ಮಾಜಿ ಸಭಾಪತಿ ರಮೇಶ್ ಕುಮಾರ್ ಮತ್ತು ಹಾಲಿ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರುಗಳು ಅತ್ಯಾಚಾರದ ಬಗ್ಗೆ ಲೋಕಾರೂಢಿಯಾಗಿ ಆಡಿದ ಮಾತುಗಳ ಮತ್ತು ಆ ಮಾತುಗಳು ಉಕ್ಕಿಸಿದ ಹಾಸ್ಯದ ವಾತಾವರಣ, ಜನರ ಅಸಮಾಧಾನ ಹಾಗು ಅದಕ್ಕೆ ಅವರ ಕ್ಷಮಾಪಣೆ ಮರೆಯುವ ಮುನ್ನ…….
ದೇಶ ಸಾಕ್ಷಿಯಾದ ದೆಹಲಿಯ ನಿರ್ಭಯ ಪ್ರಕರಣದ 9 ವರ್ಷಗಳ ನಂತರ…………
( ಡಿಸೆಂಬರ್ 16 – 2012….)
ಫಿಸಿಯೋ ಥೆರಪಿಸ್ಟ್ ನಿರ್ಭಯಾ ಎಂಬ ಜ್ಯೋತಿಸಿಂಗ್ ತೆರೆದಿಟ್ಟ,…..
ಮನಸ್ಸು – ಹೃದಯ – ದೇಹ – ಚೂಡಿದಾರ – ಆ ಮೂರು ಗಂಟೆಗಳು……..
ಆ ದಿನ ನಾನು ಬೆಳಗಿನ ಕರ್ತವ್ಯದಲ್ಲಿದ್ದೆ, ಡ್ಯೂಟಿ ಡಾಕ್ಟರ್ ಪೇಷೆಂಟ್ ಒಬ್ಬರ ಫೈಲ್ ನೋಡಿ ಆಕೆಯ ಗಾಯಕ್ಕೆ ಡ್ರೆಸಿಂಗ್ ಮಾಡಲು ಹೇಳಿದರು. ಹಚ್ಚಬೇಕಾದ ಮುಲಾಮಿನ ಹೆಸರನ್ನು ಅದರಲ್ಲಿ ಬರೆದಿದ್ದರು.
ನಾನು ಆ ಫೈಲ್ ನೊಂದಿಗೆ ಒಳ ರೋಗಿಯಾಗಿ ದಾಖಲಾಗಿದ್ದ ಕೋಣೆಯೊಳಗೆ ಹೋದೆ. ಆ ಯುವತಿಯ ಮುಖವೆಲ್ಲ ಊದಿಕೊಂಡಿತ್ತು. ಎದೆ ಬೆನ್ನು ತೊಡೆಯ ಭಾಗದಲ್ಲೆಲ್ಲಾ ಗಾಯಗಳಾಗಿದ್ದವು. ಆಕೆಯನ್ನು ಡ್ರೆಸಿಂಗ್ ಕೋಣೆಗೆ ಕರೆದುಕೊಂಡು ಹೋಗಿ ಆಕೆಯ ಬಟ್ಟೆ ಬಿಚ್ಚಿಸಿ ಹತ್ತಿಯಿಂದ ಗಾಯವನ್ನು ಸ್ವಚ್ಚ ಮಾಡತೊಡಗಿದೆ. ನಾನು ಭಾವಿಸಿದ್ದಕ್ಕಿಂತ ಹೆಚ್ಚು ಗಂಭೀರವಾದ ಗಾಯಗಳಾಗಿದ್ದವು. ಇದು ಯಾರೋ ಬಲವಾಗಿ ಹೊಡೆದ ಗಾಯ ಎಂದು ಶುಶ್ರೂಷಕಿಯಾದ ನನಗೆ ಅರ್ಥವಾಯಿತು.
ಆಕೆಯ ಗಾಯಕ್ಕೆ ಮುಲಾಮು ಹಚ್ಚುತ್ತಾ ಯಾರು ಹೊಡೆದದ್ದು ಎಂದು ಕೇಳಿದೆ. ಅಲ್ಲಿಯವರೆಗೂ ಗಾಯದ ನೋವಿಗೆ ಕನಲುತ್ತಿದ್ದ ಆಕೆ ಒಮ್ಮೆಲೆ ದುಃಖ ಮತ್ತು ಕೋಪದಿಂದ ತನ್ನ ಗಂಡನನ್ನು ಶಪಿಸತೊಡಗಿದಳು. ಆತನ ದುರಭ್ಯಾಸ, ಹಣ ಮತ್ತು ಹೆಣ್ಣಿನ ಮೋಹ, ರಾಕ್ಷಸೀ ಪ್ರವೃತ್ತಿ ಎಲ್ಲವನ್ನೂ ಬಣ್ಣಿಸಿ ಇಡೀ ಗಂಡು ಸಂತಾನದ ಜನ್ಮ ಜಾಲಡಿದಳು. ಆಕೆಯ ಗಾಯ ತೀಕ್ಷ್ಣವಾಗಿದ್ದುದು ನಿಜ. ಆದರೆ ಆಕೆ ಎಲ್ಲಾ ಗಂಡಸರನ್ನು ಕೆಟ್ಟ ಪದಗಳಲ್ಲಿ ನಿಂದಿಸಿದ್ದು ನನಗೆ ಸರಿ ಕಾಣಲಿಲ್ಲ. ಅದನ್ನೇ ಯೋಚಿಸುತ್ತಾ ಆಕೆಯ ಗಾಯಗಳಿಗೆ ಬ್ಯಾಂಡೇಜ್ ಮಾಡುತ್ತಿದ್ದೆ.
ಅದೇ ಸಮಯಕ್ಕೆ ಸರಿಯಾಗಿ ಅವೀಂದ್ರ ಪಾಂಡೆಯ ಪರ್ಸನಲ್ ಟೋನ್ ನನ್ನ ಮೊಬೈಲಿನಲ್ಲಿ ರಿಂಗಿಸಿತು. ಕೆಲಸ ಮುಂದುವರಿಸುತ್ತಲೇ ಖುಷಿಯಿಂದ ಕಾಲ್ ರಿಸೀವ್ ಮಾಡಿದೆ. ಎಂದಿನಂತೆ ಸಿಹಿ ಧ್ವನಿಯಲ್ಲಿ ಪ್ಯಾರಿ ಚಿನ್ನು ಎಂದು ತೊದಲುತ್ತಾ ತುಂಬಾ ಮುದ್ದಾಗಿ ಮಾತನಾಡಿದ. ತುಂಬಾ ಆಶ್ಚರ್ಯವೆಂದರೆ ನಾನೇ ಬಹಳ ಸಲ ಆತನನ್ನು ಸಿನಿಮಾಗೆ ಕರೆದಿದ್ದೆ. ಒಮ್ಮೆಯೂ ಒಪ್ಪಿರಲಿಲ್ಲ. ಇಂದು ಸ್ವತಃ ಆತನೇ ಆಹ್ವಾನ ನೀಡಿದ. ನನಗೆ ಖುಷಿಯೋ ಖುಷಿ. ಅಷ್ಟೇ ಅಲ್ಲ ಸಂಜೆ 5 ಗಂಟೆಗೆಲ್ಲಾ ಇಂಡಿಯಾ ಗೇಟ್ ಬಳಿ ಹೋಗಿ ಅಲ್ಲಿ ನನ್ನ ಪ್ರೀತಿಯ ಡೆಲ್ಲಿ ಕುಲ್ಫಿ ಮತ್ತು ಫಲೂಡ ತಿಂದು ನನ್ನ ಫೇವರೇಟ್ ಹೀರೋ ಸಲ್ಮಾನ್ ಖಾನ್ ಸಿನಿಮಾ ಮಲ್ಟಿಪ್ಲೆಕ್ಸ್ ನಲ್ಲಿ ನೋಡೋಣ ಎಂದ.
ನನ್ನ ಆನಂದಕ್ಕೆ ಪಾರವೇ ಇರಲಿಲ್ಲ. ಗಾಯಕ್ಕೆ ಔಷಧಿ ಹಚ್ಚುತ್ತಿದ್ದರು ಮನಸ್ಸು ಸ್ವರ್ಗದಲ್ಲಿ ತೇಲುತ್ತಿತ್ತು. ನಾನು ಉಳಿದುಕೊಂಡಿದ್ದ ಪಿ ಜಿ ಮಾಲೀಕರಿಗೆ ಕೆಲಸ ತಡವಾಗುತ್ತದೆ. ರಾತ್ರಿ ಲೇಟಾಗಿ ಬರುತ್ತೇನೆ ಎಂದು ಸುಳ್ಳು ಹೇಳಲು ಮನಸ್ಸಿನಲ್ಲಿ ತಯಾರಾದೆ. ಆ ಗುಂಗಿನಲ್ಲೇ ಪಾಂಡೆಗೆ ಸಂಜೆ ಸಿಗುವ ಸ್ಥಳ ಮತ್ತು ಸಮಯ ತಿಳಿಸಿ ಈಕೆಯ ಡ್ರೆಸಿಂಗ್ ಮುಗಿಸಿ ಆಕೆಯನ್ನು ಸಮಾಧಾನಿಸಿ ವಾರ್ಡಗೆ ನಾನೇ ಬಿಟ್ಟು ಬಂದೆ.
ಮನಸ್ಸು ಆಹ್ಲಾದಕರವಾಗಿತ್ತು. ಕೆಲಸವನ್ನು ತುಂಬಾ ಶ್ರದ್ಧೆಯಿಂದ ಮಾಡುತ್ತಿದ್ದೆ.
ಅಯ್ಯೋ ನಾನೊಬ್ಬ ಹುಚ್ಚಿ. ಈ ಖುಷಿಯಲ್ಲಿ ನಿಮಗೆ ಪಾಂಡೆ ಯಾರೆಂದು ಹೇಳಲೇ ಇಲ್ಲ ನೋಡಿ. ಆತ ನನ್ನ ಬಾಯ್ ಪ್ರೇಂಡ್. ತುಂಬಾ ಒಳ್ಳೆಯ ಹುಡುಗ. ಸಾಪ್ಟ್ ವೇರ್ ಇಂಜಿನಿಯರ್.. ನಮ್ಮ ಊರಿನ ಬಳಿಯವನು ಈಗ ನನ್ನಂತೆ ದೆಹಲಿಯ ಒಂದು ಪಿ. ಜಿ. ಯಲ್ಲಿ ಇದ್ದಾನೆ. ಚಿಕ್ಕ ವಯಸ್ಸಿನಿಂದಲೂ ಬಲ್ಲೆ. ಸ್ವಲ್ಪ ವರ್ಷ ಸಂಪರ್ಕ ಇರಲಿಲ್ಲ.
ಆದರೆ ಮೂರು ವರ್ಷದ ಹಿಂದೆ ಆಕಸ್ಮಿಕವಾಗಿ ಬಸ್ಸಿನಲ್ಲಿ ಸಿಕ್ಕ. ಈಗ ಇಬ್ಬರೂ ಪ್ರೇಮಿಗಳು. ಇಷ್ಟರಲ್ಲೇ ಮನೆಯವರಿಗೆ ಹೇಳಿ ಮದುವೆಯಾಗುತ್ತೇವೆ. ಅವನ ಮನೆಯಲ್ಲಿ ಯಾವುದೇ ತೊಂದರೆ ಇಲ್ಲ. ನಮ್ಮ ಮನೆಯಲ್ಲಿ ಅಮ್ಮನನ್ನು ಸ್ವಲ್ಪ ಒಪ್ಪಿಸಬೇಕಿದೆ.
ಪಾಂಡೆ ನಾಚಿಕೆ ಸ್ವಭಾವದವನು. ಸ್ವಲ್ಪ ಭಯ ಜಾಸ್ತಿ. ಯಾವುದೇ ದುರಾಭ್ಯಾಸ ಇಲ್ಲ. ಬಹಳ ಶ್ರಮಜೀವಿ. ತನ್ನ ತಂದೆ ತಾಯಿ ಅಕ್ಕನನ್ನು ತುಂಬಾ ಪ್ರೀತಿಸುತ್ತಾನೆ. ಆತನ ಮೇಲೆ ನನಗೆ ಪ್ರೀತಿ ಮೂಡಲು ಇದೇ ಮುಖ್ಯ ಕಾರಣ. ಅದೇ ಪ್ರೀತಿ ನನಗೂ ಸಿಗಬಹುದು ಎಂಬ ಆಸೆ……
ಸಂಜೆ ಇಬ್ಬರೂ ಸೇರಿ ಇಂಡಿಯಾ ಗೇಟ್ ಬಳಿ ಸುತ್ತಾಡಿ ಪಾವ್ ಬಾಜಿ ತಿಂದು ಕರೋಲ್ ಬಾಗ್ ನ ಮಲ್ಟಿಪ್ಲೆಕ್ಸ್ ನಲ್ಲಿ ಸಿನಿಮಾ ನೋಡಿದೆವು. ಪಾಂಡೆಯ ಭುಜದ ಮೇಲೊರಗಿ ಪಾಪ್ ಕಾರ್‌ನ್ ತಿನ್ನುತ್ತಾ ಆ ಹಾಸ್ಯ ಬೆರೆತ ಪ್ರೀತಿಯ ಸಲ್ಮಾನ್ ಖಾನ್ ಸಿನಿಮಾವನ್ನು ಮೊದಲ ಬಾರಿಗೆ ನೋಡಿದ ಕ್ಷಣಗಳನ್ನು ಈ ಜೀವಮಾನದಲ್ಲಿ ಮರೆಯುವುದಿಲ್ಲ.
ಸಿನಿಮಾ ಮುಗಿಯಲು ರಾತ್ರಿ ಹನ್ನೊಂದು ಗಂಟೆಯಾಯಿತು. ಎಲ್ಲಾದರೂ ಊಟ ಮಾಡೋಣ ಎಂದು ಒತ್ತಾಯಿಸಿದೆ. ಅವನು ತುಂಬಾ ಸಮಯವಾದ ಕಾರಣ ಅದನ್ನು ನಿರಾಕರಿಸಿ, ಅಲ್ಲಿಯೇ ರಸ್ತೆ ಬದಿಯಲ್ಲಿ ರೋಟಿ ಕರಿ ಪಾರ್ಸಲ್ ಮಾಡಿಸಿ ಬೇಗ ಬೇಗ ಗಾಂಧಿ ಮಾರ್ಗ್ ನ ಬಸ್ ನಿಲ್ದಾಣಕ್ಕೆ ಬಂದೆವು.
ಸ್ವಲ್ಪ ಸಮಯದಲ್ಲೇ ಒಂದು ಖಾಸಗಿ ಬಸ್ ಬಂತು. ನಮ್ಮ ಪಿ ಜಿ ಬಳಿ ಅದು ಹೋಗುವುದಾಗಿ ಹೇಳಿದ ಕಾರಣ ಇಬ್ಬರೂ ಹಿಂಬಾಗಿಲಿನಿಂದ ಹತ್ತಿದೆವು.
ಬಸ್ಸಿನಲ್ಲಿ ಐದಾರು ಗಂಡಸರು ಮತ್ತು ಇಬ್ಬರು ಹೆಂಗಸರು ಮಾತ್ರ ಇದ್ದರು. ಉಳಿದದ್ದು ಖಾಲಿ. ನಾವಿಬ್ಬರೂ ಒಂದೇ ಬದಿಯ ಸೀಟಿನಲ್ಲಿ ಕುಳಿತು ಸಿನಿಮಾ ದೃಶ್ಯಗಳನ್ನು ಮೆಲುಕು ಹಾಕುತ್ತಾ ನಮ್ಮದೇ ಲೋಕದಲ್ಲಿ ತೇಲಾಡುತ್ತಿದ್ದೆವು. ಮುಂದಿನ ನಿಲ್ದಾಣದಲ್ಲಿ ಆ ಇಬ್ಬರು ಹೆಂಗಸರು ಇಳಿದರು. ನಮ್ಮ ನಿಲ್ದಾಣ ಇನ್ನೂ ಮೂರು ಸ್ಟಾಪ್ ಇತ್ತು.
ಬಸ್ ಮುಂದಕ್ಕೆ ಚಲಿಸುತ್ತಿದ್ದಂತೆ ಆ ಐದೂ ಹುಡುಗರು ಒಟ್ಟಿಗೆ ಗುಸುಗುಸು ಮಾತನಾಡುತ್ತ ಡ್ರೈವರ್ ಬಳಿ ಹೋದರು. ಬಹುಶಃ ಅವರೆಲ್ಲರೂ ಪರಿಚಿತರು ಎನಿಸಿತು. ನಾವು ನಮ್ಮ ಪಾಡಿಗೆ ಮಾತನಾಡುತ್ತಾ ಇದ್ದೆವು.
ಕೆಲವೇ ಕ್ಷಣಗಳಲ್ಲಿ ಅವರಲ್ಲಿ ನಾಲ್ಕು ಜನ ನಮ್ಮ ಬಳಿ ಬಂದರು. ಸ್ವಲ್ಪ ಕುಡಿದಿದ್ದರು ಎನಿಸುತ್ತದೆ. ಗಡುಸು ಧ್ವನಿಯಲ್ಲಿ ಯಾರು ನೀವು ಎಲ್ಲಿಗೆ ಹೋಗಬೇಕು ಎಂದು ದಬಾಯಿಸಿದರು.
ನಾನು ಧೈರ್ಯವಾಗಿ ನನ್ನ ನಿಲ್ದಾಣದ ಹೆಸರು ಹೇಳಿದೆ. ನೀವು ಊಹಿಸಲೂ ಸಾಧ್ಯವಿಲ್ಲ. ನಮ್ಮಿಂದ ಯಾವುದೇ ಪ್ರಚೋದನೆಯೂ ಇರಲಿಲ್ಲ. ಅದರಲ್ಲಿ ಒಬ್ಬ ತಕ್ಷಣ ನನ್ನ ಕೆನ್ನೆಗೆ ಬಲವಾಗಿ ಹೊಡೆದು ತಲೆ ಕೂದಲು ಎಳೆದು ಕೆಳಗೆ ಬೀಳಿಸಿದ. ನನಗೆ ಏನಾಗುತ್ತಿದೆ ಎಂದು ಅರ್ಥವೇ ಆಗಲಿಲ್ಲ. ತಲೆ ಗಿರ್ ಎಂದಿತು. ಕೆಳಗೆ ಬಿದ್ದ ನನ್ನ ಕೈ ಮೇಲೆ ಇನ್ನೊಬ್ಬ ಕಾಲಿಟ್ಟು ತುಳಿದ. ಸಿಕ್ಕಾಪಟ್ಟೆ ನೋವಾಯಿತು. ಪಾಂಡೆ ತುಂಬಾ ಭಯ ಪಟ್ಟು ಅದುರಿಹೋದ. ಆದರೂ ಅವನು ಎದ್ದು ನನ್ನನ್ನು ರಕ್ಷಿಸಲು ಮುನ್ನುಗ್ಗಿದ. ಆಗ ಉಳಿದಿಬ್ಬರು ಅವನನ್ನು ಇನ್ನೊಂದು ಸೀಟಿಗೆ ತಳ್ಳಿ ತಲೆ ಮತ್ತು ಹೊಟ್ಟೆಗೆ ಬಲವಾಗಿ ಗುದ್ದಿದರು.
ನನಗಿಂತ ಪಾಂಡೆಗೆ ಹೊಡೆದಿದ್ದು ನನ್ನಲ್ಲಿ ರೋಷ ಉಕ್ಕಿಬಂತು. ಹೇಗೋ ಕಷ್ಟಪಟ್ಟು ಒಬ್ಬನನ್ನು ಬಲವಾಗಿ ತಳ್ಳಿ ಎದ್ದು ಪಾಂಡೆಯನ್ನು ತಬ್ಬಿಕೊಂಡೆ ಜೊತೆಗೆ ಜೋರಾಗಿ ಕೂಗ ತೊಡಗಿದೆ. ರಾತ್ರಿಯ ಸಮಯ. ಜನ ಸಂಚಾರ ಕಡಿಮೆ ಇತ್ತು. ಬಸ್ಸಿನ ಒಳಗೆ ಸಿಡಿಯ ಹಾಡುಗಳ ಧ್ವನಿ ಹೆಚ್ಚಾಗಿತ್ತು. ಬಸ್ಸು ಚಲಿಸುತ್ತಲೇ ಇತ್ತು. ದೂರದಲ್ಲಿ ಒಬ್ಬ ಪೋಲೀಸ್ ಕಾಣಿಸಿದ. ಜೋರಾಗಿ ಕೈ ಬೀಸಿದೆ. ಆತ ನನ್ನತ್ತ ನೋಡಿದ. ಪಾಪ ಆತನಿಗೆ ಎಷ್ಟು ಅರ್ಥವಾಯಿತೋ ತಿಳಿಯಲಿಲ್ಲ. ಬಸ್ಸು ಮುಂದೆ ಹೋಯಿತು.
ಇಲ್ಲಿಂದ ಮುಂದೆ ನಾನು ಹೇಳುವುದು ಅಶ್ಲೀಲವೆನಿಸಿದರೆ ದಯವಿಟ್ಟು ಕ್ಷಮಿಸಿ. ನನ್ನ ಜಾಗದಲ್ಲಿ ನಿಮ್ಮ ತಂಗಿ ತಾಯಿ ಅಮ್ಮ ಮಗಳು ಹೆಂಡತಿ ಯಾರನ್ನು ಬೇಕಾದರೂ ಊಹಿಸಿಕೊಳ್ಳಿ. ಆಗ ನಿಮಗೆ ನನ್ನ ನೋವು ಅರ್ಥವಾಗಬಹುದು. ಏಕೆಂದರೆ ನಾನು ಕೂಡ ನಿಮ್ಮೊಳಗೊಬ್ಬಳು.
ನಾನು ಪಾಂಡೆಯನ್ನು ಅಕ್ಷರಶಃ ತಬ್ಬಿ ಹಿಡಿದಿದ್ದೆ. ನನ್ನ ಮುಂದೆ ಆತ ಏಟು ತಿನ್ನುವುದನ್ನು ನೋಡಲು ನನ್ನಿಂದ ಸಾಧ್ಯವಿರಲಿಲ್ಲ.
ನನ್ನ ದುಪ್ಪಟ ಆಗಲೇ ಕೆಳಗೆ ಬಿದ್ದಿತ್ತು. ಕೆಲವೇ ಕ್ಷಣದಲ್ಲಿ ಅದರಲ್ಲಿ ಒಬ್ಬ ನನ್ನ ಚೂಡಿದಾರ್ ಮೇಲಿನ ಹೊದಿಕೆಯನ್ನು ಕತ್ತಿನ ಭಾಗದಲ್ಲಿ ಹಿಡಿದು ಎಳೆದ. ಅದು ಸಂಪೂರ್ಣ ಹರಿದು ನನ್ನ ಬೆನ್ನು ಬೆತ್ತಲಾಯಿತು. ಅಲ್ಲಿಯವರೆಗೂ ಹಣ ದೋಚುವವರು ಇರಬೇಕೆಂದು ಭಾವಿಸಿದ್ದೆ. ಆ ಕ್ಷಣವೇ ಅವರ ಉದ್ದೇಶ ಅರ್ಥವಾಯಿತು. ಧೈರ್ಯ ಉಡುಗಿ ಹೋಯಿತು. ಯೋಚಿಸುವ ಮೊದಲೇ ಇನ್ನೊಬ್ಬ ನನ್ನ ಬ್ರಾ ಕಿತ್ತೆಸೆದ.
ಪ್ರತಿಕ್ರಿಯಿಸಲೂ ಬಿಡದೆ ಎರಡೂ ಕೈಗಳನ್ನು ಒಬ್ಬ, ಮತ್ತೊಬ್ಬ ಜುಟ್ಟು ಹಿಡಿದು ಬಸ್ಸಿನ ಮಧ್ಯಭಾಗದ ಕೆಳಗೆ ಬೀಳಿಸಿದರು. ತಲೆಗೆ ಪೆಟ್ಟಾಯಿತು. ಆಗ ನನ್ನ ಕಣ್ಣಿಗೆ ಸ್ಪಷ್ಟವಾಗಿ ಕಾಣಿಸಿತು. ಒಬ್ಬ ತನ್ನ ಬಟ್ಟೆ ಕಳಚಿ ಬೆತ್ತಲೆಯಾಗಿ ನಿಂತಿದ್ದ. ಆಕಾಶವೇ ಕಳಚಿ ತಲೆಯ ಮೇಲೆ ಬಿದ್ದಂತಾಯಿತು. ದುಃಖ ಉಮ್ಮಳಿಸಿಬಂತು. ನಾನು ಒಬ್ಬ ಶುಶ್ರೂಷಕಿ. ಆದರೆ ಆ ಕ್ಷಣದಲ್ಲಿ ಬಾಯಿ ತಪ್ಪಿ ಅಣ್ಣಾ ನಾನು ಡಾಕ್ಟರ್ ದಯವಿಟ್ಟು ಏನೂ ಮಾಡಬೇಡಿ ಎಂದು ಗೋಗರೆದೆ. ನಿಮಗೆ ಎಷ್ಟು ಬೇಕಾದರೂ ಹಣ ಕೊಡುತ್ತೇನೆ ಬಿಟ್ಟು ಬಿಡಿ ಎಂದು ಅಂಗಲಾಚಿದೆ. ಅದನ್ನು ಲೆಕ್ಕಿಸದೆ ಆತ ನನ್ನ ಒಳ ಉಡುಪಿನ ಸಮೇತ ಪೈಜಾಮ ಕಿತ್ತೆಸೆದು ನೇರವಾಗಿ ರಾಕ್ಷಸನಂತೆ ನನ್ನೊಳಗೆ ಪ್ರವೇಶಿಸಿದ. ಕಣ್ಣಿಗೆ ಸೂಜಿ ಚುಚ್ಚಿದಂದಾಯಿತು.
ಇದನ್ನು ನೋಡಿದ ಪಾಂಡೆ ಜೋರಾಗಿ ಕಿರುಚುತ್ತಾ ನಿಂತಿದ್ದ ಒಬ್ಬನಿಗೆ ಹೊಡೆದು ಮುನ್ನುಗ್ಗಿದ. ತಕ್ಷಣ ಇನ್ನೊಬ್ಬ ಕಬ್ಬಿಣದ ರಾಡಿನಿಂದ ಅವನ ತಲೆಗೆ ಹೊಡೆದು ಸೀಟಿನ ಕೆಳಗೆ ತಳ್ಳಿ ಅವನ ಕತ್ತು ಒತ್ತಿ ಹಿಡಿದ.
ನೀವೆಲ್ಲಾ ಭಾವಿಸಿದಂತೆ ಆ ಕ್ಷಣದಲ್ಲಿ ನನಗೆ ಹೆಚ್ಚಿನ ದೈಹಿಕ ನೋವು ಆಗಲಿಲ್ಲ. ಆ ಪರಿಸ್ಥಿತಿಯ ಭೀಕರತೆ ಮತ್ತು ಪಾಂಡೆಯ ತಲೆಯಿಂದ ಚಿಮ್ಮಿದ ರಕ್ತ ನನ್ನ ಮೆದುಳಿನ ಗ್ರಹಿಕೆಯ ಶಕ್ತಿಯನ್ನೇ ಕುಂದಿಸಿತು. ಪಾಂಡೆ ಆ ನೋವಿನಲ್ಲೂ ಕಿರುಚುತ್ತಿದ್ದ ” ನನ್ನನ್ನು ಬೇಕಾದರೆ ಕೊಂದು ಬಿಡಿ. ಅವಳನ್ನು ಮಾತ್ರ ಬಿಟ್ಟು ಬಿಡಿ ಬಿಟ್ಟು ಬಿಡಿ ” ಎಂದು ಗೋಗರೆದ. ಅವನ ಧ್ವನಿಯಲ್ಲಿನ ಆಕ್ರಂದನ, ನೋವು, ಕರುಣೆ, ನನ್ನ ಬಗೆಗಿನ ಪ್ರೀತಿ ಕಂಡು ಆ ಒಂದು ಕ್ಷಣ ನನ್ನ ಬದುಕು ಸಾರ್ಥಕವಾಯಿತು ಎಂದೆನಿಸಿತು.
ಉಳಿದ ಮೂವರೂ ಸರದಿಯ ಮೇಲೆ ಅನುಭವಿಸಿದರು. ಕಬ್ಬಿಣದ. ಕೆಳಗೆ ಸಿಲುಕಿದ ನನ್ನ ಬೆನ್ನಿನಲ್ಲಿ ತೀವ್ರ ಗಾಯವಾಯಿತು. ಓಡುತ್ತಿದ್ದ ಬಸ್ಸು ನಿಂತಿತು. ಬಹುಶಃ ತೀಟೆ ತೀರಿದ ಮೇಲೆ ಬಿಟ್ಟು ಬಿಡಬಹುದೆಂದು ಭಾವಿಸಿದೆ. ಇಲ್ಲ ನನ್ನ ದುರಾದೃಷ್ಟ ಅಲ್ಲಿಗೆ ಮುಗಿಯಲಿಲ್ಲ. ಡ್ರೈವರ್ ನೇರವಾಗಿ ಬಂದವನೇ ನನ್ನ ರಕ್ತಸಿಕ್ತ ದೇಹವನ್ನು ಮತ್ತೆ ಪ್ರವೇಶಿಸಿದ…
ಪಾಂಡೆ ಸೀಟಿನ ಕೆಳಗೆ ಅರೆ ಪ್ರಜ್ಞಾವಸ್ಥೆಯಲ್ಲಿ ಇದನ್ನೆಲ್ಲಾ ನೋಡುತ್ತಾ ಅಸಹಾಯಕತೆಯಿಂದ ದುಃಖಿಸುತ್ತಿದ್ದ.
ಕ್ಷಮಿಸಿ ಕಣ್ಣು ಮಂಜಾಗುತ್ತಿದೆ. ಆಯಾಸವಾಗಿದೆ. ಹೆಚ್ಚಿಗೆ ಹೇಳಲು ಸಾಧ್ಯವಾಗುತ್ತಿಲ್ಲ. ಸ್ವಲ್ಪ ವಿಶ್ರಾಂತಿ ಪಡೆದು ನಾಳೆ ಮುಂದುವರಿಸುತ್ತೇನೆ……..
ನಿರ್ಭಯ…..
ವಿವೇಕಾನಂದ. ಹೆಚ್ ಕೆ
- ಚನ್ನಪಟ್ಟಣದಲ್ಲಿ ಸಿ ಪಿ ಯೋಗೇಶ್ವರ್ ಗೆ ಭರ್ಜರಿ ಗೆಲುವು
- ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಗೆಲುವು: ಅಧಿಕೃತ ಘೋಷಣೆ ಬಾಕಿ
- ರಾಜ್ಯದ ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ: ಬಿಜೆಪಿಗೆ ಆಘಾತ
- ಕಾಪರ್ ಏಜ್ ಇನ್ಸ್ಟಿಟ್ಯೂಟ್ ಮಾಲೀಕ ಶರತ್ ಆತ್ಮಹತ್ಯೆ: ಕಾರಣ ನಿಗೂಢ
- 104ರನ್ಗೆ ಆಸ್ಟ್ರೇಲಿಯಾ ಆಲೌಟ್ ,ಬುಮ್ರಾಗೆ 5 ವಿಕೆಟ್
More Stories
ಜಲಗಾರ ಮತ್ತು ಕಾಲ ಜ್ಞಾನಿ ಕನಕ ನಾಟಕಗಳಲ್ಲಿ ದೈವ-ದೇಗುಲ ಸಂಕಥನ
ಕನ್ನಡ ರಾಜ್ಯೋತ್ಸವ
ಬದುಕಿದ್ದೂ ಸತ್ತಂತಿರುವವರು ನೂರಾರು ; ಸತ್ತೂ ಬದುಕಿರುವ ಒಂದೇ ಒಂದು ಕೊಹಿನೂರು..!