ಚೈತ್ರದಲ್ಲಿ ಪ್ರಕೃತಿ ತನಗೆ ತಾನೇ ತಳಿರಿನ ತೋರಣವನ್ನು ಹೊದ್ದುಕೊಳ್ಳುತ್ತಾಳೆ. ಯಾವುದೋ ಜಂಜಡದಲ್ಲಿ ಮೈಮರೆತು ಜಡವಾಗಿ ತೂಕಡಿಸುತ್ತಿದ್ದ ಪ್ರಕೃತಿ ಒಮ್ಮೆಲೇ ಏನೋ ನೆನಪಾದಂತೆ ಮೈಕೊಡವಿಕೊಂದೆದ್ದು ಚಿಗುರುತ್ತಾಳಲ್ಲಾ ಆ ವಿಸ್ಮಯಕ್ಕೆ ಎಣೆಯೇ?
ಅಂತರಂಗದೊಳಗೆ ಆಧ್ಯಾತ್ಮಿಕತೆಯನ್ನೂ, ಹೊಸ ಹುರುಪನ್ನೂ ಬಿತ್ತುವ ಕಾಲಮಾನ. ಕೆಂದಳಿರ ಹೊಸ ಉಡುಗೆ ಉಟ್ಟ ನಿಸರ್ಗದೇವತೆ ನಮ್ಮೊಳಗಿನ ಹಳೆಯ ಕಹಿಯನ್ನು ಕಳಚಿ ಹೊಸ ಸವಿಯನ್ನು ತೊಡುವಂತೆ ಪ್ರೇರೇಪಿಸುತ್ತಾಳೆ. ಮಾವಿನ ಚಿಗುರನುಂಡು ಮೆಲುದನಿಯಲ್ಲಿ ಇನಿದಾಗಿ ಹಾಡುವ ಹಕ್ಕಿ ಪಕ್ಷಿಗಳ ರವ ಹೃದಯದಲ್ಲಿ ಹೊಸ ಭಾಷ್ಯವನ್ನೇ ಬರೆಯುತ್ತದೆ. ಇಡೀ ಪ್ರಕೃತಿ ನವವಧುವಿನಂತೆ ಸಿಂಗರಗೊಳ್ಳುತ್ತಾಳೆ. ಅವಳ ಕೆಂದಳಿರ ಮುಖದಿಂದಲೇ ನಾವು ಸಡಗರಗೊಳ್ಳುವುದು.
“ಯಾರು ಹೇಳಿಕೊಟ್ಟರೇ ನಿನಗೆ
ಶಿಶಿರದಲಿ ನಿರ್ಮೋಹಿಯಂತೆ
ಎಲೆಗಳ ಉದುರಿಸಿ ಕಣ್ಣೀರಿಡರೆ ನಿಲ್ಲುವುದನು?
ಯಾರು ಹೇಳಿಕೊಟ್ಟರೇ ನಿನಗೆ
ವರುಷ ವರುಷವೂ ಇದೇ ಋತುವಲಿ
ಗರ್ಭಧರಿಸಿ ಮಕ್ಕಳ ಹಡೆಯಲು?
ಯಾರು ಹೇಳಿಕೊಟ್ಟರೇ ನಿನಗೆ
ಚಿರಯೌವ್ವನೆಯಂತೆ ಉತ್ಸಾಹದಿಂ
ಇದೇ ಕಾಲದಲಿ ಚಿಗುರಿ ನಲಿಯಲು?” ಎಂಬ ಕವನವನ್ನು ಚೈತ್ರವೇ ನನ್ನ ಕೈಹಿಡಿದು ಅಚ್ಚರಿಯ ಚಿತ್ರವನ್ನು ಬರೆಸುತ್ತಾಳೆ.
ಕಷ್ಟ ಬಂದಾಗ ಕುಗ್ಗದೆ, ಸುಖ ಬಂದಾಗ ಹಿಗ್ಗದೆ ಸಮಾನ ಮನಸ್ಕತೆಯನ್ನು ಬೆಳೆಸಿಕೊಳ್ಳಬೇಕೆಂಬ ಪಾಠವನ್ನು ಶಿಶಿರ ಮತ್ತು ವಸಂತ ನಮಗೆ ಕಲಿಸುತ್ತಾರೆ.
ಹೊಸ ವರುಷವು ಬಹುದೆಂದಿಗೆ?
ಮಹಾಪುರುಷ ತರುವಂದಿಗೆ
ಅಲ್ಪಾಹಂಕಾರಗಳ ನುಂಗುತಲಿ
ಮಹಾಹಂಕಾರದೊಂದಿಗೆ- ಎನ್ನುತ್ತಾರೆ ಪು ತಿ ನ.
ಯುಗಾದಿಯು ಬೇಸಿಗೆಯ ಆರಂಭದಲ್ಲಿ ಬರುವುದರಿಂದ ಬೇಸಿಗೆಯಲ್ಲಿ ಬರುವ ಅನೇಕ ಸಾಂಕ್ರಾಮಿಕ ರೋಗಗಳಿಗೂ ಕಾರಣವಾಗುತ್ತದೆಯೆಂದೇ ದೇಹಾರೋಗ್ಯದ ಜತನಕ್ಕಾಗಿ ಆರೋಗ್ಯಪ್ರದಾಯಕ ಬೇವನ್ನೂ ಬೆಲ್ಲವನ್ನೂ ಒಟ್ಟಿಗೆ ಬೆರೆಸಿ ಪ್ರಸಾದವೆಂದು ಕೊಡಲಾಗುತ್ತದೆ.
ಬದುಕು ಎಂದೂ ಸಿಹಿ ಕಹಿಗಳ ಸಮ್ಮಿಶ್ರಣವೇ. ಸಿಹಿ ಅತಿಯಾದರೂ ಸಹಿಸಲಸಾಧ್ಯ. ಕಹಿ ಅತಿಯಾದರೂ ಸಹಿಸಲಸಾಧ್ಯ. ಸಿಹಿ ಕಹಿಗಳ ಹದವಾದ ಸಮ್ಮಿಶ್ರಣದಂತೆಯೇ ಬದುಕಿನಲ್ಲಿ ಸುಖ ದುಃಖಗಳೂ ಹಿತ ಪ್ರಮಾಣದಲ್ಲಿದ್ದರೆ ಬಾಳು ಸಹ್ಯವಾಗುತ್ತದೆ.
ಅದಕ್ಕೇ ಕುವೆಂಪು ಅವರು
“ಮಾವಿನ ಬೇವಿನ ತೋರಣ ಕಟ್ಟು,
ಬೇವುಬೆಲ್ಲಗಳನೊಟ್ಟಿಗೆ ಕುಟ್ಟು!
ಜೀವನವೆಲ್ಲಾ ಬೇವೂಬೆಲ್ಲ;
ಎರಡೂ ಸವಿವನೆ ಕಲಿ ಮಲ್ಲ!” ಎನ್ನುತ್ತಾರೆ.
ಈ ದಿನ ಬೆಲ್ಲವನ್ನೂ ಬೇವನ್ನೂ ಸ್ವೀಕರಿಸುವಾಗ ಶತಾಯು: ವಜ್ರದೇಹಾಯ ಸರ್ವಸಂಪತ್ಕರಾಯಚ ಸರ್ವಾರಿಷ್ಟ ವಿನಾಶಾಯ ನಿಂಬಕಂದಳ ಭಕ್ಷಣಂ ಎಂದು ಹೇಳಿ ತಿನ್ನುವುದು ರೂಢಿ. ಬೇವು ಬೆಲ್ಲದಂತೆಯೇ ಬಾಳಿನಲ್ಲಿ ಬರುವ ಸಿಹಿ ಕಹಿಗಳನ್ನು ಸಮಾನವಾಗಿ ಸ್ವೀಕರಿಸುತ್ತೇನೆಂಬ ದೃಢ ನಿರ್ಧಾರ ಮಾಡುವುದು. ಸುಖೇ ದುಃಖೇ ಸಮೇಕೃತ್ವಾ ಲಾಭಾ ಲಾಭೌ ಜಯಾ ಜಯಃ ಎನ್ನುವ ಶ್ರೀಕೃಷ್ಣನ ಮಾತೂ ಇದಕ್ಕೆ ಇಂಬುಕೊಟ್ಟಂತೆಯೇ ಇದೆ. ಸತ್ವ ಮತ್ತು ರಜೋಗುಣದ ಬೆಸುಗೆಯಾಗಿಯೂ ಯಾವ ಗುಣ ಯಾವಾಗ ಮೇಲುಗೈ ಸಾಧಿಸಬೇಕೆಂಬುದನ್ನು ನಮಗೆ ನಾವೇ ನಿರ್ಧರಿಸಿಕೊಳ್ಳಬೇಕಾದ ಪರ್ವಕಾಲವಿದು.
ಇದ್ದುದೆಲ್ಲವು ಬಿದ್ದುಹೋದರು
ಎದ್ದು ಬಂದಿದೆ ಸಂಭ್ರಮ.
ಕಿತ್ತುಕೊಂಡರು ಕೊಟ್ಟು ಸುಖಿಸುವ
ಸೋಲನರಿಯದ ಸಂಗಮ.
ಎಂದು ಜಿ.ಎಸ್.ಎಸ್ ಅವರು ಹೇಳುವ ಈ ಕವನಕ್ಕಿಂತ ಬೇರೊಂದು ಭಾಷ್ಯ ಬೇಕೇ ಸಹಬಾಳ್ವೆಯ ಸಾಧಿಸಲು?
ಮನಸ್ಸು, ಭಾವನೆ, ಬುದ್ಧಿಗಳ ನಡುವಿನ ತಾಕಲಾಟಕ್ಕೆ ಯುಗಾದಿಯೊಂದು ಉತ್ತರ. ಆಗಾಗ ಜಡವಾಗುವ ದೇಹ ಮನಸು ಭಾವ ಬುದ್ಧಿಗಳು ಹೊಸತನಕ್ಕೇಕೆ ಒಡ್ಡಿಕೊಳ್ಳಬೇಕು, ಹೊಸತನಕ್ಕೇಕೆ ತೆರೆದುಕೊಳ್ಳಬೇಕು ಎಂಬುಕ್ಕೆ ಚೈತ್ರದ ಚಿಗುರು ಉತ್ತರ ಹೇಳುತ್ತದೆ. ತನ್ನದು – ತನ್ನವರನ್ನೆಲ್ಲ ಕಳೆದುಕೊಂಡಂತೆ ಕಂಡರೂ ಧೃತಿಗೆಡದೆ ಮತ್ತೆ ಹೋರಾಡಿ ಚಿಗುರುವ ಚೈತನ್ಯದೊಂದಿಗೆ ಮರುಹುಟ್ಟು ಪಡೆವ ಪ್ರಕ್ರಿಯೆಯನ್ನು ಚೈತ್ರದಿಂದ ನಾವೆಲ್ಲರೂ ಕಲಿಯಬೇಕಿದೆ.
ಈ ಶೋಭಕೃತ್ ನಾಮ ಸಂವತ್ಸರ ಸಕಲರಿಗೂ ಶುಭವನ್ನೇ ತರಲಿ.
More Stories
ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಗೊ.ರು.ಚ ಆಯ್ಕೆ
ಮೈಸೂರು ಜಿಲ್ಲೆಯ ಸಂಕ್ಷಿಪ್ತ ಮಾಹಿತಿಯ ಕವನ
ರಾಮನಗರ ಜಿಲ್ಲೆಯ ಸಂಕ್ಷಿಪ್ತ ಪರಿಚಯದ ಕವನ (ಜಿಲ್ಲೆ ೨೯)