ಮನುಷ್ಯರ ಹುಡುಕಾಟದಲ್ಲಿ ಅಲೆಯುತ್ತಾ………

Team Newsnap
3 Min Read

8 ವರ್ಷದ ಮಗು ಅಪ್ಪನನ್ನು ಕೇಳುತ್ತದೆ,
” ಅಪ್ಪಾ ನೀನ್ಯಾರು “
ನಾನು ನಿಮ್ಮಪ್ಪ ಕಣೋ,

” ಅದಲ್ಲಪ್ಪ ನೀನ್ಯಾರು ” –
ನಾನು ನನ್ನ ಅಪ್ಪ ಅಮ್ಮನ ಮಗ,

” ಅದೂ ಅಲ್ಲಪ್ಪ ನೀನ್ಯಾರು”
ನಾನು ನಿಮ್ಮಮ್ಮನ ಗಂಡ,

“ಅಲ್ಲಪ್ಪ ನೀನ್ಯಾರು “
ನಾನು ಒಬ್ಬ ಕನ್ನಡಿಗ,

” ಅದಲ್ಲಪ್ಪ ನೀನ್ಯಾರು”
ನಾನೊಬ್ಬ ಭಾರತೀಯ, ಈ ದೇಶದ ಪ್ರಜೆ,

” ಅಯ್ಯೋ ಅದು ಅಲ್ಲಪ್ಪ ನೀನ್ಯಾರು”
ನಾನು X ಜಾತಿಯವನು,

” ಅದೂ ಅಲ್ಲಪ್ಪ ನೀನ್ಯಾರು ” ನಾನೊಬ್ಬ Y ಧರ್ಮದವನು,

” ಅದಲ್ಲಪ್ಪ ನೀನ್ಯಾರು “
ನಾನೊಬ್ಬ ಸರ್ಕಾರಿ ನೌಕರ,

” ಅಲ್ಲಪ್ಪ ನೀನ್ಯಾರು ” –
ಆ. !!! ,
ಅಯ್ಯೋ ನನಗೆ ಗೊತ್ತಿಲ್ಲ ಮಗನೇ, ನೀನೆ ಹೇಳು,
ನನಗೆ ತಲೆ ಕೆಟ್ಟೋಯ್ತು,

” ಹೇಳಿದ್ರೆ ಏನ್ ಕೊಡ್ತೀಯಾ? “
ನೀನು ಕೇಳಿದ ತಿಂಡಿ ಕೊಡುಸ್ತೀನಿ,

” O.K. ಹೇಳ್ಲಾ, ಹೇಳ್ಲಾ, ಹೇಳ್ಲಾ ನೀನೊಬ್ಬ ಮನುಷ್ಯ, ಸರೀನಾ “

ಅಪ್ಪ ಕ್ಷಣ ಮೌನವಾದ, ಕಣ್ಣಲ್ಲಿ ಸಣ್ಣಗೆ ನೀರು ಜಿನುಗಿತು,
ಮಗುವಿಗೆ ಆಶ್ಚರ್ಯ ಮತ್ತು ಭಯವಾಯಿತು,

” ಅಪ್ಪಾ, ನಾನೇನಾದ್ರು ತಪ್ಪು ಹೇಳಿದ್ನಾ, ನಿನಗೆ ಬೇಜಾರಾಯ್ತ “

ಇಲ್ಲಾ ಕಂದ, ತಪ್ಪು ಅರ್ಥಮಾಡಿಕೊಂಡಿರುವುದು ನಾನೇ, ಸರಿಯಾಗಿ ಹೇಳಿ ಅರ್ಥ ಮಾಡಿಸಿದವನು ನೀನು.
ಇಷ್ಟು ಸಣ್ಣ ವಿಷಯದಲ್ಲಿಯೇ ಗೊತ್ತಾಗುತ್ತದೆ, ಹಿರಿಯರಾದ ನಾವೆಷ್ಟು ತಪ್ಪು ಮಾಡಿದ್ದೇವೆಂದು,
ನಾನು ನಿಮ್ಮಪ್ಪನಲ್ಲ, ನೀನೇ ನಮ್ಮಪ್ಪ.

ನಿಷ್ಕಲ್ಮಶ ಮುಗ್ಧ ಮನಸ್ಸಿನ ಮಗುವಿನಿಂದ ಹೊರಟ ಸತ್ಯವನ್ನು,
ನಾವೆಲ್ಲಾ ನೆನಪಿಟ್ಟುಕೊಳ್ಳೋಣ,

ಏನಾದರೂ ಆಗಿ ಮೊದಲು ಮಾನವರಾಗಿ,
ಇದು ಪದಗಳಾಗುವುದು ಬೇಡ,
ಗೋಡೆಯ ಮೇಲಿನ ಬರಹವಾಗುವುದು ಬೇಡ,

ನಮ್ಮ ದಿನನಿತ್ಯದ ಚಟುವಟಿಕೆ, ಸಂಬಂಧಗಳ ಭಾಗವಾಗಲಿ.

ಆದ್ದರಿಂದಲೇ…….

ನಾವು ಧರ್ಮಗಳನ್ನು ಎಂದು ನೇರವಾಗಿ, ಅನವಶ್ಯಕವಾಗಿ ವಿರೋಧಿಸುವುದಿಲ್ಲ.

ಎಲ್ಲಾ ಧರ್ಮಗಳು ಒಳ್ಳೆಯದನ್ನೇ ಹೇಳುತ್ತವೆ ಮತ್ತು ಹೇಳಲೇಬೇಕು.
ಧರ್ಮದ ಶೇಕಡ 80/85 ರಷ್ಟು ಅಂಶಗಳು ಸಮಾಜಕ್ಕೆ ಅನುಕರಣೀಯ.

ಆದರೆ ಧರ್ಮಗಳಿಗೆ ಅಂಟಿದ ಬಹುದೊಡ್ಡ ರೋಗ ಶ್ರೇಷ್ಠತೆ.
ನಾವೇ ಶ್ರೇಷ್ಟರು, ಇಡೀ ವಿಶ್ವಕ್ಕೆ ನಾವೇ ಪವಿತ್ರರು ಎಂಬ ವಾಸಿಯಾಗದ ಖಾಯಿಲೆ ಅದು.

ಮೌಡ್ಯ, ಶೋಷಣೆ, ಅಸಮಾನತೆ, ವ್ಯಕ್ತಿ ಸ್ವಾತಂತ್ರ್ಯದ ಮೇಲೆ ದಾಳಿ ಅದರ ದೌರ್ಬಲ್ಯ.
ಅದರೂ ಬದಲಾವಣೆ ಒಪ್ಪುವ, ನಿರುಪದ್ರವಿ ಧರ್ಮವೇನಾದರೂ ಇದ್ದರೆ ಅನುಸರಿಸಬಹುದಿತ್ತು.

ಜೊತೆಗೆ ಧರ್ಮಕ್ಕಿಂತ ಅದರ ಅನುಯಾಯಿಗಳ ಅಜ್ಞಾನ, ದುರಹಂಕಾರ ಕ್ರೌರ್ಯ ಸಹಿಸಲಾಗುತ್ತಿಲ್ಲ.

ದೇವ ಮಂದಿರದ ಒಳಗೂ ಅಸಮಾನತೆ, ವಿಗ್ರಹ ಮುಟ್ಟಲೂ ಪಕ್ಷಪಾತ, ಊಟ ತಿಂಡಿಯಲ್ಲೂ ನಿಯಂತ್ರಣ, ಉಡುಗೆ ತೊಡುಗೆಗಳಲ್ಲೂ ನಿಯಂತ್ರಣ,
ಅಮಾನವೀಯ ಆಚರಣೆ, ಅಸಹಿಷ್ಣುತಾ ಮನೋಭಾವ, ಮತಾಂತರ, ಕೊನೆಗೆ ಧರ್ಮ ಒಪ್ಪದವರನ್ನು ಕೊಲ್ಲುವ ಮಟ್ಟದ ಕ್ರೌರ್ಯ.

ಪ್ರಕೃತಿ, ಕಾಲದ ಮುಂದೆ ಬದುಕಿನ ಶ್ಯೆಲಿ ಹೇಳುವ ಧರ್ಮ ಒಂದು ಸಣ್ಣ ಅಂಶ ಅಷ್ಟೆ.

ಧರ್ಮ ಕಾಲನ ಹೊಡೆತಕ್ಕೆ ಸಿಕ್ಕಿ ನಿಂತ ನೀರಾಗಿ ರಾಡಿಯಾಗಿದೆ, ಕೆಟ್ಟು ಹೋಗಿದೆ.

ಕ್ಷಮಿಸಿ,
ಅಶುದ್ಧವಾಗಿರುವುದು ಧರ್ಮವಲ್ಲ ಅದರ ಕುರುಡು ಹಿಂಬಾಲಕರು.

ಧರ್ಮದ ವಿಫಲತೆಯೊಂದಿಗೆ ಹುಟ್ಟಿಕೊಂಡ ನಾಗರಿಕ ಸಮಾಜದ ಪರ್ಯಾಯವೇ ಕಾನೂನು.

ಇಂದು ವಿಶ್ವವನ್ನು ಧರ್ಮವೆಂಬ ಮೌಡ್ಯ ನಾಶಪಡಿಸುತ್ತಿದ್ದರೆ, ಅಷ್ಟೋ ಇಷ್ಟೋ,
ನೆಮ್ಮದಿಯಾಗಿ ಇಟ್ಟಿರುವುದು ಕಾನೂನು ಮಾತ್ರವೇ.

ಊಹಿಸಿಕೊಳ್ಳಿ,
ಕಾನೂನು ಇಲ್ಲದ ವಿಶ್ವ ಕೆಲವೇ ವರ್ಷಗಳಲ್ಲಿ ನಾಶವಾಗುತ್ತದೆ. ಆದರೆ
ಧರ್ಮವಿಲ್ಲದೆಯೂ ಸಮಾಜ ಖಂಡಿತವಾಗಿ ಉತ್ತಮವಾಗಿಯೇ ಇರುತ್ತದೆ.

ಮತ್ತೊಮ್ಮೆ, ಮಗದೊಮ್ಮೆ ಮೌನವಾಗಿ ಯೋಚಿಸಿ,

ಕನಿಷ್ಠ ಬರವಣಿಗೆಯಲ್ಲಾದರೂ ಎಲ್ಲರನ್ನೂ ಸಮಾನಾಗಿ ಕಾಣುವ ಕಾನೂನು ಮುಖ್ಯವೋ,
ಅಸಮಾನತೆ, ಅರಾಜಕತೆ, ಮೌಡ್ಯ ನಂಬುವ ಧರ್ಮ ಮುಖ್ಯವೋ.

ನಮಗೆ ಬಹಳಷ್ಟು ಸ್ವಾತಂತ್ರ್ಯ ನೀಡಿರುವ ಕಾನೂನು ಗೌರವಿಸಬೇಕೋ,
ನಮ್ಮ ಸ್ವಾತಂತ್ರ್ಯ ಕಸಿದು ಗುಲಾಮರನ್ನಾಗಿ ಮಾಡುವ ಧರ್ಮ ಗೌರವಿಸಬೇಕೋ,

ಧರ್ಮ ನಿಮ್ಮ ನಂಬಿಕೆ, ಬದುಕಿಗೆ ಅತಿಮುಖ್ಯ ಎಂದಾದಲ್ಲಿ, ಅದನ್ನು ನಿಮ್ಮ, ಖಾಸಗಿ ಬದುಕಿನಲ್ಲಿ, ಆಚರಣೆಗಳಲ್ಲಿ, ಅಂತರಂಗದಲ್ಲಿ ಅನುಸರಿಸಿ,
ಇತರರ ಮೇಲೆ ಅದನ್ನು ಬಲವಂತ ಮಾಡಬೇಡಿ.

( ಧರ್ಮ ಎಂದರೆ ಒಳ್ಳೆಯತನ. ಆದರೆ ಇಲ್ಲಿ ಧರ್ಮ ಎಂಬುದನ್ನು ಮತ ಎಂಬುದಕ್ಕೆ ( ಹಿಂದೂ, ಇಸ್ಲಾಂ, ಸಿಖ್, ಕ್ರಿಶ್ಚಿಯನ್, ಜೈನ, ಬೌದ್ಧ, ಬಸವ, ಪಾರ್ಸಿ, ಯಹೂದಿ ಪರ್ಯಾಯವಾಗಿ ಉಪಯೋಗಿಸಲಾಗಿದೆ )

  • ವಿವೇಕಾನಂದ. ಹೆಚ್.ಕೆ.
Share This Article
Leave a comment