತ ಸಂಸ್ಥೆಯ ಅಧಿಕಾರ ಅದಕ್ಕೆ ನೀಡಿದರೆ ????????………!!!!!

ತಕ್ಷಣ ಈ ರೀತಿಯ ಕ್ರಮಗಳನ್ನು ಕೈಗೊಳ್ಳುವೆನು……

ಕೇವಲ 6 ತಿಂಗಳು ಮಾತ್ರ ಆ ಹುದ್ದೆಯಲ್ಲಿ ಇರುವೆನು.

ನನ್ನ ಬ್ಯಾಂಕ್ ಖಾತೆ ಸೇರಿ ಎಲ್ಲಾ ಹಣಕಾಸು ಮತ್ತು ಆಸ್ತಿಯನ್ನು ಸರ್ಕಾರದ ವಶಕ್ಕೆ ಒಪ್ಪಿಸುತ್ತೇನೆ.

ಸರ್ಕಾರ ನೀಡುವ ಮೊಬೈಲ್ ಹೊರತುಪಡಿಸಿ ಬೇರೆ ಯಾವುದೇ ಸಂಪರ್ಕ ಸಾಧನ ಬಳಸುವುದಿಲ್ಲ. ಆ ಮೊಬೈಲ್ ದೂರವಾಣಿ ಸಂಭಾಷಣೆ ಸಹ ಸಾರ್ವಜನಿಕವಾಗಿ ಯಾರು ಬೇಕಾದರೂ ಆಲಿಸಬಹುದು.
ಕದ್ದು ಆಲಿಸಲು ಸಹ ನನ್ನ ಸಂಪೂರ್ಣ ಅನುಮತಿ ಇರುತ್ತದೆ.

ನಂತರ……

ರಾಜ್ಯದ ಸದ್ಯಕ್ಕೆ ನಿರುಪಯುಕ್ತವಾದ ಮತ್ತು ಅವಶ್ಯಕತೆ ಇಲ್ಲದ ಇಲಾಖೆಗಳ ಐಎಎಸ್‌ ಐಎಪ್ಎಸ್ ಐಪಿಎಸ್ ಕೆಎಎಸ್ ಇಂಜಿನಿಯರಿಂಗ್ ದರ್ಜೆಯ ಅಧಿಕಾರಿಗಳನ್ನು ಆರೋಗ್ಯ ಇಲಾಖೆಗೆ ತಾತ್ಕಾಲಿಕವಾಗಿ ವರ್ಗಾಯಿಸಿಕೊಳ್ಳಲಾಗುವುದು

ಕರ್ನಾಟಕದಲ್ಲಿ ತತ್ತಕ್ಷಣದಿಂದಲೇ ವೈದ್ಯಕೀಯ ತುರ್ತು ಪರಿಸ್ಥಿತಿ ಘೋಷಿಸಲಾಗುವುದು.

ರಾಜ್ಯದ ಎಲ್ಲಾ ಖಾಸಗಿ ಆಸ್ಪತ್ರೆ ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲವನ್ನೂ ಸರ್ಕಾರದ ನಿಯಂತ್ರಣಕ್ಕೆ ಪಡೆದುಕೊಳ್ಳಲಾಗುವುದು.

ರಾಜ್ಯದ ಗೆಜಟೆಡ್ ಆಫೀಸರ್ ಗಳ ಪಟ್ಟಿ ತರಿಸಿ ಅದರಲ್ಲಿ ಆಯ್ಕೆ ಮಾಡಿ 10 ಆಸ್ಪತ್ರೆಗಳಿಗೆ ಒಬ್ಬರಂತೆ ಆಡಳಿತಾಧಿಕಾರಿಗಳನ್ನು ನೇಮಿಸಲಾಗುವುದು.

ಎಲ್ಲರೂ ಅದೇ ದಿನ ಅಧಿಕಾರ ಸ್ವೀಕರಿಸುವ ವ್ಯವಸ್ಥೆ ಮಾಡಲಾಗುವುದು.

ಎಲ್ಲರಿಗೂ ನೇರ ಟೆಲಿ ಕಾನ್ಫರೆನ್ಸ್ ಮೂಲಕ ಒಂದು ಕೌನ್ಸಿಲಿಂಗ್ ಮತ್ತು ಸಂದೇಶ ರವಾನಿಸಲಾಗುವುದು.

ಅದು ಈ ರೀತಿ ಇರುತ್ತದೆ.

” ಎಲ್ಲಾ ಗೌರವಾನ್ವಿತ ಮತ್ತು ಮಾನವೀಯ ಸರ್ಕಾರಿ ಸೇವಕರೇ,
ಬಹುಶಃ ಇಡೀ ಕರ್ನಾಟಕ ಸ್ವಾತಂತ್ರ್ಯ ನಂತರ ಎಂದಿಗೂ ಅನುಭವಿಸದ ಅತ್ಯಂತ ದಾರುಣ ಸ್ಥಿತಿಯನ್ನು ತಲುಪಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ‌ ಈ ನೆಲ ಈ ಜನ ಇಲ್ಲಿಯವರೆಗೂ ನಮ್ಮನ್ನು ಸಾಕಿ ಸಲುಹಿದ್ದಾರೆ. ಈಗ ಅವರ ಋಣ ತೀರಿಸುವ ಒಂದು ಅವಕಾಶ ಮತ್ತು ಅನಿವಾರ್ಯತೆ ಬಂದೊದಗಿದೆ. ಈಗ ನಾವು ಅತ್ಯಂತ ಶುದ್ಧ ಪ್ರಾಮಾಣಿಕ ನಿಷ್ಠ ದಕ್ಷ ಆತ್ಮಸಾಕ್ಷಿಯ ಕರೆಗೆ ಓಗೊಟ್ಟು ಕೆಲಸ ಮಾಡಬೇಕಾಗಿದೆ.

ನನ್ನ ಸಹಪಾಠಿಗಳೇ, ಕರ್ನಾಟಕದ 7 ಕೋಟಿ ಜನರಿಗೆ ಹೋಲಿಸಿದರೆ ಸರ್ಕಾರದ ಸಂಬಳ ಪಡೆಯುವ ನಾವು ಹಣಕಾಸಿನ ವಿಷಯದಲ್ಲಿ ಸಾಕಷ್ಟು ಅದೃಷ್ಟವಂತರು. ಈ ಸಂಕಷ್ಟದ ಸಮಯದಲ್ಲಿ ಕನಿಷ್ಠ 6 ತಿಂಗಳು ಇದಕ್ಕಿಂತ ಹೆಚ್ಚು ಆಸೆ ಪಡುವುದು ಬೇಡ. ಈ ಕ್ಷಣದಿಂದಲೇ ನಾವೆಲ್ಲರೂ ಪ್ರತಿಜ್ಞೆ ಮಾಡೋಣ. ಯಾವ ಕಾರಣಕ್ಕೂ ಸಂಬಳ ಹೊರತುಪಡಿಸಿ ಒಂದೇ ಒಂದು ರೂಪಾಯಿ ಅಥವಾ ಆ ರೀತಿಯ ವಸ್ತುವನ್ನು ಲಂಚ ಅಥವಾ ಭ್ರಷ್ಟಾಚಾರದ ಅಥವಾ ಅನ್ಯಾಯದ ರೂಪದಲ್ಲಿ ಪಡೆಯುವುದಿಲ್ಲ. ನನ್ನ ಜನ ಆಕ್ಸಿಜನ್ ಇಲ್ಲದೆ ಪರದಾಡುತ್ತಿರುವಾಗ ನಾನು ಹಣಕ್ಕೆ ಆಸೆ ಪಟ್ಟರೆ ರಾಕ್ಷಸನಾಗುವೆ. ಅಷ್ಟೇ ಅಲ್ಲ ಇನ್ನು ಮುಂದಿನ ಆರು ತಿಂಗಳು ಕಾಯಾ ವಾಚಾ ಮನಸಾ ನನ್ನ ಸಂಪೂರ್ಣ ಸಮಯವನ್ನು ಈ ಕೊರೋನಾ ನಿಯಂತ್ರಣ ಕಾರ್ಯಕ್ಕಾಗಿ ವ್ಯಯಿಸುತ್ತೇನೆ. ಒಂದು ವೇಳೆ ಈ ಕಾರ್ಯದಲ್ಲಿ ನಿರತನಾಗಿರುವಾಗ ಎಲ್ಲಾ ಎಚ್ಚರಿಕೆಗಳ ನಂತರವೂ ಅನಾರೋಗ್ಯ ಪೀಡಿತನಾಗಿ ದೇಹತ್ಯಾಗ ಮಾಡುವ ಸ್ಥಿತಿ ನಿರ್ಮಾಣವಾದರೆ ಅದಕ್ಕಾಗಿ ಯಾರನ್ನೂ ಹೊಣೆ ಮಾಡದೆ ಹುತಾತ್ಮನಾಗಲು ಮಾನಸಿಕವಾಗಿ ಸಿದ್ದನಾಗಿದ್ದೇನೆ. ಸ್ವಾತಂತ್ರ್ಯಕ್ಕಾಗಿ ದೇಶಕ್ಕಾಗಿ ನ್ಯಾಯಕ್ಕಾಗಿ ಸಮಾನತೆಗಾಗಿ ಅನೇಕ ತ್ಯಾಗ ಬಲಿದಾನಗಳು ನಡೆದಿರುವ ಈ ನೆಲದಲ್ಲಿ ಕನಿಷ್ಟ ಪ್ರಮಾಣದ ತ್ಯಾಗಕ್ಕೆ ನಾವೆಲ್ಲರೂ ಸಿದ್ದರಾಗೋಣ ” ಎಂದು ಪ್ರತಿಜ್ಞಾ ವಚನ ಭೋದಿಸುವೆನು.

ಈ ಕಾರ್ಯದಲ್ಲಿ ಏನಾದರೂ ಸಾವು ಸಂಭವಿಸಿದರೆ ಅದಕ್ಕಾಗಿ ಒಂದು ಕೋಟಿ ರೂಪಾಯಿಗಳ ಜೀವ ವಿಮೆ ಅವರ ಮನೆಯವರಿಗೆ ತಕ್ಷಣ ಸಿಗುವಂತೆ ವ್ಯವಸ್ಥೆ ಮಾಡಲಾಗುವುದು.

ಇದೇ ಸಂದೇಶ ಸ್ಥಳೀಯ ಆಡಳಿತಾಧಿಕಾರಿಗಳು ಅವರ ನಿಯಂತ್ರಣದ ಎಲ್ಲಾ ಆಸ್ಪತ್ರೆಯ ಸಿಬ್ಬಂದಿಗೆ ರವಾನಿಸಲಾಗುವುದು.

ಸರ್ಕಾರದ ಕಡೆಯಿಂದ ಆಸ್ಪತ್ರೆಗಳ ವಿದ್ಯುತ್ ನೀರು ಬಾಡಿಗೆ ತೆರಿಗೆ ಮುಂತಾದ ಎಲ್ಲಾ ಹಣಕಾಸಿನ ಒತ್ತಡಗಳನ್ನು ಉಚಿತ ಗೊಳಿಸಿ ಆರು ತಿಂಗಳು ಸೇವೆ ಎಂದು ಘೋಷಿಸಲಾಗುವುದು.

ಎಲ್ಲಾ ವೈದ್ಯಕೀಯ ಅರೆ ವೈದ್ಯಕೀಯ ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲರನ್ನೂ ತಾತ್ಕಾಲಿಕವಾಗಿ ಸರ್ಕಾರದ ಅಧಿಕಾರಿಗಳು ಎಂದು ಘೋಷಿಸಿ ಅರ್ಹತೆಯ ಆಧಾರದ ಮೇಲೆ ಈಗಾಗಲೇ ಇರುವ ನಿಯಮಗಳ ಅಡಿಯಲ್ಲಿ ಅವರಿಗೆ ಸಂಬಳ ಘೋಷಿಸಲಾಗುವುದು.

ಕೊರೋನಾಗೆ ಸಂಬಂಧಿಸಿದ ವೈದ್ಯಕೀಯ ವೆಚ್ಚವನ್ನು ಅತ್ಯಂತ ವೈಜ್ಞಾನಿಕವಾಗಿ ಕನಿಷ್ಟ ಪ್ರಮಾಣದಲ್ಲಿ ನಿಗದಿ ಪಡಿಸಿ ರಾಜ್ಯಾದ್ಯಂತ ಏಕರೂಪದ ದರ ನಿಗದಿಪಡಿಸಲಾಗುವುದು ಮತ್ತು ಅದನ್ನು ಬಹಿರಂಗವಾಗಿ ಪ್ರದರ್ಶಿಸಲಾಗುವುದು.

ತೀರಾ ಕಡು ಬಡವರು ಅಸಹಾಯಕರು ಮುಂತಾದವರ ವೈದ್ಯಕೀಯ ವೆಚ್ಚಕ್ಕೆ ಸಹಾಯ ಮಾಡಲು ಒಂದು ಅತ್ಯಂತ ದಕ್ಷ ಹಾಗು ಪ್ರಾಮಾಣಿಕ ಶಿಕ್ಷಕರನ್ನು ಒಳಗೊಂಡ ಒಂದು ಸ್ಥಳೀಯ ಮಟ್ಟದ ಸಹಾಯ ವಾಣಿ ತೆರೆದು ವೈಯಕ್ತಿಕ ಮಟ್ಟದ ಸಂಪರ್ಕಕ್ಕೆ ಅನುಕೂಲ ಮಾಡಿಕೊಡಲಾಗುವುದು.

ಆಕ್ಸಿಜನ್ ವೆಂಟಿಲೇಟರ್ ಆಂಬುಲೆನ್ಸ್ ಮುಂತಾದ ಅತ್ಯವಶ್ಯಕ ಮತ್ತು ಇತರೆ ಖಾಯಿಲೆಗಳ ತುರ್ತು ನಿರ್ವಹಣೆಗೆ ವಿಕಾಸಸೌಧದ ಒಂದು ಇಡೀ ಮಹಡಿಯನ್ನು ವಶಪಡಿಸಿಕೊಂಡು ಪಾಳಿ ಆಧಾರದ ಮೇಲೆ ಅಧಿಕಾರಿಗಳನ್ನು ನೇಮಿಸಿಕೊಂಡು 24 ಗಂಟೆಗಳೂ ಕಾರ್ಯ ನಿರ್ವಹಿಸುವಂತೆ ಮಾಡಲಾಗುವುದು.

ಮಾಧ್ಯಮಗಳು ಮತ್ತು ಅದರ ಮುಖ್ಯಸ್ಥರನ್ನು ಕರೆದು ಒಂದು ಸಭೆ ಮಾಡಿ ದೋಷಾರೋಪಣೆಗಳಿಗಿಂತ ಸದ್ಯದ ಸಮಸ್ಯೆಗಳನ್ನು ಬಗೆಹರಿಸಲು ಮಾಡಬೇಕಾದ ಕೆಲಸಗಳಿಗೆ ಆಧ್ಯತೆ ನೀಡಿ ಎಂದು ಮನವಿ ಮಾಡಲಾಗುವುದು ಹಾಗು ಜನರಲ್ಲಿ ಗಾಳಿ ಮಾತುಗಳಿಂದ ಭಯ ಪಡಿಸುವುದಕ್ಕಿಂತ ವಿವೇಚನೆಯಿಂದ ಕೂಡಿದ ವಾಸ್ತವ ಸುದ್ದಿಗಳನ್ನು ಬಿತ್ತರಿಸಲು ಸೂಚಿಸಲಾಗುವುದು.

ಇದೊಂದು ಸಹಜ‌ ಸ್ವಾಭಾವಿಕ ‌ಸಾಂಕ್ರಾಮಿಕ ರೋಗ. ಆದ್ದರಿಂದ ಎಲ್ಲಾ ಎಚ್ಚರಿಕೆಗಳ‌ ನಂತರವೂ ಇದರಿಂದ ಯಾರದೇ ಸಾವು ಸಂಭವಿಸಿದರೂ ದಯವಿಟ್ಟು ಸಂಯಮದಿಂದ ಸೃಷ್ಟಿಯ ನಿಯಮವೆಂದು ಭಾವಿಸಿ ನಿಮ್ಮ ನೋವನ್ನು ಕಡಿಮೆ ಮಾಡಿಕೊಳ್ಳಿ. ಅತಿರೇಕದ ಪ್ರತಿಕ್ರಿಯೆ ನಿಯಂತ್ರಿಸಿ ಎಂದು ಜನರಿಗೆ ಸಾರ್ವಜನಿಕವಾಗಿ ಮನವಿ ಮಾಡಿಕೊಳ್ಳಲಾಗುವುದು.

ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಧೈರ್ಯ ತುಂಬಲು ಸಾಧ್ಯವಿರುವ ಎಲ್ಲಾ ಮನೋ ವೈದ್ಯರು ಮತ್ತು ಮನೋ ವೈಜ್ಞಾನಿಕ ಕ್ರಮಗಳನ್ನು ಕೈಗೊಳ್ಳಲಾಗುವುದು.

ಶವ ಸಂಸ್ಕಾರದಂತ ಸಾವಿನ ನಂತರದ ಸಂಪ್ರದಾಯಗಳನ್ನು ಸರ್ಕಾರವೇ ವಹಿಸಿಕೊಂಡು ಜನರ ಭಾವನೆಗಳಿಗೆ ಧಕ್ಕೆಯಾಗದಂತೆ ಕನಿಷ್ಠ ವೆಚ್ಚದಲ್ಲಿ ಸರಳವಾಗಿ ನೆರವೇರಿಸುವ ಯೋಜನೆ ರೂಪಿಸಿ ಅದನ್ನು ಮುಗಿಸಿ ತಾನೇ ಕುಟುಂಬದ ಹಿರಿಯನಂತೆ ಶವಕ್ಕಿಂತ ಬದುಕಿರುವ ಜೀವಗಳ ಬಗ್ಗೆ ಹೆಚ್ಚು ಆಸಕ್ತಿ ವಹಿಸಲಾಗುವುದು.

ಯಾವುದೇ ರೀತಿಯ ಲಾಕ್ ಡೌನ್ ಘೋಷಿಸದೆ ಎಲ್ಲವನ್ನೂ ಸಹಜವಾಗಿ ಕಾರ್ಯನಿರ್ವಹಿಸುವಂತೆ ಮಾಡಿ ಜನಜೀವನವನ್ನು ಎಂದಿನಂತೆ ಸಹಜ ಪರಿಸ್ಥಿತಿಗೆ ಮಾರ್ಪಡಿಸಲಾಗುವುದು. ಆದರೆ ಎಚ್ಚರಿಕೆಯ ಕ್ರಮವಾಗಿ ಸರ್ಕಾರದ ಬಳಿ ಇರುವ, ಖಾಸಗಿ ಮಾಲೀಕರ ಬಳಿ ಇರುವ ಅನೇಕ ವಾಹನಗಳನ್ನು ಆಂಬುಲೆನ್ಸ್ ಆಗಿ ಪರಿವರ್ತಿಸಿ ಬೀದಿಗೊಂದರಂತೆ ಎಲ್ಲಾ ಕಡೆ ನಿಲ್ಲಿಸಲಾಗುವುದು.

ಹಾಗೆಯೇ ಮಂದಿರ ಮಸೀದಿ ಚರ್ಚುಗಳನ್ನು ಸರ್ಕಾರದ ಕೆಲವು ಕಟ್ಟಡಗಳು ಶಾಲೆಗಳು ಮತ್ತು ಕ್ರೀಡಾ ಸಮುಚ್ಚಯಗಳನ್ನು ತಾತ್ಕಾಲಿಕ ಆಸ್ಪತ್ರೆಗಳಾಗಿ ಪರಿವರ್ತಿಸಿ ಸುಸಜ್ಜಿತವಾಗಿ ಇಡಲಾಗುವುದು.

ಅನೇಕ ಸ್ವಯಂ ಸೇವೆ ನೀಡುವ ಸಂಘಟನೆಗಳ ಸಹಾಯ ಪಡೆದು ಮೊಬೈಲ್ ಆಸ್ಪತ್ರೆಗಳನ್ನು ಸೃಷ್ಟಿಸಿ ಮನೆಗೇ ಕನಿಷ್ಠ ಮಟ್ಟದ ವೈದ್ಯಕೀಯ ಸೇವೆ ಸಿಗುವಂತೆ ಮಾಡಲಾಗುವುದು.

ತೀರಾ ಒಂದೇ ಕುಟುಂಬದಲ್ಲಿ ಸಾಕಷ್ಟು ಸಾವುಗಳಾಗಿ ಮನೆಯಲ್ಲಿ ಮಕ್ಕಳು ಅನಾಥರಾಗುವ ಪರಿಸ್ಥಿತಿ ಇದ್ದರೆ ಅಂತಹವರ ಸಂಪೂರ್ಣ ಸರ್ಕಾರಿ ಶಾಲೆಯ ಶೈಕ್ಷಣಿಕ ವೆಚ್ಚವನ್ನು ಸರ್ಕಾರವೇ ಭರಿಸುವ ಯೋಜನೆ ರೂಪಿಸಲಾಗುವುದು. ಇದರಿಂದಾಗಿ ಸಾರ್ವಜನಿಕರಲ್ಲಿ ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಮಾನಸಿಕ ನೆಮ್ಮದಿ ಮೂಡಿಸುವ ಪರೋಕ್ಷ ಕೆಲಸ ಮಾಡಲಾಗುವುದು.

ಇಡೀ‌ ರಾಜ್ಯದಲ್ಲಿ ಅತ್ಯಂತ ಪ್ರಾಮಾಣಿಕ ಹತ್ತು ಜನರನ್ನು ಸೇರಿಸಿ ಕೋವಿಡ್ ಪರಿಹಾರ ನಿಧಿ ಸ್ಥಾಪಿಸಿ ಅದರ ಮೂಲಕ ಯಾವುದೇ ಒಬ್ಬ ವ್ಯಕ್ತಿಗೂ ಹಣದ ಕಾರಣಕ್ಕೆ ವೈದ್ಯಕೀಯ ಸೇವೆಯಿಂದ ವಂಚಿತರಾಗದಂತೆ ಸಾಕಷ್ಟು ಎಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಲಾಗುವುದು.

ಕೋವಿಡ್ ವೈರಸ್ ನಮ್ಮ ಶತ್ರು. ಆದ್ದರಿಂದ ‌ಧೈರ್ಯವಾಗಿ ಅದನ್ನು ಎದುರಿಸಬೇಕೆ ಹೊರತು ಅದಕ್ಕೆ ಅಂಜಿ ಮನೆಯಲ್ಲಿ ಅಡಗಿಕೊಂಡು ಹೇಡಿಗಳಾಗದೆ ಯುದ್ಧದ ಸಮಯದ ತ್ಯಾಗದ ರೀತಿಯಲ್ಲಿ ಜನರನ್ನು ಪ್ರೇರೇಪಿಸಲಾಗುವುದು. ಸಾವನ್ನು ಸಹ ಘನತೆಯಿಂದ ಸ್ವೀಕರಿಸುವ ಮನೋಭಾವ ಬೆಳೆಸಲು ಪ್ರಯತ್ನಿಸಲಾಗುವುದು.

ನ್ಯಾಯಾಧೀಶರು ಮತ್ತು ಆಡಿಟರ್ ಜನರಲ್ ಅವರನ್ನು ಒಂದು ಮೇಲ್ವಿಚಾರಣಾ ಪ್ರಾಧಿಕಾರದಂತೆ ಕಾರ್ಯ ನಿರ್ವಹಿಸಲು ಮತ್ತು ಸಂಪೂರ್ಣ ಅವ್ಯವಸ್ಥೆ ಮತ್ತು ತಪ್ಪಿಗೆ ಕ್ರಮ ಕೈಗೊಳ್ಳಲು ಅಧಿಕಾರ ನೀಡಿ ತಾತ್ಕಾಲಿಕ ವ್ಯವಸ್ಥೆ ಮಾಡಲಾಗುವುದು.

ಎಲ್ಲಕ್ಕಿಂತ ಹೆಚ್ಚಾಗಿ ಮನುಷ್ಯನು ಸಹ ಒಂದು ಪ್ರಾಣಿ ಎಂದು ಜನರಿಗೆ ಮನವರಿಕೆ ಮಾಡಿ ಹಣ ಅಂತಸ್ತು ಅಧಿಕಾರದ ಮದದಿಂದ ಆತ ದೈಹಿಕವಾಗಿ ಮಾನಸಿಕವಾಗಿ ದುರ್ಬಲವಾಗುವುದನ್ನು ತಡೆದು ಪ್ರಕೃತಿಯ ಸಹಜ ಆಹಾರ ನೀರು ದೇಹ ದಂಡನೆ ಮಾನಸಿಕ ನಿಯಂತ್ರಣ ಇದನ್ನು ಕಟ್ಟುನಿಟ್ಟಾಗಿ ಪಾಲಿಸಲು ಅವರಲ್ಲಿ ಜಾಗೃತಿ ಮೂಡಿಸಲು ತತ್ಕ್ಷಣವೇ ಒಂದು ಕ್ರಿಯಾ ಯೋಜನೆ ರೂಪಿಸಲಾಗುವುದು. ವಾಹನಕ್ಕಿಂತ ಕಾಲ್ನಡಿಗೆಯ ಪ್ರಯೋಜನವನ್ನು ತಿಳಿಸಲಾಗುವುದು.

ಹೀಗೆ ಇನ್ನೂ ಇನ್ನೂ ಹೊಸ ಹೊಸ ಕ್ರಿಯಾತ್ಮಕ ಸಲಹೆಗಳನ್ನು ಎಲ್ಲರಿಂದಲೂ ಪಡೆದು ವಿಶ್ವಕ್ಕೆ ಕೊರೋನಾ ನಿಯಂತ್ರಣದಲ್ಲಿ ಮಾದರಿಯಾಗಲು ಪ್ರಯತ್ನಿಸಲಾಗುವುದು………..

ಇದಕ್ಕಾಗಿ ನನಗೆ ಯಾವುದೇ ಹಣ ಪ್ರಶಸ್ತಿ ಸನ್ಮಾನ ಬೇಡ. ಕೇವಲ ಅಧಿಕಾರ ಮಾತ್ರ ಸಾಕು.

ಯಾವುದೇ ಜಾತಿ ಧರ್ಮ ಭಾಷೆ ಪಕ್ಷ ಪಂಥ ಸಿದ್ದಾಂತಗಳ ಭೇದವಿಲ್ಲದೆ ಮನುಷ್ಯನಾಗಿ ಮನುಷ್ಯರಿಗಾಗಿ ಮಾತ್ರ ಈ ಕೆಲಸ ಮಾಡುತ್ತೇನೆ….

ಧನ್ಯವಾದಗಳು…..

  • ವಿವೇಕಾನಂದ. ಹೆಚ್.ಕೆ.
Share This Article
Leave a comment