ನಾಯಿ ಜೊತೆ ವಾಕಿಂಗ್ ಮಾಡಲು ಕ್ರೀಡಾಂಗಣವನ್ನೇ ಖಾಲಿ ಮಾಡಿಸಿದ ಐಎಎಸ್ ದಂಪತಿ ಎತ್ತಂಗಡಿ!

Team Newsnap
1 Min Read

ತಮ್ಮ ನಾಯಿಯನ್ನು ವಾಕಿಂಗ್ ಕರೆದುಕೊಂಡು ಹೋಗಲು ಸ್ಟೇಡಿಯಂನಲ್ಲಿದ್ದ ಕ್ರೀಡಾ ಪಟುಗಳನ್ನು ಸಮಯಕ್ಕಿಂತಲೂ ಮೊದಲೇ ಹೊರಗೆ ಕಳುಹಿಸಿದ ದೆಹಲಿ ಕಂದಾಯ ವಿಭಾಗದ ಮುಖ್ಯ ಕಾರ್ಯದರ್ಶಿ ಸಂಜೀವ್ ಖಿರ್ವಾರ್ ಲಡಾಕ್ ಗೆ ಹಾಗೂ ಅವರ ಪತ್ನಿ ರಿಂಕು ದುಗ್ಗಾ ಅವರನ್ನು ಅರುಣಾಚಲ ಪ್ರದೇಶಕ್ಕೆ ವರ್ಗಾವಣೆ ಮಾಡಲಾಗಿದೆ.

ದೆಹಲಿಯಲ್ಲಿರುವ ತ್ಯಾಗರಾಜ್ ಸ್ಟೇಡಿಯಂ ಸಂಜೆ 8 ಗಂಟೆ ವರೆಗೂ ತೆರೆದಿಡಲಾಗುತ್ತಿತ್ತು. ಆದರೆ ಇತ್ತೀಚೆಗೆ ದೆಹಲಿ ಕಂದಾಯ ವಿಭಾಗದ ಮುಖ್ಯ ಕಾರ್ಯದರ್ಶಿ ಸಂಜೀವ್ ಖಿರ್ವಾರ್ ಅವರ ನಾಯಿಯನ್ನು ವಾಕಿಂಗ್ ಕರೆದುಕೊಂಡು ಹೋಗಲು ಅಭ್ಯಾಸ ನಡೆಸುತ್ತಿದ್ದ ಕ್ರೀಡಾಪಟುಗಳನ್ನು ಅವಧಿಗಿಂತಲೂ ಮುಂಚಿತವಾಗಿ ಹೊರಗೆ ಕಳುಹಿಸಲಾಗಿದೆ ಎಂದು ವರದಿಯಾಗುತ್ತಿದ್ದಂತೆ ಸಂಜೀವ್ ಖಿರ್ವಾರ್ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

ಸಂಜೀವ್ ಖಿರ್ವಾರ್ ಮತ್ತು ಅವರ ಪತ್ನಿ ರಿಂಕು ದುಗ್ಗಾ ಅವರು ತ್ಯಾಗರಾಜ್ ಕ್ರೀಡಾಂಗಣದಲ್ಲಿನ ಸೌಲಭ್ಯಗಳನ್ನು ದುರುಪಯೋಗಪಡಿಸಿಕೊಂಡ ಹಿನ್ನೆಲೆ , ಸಂಜೀವ್ ಖಿರ್ವಾರ್ ಅವರನ್ನು ಲಡಾಖ್‍ಗೆ ಮತ್ತು ರಿಂಕು ಧುಗ್ಗಾ ಅವರನ್ನು ಅರುಣಾಚಲ ಪ್ರದೇಶಕ್ಕೆ ಎಂಎಚ್‍ಎ ವರ್ಗಾಯಿಸಲಾಗಿದೆ.

ನಾವು ರಾತ್ರಿ 8 ರಿಂದ 8:30ರ ವರೆಗೂ ತರಬೇತಿ ನಡೆಸುತ್ತಿದ್ದೆವು. ಆದರೆ ಈ ಅಧಿಕಾರಿಯ ನಾಯಿಗೆ ವಾಕಿಂಗ್ ಕರೆದುಕೊಂಡು ಹೋಗಲು ನಮ್ಮನ್ನು ಸಂಜೆ 7 ಗಂಟೆಗೆ ಮೈದಾನದಿಂದ ಹೊರಗೆ ಹೋಗಲು ಹೇಳಿದರು ಎಂದು ಕ್ರೀಡಾ ತರಬೇತುದಾರರೊಬ್ಬರು ಆರೋಪಿಸಿದ್ದಾರೆ.

ಇದನ್ನು ಓದಿ : ಜೈಲಿನಲ್ಲೇ 90 ರುಗೆ ದಿನಗೂಲಿ ಗುಮಾಸ್ತನ ಕೆಲಸ ಆರಂಭಿಸಿದ ನವಜೋತ್ ಸಿಂಗ್ ಸಿಧು

ಈ ಬಗ್ಗೆ ಪ್ರತಿಕ್ರಿಯಿಸಿದ ಖಿರ್ವಾರ್, ನನ್ನ ಮೇಲೆ ಹೊರಿಸಿರುವ ಆರೋಪ ಶುದ್ಧ ಸುಳ್ಳು, ನಾನು ತೀರಾ ಅಪರೂಪಕ್ಕೆ ನಾಯಿಯನ್ನು ಸ್ಟೇಡಿಯಂಗೆ ಕರೆದುಕೊಂಡು ಹೋಗಿದ್ದೆ. ಆದರೆ ಇದರಿಂದ ಯಾವುದೇ ಕ್ರೀಡಾಪಟುಗಳಿಗೂ ಅಡ್ಡಿ ಪಡಿಸಿರಲಿಲ್ಲ ಎಂದಿದ್ದಾರೆ.

ಈ ಸಂಗತಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನಗರದಲ್ಲಿನ ಎಲ್ಲಾ ಸರ್ಕಾರಿ ಕ್ರೀಡಾಂಗಣಗಳನ್ನು ರಾತ್ರಿ 10 ಗಂಟೆಯವರೆಗೆ ಕ್ರೀಡಾಪಟುಗಳಿಗೆ ಅಭ್ಯಾಸಕ್ಕೆ ತೆರೆದಿಡಲು ಆದೇಶಿಸಿದ್ದಾರೆ.

Share This Article
Leave a comment