December 22, 2024

Newsnap Kannada

The World at your finger tips!

two faces

ಒಂದೇ ನಾಣ್ಯಕ್ಕೆ ಎರಡು ಮುಖಗಳು(ಬ್ಯಾಂಕರ್ಸ್ ಡೈರಿ)

Spread the love

ಬ್ಯಾಂಕು ಜೀವವಿಲ್ಲದ ಹಣಕಾಸಿನ ವ್ಯವಹಾರದ ಸಂಸ್ಥೆಯಾದರೂ ವ್ಯವಹಾರ ನಡೆಯುವುದು ಮನುಷ್ಯರ ಜೊತೆಯಲ್ಲಿಯೇ ಅಲ್ವ? ಬಂದು ಹೋಗುವವರ ನಡುವೆ ಮನುಷ್ಯರ ನಡುವೆ ಇರಬಹುದಾದ ಸಹಜ ಸಂವಾದ ಇದ್ದೇ ಇರುತ್ತದೆ. ಅಂಥ ಸಂವಾದದಿಂದಲೇ ಜೀವಕಳೆಯಲ್ಲವೇ?

ಒಂದೇ ಸಮ ಮಳೆ ಸುರಿಯಲು ಶುರುವಾಯಿತು. ಇನ್ನೇನು ಗ್ರಾಹಕರಿಗೆ ಬ್ಯಾಂಕು ಮುಚ್ಚುವ ಸಮಯ, ನಮ್ಮ ಗ್ರಾಹಕಿಯೊಬ್ಬರು ನೆನೆಯುತ್ತ ಓಡಿಬಂದರು. ಬಹಳ ಬಾರಿ ಬಂದು ಈಗ ಸಲುಗೆ ಮೂಡಿತ್ತು. ‘ಮಳೆ ಬರುವ ಸೂಚನೆಯೇ ಇರಲಿಲ್ಲ ಅಂತ ಮನೆಯಿಂದ ಹೊರಟೆ, ಇನ್ನೇನು ತಲುಪಬೇಕೆನುವಷ್ಟರಲ್ಲಿ ಮಳೆ ಬಂತು. ಎಫ್.ಡಿ ಮಾಡಬೇಕಿತ್ತು. ವಾರದಿಂದ ಅಂದುಕೊಳ್ಳುತ್ತಿದ್ದೆ ಬರೋಕಾಗ್ಲಿಲ್ಲ’ ಎಂದರು. ನಾಮಿನೇಷನ್ ಯಾರಿಗೆ ಎಂದು ಕೇಳಿದೆ. ‘ಈಗಿನ ಕಾಲದಲ್ಲಿ ಮಕ್ಕಳನ್ನು ನಂಬೋಕಾಗುತ್ತಾ? ನಮ್ಮ ಯಜಮಾನರ ಹೆಸರಿಗೇ ಮಾಡಿ’ ಎಂದು ಹೇಳಿ ‘ಶುಭಾ ನಮ್ಮತ್ತಿಗೆ ಸುಪ್ರಭ (ಹೆಸರು ಬದಲಿಸಲಾಗಿದೆ) ಗೊತ್ತಲ್ಲಾ ಅವರಿಗೆ ಪಾಶ್ರ್ವವಾಯು ಆಗಿ ನಾಲ್ಕು ತಿಂಗಳಿಂದ ಮಲಗಿಬಿಟ್ಟಿದ್ದಾರೆ. ಭಾವಂಗೂ (ಸುಪ್ರಭ ಅವರ ಗಂಡ) ಮೈಯ್ಯಲ್ಲಿ ತೀರಾ ಚೆನ್ನಾಗಿಲ್ಲ. ಆಗೆಲ್ಲ ಭಾವ ಅತ್ತಿಗೇನ ನೋಡಿಕೊಳ್ತಿದ್ರು. ಈಗ ಅದೂ ಆಗಲ್ಲ. ಅಷ್ಟು ಚೆನ್ನಾಗಿದ್ದವರು ಇಬ್ಬರೂ ಹೀಗೆ ಮಲಗಿಬಿಟ್ಟಿದ್ದಾರೆ. ಫೋನ್ ಮಾಡೋಣಾ ಅಂದ್ರೆ ಅವರಿಬ್ಬರ ಮೊಬೈಲೂ ಸ್ವಿಚ್ ಆಫ್ ಆಗಿದೆ. ಮೊನ್ನೆ ನಮ್ಮ ಸುರಭಿ ಅತ್ತಿಗೆ ಹೋಗಿದ್ದವರು ನೋಡಿ ಹೇಳಿದ್ದಕ್ಕೆ ಗೊತ್ತಾಗಿದ್ದು. ಅವರ ಮಗನ ಮೊಬೈಲ್‍ಗೆ ಕಾಲ್ ಮಾಡಿದ್ವಿ. ಬೇಸರ ಮಾಡಿಕೊಂಡ. ಅವನ ಮನೆ ತುಂಬ ದೂರ. ಅದಕ್ಕೆ ಇವರಿಗೆ ಕೇರ್ ಟೇಕರ್ ಒಬ್ರನ್ನ ಇಟ್ಟಿದಾನೆ, ಹತ್ತಿರದ ಮೆಸ್ ಇಂದ ಊಟದ ವ್ಯವಸ್ಥೆ ಮಾಡಿದ್ದಾನೆ ನಿಜಾ. ಆದರೆ ಅತ್ತಿಗೆ ಹತ್ತಿರ ಇದ್ದ ಸುಮಾರು ಆರು ಕೆ.ಜಿ ಬೆಳ್ಳಿ, ಅವರ ಎಲ್ಲ ಒಡವೆಯನ್ನು ಅವನೇ ಮನೆಗೆ ಎತ್ತಿಕೊಂಡು ಹೋಗಿದ್ದಾನಂತೆ. ಅತ್ತಿಗೆ ಸ್ವಲ್ಪ ಜೋರೇ ಆದ್ರೂ ಮಗ ಅಂದ್ರೆ ಭಾಳ ಇಷ್ಟ. ಒಬ್ಬನೇ ಮಗ ಅಂತ ತುಂಬ ಮುದ್ದಾಗಿ ಸಾಕಿದ್ರು. ಮದುವೆ ಆದ ಮೇಲೂ ಚೆನ್ನಾಗೇ ಇದ್ದ. ಹೆಂಡತಿಯ ಆಫೀಸಿಗೆ ಹತ್ರ ಅಂತ ಹೇಳಿ ಆಫೀಸಿನ ಹತ್ತಿರದಲ್ಲೇ ಸ್ವಂತ ಮನೆಯನ್ನೂ ಕೊಂಡಿದ್ದಾನೆ. ಹಾಗಿದ್ರೂ ವೀಕೆಂಡ್ ಇಲ್ಲೇ ಇರ್ತಿದ್ರು. ಮುಂದಿನ ವಾರಕ್ಕಾಗುವಷ್ಟು ದೋಸೆ ಹಿಟ್ಟು, ಇಡ್ಲಿ ಹಿಟ್ಟೆಲ್ಲಾನೂ ಅತ್ತಿಗೇನೇ ಕಳಿಸ್ತಿದ್ರು. ಈಗ ನೋಡಿದ್ರೆ ಮಗ ಅವರಿಬ್ಬರ ಮೊಬೈಲ್ ಕೂಡ ಅವನ ಮನೆಗೇ ತೊಗೊಂಡು ಹೋಗಿಬಿಟ್ಟಿದ್ದಾನಂತೆ. ಅವರು ಯಾರಿಗೂ ಫೋನ್ ಮಾಡೋಹಾಗಿಲ್ವಂತೆ. ಮಗ ಸೊಸೆ ಈ ಥರ ಬದಲಾಗ್ತಾರೆ ಅಂದುಕೊಂಡಿರಲಿಲ್ಲ ಅಂತ ಸುಪ್ರಭಾ ಅತ್ತಿಗೆ ಸುರಭಿ ಅತ್ತಿಗೆ ಹತ್ರ ಹೇಳ್ಕೊಂಡು ತುಂಬ ಅತ್ರಂತೆ. ಭಾನುವಾರ ಇವರಿಗೆ ರಜಾ ಅಲ್ವಾ ಹೋಗಿ ನೋಡ್ಕೊಂಡು ಬರ್ತೀವಿ. ಯಾರನ್ನು ನಂಬೋದೋ ಏನೋ, ಬೇಲೀನೇ ಎದ್ದು ಹೊಲ ಮೇಯ್ದ ಹಾಗೆ. ನಮ್ ಮಕ್ಳು ಏನಾಗ್ತಾರೋ? ಸುಮ್ನೆ ಎಲ್ಲ ಆಸೆ ಬಿಡ್ಬೇಕು. ಮುಂದಿನ ವಾರ ಇನ್ನೊಂದು ಎಫ್.ಡಿ ಡ್ಯೂ ಇದೆ ರಿನ್ಯೂ ಮಾಡ್ಸೋಕೆ ಬರ್ತೀನಿ’ ಎಂದು ಹೇಳಿ ಹೊರಟುಹೋದ್ರು. ಅವರ ಮಾತು ಕೇಳಿಸಿಕೊಂಡಿದ್ದ ನಮ್ಮ ಇತರ ಸಿಬ್ಬಂದಿ ವರ್ಗದವರೂ ಮರುಗಿದರು. ಬಹುಶ: ತಮ್ಮ ತಮ್ಮ ಭವಿಷ್ಯವನ್ನು ಕನಸಲ್ಲಿ ಕಂಡು ಬೆದರಿದವರಂತೆ ಎಲ್ಲರ ಮುಖದಲ್ಲೂ ಅಂದು ಒಂದು ಬಗೆಯ ದುಗುಡವೇ…


ಮರುವಾರ ಆಕೆ ಎಫ್.ಡಿ ರಿನ್ಯೂ ಮಾಡ್ಸೋಕೆ ಬಂದರು. ಅವರ ಕಂಡ ಕೂಡಲೇ ನನ್ನ ಮೊದಲ ಪ್ರಶ್ನೆ ‘ನಿಮ್ಮತ್ತಿಗೆ ಹೇಗಿದ್ದಾರೆ?’ ಹಿಂದಿನ ವಾರದಲ್ಲಿದ್ದಷ್ಟು ನೋವು ಈ ವಾರ ಅವರ ಮುಖದಲ್ಲಿ ಕಾಣಲಿಲ್ಲ ‘ನೋಡ್ಕೊಂಡು ಬಂದ್ವಿ. ತುಂಬ ಅತ್ಬಿಟ್ರು. ಸಂಕಟ ಆಗುತ್ತೆ. ಆದ್ರೆ ಅವೆಲ್ಲ ಸ್ವಯಂಕೃತ ಅಪರಾಧ ಶುಭಾ. ನಾವು ಹೋದ ದಿನ ಮಗಾನೂ ಬಂದಿದ್ದ. ಅವನನ್ನು ಮಾತಾಡಿಸಬಾರದು ಅನ್ನೋವಷ್ಟು ಕೋಪ ಬಂದಿತ್ತು ನಮ್ಗೆ. ಆದ್ರೆ ಅವನೇ ತನ್ನ ಕಷ್ಟಾನೆಲ್ಲ ಹೇಳ್ಕೊಂಡ. ಅತ್ತಿಗೆ ಅವನ ಹೆಂಡತಿಗೆ ನಿತ್ಯವೂ ಟಾರ್ಚರ್ ಕೊಡ್ತಿದ್ರಂತೆ. ಅತ್ತಿಗೆ ತುಂಬ ಕ್ಲೀನ್. ಅಲ್ಲಿ ಕೂತ್ರೆ ಕಷ್ಟ, ಇಲ್ಲಿ ನಿಂತ್ರೆ ಕಷ್ಟ ಅನ್ನೋ ಹಾಗೆ ದಿನಾ ಕಣ್ಣೀರು ಹಾಕಿಸ್ತಾ ಇದ್ದ್ರಂತೆ. ನಮ್ಗೂ ಗೊತ್ತು ಅವರು ಜೋರಂತ. ಈ ಪಾಟಿ ಅಂತ ಗೊತ್ತಿರಲಿಲ್ಲ. ಅವನು ತಾನೇ ಏನು ಮಾಡ್ತಾನೆ ಅದಕ್ಕೆ ಹೊಸಮನೆ ಕಟ್ಟಿಕೊಂಡು ಹೋದ. ಆದ್ರೂ ವಾರಾ ವಾರಾ ಇಲ್ಲಿಗೇ ಬರ್ತಿದ್ದರು ಇವರನ್ನು ನೋಡೋಕೆ, ಬಂದಾಗ್ಲೆಲ್ಲಾ ಮುಂದಿನ ವಾರಕ್ಕೆ ಆಗೋ ಸಾಮಾನು ತಂದಿಕೊಟ್ಟೇ ಹೋಗ್ತಿದ್ದನಂತೆ. ಈಗ ಹುಷಾರು ತಪ್ಪಿದ ಮೇಲೆ ಇಬ್ರೂ ಮಲಗಿದಲ್ಲೇ, ಕೆಲಸದವರನ್ನು ನಂಬೋದು ಹೇಗೆ ಅಂತ ಎಲ್ಲ ಚಿನ್ನ ಬೆಳ್ಳಿ ಮನೆಗೆ ತೊಗೊಂಡು ಹೋದೆ ಅತ್ತೆ ಅಂದ. ಕಂಡ ಕಂಡವರಿಗೆಲ್ಲ ಫೋನ್ ಮಾಡಿ ನಮ್ಗೆ ಈ ಥರ ಆಗಿದೆ, ಯಾರೋ ನೋಡೋರಿಲ್ಲ ಅಂತ ಬರೀ ಇಲ್ಲ ಸಲ್ಲದ ದೂರು ಹೇಳ್ತಿದಾರೆ ಅಮ್ಮ. ಊರವರೆಲ್ಲ ನಂಗೆ ಬೈತಾರೆ. ನನ್ ಕಷ್ಟ ಯಾರಿಗೆ ಗೊತ್ತಾಗ್ಬೇಕು? ದಿನಾ ಬೆಳಗಿನ ಜಾವಾನೇ ಹೊರಟು ಇಲ್ಲಿ ಬಂದು ಅಪ್ಪಂಗೆ ಸ್ನಾನ ಮಾಡಿಸಿ ಡೈಪರ್ ಚೇಂಜ್ ಮಾಡಿ ಇಲ್ಲಿಂದ ಎರಡು ಗಂಟೆ ನನ್ ಆಫೀಸು, ಹೋಗಿ ಕೆಲಸ ಮುಗಿಸಿ ಮತ್ತೆ ಬಂದು ಡೈಪರ್ ಚೇಂಜ್ ಮಾಡಿ ಹೋಗ್ತೇನೆ. ಅಮ್ಮನನ್ನು ನೋಡಿಕೊಳ್ಳೋ ಹುಡುಗಿ ಅಪ್ಪನಿಗೆ ಹೇಗೆ ಇದೆಲ್ಲ ಮಾಡೋಕಾಗುತ್ತೆ? ಅಪ್ಪ ಪಾಪ ಏನೂ ದೂರಲ್ಲ ಇಷ್ಟಾಗ್ಯೂ ಅಮ್ಮನ ದೂರಿಗೆ ಕೊನೇನೇ ಇಲ್ಲ. ಅದಕ್ಕೆ ಮೊಬೈಲ್ ಆಫ್ ಮಾಡಿಟ್ಟಿದ್ದೀನಿ. ಏನಿದ್ರೂ ಕೇರ್ ಟೇಕರ್ ಮಾಡ್ತಾಳೆ. ಅಪ್ಪಾನೂ ಅದೇ ಸರಿ ಅಂತಾರೆ. ಅಮ್ಮನ್ನ ನೋಡಿಕೊಳ್ಳೋ ಹುಡ್ಗೀರು ಇವಳ ಕಾಟಕ್ಕೆ ತಿಂಗಳಿಗೊಬ್ಬರು ಬಿಟ್ಟುಹೋಗಿದ್ದಾರೆ. ಈಗಿರೋಳು ನಾಳೆಯಿಂದ ಬರಲ್ಲ ಅಂತಿದಾಳೆ. ನಂಗೆ ತಲೆಕೆಟ್ಟುಹೋಗಿದೆ ಅತ್ತೆ. ನೀವೇ ಹೇಳಿ ಏನು ಮಾಡ್ಲಿ? ಎಂದು ಕೇಳಿದ. ಪಾಪ ಮಗಾನೂ ಎಷ್ಟೂಂತ ಸಹಿಸ್ಕೋತಾನೆ?’ ಎಂದರು.
‘ಥ್ಯಾಂಕ್ಯೂ ಎಲ್ಲ ಸಮಸ್ಯೆಗಳಿಗೂ ಎರಡು ಮುಖ ಇರುತ್ತೆ. ನಾವು ಒಂದೇ ಮುಖ ನೋಡಿ ಯಾವ್ದನ್ನೂ ಡಿಸೈಡ್ ಮಾಡ್ಬಾರ್ದು, ಯಾರನ್ನೂ ಜಡ್ಜ್ ಮಾಡಬಾರದು ಅಂತ ಗೊತ್ತಾಯ್ತು’ ಎಂದು ಹೇಳಿಕಳಿಸಿದೆ.

IMG 20180306 WA0008 1 edited
-ಡಾ.ಶುಭಶ್ರೀಪ್ರಸಾದ್
Copyright © All rights reserved Newsnap | Newsever by AF themes.
error: Content is protected !!