ಉತ್ತರಾಖಂಡ್​: ಹಿಮದ ಬಂಡೆ ಉರುಳಿ ಡ್ಯಾಂ ಹಾನಿ – ಪ್ರವಾಹದಿಂದ 100-150 ಸಾವು, ನೋವಿನ ಶಂಕೆ ?

Team Newsnap
1 Min Read

ಉತ್ತರಾಖಂಡ್​​ನ ಚಮೋಲಿ ಜಿಲ್ಲೆಯ ಋಷಿಗಂಗಾ ನದಿಯ ವಿದ್ಯುತ್ ಯೋಜನೆ ಅಣೆಕಟ್ಟು ಭಾನುವಾರ ಮುರಿದು ಬಿದ್ದಿದೆ.

ಅಲಕಾನಂದ ನದಿಯ ಹರಿವು ಹೆಚ್ಚಾಗಿದೆ. ದಿಢೀರ್ ಪ್ರವಾಹದಿಂದ 100 ರಿಂದ 150 ಮಂದಿ ಸಾವನ್ನಪ್ಪಿರುವ ಅಥವಾ ಗಾಯಗೊಂಡಿರುವ ಶಂಕೆ ಇದೆ ಎಂದು ಉತ್ತರಾಖಂಡ್​ ಮುಖ್ಯಕಾರ್ಯದರ್ಶಿ ಓಂ ಪ್ರಕಾಶ್​ ಹೇಳಿದ್ದಾರೆ.

ಹಿಮದ ಬಂಡೆ ಉರುಳಿ ಆಣೆಕಟ್ಟೆ ಮೇಲೆ ಬಿದ್ದಿದೆ:

ತಪೋವನದಲ್ಲಿ ಹಿಮದ ಬಂಡೆಯ ಒಂದು ಭಾಗ ಬೆಟ್ಟದಿಂದ ಮುರಿದು ಅಣೆಕಟ್ಟಿನ ಮೇಲೆ ಬಿದ್ದಿದೆ ಎಂದು ಹೇಳಲಾಗುತ್ತಿದೆ.

ಇದರಿಂದಾಗಿ ಅಣೆಕಟ್ಟಿನ ಒಂದು ಭಾಗಕ್ಕೆ ಹಾನಿಯಾಗಿದೆ. ಪರಿಣಾಮ ಡ್ಯಾಂ ನೀರು ವೇಗವಾಗಿ ಅಲಕಾನಂದ ನದಿಗೆ ಹರಿದು ಹೋಗುತ್ತಿದೆ. ಘಟನೆ ಕುರಿತು  ಮಾಹಿತಿ ಪಡೆದ ಜಿಲ್ಲಾಡಳಿತ ಮತ್ತು ಪೊಲೀಸ್ ತಂಡಗಳು ಸ್ಥಳಕ್ಕೆ ಧಾವಿಸಿವೆ.

ಅಲಕಾನಂದ ನದಿ ತೀರದ ಜನರಿಗೆ, ಋಷಿಕೇಶ, ಹರಿದ್ವಾರ ಸೇರಿದಂತೆ ಸುತ್ತಮುತ್ತಲ ಬಯಲು ಪ್ರದೇಶದ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ  ಎಚ್ಚರಿಕೆ ನೀಡಲಾಗಿದೆ.

ಪ್ರವಾಹದಲ್ಲಿ ಬಿಆರ್​​ಒ ನಿರ್ಮಿಸುತ್ತಿರುವ ಒಂದು ಸೇತುವೆಗೆ ಹಾನಿಯಾಗಿದೆ. ಋಷಿಗಂಗಾ ಯೋಜನೆಯ ಮೇಲ್ಭಾಗದಲ್ಲಿ ಹಾನಿ ಉಂಟಾಗಿದೆ.

ಚಮೋಲಿ, ಜೋಶಿಮಠ್​​ ಮತ್ತು ಇತರ ತಗ್ಗುಪ್ರದೇಶಕ್ಕೆ ಹಾನಿ ಉಂಟಾಗಲಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಡಿ.ಜಿ ಎಸ್​.ಎನ್​ ಪ್ರಧಾನ್ ಹೇಳಿದ್ದಾರೆ.

ಜೋಶಿ ಮಠದಲ್ಲಿ ಈಗಾಗಲೇ ಸ್ಟೇಟ್​ ಡಿಸಾಸ್ಟರ್ ರೆಸ್ಪಾನ್ಸ್​ ಫೋರ್ಸ್​​(ಎಸ್‌ಡಿಆರ್‌ಎಫ್) ತಂಡಗಳನ್ನು ನಿಯೋಜಿಸಲಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಡೆಹ್ರಾಡೂನ್‌ನಿಂದ ಜೋಶಿಮಠಕ್ಕೆ ಸ್ಥಳಾಂತರಗೊಂಡಿದೆ. ದೆಹಲಿಯಿಂದ ಡೆಹ್ರಾಡೂನ್‌ ಹಾಗೂ ಅಲ್ಲಿಂದ ಜೋಶಿಮಠಕ್ಕೆ ಇನ್ನೂ 3-4 ತಂಡಗಳನ್ನ ಏರ್‌ಲಿಫ್ಟ್ ಮಾಡಲಾಗುತ್ತದೆ ಎಂದು ಪ್ರಧಾನ್ ತಿಳಿಸಿದ್ದಾರೆ.

Share This Article
Leave a comment