November 21, 2024

Newsnap Kannada

The World at your finger tips!

education

ವಿದ್ಯಮಾನ: ನೂತನ ಶಿಕ್ಷಣ ನೀತಿ; ಕನ್ನಡ ನಿರ್ಲಕ್ಷ್ಯದ ಸಾಧ್ಯತೆ

Spread the love
Kodase pic for Blurb
ಲಕ್ಷ್ಮಣ ಕೊಡಸೆ.

ಕೇಂದ್ರ ಸರ್ಕಾರ ರೂಪಿಸುತ್ತಿರುವ ನೂತನ ಶಿಕ್ಷಣ ನೀತಿಯ ಕರಡಿನಂತೆ ಒಂದರಿಂದ ಐದನೆಯ ವರ್ಷದವರೆಗಿನ ಶಿಕ್ಷಣ ಸಾಧ್ಯವಾದರೆ ಪ್ರಾದೇಶಿಕ ಭಾಷೆಯಲ್ಲಿ ಆಗಬಹುದು ಎಂಬ ಪ್ರಸ್ತಾವವೇ ವಿದ್ಯಾರ್ಥಿಗಳ ಕೊರತೆಯಿಂದ ಸೊರಗುತ್ತಿರುವ ರಾಜ್ಯದ ಸರ್ಕಾರಿ ಶಾಲೆಗಳ ಭವಿಷ್ಯವನ್ನು ಇನ್ನಷ್ಟು ಮಸುಕು ಮಾಡುವ ಸಂಭವವಿದೆ. ಮಕ್ಕಳ ಪ್ರಾರಂಭಿಕ ಶಿಕ್ಷಣ ಮಾತೃಭಾಷೆಯಲ್ಲಿ ಇಲ್ಲವೇ ಪ್ರದೇಶದ ಭಾಷೆಯಲ್ಲಿ ಕಡ್ಡಾಯವಾಗತಕ್ಕದ್ದು ಎಂಬ ಖಚಿತ ಸೂಚನೆ ಇದ್ದರೆ ಮಾತ್ರ ರಾಜ್ಯದ ಸರ್ಕಾರಿ ಶಾಲೆಗಳು ಉಳಿದುಕೊಳ್ಳುತ್ತವೆ.
ತಮ್ಮ ಮಕ್ಕಳು ಯಾವ ಮಾಧ್ಯಮದಲ್ಲಿ ಶಿಕ್ಷಣ ಪಡೆಯಬೇಕು ಎಂಬ ಬಗ್ಗೆ ಪೋಷಕರು ನಿರ್ಧರಿಸಬೇಕು ಎಂದು ಕೆಲವು ವರ್ಷಗಳ ಹಿಂದೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಿಂದ ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಪೋಷಕರು ಮುಗಿ ಬಿದ್ದ ಕಾರಣ ರಾಜ್ಯದ ಸರ್ಕಾರಿ ಶಾಲೆಗಳು ಮಕ್ಕಳ ಪ್ರವೇಶ ಇಲ್ಲದೆ ಮುಚ್ಚುವ ಸ್ಥಿತಿಗೆ ಬಂದಿದ್ದವು. ಪುಸ್ತಕ, ಸಮವಸ್ತ್ರ, ಮಧ್ಯಾಹ್ನಕ್ಕೆ ಬಿಸಿ ಊಟ, ಓಡಾಡಲು ಸೈಕಲ್ ಇತ್ಯಾದಿ ಎಲ್ಲ ಸೌಲಭ್ಯಗಳನ್ನು ಉಚಿತವಾಗಿ ಒದಗಿಸುತ್ತಿದ್ದರೂ ಸರ್ಕಾರಿ ಶಾಲೆಗಳಿಗೆ ಗ್ರಾಮೀಣ ಭಾಗದಲ್ಲಿಯೂ ಸ್ವಲ್ಪ ಅನುಕೂಲವಂತ ಪೋಷಕರು ಮಕ್ಕಳನ್ನು ಕಳಿಸಲು ಹಿಂಜರಿಯುವ ಸ್ಥಿತಿ. ಸರ್ಕಾರಿ ಶಾಲೆಗಳ ಗುಣಮಟ್ಟ ಸುಧಾರಣೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ವಿಶೇಷ ಅಧ್ಯಯನ ನಡೆಸಿ ಕೈಗೊಂಡ ಕ್ರಮಗಳಿಂದ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ಸುಧಾರಿಸಿದೆ. ನೂತನ ಶಿಕ್ಷಣ ನೀತಿಯಲ್ಲಿ ಸಾಕಷ್ಟು ಬದಲಾವಣೆಗಳನ್ನು ತರಲಾಗಿದ್ದರೂ ಪ್ರಾರಂಭಿಕ ಹಂತದ ಶಿಕ್ಷಣ ಪ್ರಾದೇಶಿಕ ಭಾಷೆಯಲ್ಲಿ ಕಡ್ಡಾಯಗೊಳಿಸದೆ ಇರುವುದು ಕನ್ನಡಕ್ಕೆ ಕುತ್ತಾಗುವ ಆತಂಕ ಮೂಡಿಸಿದೆ.
ಕರ್ನಾಟಕದಲ್ಲಿ ಕನ್ನಡ, ಮಹಾರಾಷ್ಟ್ರದಲ್ಲಿ ಮರಾಠಿ, ಆಂಧ್ರಪ್ರದೇಶದಲ್ಲಿ ತೆಲುಗು, ತಮಿಳುನಾಡಲ್ಲಿ ತಮಿಳು ಭಾಷೆಗಳು ಮಕ್ಕಳ ಪ್ರಾಥಮಿಕ ಹಂತದ ಶಿಕ್ಷಣದಲ್ಲಿ ಕಡ್ಡಾಯ ಮಾಧ್ಯಮವಾಗದಿದ್ದರೆ ಆವುಗಳಿಗೆ ಉಳಿಗತಿಯಿಲ್ಲ. ತಮಿಳುನಾಡಿನಲ್ಲಿ ಸಮಸ್ಯೆ ಇಲ್ಲ, ಆದರೆ, ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದ ಎರಡೂ ರಾಜ್ಯಗಳಲ್ಲಿ ಪ್ರಾದೇಶಿಕ ಭಾಷೆಗಳು ಜನತೆಯ ಇಂಗ್ಲಿಷ್ ಮಾಧ್ಯಮದ ಮೋಹದಲ್ಲಿ ಕಡೆಗಣನೆಗೆ ಒಳಗಾಗುತ್ತಿವೆ. ಮೊದಲ ಹತ್ತು ವರ್ಷದ ಶಿಕ್ಷಣ ಮಾತೃಭಾಷೆಯಲ್ಲಿ ನಡೆದರೆ ವಿಷಯ ಗ್ರಹಿಕೆ ಚೆನ್ನಾಗಿ ಆಗಿ ಮುಂದೆ ಸ್ವತಂತ್ರ ಚಿಂತನೆಯಲ್ಲಿ ಹೊಸ ಆವಿಷ್ಕಾರಗಳಿಗೆ ಒತ್ತಾಸೆ ಆಗುತ್ತದೆ ಎಂಬುದು ಶಿಕ್ಷಣ ತಜ್ಞರ ಅಭಿಮತ.
ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಈ ನಿಟ್ಟಿನಲ್ಲಿ ಸಮಾಲೋಚನೆ ಸಭೆಗಳನ್ನು ನಡೆಸುತ್ತಾ ಕನ್ನಡವೇ ಪ್ರಾಥಮಿಕ ಹಂತದ ಮೊದಲ ಐದು ವರ್ಷಗಳಲ್ಲಿ ಶಿಕ್ಷಣ ಮಾಧ್ಯಮವಾಗುವುದಕ್ಕೆ ಮತ್ತು ಅದರ ಮೂಲಕ ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಶ್ರಮಿಸುತ್ತಿದೆ. ಪ್ರಾಧಿಕಾರವು ಸರ್ಕಾರದ ಅಂಗವೇ ಆಗಿರುವುದರಿಂದ ಅದರ ಪ್ರಯತ್ನಗಳಿಗೆ ನಿರ್ದಿಷ್ಟ ಮಿತಿಯೂ ಇರುತ್ತದೆ. ನಾಡಿನ ಹಿರಿಯ ಸಾಹಿತಿಗಳು, ಶಿಕ್ಷಣ ತಜ್ಞರು, ಕನ್ನಡ ಪರ ಚಿಂತಕರು ನೂತನ ಶಿಕ್ಷಣ ನೀತಿಯಲ್ಲಿ ಪ್ರಾಥಮಿಕ ಹಂತದ ಶಿಕ್ಷಣ ಮಾಧ್ಯಮ ಕಡ್ಡಾಯವಾಗಿ ರಾಜ್ಯದ ಭಾಷೆಯೇ ಆಗಬೇಕು ಎಂದು ಕೇಂದ್ರದ ಮೇಲೆ ಒತ್ತಾಯ ಹೇರಿದರೆ ಅದು ಶಿಕ್ಷಣ ನೀತಿಯಲ್ಲಿ ಸೇರ್ಪಡೆಯಾಗುತ್ತದೆ. ಸಾಹಿತಿಗಳು ನಾಡಿನ ಸಾಕ್ಷಿಪ್ರಜ್ಞೆಯಂತೆ ಎಂಬ ಅಭಿಪ್ರಾಯ ಆಳುವವರಲ್ಲಿ ಇರುವ ಕಾರಣ ಶಿಕ್ಷಣ ಮಾಧ್ಯಮಕ್ಕೆ ಸಂಬಂಧಿಸಿ ನಾಡಿನ ಎಲ್ಲ ಭಾಗದ ಸಾಹಿತಿಗಳ ಒತ್ತಾಯ ಸರ್ಕಾರದ ನೀತಿ ನಿರೂಪಣೆಯಲ್ಲಿ ಪ್ರಭಾವ ಬೀರುತ್ತದೆ.
ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಎಂದು ಬಿಂಬಿಸಿಕೊಳ್ಳುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತು ಈ ವೇಳೆಗಾಗಲೇ ಇಂಥ ಅಭಿಪ್ರಾಯ ರೂಪಿಸುವ ಸಮಾಲೋಚನಾ ಸಭೆಗಳನ್ನು ಆರಂಭಿಸಿ ಸರ್ಕಾರದ ಮೇಲೆ ಕನ್ನಡಪರವಾದ ಅಭಿಪ್ರಾಯವನ್ನು ಮೂಡಿಸಬಹುದಿತ್ತು. ಆದರೆ ಪರಿಷತ್ತಿನ ಈಗಿನ ಆಡಳಿತ ಮಂಡಲಿಗೆ ಕನ್ನಡವನ್ನು ಪ್ರಾಥಮಿಕ ಹಂತದಲ್ಲಿ ಶಿಕ್ಷಣ ಮಾಧ್ಯಮವಾಗಿ ಶಿಕ್ಷಣ ನೀತಿಯಲ್ಲಿ ಅಳವಡಿಸುವಂತೆ ಒತ್ತಾಯಿಸುವುದಕ್ಕಿಂತಲೂ ರಾಷ್ಟ್ರಕವಿ ಬಿರುದನ್ನು ಪ್ರಾರಂಭಿಸಬೇಕು ಎಂಬುದು ಆದ್ಯತೆಯ ವಿಷಯವಾಗಿದೆ. ಬೆಂಗಳೂರಿನ ಅನೇಕ ಹಿರಿಯ ಸಾಹಿತಿಗಳಿಗೆ ಶಿಕ್ಷಣದ ಪ್ರಾಥಮಿಕ ಹಂತದಲ್ಲಿ ಕನ್ನಡವೇ ಕಡ್ಡಾಯ ಮಾಧ್ಯಮವಾಗಬೇಕು ಎಂಬುದಕ್ಕಿಂತಲೂ ಕೇಂದ್ರ ಸಾಹಿತ್ಯ ಅಕಾಡೆಮಿಯ ನಿವೃತ್ತ ಅಧಿಕಾರಿಗೆ ಪಿಂಚಣಿ ಮತ್ತಿತರ ನಿವೃತ್ತಿ ಸೌಲಭ್ಯಗಳನ್ನು ಕೊಡಿಸುವುದರಲ್ಲಿ ಆಸಕ್ತಿ ಪ್ರಕಟವಾಗಿದೆ.
ಆದ್ದರಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಇಲ್ಲವೇ ನಾಡಿನ ಸಾಹಿತಿಗಳ ಒತ್ತಾಸೆಯನ್ನು ನಿರೀಕ್ಷೆ ಮಾಡದೆ, ಅಪ್ಪಟ ಕನ್ನಡ ಪ್ರದೇಶದಿಂದಲೇ ಬಂದಿರುವ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಅವರು ನೂತನ ಶಿಕ್ಷಣ ನೀತಿಯಲ್ಲಿ ಪ್ರಾರಂಭಿಕ ಹಂತದ ಶಿಕ್ಷಣ ಮಾಧ್ಯಮ ರಾಜ್ಯದಲ್ಲಿ ಕನ್ನಡವೇ ಆಗಿರುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವುದು ಅವಶ್ಯಕವಾಗಿದೆ.

Copyright © All rights reserved Newsnap | Newsever by AF themes.
error: Content is protected !!